ವ್ಯಾಟಿಕನ್ ರೇಡಿಯೋದ ಉದ್ಘಾಟನಾ ಸಮಾರಂಭದಲ್ಲಿ  ಜಗದ್ಗುರು XIನೇ ಪಿಯಸ್ ರವರೊಂದಿಗೆ (ಎಡಭಾಗದಲ್ಲಿ ನಿಂತಿರುವ) ಗುಗ್ಲಿಯೆಲ್ಮೊ ಮಾರ್ಕೋನಿ. ವ್ಯಾಟಿಕನ್ ರೇಡಿಯೋದ ಉದ್ಘಾಟನಾ ಸಮಾರಂಭದಲ್ಲಿ ಜಗದ್ಗುರು XIನೇ ಪಿಯಸ್ ರವರೊಂದಿಗೆ (ಎಡಭಾಗದಲ್ಲಿ ನಿಂತಿರುವ) ಗುಗ್ಲಿಯೆಲ್ಮೊ ಮಾರ್ಕೋನಿ. 

ಹುಟ್ಟುಹಬ್ಬದ ಶುಭಾಶಯಗಳು, ವಾಟಿಕನ್ ರೇಡಿಯೋ: ಜಗದ್ಗುರುಗಳಿಗೆ 95 ವರ್ಷಗಳ ಸೇವೆ

1931ರಲ್ಲಿ ಗುಗ್ಲಿಯೆಲ್ಮೊ ಮಾರ್ಕೋನಿರವರ ಮೊದಲ ರೇಡಿಯೋ ಪ್ರಸಾರದಿಂದ ಆರಂಭಗೊಂಡು ಇಂದಿನ ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆಯ(ಎ ಐ) ಯುಗದವರೆಗೆ, ವ್ಯಾಟಿಕನ್ ರೇಡಿಯೋವು ಜಗದ್ಗುರುಗಳ, ಸುವಾರ್ತೆ ಮತ್ತು ವಿಶ್ವದ ಸಮುದಾಯಗಳಿಗೆ 95 ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದೆ.

ವ್ಯಾಟಿಕನ್ ವರದಿ

ವ್ಯಾಟಿಕನ್ ರೇಡಿಯೋ ತನ್ನ 95ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, 1931ರ ಫೆಬ್ರವರಿ 12ರಂದು ಆರಂಭವಾದ ಅದರ ಐತಿಹಾಸಿಕ ಪ್ರಯಾಣವನ್ನು ನೆನಪಿಸಿಕೊಳ್ಳುವುದು ಹೃದಯಸ್ಪರ್ಶಿಯಾಗಿದೆ. ಆ ದಿನ ವಿಜ್ಞಾನಿ ಗುಗ್ಲಿಯೆಲ್ಮೊ ಮಾರ್ಕೋನಿರವರ ಧ್ವನಿಯೊಂದಿಗೆ ಸ್ಟಾತಿಯೋ ರಾಡಿಯೋಫೋನಿಕಾ ವ್ಯಾಟಿಕಾನಾ ಮೂಲಕ ಮೊದಲ ಪ್ರಸಾರ ಆರಂಭವಾಯಿತು. ಜಗದ್ಗುರು XIನೇ ಪಿಯಸ್ ರವರು ಈ ಸಂವಹನ ಸಾಧನವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ಮಾರ್ಕೋನಿಗೆ ನೀಡಿದ್ದು, ಜೆಸುಯಿಟ್ ಯಾಜಕರಿಗೆ ಅದರ ನಿರ್ವಹಣೆಯನ್ನು ಒಪ್ಪಿಸಿದ್ದರು. ಆ ದಿನ ಜಗದ್ಗುರುಗಳ ಧ್ವನಿ ಲ್ಯಾಟಿನ್ ಭಾಷೆಯಲ್ಲಿ ಎಲ್ಲ ಜನಾಂಗಗಳಿಗೆ ಮತ್ತು ಪ್ರತಿಯೊಂದು ಸೃಷ್ಟಿಗೆ ಎಂಬ ಸಂದೇಶದೊಂದಿಗೆ ಜಗತ್ತಿನಾದ್ಯಂತ ಮೊಳಗಿತು.

ಆ ಆರಂಭವು ಕೇವಲ ತಾಂತ್ರಿಕ ಸಾಧನೆಯಲ್ಲ, ಅದು ಧರ್ಮ ಸಭೆಯ ಮಿಷನ್‌ಗೆ ಸೇವೆ ಸಲ್ಲಿಸುವ ಧರ್ಮಾಧ್ಯಕ್ಷರ ನಿರ್ಧಾರವಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನವನ್ನು ಜನರ ಹೃದಯಗಳಿಗೆ ಸುವಾರ್ತೆಯನ್ನು ತಲುಪಿಸಲು ಬಳಸುವ ದಿಟ್ಟ ದೃಷ್ಟಿಕೋನವಾಗಿತ್ತು. ನಂತರದ ದಶಕಗಳಲ್ಲಿ ವ್ಯಾಟಿಕನ್ ರೇಡಿಯೋ ಯುದ್ಧಗಳು, ಶಾಂತಿ ಒಪ್ಪಂದಗಳು, ಸಂಕಷ್ಟಗಳು ಮತ್ತು ಪುನರ್‌ನಿರ್ಮಾಣದ ಸಂದರ್ಭಗಳಲ್ಲಿ ಕ್ರೈಸ್ತ ಸಂದೇಶ ಮತ್ತು ಭರವಸೆಯ ಬೆಳಕನ್ನು ಹರಡಿತು.

ಇದುವರೆಗೆ ವ್ಯಾಟಿಕನ್ ರೇಡಿಯೋ ಒಂಬತ್ತು ಜಗದ್ಗುರುಗಳಿಗೆ ಸೇವೆ ಸಲ್ಲಿಸಿದೆ. ದ್ವಿತೀಯ ವಿಶ್ವಯುದ್ಧದ ವೇಳೆ ಸಾವಿರಾರು ಕಾಣೆಯಾಗಿದ್ದವರನ್ನು ಕುಟುಂಬಗಳೊಂದಿಗೆ ಮತ್ತೆ ಸಂಪರ್ಕಿಸಲು ಸಹಾಯಮಾಡಿತು. ಸಂಪೂರ್ಣಾಧಿಕಾರಿ ಆಡಳಿತಗಳ ಕತ್ತಲೆ ದಿನಗಳಲ್ಲಿ ಅದು ಬೆಳಕಿನ ದೀಪವಾಗಿತ್ತು. ದ್ವಿತೀಯ ವಾಟಿಕನ್ ಮಹಾಸಭೆ, ಜೂಬಿಲಿ ವರ್ಷಗಳು ಮತ್ತು ಇತ್ತೀಚಿನ ಉಕ್ರೇನ್, ಮಧ್ಯಪ್ರಾಚ್ಯ, ಕಾಂಗೋ, ಮ್ಯಾನ್ಮಾರ್, ಯೆಮೆನ್ ಮತ್ತು ಸಿರಿಯಾ ಮುಂತಾದ ದೇಶಗಳ ಸಂಘರ್ಷಗಳನ್ನು ದಾಖಲಿಸಿತು.

ಇಂದು 69 ರಾಷ್ಟ್ರಗಳಿಂದ ಬಂದ ಸಿಬ್ಬಂದಿಯೊಂದಿಗೆ 34 ಭಾಷಾ ವಿಭಾಗಗಳು ಮತ್ತು ಒಂದು ಮಲ್ಟಿಮೀಡಿಯಾ ವಿಭಾಗದ ಮೂಲಕ ವ್ಯಾಟಿಕನ್ ರೇಡಿಯೋ ಜಗತ್ತಿನ ಭೌಗೋಳಿಕ ಹಾಗೂ ಅಸ್ತಿತ್ವದ ಅಂಚುಗಳಿಗೆ ತಲುಪುತ್ತಿದೆ. ಅನೇಕ ದೇಶಗಳಲ್ಲಿ ಅದು ಕ್ರೈಸ್ತ ಸಮುದಾಯಗಳಿಗೆ ಮೌನವಾದರೂ ಮಹತ್ವದ ಸಾನ್ನಿಧ್ಯವಾಗಿದೆ. ಜಗದ್ಗುರು ಫ್ರಾನ್ಸಿಸ್ ರವರು ಆರಂಭಿಸಿದ ಸಂವಹನ ಸುಧಾರಣೆಯ ಭಾಗವಾಗಿ, ಡಿಕಾಸ್ಟರಿ ಫಾರ್ ಕಮ್ಯುನಿಕೇಶನ್ ಸ್ಥಾಪನೆಯೊಂದಿಗೆ ಇದು ಡಿಜಿಟಲ್ ಪರಿವರ್ತನೆಯನ್ನು ಅನುಭವಿಸಿದೆ.

ಕೃತಕ ಬುದ್ಧಿಮತ್ತೆಯ (ಎಐ) ಯುಗದಲ್ಲಿರುವ ಇಂದಿನ ಸಂದರ್ಭದಲ್ಲಿ, ಅದು ಒಂದು ಉಪಯುಕ್ತ ಸಾಧನವಾದರೂ ಅದು ಮಾನವೀಯ ಚಿಂತನೆ, ಸೃಜನಶೀಲತೆ ಮತ್ತು ಹೊಣೆಗಾರಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ವ್ಯಾಟಿಕನ್ ರೇಡಿಯೋ ಹೊಂದಿದೆ. ಎಐ ಒಂದು ಸಾಧನ, ಧ್ವನಿಯಲ್ಲ ಎಂಬ ಯುನೆಸ್ಕೋ ವಿಶ್ವ ರೇಡಿಯೋ ದಿನದ ಸಂದೇಶವೂ ಇದೇ ಸತ್ಯವನ್ನು ಒತ್ತಿ ಹೇಳುತ್ತದೆ. ರೇಡಿಯೋ ಎಂದರೆ ವ್ಯಕ್ತಿಗಳ ನಡುವೆ ನಡೆಯುವ ಸನ್ನಿಧಿ ಮತ್ತು ಸಂಭಾಷಣೆ ಎಂಬ ನಂಬಿಕೆಯನ್ನು ಉಳಿಸಿಕೊಂಡು, ವ್ಯಾಟಿಕನ್ ರೇಡಿಯೋ ಇಂದು ಕೂಡ ಸುವಾರ್ತೆಯ ಸಂದೇಶವನ್ನು, ಜಗದ್ಗುರುಗಳ ಧ್ವನಿಯನ್ನು ಮತ್ತು ಧರ್ಮ ಸಭೆಯ ಬೋಧನೆಯನ್ನು ಜಗತ್ತಿನಾದ್ಯಂತ ಹರಡುತ್ತಿದೆ.

ಹುಟ್ಟುಹಬ್ಬದ ಶುಭಾಶಯಗಳು, ವ್ಯಾಟಿಕನ್ ರೇಡಿಯೋ!

12 ಫೆಬ್ರವರಿ 2026, 16:33