ದೇವರು ರೇಡಿಯೋವನ್ನು ಮೆಚ್ಚುತ್ತಾನೆ
ವ್ಯಾಟಿಕನ್ ವರದಿ
ವ್ಯಾಟಿಕನ್ ಸಂವಹನದ ಹಲವು ಮಾರ್ಗಗಳನ್ನು ಬಳಸುತ್ತದೆ: 1861ರಿಂದ ಪ್ರಕಟವಾಗುತ್ತಿರುವ ಲ’ಒಸ್ಸೆರ್ವಾತೋರೇ ರೊಮಾನೊ ಪತ್ರಿಕೆ, 1931ರಲ್ಲಿ ಆರಂಭವಾದ ವ್ಯಾಟಿಕನ್ ರೇಡಿಯೋ, ನಂತರ ಸ್ಥಾಪಿತವಾದ ವ್ಯಾಟಿಕನ್ ಟೆಲಿವಿಷನ್ ಕೇಂದ್ರ (ಇಂದಿನ ವ್ಯಾಟಿಕನ್ ಮೀಡಿಯಾ) ಮತ್ತು ಇಂದಿನ ಡಿಜಿಟಲ್ ವೇದಿಕೆ ‘ವಾಟಿಕನ್ ನ್ಯೂಸ್’. ಇವುಗಳಲ್ಲೆಲ್ಲಾ, ಧರ್ಮ ಸಭೆಯ ಗುರಿಗೆ ಅತ್ಯಂತ ಹತ್ತಿರವಾಗಿರುವ ಮಾಧ್ಯಮವೆಂದರೆ ರೇಡಿಯೋ ಎಂದು ಲೇಖಕರು ಹೇಳುತ್ತಾರೆ.
ದೇವರು ಮಾನವನೊಂದಿಗೆ ಸಂವಹನ ಮಾಡುವ ರೀತಿ ಕುರಿತು ಚಿಂತಿಸಿದಾಗ, ಮೊದಲಿಗೆ ಬರುತ್ತದೆ “ವಾಕ್ಯ.” ಬರಹ ಮುಖ್ಯವಾದರೂ, ಮಾತು ಬರಹಕ್ಕಿಂತ ಮೊದಲು ಬಂದಿದೆ. “ಆದಿಯಲ್ಲಿ ವಾಕ್ಯವಿತ್ತು” ಎಂಬ ಸತ್ಯವನ್ನು ಕ್ರೈಸ್ತ ಧರ್ಮ ಒತ್ತಿ ಹೇಳುತ್ತದೆ. ಶಾಸ್ತ್ರಗಳು ಮತ್ತು ಸುವಾರ್ತೆಗಳು ಮೊದಲು ಜೀವನದಲ್ಲಿ ನಡೆದ ಘಟನೆಗಳಾಗಿದ್ದು, ನಂತರ ಅವುಗಳನ್ನು ಬರೆಯಲಾಯಿತು.
ಸಂತ ಪೌಲನು "ಫೈಡ್ಸ್ ಎಕ್ಸ್ ಆಡಿಟು" ವಿಶ್ವಾಸವು ಕೇಳುವುದರಿಂದ ಬರುತ್ತದೆ ಎಂದು ಹೇಳುತ್ತಾನೆ. ಹಳೆಯ ಒಡಂಬಡಿಕೆಯಲ್ಲಿ ಕೂಡ “ಇಸ್ರಾಯೇಲೇ, ಕೇಳು!” ಎಂಬ ಆಹ್ವಾನ ಕೇಳಿಬರುತ್ತದೆ. ಅಂದರೆ ದೇವರ ಸಂದೇಶವು ಮೊದಲಿಗೆ ಕಿವಿಗೆ ತಲುಪುತ್ತದೆ. ಆದ್ದರಿಂದಲೇ ದೇವರು ರೇಡಿಯೋವನ್ನು ಮೆಚ್ಚುತ್ತಾರೆ ಎಂದು ಲೇಖಕರು ರೂಪಕವಾಗಿ ಹೇಳುತ್ತಾರೆ.
ದೃಷ್ಟಿ ಶಕ್ತಿಯುತವಾದ ಇಂದ್ರಿಯವಾಗಿದ್ದರೂ, ದೇವರನ್ನು ಯಾರೂ ನೋಡಿಲ್ಲ ಎಂದು ಸಂತ ಜೋಹಾನ್ನನು ನೆನಪಿಸುತ್ತಾನೆ. ದೇವರು ತನ್ನ ಸಂಪೂರ್ಣ ಶಕ್ತಿಯಲ್ಲಿ ಕಾಣಿಸಿಕೊಂಡರೆ ಮಾನವನ ಸ್ವಾತಂತ್ರ್ಯಕ್ಕೆ ಅವಕಾಶವಿರದು. ವಿಶ್ವಾಸವೆಂದರೆ ಬಲವಂತವಲ್ಲ ಅದು ಆಹ್ವಾನಕ್ಕೆ ಸ್ವತಂತ್ರ ಪ್ರತಿಕ್ರಿಯೆ. ದೇವರು ತನ್ನನ್ನು ಮೃದುವಾಗಿ, ಕಿವಿಗಳ ಮೂಲಕ ಪರಿಚಯಿಸುತ್ತಾನೆ.
ನಮ್ಮ ಕಿವಿಗಳು ಸದಾ ತೆರೆದಿವೆ ಅವನ್ನು ಮುಚ್ಚುವುದು ಕಷ್ಟ. ಆದರೆ ನಾವು ಏನು ಕೇಳುತ್ತೇವೆ? ಜಗತ್ತಿನಲ್ಲಿ ಅನೇಕ ಧ್ವನಿಗಳು ನಮ್ಮ ಗಮನ ಸೆಳೆಯುತ್ತವೆ. ಆದ್ದರಿಂದ ಆಯ್ಕೆ ಮಾಡುವ ಸಾಮರ್ಥ್ಯ ಮುಖ್ಯ. ಸರಿಯಾದ ಆವರ್ತನವನ್ನು ಹೊಂದಿಸುವ ರೇಡಿಯೋವಿನಂತೆ, ದೇವರ ಧ್ವನಿಯನ್ನು ಗುರುತಿಸಲು ನಿಶ್ಶಬ್ದತೆ ಅಗತ್ಯ.
ಟೆಲಿವಿಷನ್‌ನಂತೆ ದೇವರು ಮಾತನಾಡಿದ್ದರೆ, ಎಲ್ಲರೂ ನೋಡುತ್ತಿದ್ದರೆ ಸಾಕಾಗುತ್ತಿತ್ತು. ಆದರೆ ರೇಡಿಯೋ ವಿಭಿನ್ನ. ಅದು ಹಿನ್ನೆಲೆಯಲ್ಲೇ ನಾದಿಸುತ್ತಿರುತ್ತದೆ ಯಾವಾಗಲಾದರೂ ಒಂದು ಮಹತ್ವದ ಧ್ವನಿ ನಮ್ಮ ಗಮನ ಸೆಳೆಯುತ್ತದೆ. ಆಗ ನಾವು ನಿಲ್ಲಿಸಿ ಗಮನಿಸುತ್ತೇವೆ. ದೇವರು ಕೂಡ ಹೀಗೆ ನಮ್ಮನ್ನು ತಲುಪುತ್ತಾರೆ.
ಇದು ಬಾಗಿಲಿನ ಬಳಿ ನಿಂತು ತಟ್ಟುವ ಮೃದುವಾದ ದೇವರ ಚಿತ್ರ. ನಮ್ಮ ಗಮನವನ್ನು ಕೇಳುವ ದೇವರು, ಅದನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಸ್ವಾತಂತ್ರ್ಯವನ್ನು ನಮಗೆ ನೀಡುತ್ತಾನೆ. ಕಿವಿಗೊಡುವ ಮನಸ್ಸುಳ್ಳವರಿಗೆ ಇದು ಜೀವಿತವನ್ನು ರೂಪಿಸುವ ಅನುಭವ. ಈ ಅರ್ಥದಲ್ಲಿ, ಕಿವಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಬಹುಶಃ ಅತ್ಯುತ್ತಮವಾದದ್ದು ಕೂಡ ಆಗಿದೆ.