ಕಾರ್ಡಿನಲ್ ಪ್ಯಾರೊಲಿನ್ ಡೆನ್ಮಾರ್ಕ್‌ಗೆ ಭೇಟಿ
ವ್ಯಾಟಿಕನ್ ನ್ಯೂಸ್
ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆತ್ರೋ ಪ್ಯಾರೊಲಿನ್ ರವರು ಶನಿವಾರ, ಜನವರಿ 24ರಿಂದ, ಜನವರಿ 26ರವರೆಗೆ ಡೆನ್ಮಾರ್ಕ್‌ನಲ್ಲಿ ಇದ್ದು, ಉತ್ತರ ಯುರೋಪಿನ ದೇಶದಲ್ಲಿ ಸಂತ ಅನ್ಸ್ಗಾರ್ ರವರ ಧರ್ಮಪ್ರಚಾರದ ಆರಂಭದ 1,200ನೇ ವಾರ್ಷಿಕೋತ್ಸವದ ಅಂಗವಾಗಿ ಜಗದ್ಗುರುಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ ಕಾರ್ಯದರ್ಶಾಲಯದ X ಖಾತೆ @TerzaLoggiaನಲ್ಲಿ ಪ್ರಕಟಿಸಿದ ಕಾರ್ಯಕ್ರಮದ ಪ್ರಕಾರ, ಈ ಭೇಟಿ ಸೋಮವಾರ ಅಂತ್ಯಗೊಳ್ಳಲಿದೆ.
ಸಂಜೆ ಪ್ರಾರ್ಥನೆ ಮತ್ತು ಐಕ್ಯಮತೀಯ ಭೇಟಿಗಳು
ಶನಿವಾರದ ಕಾರ್ಯಕ್ರಮದಲ್ಲಿ, ಕೋಪನ್‌ಹೇಗನ್‌ನ ಲೂಥರನ್ ಕ್ಯಾಥೆಡ್ರಲ್‌ನಲ್ಲಿ ನಡೆಯುವ ಐಕ್ಯಮತೀಯ ಸಂಜೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದು ಸೇರಿದೆ. ಇದಾದ ಬಳಿಕ ರಾಜತಾಂತ್ರಿಕರು ಮತ್ತು ಇತರ ಕ್ರೈಸ್ತ ಸಮುದಾಯಗಳ ನಾಯಕರೊಂದಿಗೆ ಸಭೆಗಳು ನಡೆಯಲಿವೆ.
ಭಾನುವಾರ, ಜನವರಿ 25ರಂದು, ಕಾರ್ಡಿನಲ್ ಪ್ಯಾರೊಲಿನ್ ರವರು ಹಿಲ್ಲೆರೋಡ್‌ನಲ್ಲಿರುವ ಸಂತ ಜೋಸೆಫ್ಸ್ ಕಾರ್ಮೆಲ್ ಮಠಕ್ಕೆ ಭೇಟಿ ನೀಡಲಿದ್ದು, ಬಿರ್ಕೆರೋಡ್‌ನ ವೋರ್ ಫ್ರೂ ಕ್ಲೋಸ್ಟರ್‌ನ ಬೆನೆಡಿಕ್ಟಿನ್ ಸಹೋದರಿಯರನ್ನು ಭೇಟಿಯಾಗಲಿದ್ದಾರೆ. ಅದೇ ದಿನ ಕೋಪನ್‌ಹೇಗನ್‌ನ ಸಂತ ಅನ್ಸ್ಗಾರ್ ಕ್ಯಾಥೆಡ್ರಲ್‌ನಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಿ, ವಾರ್ಷಿಕೋತ್ಸವದ ಆಚರಣೆಗಳಿಗೆ ನೇತೃತ್ವ ವಹಿಸಲಿದ್ದಾರೆ.
ರಾಜತಾಂತ್ರಿಕ ಭೇಟಿಗಳು
ಸೋಮವಾರ, ಜನವರಿ 26ರಂದು, ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪ್ಯಾರೊಲಿನ್ ರವರು ಅಮಾಲಿಯೆನ್‌ಬೊರ್ಗ್ ಅರಮನೆಗೆ ಭೇಟಿ ನೀಡಿ ಡೆನ್ಮಾರ್ಕ್‌ನ ರಾಜ Xನೇ ಫ್ರೆಡರಿಕ್ ರವರನ್ನು ಸೌಜನ್ಯ ಭೇಟಿಯಾಗಲಿದ್ದಾರೆ. ನಂತರ ಅವರು ಐಗ್ಟ್‌ವೆಡ್ಸ್ ಪಾಖುಸ್‌ನಲ್ಲಿ ವಿದೇಶಾಂಗ ಸಚಿವ ಲಾರ್ಸ್ ಲೊಕ್ಕೆ ರಾಸ್ಮುಸೆನ್ ರವರನ್ನು ಭೇಟಿಯಾಗಲಿದ್ದಾರೆ. ಬಳಿಕ ವೇದ್‌ಬೆಕ್‌ನ ರೆಡೆಂಪ್ಟೋರಿಸ್ ಮಾತರ್ ಗುರು ವಿದ್ಯಾ ಮಂದಿರಕ್ಕೆ ಭೇಟಿ ನೀಡಿ ತಮ್ಮ ಡೆನ್ಮಾರ್ಕ್ ಪ್ರವಾಸವನ್ನು ಪೂರ್ಣಗೊಳಿಸಲಿದ್ದಾರೆ.