ವಿಶ್ವ ರೇಡಿಯೋ ದಿನ ವಿಶ್ವ ರೇಡಿಯೋ ದಿನ  (ANSA)

ರೇಡಿಯೋ ಮತ್ತು ಕೃತಕ ಬುದ್ಧಿಮತ್ತೆಯ(ಎಐ) ಸವಾಲು

ಯುನೆಸ್ಕೋ ಪ್ರೋತ್ಸಾಹಿಸುವ ವಿಶ್ವ ರೇಡಿಯೋ ದಿನವು ಈ ವರ್ಷ ಧ್ವನಿ ಮತ್ತು ಕೃತಕ ಬುದ್ಧಿಮತ್ತೆ (ಎಐ) ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದೆ. ಇದು ಜನರು ಮತ್ತು ಸಮುದಾಯಗಳ ನಡುವಿನ ಸಂಪರ್ಕವನ್ನು ಅನ್ವೇಷಿಸುತ್ತದೆ ಅದು ಗುಗ್ಲಿಯೆಲ್ಮೊ ಮಾರ್ಕೋನಿರವರ ಆವಿಷ್ಕಾರದ ಮೂಲ ಸ್ವಭಾವದ ಭಾಗವಾಗಿದೆ. ಈ ಮೌಲ್ಯವನ್ನು ಯಾವುದೇ ಕೃತಕ ಬುದ್ಧಿಮತ್ತೆಯೂ(ಎಐ) ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದು ನಮ್ಮ ಉಪ ಸಂಪಾದಕೀಯ ನಿರ್ದೇಶಕ ಅಲೆಸ್ಸಾಂದ್ರೋ ಜಿಸೊಟ್ಟಿ ಅಭಿಪ್ರಾಯಪಡುತ್ತಾರೆ.

ವ್ಯಾಟಿಕನ್ ವರದಿ

ರೇಡಿಯೋ ಇಂದು ಕೇವಲ ರೇಡಿಯೋ ಮಾತ್ರವಲ್ಲ ಅದು ಆಡಿಯೋ, ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯೊಂದಿಗೆ ಬೆರೆತು ಹೊಸ ರೂಪ ಪಡೆದುಕೊಂಡಿದೆ. ಎರಡು ದಶಕಗಳ ಹಿಂದೆ ಫಾ. ಫೆಡೆರಿಕೊ ಲೊಂಬಾರ್ಡಿ ಇದನ್ನು ಊಹಿಸಿದ್ದರು. ಇಂದು ಪಾಡ್ಕಾಸ್ಟ್‌ಗಳು, ಆನ್‌ಲೈನ್ ಪ್ರಸಾರಗಳು ಮತ್ತು ಡಿಜಿಟಲ್ ವಿತರಣೆ ಸಾಮಾನ್ಯವಾಗಿವೆ. ಆದರೂ ಗುಗ್ಲಿಯೆಲ್ಮೊ ಮಾರ್ಕೋನಿರವರ ಆವಿಷ್ಕಾರದ ಮೂಲ ಸ್ವಭಾವ ಜನರನ್ನು ಸಂಪರ್ಕಿಸುವ ಸಾಮರ್ಥ್ಯ ಇನ್ನೂ ಉಳಿದಿದೆ.

ರೇಡಿಯೋದಲ್ಲಿ ಧ್ವನಿಯೇ ಕೇಂದ್ರವಾಗಿರುತ್ತದೆ. ಒಂದು ಹಾಡು, ಸಂದರ್ಶನ, ಮಾತುಕತೆ ಅಥವಾ ಸಾರ್ವಜನಿಕ ನಾಯಕರ ಭಾಷಣ ಇವುಗಳ ಮೂಲಕ ವ್ಯಕ್ತಿಯ ಭಾವನೆಗಳು ನೇರವಾಗಿ ಕೇಳುಗರಿಗೆ ತಲುಪುತ್ತವೆ. ಇದೇ ಕಾರಣಕ್ಕೆ ರೇಡಿಯೋ ಇಂದಿಗೂ ಇತರೆ ಮಾಧ್ಯಮಗಳಿಗೆ ಮಿತ್ರ ಮಾಧ್ಯಮವಾಗಿದೆ. ತಂತ್ರಜ್ಞಾನ ಮುಖ್ಯವಾದರೂ, ಕಾರ್ಯಕ್ರಮದ ನಿಜವಾದ ಶಕ್ತಿ ಮನುಷ್ಯನ ಧ್ವನಿ ಮತ್ತು ವ್ಯಕ್ತಿತ್ವದಲ್ಲೇ ಇದೆ.

ಈ ಹಿನ್ನೆಲೆಯಲ್ಲೇ ಯುನೆಸ್ಕೋ  2026ರ ವಿಶ್ವ ರೇಡಿಯೋ ದಿನದ ವಿಷಯವಾಗಿ ಕೃತಕ ಬುದ್ಧಿಮತ್ತೆ (ಎಐ)  ಒಂದು ಸಾಧನ, ಧ್ವನಿ ಅಲ್ಲ ಎಂದು ಘೋಷಿಸಿದೆ. ಇಂದು ಎಐ ಆಧಾರಿತ ನಿರೂಪಕರು, ಸ್ವಯಂ ಧ್ವನಿ ನಕಲು, ಎಐ ಡಬ್ಬಿಂಗ್ ಇತ್ಯಾದಿಗಳು ಹೆಚ್ಚಾಗುತ್ತಿವೆ. ಇದು ಕೇಳುಗರಿಗೆ ಪಾರದರ್ಶಕತೆ ಕುರಿತ ಪ್ರಶ್ನೆಗಳನ್ನು ಎಬ್ಬಿಸುತ್ತದೆ ಅವರು ಕೇಳುತ್ತಿರುವ ಧ್ವನಿ ಮನುಷ್ಯನದ್ದೇ ಅಥವಾ ಯಂತ್ರದ್ದೇ ಎಂಬುದು ಅವರಿಗೆ ತಿಳಿದಿರಬೇಕು.

ಈ ವಿಚಾರವನ್ನು ಜಗದ್ಗುರು XIVನೇ ಲಿಯೋರವರು ಕೂಡ ತಮ್ಮ ಸಾಮಾಜಿಕ ಸಂವಹನ ದಿನದ ಸಂದೇಶದಲ್ಲಿ ಉಲ್ಲೇಖಿಸುತ್ತಾರೆ. ಡಿಜಿಟಲ್ ತಂತ್ರಜ್ಞಾನವನ್ನು ಸ್ವೀಕರಿಸಬೇಕು, ಆದರೆ ಅದರ ಅಪಾಯಗಳನ್ನೂ ಅರಿಯಬೇಕು ಎಂದು ಅವರು ಎಚ್ಚರಿಸುತ್ತಾರೆ. ಎಐ ನಕಲಿ ವಾಸ್ತವಿಕತೆಗಳನ್ನು ನಿರ್ಮಿಸಿ ಮುಖ ಮತ್ತು ಧ್ವನಿಗಳನ್ನು ಕಳವು ಮಾಡುವ ಸಾಧ್ಯತೆಯಿದೆ ಇದರಿಂದ ಸತ್ಯ ಮತ್ತು ಕಲ್ಪನೆ ನಡುವಿನ ಗಡಿ ಮಸುಕಾಗಬಹುದು.

ಎಐ ರೇಡಿಯೋಗೆ ಸಹಾಯಕವಾಗಬಹುದು ಕೇಳುಗರ ಅಭಿರುಚಿಗಳನ್ನು ತಿಳಿಯಲು, ಧ್ವನಿ ಸಂಗ್ರಹಗಳನ್ನು ವ್ಯವಸ್ಥಿತಗೊಳಿಸಲು, ಮಾಹಿತಿಯನ್ನು ವೇಗವಾಗಿ ಹುಡುಕಲು, ಮತ್ತು ವಿಶೇಷ ಧ್ವನಿ ಗುರುತನ್ನು ನಿರ್ಮಿಸಲು. ಆದರೆ ಅದು ಮನುಷ್ಯನ ಭಾವನೆಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ತಂತ್ರಜ್ಞಾನ ಧ್ವನಿಯ ತಂತಿಗಳನ್ನು ನಕಲಿಸಬಹುದು, ಆದರೆ ಹೃದಯದ ಸ್ಪಂದನವನ್ನು ಅಲ್ಲ.

ಹೀಗಾಗಿ, ರೇಡಿಯೋ ತನ್ನ ಮಾನವೀಯ ಸಂಬಂಧದ ಮೂಲವನ್ನು ಉಳಿಸಿಕೊಂಡಿರುವವರೆಗೆ ಅದು ಜೀವಂತವಾಗಿರುತ್ತದೆ. ಮಾರ್ಷಲ್ ಮೆಕ್ಲುಹಾನ್ ಹೇಳಿದಂತೆ, ರೇಡಿಯೋ ದೂರದ ಮನಸ್ಸುಗಳನ್ನೂ ಸ್ಪರ್ಶಿಸುವ ಮಾಯಾ ಶಕ್ತಿ ಹೊಂದಿದೆ ಆ ಶಕ್ತಿಯನ್ನು ಯಾವುದೇ ಯಂತ್ರ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂಬುದಾಗಿದೆ.

13 ಫೆಬ್ರವರಿ 2026, 16:00