ಕಾಡಿ೯ನಲ್ ವಿಕ್ಟರ್ ಫನಾ೯ಂಡಿಸ್ ಕಾಡಿ೯ನಲ್ ವಿಕ್ಟರ್ ಫನಾ೯ಂಡಿಸ್ 

ಬೌದ್ಧಿಕ ವಿನಮ್ರತೆಗೆ ಕರೆ ನೀಡಿ ಡಿಡಿಎಫ್ ಪೂರ್ಣಸಭೆಯನ್ನು ಉದ್ಘಾಟಿಸಿದ ಕಾರ್ಡಿನಲ್ ಫರ್ನಾಂಡೆಸ್

ವಿಶ್ವಾಸದ ಸಿದ್ಧಾಂತಗಳಿಗಾಗಿ ಇರುವ ಧರ್ಮಾಧಿಕಾರ ಮಂಡಳಿ (ಡಿಕಾಸ್ಟರಿ ಫಾರ್ ದ ಡಾಕ್ಟ್ರಿನ್ ಆಫ್ ದ ಫೇತ್)ಯ ಪೂರ್ಣಸಭೆಯನ್ನು ಕಾರ್ಡಿನಲ್ ಪ್ರಿಫೆಕ್ಟ್ ವಿಕ್ಟರ್ ಫರ್ನಾಂಡೆಸ್ ರವರು ಉದ್ಘಾಟಿಸಿ, ಸೂಕ್ಷ್ಮ ಹಾಗೂ ಸಂವೇದನಾಶೀಲ ಧಾರ್ಮಿಕ ತತ್ವಶಾಸ್ತ್ರೀಯ ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುವಾಗ ಎಚ್ಚರಿಕೆ ಮತ್ತು ಬೌದ್ಧಿಕ ವಿನಮ್ರತೆಯನ್ನು ಪಾಲಿಸಬೇಕೆಂದು ಕರೆ ನೀಡಿದರು.

ವ್ಯಾಟಿಕನ್ ವರದಿ

ವಿಶ್ವಾಸದ ಸಿದ್ಧಾಂತಗಳಿಗಾಗಿ ಇರುವ ಧರ್ಮಾಧಿಕಾರ ಮಂಡಳಿ (ಡಿಕಾಸ್ಟರಿ ಫಾರ್ ದ ಡಾಕ್ಟ್ರಿನ್ ಆಫ್ ದ ಫೇತ್)ಯ ಪೂರ್ಣಸಭೆಯನ್ನು ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫರ್ನಾಂಡೆಸ್ ರವರು ಮಂಗಳವಾರ ಧ್ಯಾನೋಪನ್ಯಾಸದೊಂದಿಗೆ ಉದ್ಘಾಟಿಸಿದರು. ತಮ್ಮ ಚಿಂತನೆಗೆ ಅವರು ಬೆಳಕನ್ನು ಬೇಡದೆ, ಅಗ್ನಿಯನ್ನು ಬೇಡಿ ಎಂಬ ಶೀರ್ಷಿಕೆಯನ್ನು ನೀಡಿದ್ದು, ಜೀವನದ ಮಹತ್ತರ ಪ್ರಶ್ನೆಗಳನ್ನು ದೇವರ ಮುಂದೆ ವಿನಮ್ರತೆಯಿಂದ ಇಡಬೇಕೆಂದು ಸಂತ ಬೊನವೆಂಚರ್ ರವರ ಆಹ್ವಾನದಿಂದ ಪ್ರೇರಣೆ ಪಡೆದರು.

ಪ್ರಾರ್ಥನೆಯ ಸಂದರ್ಭದಲ್ಲೇ ತಮಗೆ ಬೌದ್ಧಿಕ ವಿನಮ್ರತೆಗೆ ಗಾಢ ಕರೆಯೊಂದು ಉಂಟಾಯಿತು ಎಂದು ಹೇಳಿದ ಕಾರ್ಡಿನಲ್,  “ವಿನಮ್ರತೆ ಇರುವಲ್ಲಿ ಜ್ಞಾನವಿದೆ” ಎಂಬ ಪುರಾತನ ವಾಕ್ಯವನ್ನು ಸ್ಮರಿಸಿದರು. ಇದೇ ಕರೆಯನ್ನು ಅವರು ಪೂರ್ಣಸಭೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವಿಸ್ತರಿಸಿದರು.

ದೇವರು ಮಾನವನಿಗೆ ಚಿಂತನೆ ಮಾಡುವ ಸಾಮಾನ್ಯ ಸಾಮರ್ಥ್ಯವನ್ನು ದಯಪಾಲಿಸಿದ್ದರೂ, ಸತ್ಯ ಮತ್ತು ವಾಸ್ತವದ ಸಂಪೂರ್ಣ ಜ್ಞಾನವನ್ನು ಯಾರೂ ಹೊಂದಲಾರರು ಎಂದು ಕಾರ್ಡಿನಲ್ ಫರ್ನಾಂಡೆಸ್ ವಿವರಿಸಿದರು. ಅತ್ಯಾಧುನಿಕ ತಂತ್ರಜ್ಞಾನಗಳ ಸಹಾಯವಿದ್ದರೂ ಸಹ, ವಾಸ್ತವಿಕತೆಯ ಎಲ್ಲ ಅಂಶಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದು ಮಾನವ ಮನಸ್ಸಿಗೆ ಅಸಾಧ್ಯ; ಅದು ದೇವರಿಗೆ ಮಾತ್ರ ಸಾಧ್ಯ ಎಂದರು.

ವಾಸ್ತವದ ಎಲ್ಲ ಅಂಶಗಳು ಪರಸ್ಪರ ಸಂಬಂಧಿತವಾಗಿರುವುದರಿಂದ, ಒಂದು ಸಣ್ಣ ಭಾಗವನ್ನೇ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕೂಡ ಮಾನವನಿಗೆ ಕಷ್ಟಕರವೆಂದು ಅವರು ಹೇಳಿದರು. ಆದ್ದರಿಂದ ಯಾವುದೇ ವ್ಯಕ್ತಿ, ಘಟನೆಯೊ, ಇತಿಹಾಸಕಾಲವೊ ಅಥವಾ ಸತ್ಯವೊಂದರ ಎಲ್ಲ ಅರ್ಥ ಮತ್ತು ಸೂಕ್ಷ್ಮತೆಗಳನ್ನು ಸಂಪೂರ್ಣವಾಗಿ ವಿವೇಚಿಸುವ ಸಾಮರ್ಥ್ಯ ನಮಗಿಲ್ಲ ಎಂದು ಅವರು ಒತ್ತಿ ಹೇಳಿದರು.

ತಂತ್ರಜ್ಞಾನ ಮತ್ತು ವಿಜ್ಞಾನ ಮುಂದುವರಿದಂತೆ, ನಮ್ಮ ಮಿತಿಗಳನ್ನು ಹಾಗೂ ದೇವರ ಅಗತ್ಯವನ್ನು ಮರೆಯಬಾರದೆಂದು ಕಾರ್ಡಿನಲ್ ಎಚ್ಚರಿಸಿದರು. ಬೌದ್ಧಿಕ ವಿನಮ್ರತೆಯ ಕೊರತೆ ಇನ್ಕ್ವಿಸಿಷನ್‌ನ ಅತಿರೇಕಗಳು, ವಿಶ್ವಯುದ್ಧಗಳು, ಶೋಕ ಮತ್ತು ಗಾಜಾದಲ್ಲಿ ನಡೆದ ಹತ್ಯಾಕಾಂಡಗಳಂತಹ ಭೀಕರ ದುರಂತಗಳಿಗೆ ಕಾರಣವಾದ ಸ್ವಯಂಮೋಸದತ್ತ ನಮ್ಮನ್ನು ಕೊಂಡೊಯ್ಯಬಹುದು ಎಂದರು.

ಉಪಸಂಹಾರವಾಗಿ, ಡಿಡಿಎಫ್ ಸದಸ್ಯರು ನಿರಂತರ ಪ್ರಾರ್ಥನೆಯ ಮೂಲಕ ದೇವರ ಮಾರ್ಗದರ್ಶನವನ್ನು ಬೇಡಿಕೊಳ್ಳಬೇಕು, ಇತರರ ದೃಷ್ಟಿಕೋನಗಳನ್ನು ಸ್ವೀಕರಿಸುತ್ತಾ ವಾಸ್ತವವನ್ನು ಪರಿಶೀಲಿಸಬೇಕು ಎಂದು ಕಾರ್ಡಿನಲ್ ಫರ್ನಾಂಡೆಸ್ ಕರೆ ನೀಡಿದರು. ಜಗದ್ಗುರು XIV ನೇ ಲಿಯೋರವರು ಮಾತುಗಳನ್ನು ಸ್ಮರಿಸಿ, ಸಂಪೂರ್ಣ ಸತ್ಯ ಯಾರಿಗೂ ಸೇರಿಲ್ಲ ನಾವು ಎಲ್ಲರೂ ಅದನ್ನು ಒಟ್ಟಾಗಿ ವಿನಮ್ರತೆಯಿಂದ ಹುಡುಕಬೇಕು ಎಂದರು ಮತ್ತು ಸಂತ ಬೊನವೆಂಚರ್ ರವರೊಂದಿಗೆ ಆಂತರಿಕ ಮೌನದ ವರವನ್ನು ಬೇಡಿಕೊಳ್ಳುವಂತೆ ಆಹ್ವಾನಿಸಿದರು.

27 ಜನವರಿ 2026, 00:00