ನಿನ್ನನ್ನು ನಾನು ಎಂದಿಗೂ ಮರೆಯುವುದಿಲ್ಲ ಹಿರಿಯರು ಮತ್ತು ಅಜ್ಜ–ಅಜ್ಜಿಯರ ಆರನೇ ವಿಶ್ವ ದಿನದ ವಿಷಯ
ವ್ಯಾಟಿಕನ್ ವರದಿ
ವಾಟಿಕನ್‌ನ ಸಾಮಾನ್ಯ ಕ್ರೈಸ್ತ ಕುಟುಂಬ ಮತ್ತು ಜೀವನ ವಿಭಾಗ ಪ್ರಕಟಣೆಯ ಪ್ರಕಾರ, ಜಗದ್ಗುರು XIVನೇ ಲಿಯೋರವರು “ನಿನ್ನನ್ನು ನಾನು ಎಂದಿಗೂ ಮರೆಯುವುದಿಲ್ಲ” (ಯೆಶಾಯ 49:15) ಎಂಬ ವಾಕ್ಯವನ್ನು ಹಿರಿಯರು ಮತ್ತು ಅಜ್ಜ–ಅಜ್ಜಿಯರ ಆರನೇ ವಿಶ್ವ ದಿನದ ವಿಷಯವಾಗಿ ಆಯ್ಕೆ ಮಾಡಿದ್ದಾರೆ.
2021ರಲ್ಲಿ ಜಗದ್ಗುರು ಫ್ರಾನ್ಸಿಸ್ ರವರು ಸ್ಥಾಪಿಸಿದ ಹಿರಿಯರು ಮತ್ತು ಅಜ್ಜ–ಅಜ್ಜಿಯರ ವಿಶ್ವ ದಿನವನ್ನು ಪ್ರತಿವರ್ಷ ಜುಲೈ ತಿಂಗಳ ನಾಲ್ಕನೇ ಭಾನುವಾರ ಆಚರಿಸಲಾಗುತ್ತದೆ. ಈ ದಿನವನ್ನು ಹಿರಿಯರಿಗೆ ಧರ್ಮ ಸಭೆಯ ಸಮೀಪತೆಯನ್ನು ತೋರಿಸುವ ಅವಕಾಶವಾಗಿ, ಹಾಗೆಯೇ ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಅವರ ಕೊಡುಗೆಯನ್ನು ಇನ್ನಷ್ಟು ಮೌಲ್ಯಯುತವಾಗಿ ಬೆಳೆಸುವ ಸಂದರ್ಭವಾಗಿ ಪರಿಗಣಿಸಲಾಗಿದೆ. ಈ ವರ್ಷ ಈ ದಿನಾಂಕವು ಸಂತ ಜೋಕಿಮ್ ಮತ್ತು ಸಂತ ಅನ್ನಾರವರ ಹಬ್ಬದ ದಿನವಾದ ಭಾನುವಾರ, ಜುಲೈ 26ರಂದು ಬರುತ್ತಿದ್ದು, ಪ್ರತಿಯೊಂದು ಧರ್ಮಪ್ರಾಂತ್ಯದ ಪ್ರಧಾನ ದೇವಾಲಯದಲ್ಲಿ ಪವಿತ್ರ ಬಲಿ ಪೂಜೆಯ ಮೂಲಕ ಈ ದಿನವನ್ನು ಆಚರಿಸಲು ಜಗದ್ಗುರುಗಳು ಎಲ್ಲರನ್ನು ಆಹ್ವಾನಿಸಿದ್ದಾರೆ.
ಪ್ರವಾದಿ ಯೆಶಾಯನ ಗ್ರಂಥದಿಂದ ತೆಗೆದುಕೊಳ್ಳಲಾದ ಈ ವಾಕ್ಯವು, ವಿಶೇಷವಾಗಿ ಏಕಾಂತದಲ್ಲಿ ಬದುಕುವ ಅಥವಾ ತಮ್ಮನ್ನು ಮರೆತಿರುವಂತೆ ಭಾವಿಸುವ ಎಲ್ಲ ಅಜ್ಜ–ಅಜ್ಜಿಯರು ಮತ್ತು ಹಿರಿಯರಿಗೆ ಸಾಂತ್ವನ ಹಾಗೂ ನಿರೀಕ್ಷೆಯ ಸಂದೇಶವಾಗಿರುವುದು ಉದ್ದೇಶವಾಗಿದೆ. ಅದೇ ಸಮಯದಲ್ಲಿ, ಅವರನ್ನು ಮರೆಯದೆ, ಅವರಲ್ಲಿ ಅಮೂಲ್ಯ ಸಾನ್ನಿಧ್ಯವನ್ನೂ ಆಶೀರ್ವಾದವನ್ನೂ ಗುರುತಿಸುವಂತೆ ಕುಟುಂಬಗಳು ಮತ್ತು ಧಾರ್ಮಿಕ ಸಮುದಾಯಗಳಿಗೆ ಇದು ಒಂದು ಸ್ಮರಣೆ ಕೂಡ ಆಗಿದೆ.
ಜಗದ್ಗುರುಗಳ ಈ ಆಯ್ಕೆ, ವೃದ್ಧಾಪ್ಯದ ನಾಜೂಕಿನ ಸಂದರ್ಭದಲ್ಲಿಯೂ ಸಹ ಪ್ರತಿಯೊಬ್ಬರ ಮೇಲಿನ ದೇವರ ಪ್ರೀತಿ ಎಂದಿಗೂ ಕ್ಷೀಣಿಸುವುದಿಲ್ಲ ಎಂಬ ಸತ್ಯವನ್ನು ಉಲ್ಲೇಖಿಸುತ್ತದೆ.
ಸಾಮಾನ್ಯ ಕ್ರೈಸ್ತ ಕುಟುಂಬ ಮತ್ತು ಜೀವನ ವಿಭಾಗವು ವಿಶ್ವದಾದ್ಯಂತದ ಸ್ಥಳೀಯ ಧರ್ಮ ಸಭೆಗಳು, ಸಂಘಗಳು ಮತ್ತು ಧಾರ್ಮಿಕ ಸಮುದಾಯಗಳು ತಮ್ಮ ತಮ್ಮ ಪರಿಸ್ಥಿತಿಗಳಲ್ಲಿ ಈ ದಿನವನ್ನು ಉತ್ತೇಜಿಸಿ ಆಚರಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಪ್ರೋತ್ಸಾಹಿಸುತ್ತಿದೆ. ಈ ಉದ್ದೇಶಕ್ಕಾಗಿ, ಮುಂದಿನ ದಿನಗಳಲ್ಲಿ ವಿಶೇಷ ಧರ್ಮಾಧಿಕಾರಿಗಳು ಸಂಪನ್ಮೂಲಗಳನ್ನು ಸಹ ಲಭ್ಯವಾಗಿಸಲಾಗುವುದು ಎಂದು ಅದು ತಿಳಿಸಿದೆ.