2022.05.09 La visita del cardinale Paroline a Moscati

ಡೆನ್ಮಾರ್ಕ್‌ನಲ್ಲಿ ಕಾರ್ಡಿನಲ್ ಪ್ಯಾರೋಲಿನ್: ಧರ್ಮ ಸಭೆಯ ವಿಶ್ವಾಸಾರ್ಹತೆ ಅಧಿಕಾರದಿಂದಲ್ಲ, ಸಾಕ್ಷಿಯಿಂದ ಉದ್ಭವಿಸುತ್ತದೆ

ವ್ಯಾಟಿಕನ್‌ನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೇತ್ರೊ ಪ್ಯಾರೋಲಿನ್ ರವರು, ಡೆನ್ಮಾರ್ಕ್‌ನಲ್ಲಿ ಸಂತ ಆನ್ಸ್‌ಗಾರ ರವರ ಮಿಷನ್ ಆರಂಭವಾದ 12ನೇ ಶತಮಾನೋತ್ಸವದ ಆಚರಣೆಗಳ ಅಂಗವಾಗಿ ಜಗದ್ಗುರುಗಳ ಪ್ರತಿನಿಧಿಯಾಗಿ ಕೋಪನ್‌ಹೇಗನ್ ಕ್ಯಾಥೆಡ್ರಲ್‌ನಲ್ಲಿ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು, ಹೊಸ ರೀತಿಯ ದಾಸ್ಯಗಳಿಂದ ಗಾಯಗೊಂಡಿರುವ ಮತ್ತು ಹೊರಗುಳಿಕೆ ಹಾಗೂ ನಿರ್ಲಕ್ಷ್ಯದಿಂದ ಗುರುತುಗೊಂಡಿರುವ ಇಂದಿನ ಜಗತ್ತಿನಲ್ಲಿ, ಬೆನೆಡಿಕ್ಟಿನ್ ಸನ್ಯಾಸಿಯಾದ ಸಂತ ಆನ್ಸ್‌ಗಾರರವರ ಸೇವೆಯ ಪ್ರಸ್ತುತತೆಯನ್ನು ಸ್ಮರಿಸಿದರು.

ವ್ಯಾಟಿಕನ್ ವರದಿ

ಡೆನ್ಮಾರ್ಕ್‌ನಲ್ಲಿ ಸಂತ ಆನ್ಸ್‌ಗಾರರ ಮಿಷನ್ ಆರಂಭದ 12ನೇ ಶತಮಾನೋತ್ಸವದ ಅಂಗವಾಗಿ, ಕೋಪನ್‌ಹೇಗನ್ ಕ್ಯಾಥೆಡ್ರಲ್‌ನಲ್ಲಿ ಜಗದ್ಗುರುಗಳ ಪ್ರತಿನಿಧಿಯಾಗಿ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದ ಕಾರ್ಡಿನಲ್ ಪಿಯೇತ್ರೊ ಪ್ಯಾರೋಲಿನ್ ರವರು, ಧರ್ಮ ಸಭೆಯ ವಿಶ್ವಾಸಾರ್ಹತೆ ಅಧಿಕಾರ, ಸಂಖ್ಯಾಬಲ ಅಥವಾ ತಂತ್ರಗಳಿಂದಲ್ಲ, ಬದಲಾಗಿ ಬದುಕಿನಲ್ಲಿ ವ್ಯಕ್ತವಾಗುವ ನಂಬಿಕೆಯ ಸಾಕ್ಷಿಯಿಂದಲೇ ಉಂಟಾಗುತ್ತದೆ ಎಂದು ಸ್ಪಷ್ಟಪಡಿಸಿದರು. ನಂಬಿಕೆ ಮುಕ್ತತೆ, ನ್ಯಾಯ ಮತ್ತು ಕರುಣೆಯ ರೂಪದಲ್ಲಿ ಕ್ರಿಯಾತ್ಮಕವಾಗಿರುವಾಗ ಮಾತ್ರ ಅದು ಮಾನವ ಗೌರವವನ್ನು ಪುನಃಸ್ಥಾಪಿಸಿ ನಿಜವಾದ ಸ್ವಾತಂತ್ರ್ಯದ ದಾರಿಗಳನ್ನು ತೆರೆದುಕೊಡುತ್ತದೆ ಎಂದರು.

ಕಾರ್ಡಿನಲ್ ಪ್ಯಾರೋಲಿನ್ ರವರು, 9ನೇ ಶತಮಾನದಲ್ಲಿ ಉತ್ತರ ಯೂರೋಪಿಗೆ ಬಂದ ಬೆನೆಡಿಕ್ಟಿನ್ ಸನ್ಯಾಸಿ ಸಂತ ಆನ್ಸ್‌ಗಾರರ ಮಿಷನ್ ಯಾವುದೇ ಯಶಸ್ಸು ಅಥವಾ ತಂತ್ರಗಳ ಮೇಲೆ ಆಧಾರಿತವಾಗಿರಲಿಲ್ಲ, ಬದಲಾಗಿ ಯೇಸು ಕ್ರಿಸ್ತನಿಗೆ ನಿಷ್ಠೆಯಿಂದ ಪ್ರೇರಿತವಾಗಿತ್ತು ಎಂದು ಸ್ಮರಿಸಿದರು. ಡೆನ್ಮಾರ್ಕ್‌ಗೆ ಬಂದಾಗ ಅವರು ಮಾಡಿದ ಮೊದಲ ಕಾರ್ಯಗಳಲ್ಲಿ ಒಂದು, ದಾಸರಾಗಿ ಬದುಕುತ್ತಿದ್ದವರ ಸ್ವಾತಂತ್ರ್ಯವನ್ನು ವಿಮೋಚನೆ ಮಾಡುವುದು ಆಗಿತ್ತು. ಇಂದಿಗೂ ಆನ್ಸ್‌ಗಾರರ ಈ ನಡೆ, ಆರ್ಥಿಕ, ಸಾಂಸ್ಕೃತಿಕ ಮತ್ತು ಆತ್ಮೀಯ ದಾಸ್ಯಗಳಿಂದ ಗಾಯಗೊಂಡಿರುವ, ನಿರ್ಲಕ್ಷ್ಯ ಮತ್ತು ಹೊರಗುಳಿದವರ ಜಗತ್ತಿನಲ್ಲಿ ಹೊಸ ಅರ್ಥ ಮತ್ತು ಪ್ರಸ್ತುತತೆಯನ್ನು ಹೊಂದಿದೆ ಎಂದು ಅವರು ಹೇಳಿದರು.

ಯೆಶಾಯ ಗ್ರಂಥದ ವಚನಗಳನ್ನು ಉಲ್ಲೇಖಿಸಿದ ಕಾರ್ಡಿನಲ್, ಸುವಾರ್ತೆಯಲ್ಲಿ ಸಂದೇಶಕ್ಕಿಂತಲೂ ಸಂದೇಶವನ್ನು ಹೊತ್ತು ತರುವ ವ್ಯಕ್ತಿಯೇ ಮುಖ್ಯನೆಂದು ಹೇಳಿದರು. ಸುವಾರ್ತೆ ಹೃದಯಗಳನ್ನು ಪರಿವರ್ತಿಸಿ, ಮನುಷ್ಯರನ್ನು ಮುಕ್ತಗೊಳಿಸುವ ಶಕ್ತಿಯನ್ನು ಹೊಂದಿದೆ. ಸಂತ ಆನ್ಸ್‌ಗಾರರು ದೇವರಿಂದ ಕ್ಷಮಿಸಲ್ಪಟ್ಟ ಅನುಭವದ ಆನಂದವನ್ನು ಸ್ವತಃ ಅನುಭವಿಸಿದ್ದರು ಮತ್ತು ಅದೇ ಆನಂದವನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸಿದರು ಅದೇ ಅವರು ಜಗತ್ತಿಗೆ ತಂದ ಸುವಾರ್ತೆಯ ಸಾರ್ಥಕತೆ ಎಂದರು.

ಸಂತ ಆನ್ಸ್‌ಗಾರರ ಜೀವನವನ್ನು ಸ್ಮರಿಸುತ್ತಾ, ಕಾರ್ಡಿನಲ್ ಪ್ಯಾರೋಲಿನ್ ರವರು, ಯೇಸುವನ್ನು ಅನುಸರಿಸಲು ಪರಿಚಿತ ಸ್ಥಳಗಳು ಮತ್ತು ಜನರನ್ನು ತೊರೆದು ಹೊರಟಾಗ ಆನ್ಸ್‌ಗಾರರು ಅಪಾರ ಧೈರ್ಯ ಮತ್ತು ನಂಬಿಕೆಯನ್ನು ತೋರಿದರು ಎಂದು ಹೇಳಿದರು. ಅನೇಕ ವಿರೋಧಗಳು ಮತ್ತು ವಿಫಲತೆಗಳ ನಡುವೆಯೂ ಅವರು ಹಿಂದೆ ಸರಲಿಲ್ಲ. ಮೂರ್ಖತನ ಎನ್ನಲ್ಪಡುವುದೇ ದೇವರ ಜ್ಞಾನವಾಗಿದ್ದು, ಸಂಪೂರ್ಣವಾಗಿ ತಾನೇ ಕೊಡುವ ಪ್ರೀತಿಯನ್ನೇ ಅದು ಪ್ರಕಟಿಸುತ್ತದೆ ಎಂದು ಅವರು ವಿವರಿಸಿದರು.

ಈ ಹಿನ್ನೆಲೆಯಲ್ಲಿ, ಧರ್ಮ ಸಭೆ ಸಂಖ್ಯೆಯಲ್ಲಿ ಬೆಳೆಯುವುದಕ್ಕಿಂತಲೂ ನಿಷ್ಠೆ, ಸಹನಶೀಲತೆ ಮತ್ತು ಪ್ರೀತಿಯಲ್ಲಿ ಬದುಕುವ ಹೃದಯಗಳ ಮೂಲಕ ಬೆಳೆಯುತ್ತದೆ ಎಂದು ಕಾರ್ಡಿನಲ್ ಹೇಳಿದರು. ಡೆನ್ಮಾರ್ಕ್‌ನ ಕ್ರೈಸ್ತ ಪರಂಪರೆ ಇಂದು ಸಹ ಜೀವಂತವಾಗಿದ್ದು, ಕಥೋಲಿಕ ಸಮುದಾಯವು ಲೂಥರನ್‌ಗಳು ಮತ್ತು ಸತ್ಸಂಕಲ್ಪದ ಜನರೊಂದಿಗೆ ಸೇವೆ, ಏಕಾತ್ಮತೆ ಮತ್ತು ಮಾನವ ಗೌರವದ ರಕ್ಷಣೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ ಎಂದರು.

ಪೋಪ್ ಲಿಯೋ ರವರ ಧೆಯ್ಯೆ ವಾಕ್ಯ ಇನ್ ಇಲ್ಲೋ ಊನೋ ಉನುಮ್ ಇದರ ಅರ್ಥ ಪ್ರಭು ಕ್ರಿಸ್ತರಲ್ಲಿ ನಾವೆಲ್ಲ ಒಂದೇ ಅನ್ನು ಉಲ್ಲೇಖಿಸಿ, ಕಾರ್ಡಿನಲ್ ಪ್ಯಾರೋಲಿನ್ ರವರು ತಮ್ಮ ಉಪನ್ಯಾಸವನ್ನು ಮುಕ್ತಾಯಗೊಳಿಸುತ್ತಾ, ಧರ್ಮ ಸಭೆಯ ಆರೋಗ್ಯವನ್ನು ಯಶಸ್ಸು ಅಥವಾ ಸಂಖ್ಯೆಯಿಂದಲ್ಲ, ಆದರೆ ಪ್ರತಿಯೊಂದು ಸಂದರ್ಭದಲ್ಲೂ ಕ್ರಿಸ್ತನೊಂದಿಗೆ ನಡೆದು, ಆತನಿಗೆ ಸಮೀಪವಾಗಿರುವ ಸಾಮರ್ಥ್ಯದಿಂದಲೇ ಅಳೆಯಬೇಕು ಎಂದು ಒತ್ತಿ ಹೇಳಿದರು.

27 ಜನವರಿ 2026, 00:00