ಕಾರ್ಡಿನಲ್ ರೋಚ್: ಸಂತ ಜಾನ್ ಹೆನ್ರಿ ನ್ಯೂಮನ್ ಸತ್ಯದ ಅನ್ವೇಷಣೆಗೆ ಮಾದರಿ
ವ್ಯಾಟಿಕನ್ ವರದಿ
2025ರ ನವೆಂಬರ್ 1ರಂದು, ಎಲ್ಲಾ ಸಂತಗಳ ಮಹೋತ್ಸವದಂದು, ಜಗದ್ಗುರು XIVನೇ ಲಿಯೋರವರು ಸಂತ ಪೇತ್ರ ಚೌಕದಲ್ಲಿ ಪವಿತ್ರ ಬಲಿ ಪೂಜೆಯನ್ನು ಆಚರಿಸಿದರು. ಆ ಸಂದರ್ಭದಲ್ಲಿ, ಪವಿತ್ರ ವರ್ಷದ ಅಂಗವಾಗಿ ರೋಮಿಗೆ ಬಂದಿದ್ದ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳ ಸಮ್ಮುಖದಲ್ಲಿ, ಅವರು ಯಾಜಕ ಸಂತ ಜಾನ್ ಹೆನ್ರಿ ನ್ಯೂಮನ್ ರವರನ್ನು ಧರ್ಮ ಸಭೆಯ ಡಾಕ್ಟರ್ ಎಂದು ಘೋಷಿಸಿದರು. ಜೊತೆಗೆ, ಸಂತ ಥಾಮಸ್ ಅಕ್ವಿನಾಸ್ ರವರೊಂದಿಗೆ, ಧರ್ಮ ಸಭೆಯ ಶಿಕ್ಷಣ ಧರ್ಮ ಪ್ರಚಾರ ಕಾರ್ಯದ ಸಹ-ಪೋಷಕರಾಗಿ ಅವರನ್ನು ಪ್ರಕಟಿಸಿದರು.
ಜಗದ್ಗುರುಗಳ ಹೆಸರಿನಲ್ಲಿ ದೈವಿಕ ಆರಾಧನೆ ಮತ್ತು ಸಂಸ್ಕಾರಗಳ ಶಿಸ್ತು ವಿಭಾಗವು ಒಂದು ಅಧಿಸೂಚನೆಯನ್ನು ಹೊರಡಿಸಿದ್ದು, ಅದರ ಮೂಲಕ ಸಂತ ಜಾನ್ ಹೆನ್ರಿ ನ್ಯೂಮನ್ ಯಾಜಕ ಮತ್ತು ಧರ್ಮ ಸಭೆಯ ಡಾಕ್ಟರ್ ರನ್ನು ಅಕ್ಟೋಬರ್ 9ರಂದು ಐಚ್ಛಿಕ ಸ್ಮರಣೋತ್ಸವದ ಹಂತದಲ್ಲಿ ಸಾಮಾನ್ಯ ರೋಮನ್ ಕ್ಯಾಲೆಂಡರ್‌ನಲ್ಲಿ ಸೇರಿಸಲಾಗಿದೆ. ಈ ಅಧಿಸೂಚನೆಯೊಂದಿಗೆ, ದೈವಾರಾಧನವಿಧಿಯ ರೋಮನ್ ಪೂಜಾ ಗ್ರಂಥ ಮತ್ತು ರೋಮನ್ ಹುತಾತ್ಮರ ತತ್ವ ಸೇರಿಸಬೇಕಾದ ದೈವಾರಾಧನ ವಿಧಿ ಪಠ್ಯಗಳನ್ನು ಲ್ಯಾಟಿನ್ ಭಾಷೆಯಲ್ಲಿ ಪ್ರಕಟಿಸಲಾಗಿದೆ. ಅವುಗಳನ್ನು ಅನುವಾದಿಸಿ, ಅನುಮೋದಿಸಿ, ಪ್ರಕಟಿಸುವ ಜವಾಬ್ದಾರಿ ಈಗ ಎಪಿಸ್ಕೋಪಲ್ ಸಮ್ಮೇಳನಗಳ ಮೇಲಿದೆ.
ಸಂತ ಜಾನ್ ಹೆನ್ರಿ ನ್ಯೂಮನ್ ರವರನ್ನು ಸಾಮಾನ್ಯ ರೋಮನ್ ಕ್ಯಾಲೆಂಡರ್‌ಗೆ ಸೇರಿಸಿರುವುದು, ಅವರನ್ನು ವಿಶ್ವಧರ್ಮಸಭೆಯ ಡಾಕ್ಟರ್ ಎಂದು ಘೋಷಿಸಿದ ನಂತರದ ಮಹತ್ವದ ಹೆಜ್ಜೆಯಾಗಿದ್ದು, ರಕ್ಷಿಸುವ ಮತ್ತು ಪ್ರಕಾಶಿಸುವ ಸತ್ಯದ ನಿರಂತರ ಅನ್ವೇಷಣೆಗೆ ಅವರ ಜೀವನವು ಶ್ರೇಷ್ಠ ಮಾದರಿಯೆಂದು ಧರ್ಮ ಸಭೆ ಮುಂದಿಡಲು ಉದ್ದೇಶಿಸಿದೆ.
ಈ ಘೋಷಣೆಯ ಸಂದರ್ಭದಲ್ಲಿ ನಡೆದ ಬಲಿ ಪೂಜೆಯ ಆಚರಣೆಯ ಪ್ರಭೋಧನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಸುತ್ತುವರೆದಿರುವ ಅಂಧಕಾರದ ಉಲ್ಲೇಖವು ನ್ಯೂಮನ್ ರವರ ಪ್ರಸಿದ್ಧ ಗೀತೆ ‘ಲೀಡ್, ಕೈಂಡ್ಲಿ ಲೈಟ್’ ಅನ್ನು ಸ್ಮರಿಸುತ್ತದೆ ಎಂದು ಹೇಳಿದರು. ಶಿಕ್ಷಣದ ಕರ್ತವ್ಯವೇ ನಿರಾಶೆ ಮತ್ತು ಭಯದ ನೆರಳುಗಳಲ್ಲಿ ಸಿಲುಕಿರುವವರಿಗೆ ಆ ಸೌಮ್ಯ ಬೆಳಕನ್ನು ನೀಡುವುದೆಂದು ಅವರು ಹೇಳಿದರು. ಇಂದಿನ ಲೋಕದಲ್ಲಿ ನಿರೀಕ್ಷೆಗೆ ಕಾರಣಗಳನ್ನು ಹಂಚಿಕೊಳ್ಳಬೇಕೆಂದು ಅವರು ಆಹ್ವಾನಿಸಿದರು.
ಜಗದ್ಗುರು ಫ್ರಾನ್ಸಿಸ್ ರವರು ತಮ್ಮ ಪ್ರೇಷಿತರ ಪರಿಪತ್ರ ಡಿಲಿಕ್ಸಿಟ್ ನೋಸ್, ನ್ಯೂಮನ್ ರವರ ಜೀವನದ ಮತ್ತೊಂದು ಮುಖ್ಯ ಅಂಶವನ್ನು ಒತ್ತಿ ಹೇಳಿದರು ‘ಕೋರ್ ಆದ್ ಕೋರ್ ಲೋಕ್ವಿತುರ್’ (ಹೃದಯವು ಹೃದಯದೊಂದಿಗೆ ಮಾತನಾಡುತ್ತದೆ) ಎಂಬ ವಾಕ್ಯವನ್ನು ಅವರು ತಮ್ಮ ಘೋಷವಾಕ್ಯವಾಗಿ ಸ್ವೀಕರಿಸಿದ್ದರು. ಯೋಚನೆಗಳು ಮತ್ತು ಅಧ್ಯಯನಕ್ಕಿಂತಲೂ, ಪ್ರಾರ್ಥನೆಯಲ್ಲಿನ ಹೃದಯದಿಂದ ಹೃದಯಕ್ಕೆ ನಡೆಯುವ ಕ್ರಿಸ್ತನೊಂದಿಗೆ ಸಂವಾದದಲ್ಲೇ, ಅವರು ತಮ್ಮನ್ನು ಮತ್ತು ಪ್ರಭುವನ್ನು ಆಳವಾಗಿ ಕಂಡುಕೊಂಡರು.
ಈ ಆಚರಣೆಗೆ ರೂಪುಗೊಳಿಸಲಾದ ದೈವಾರಾಧನೆ ವಿಧಿ ಪಠ್ಯಗಳು, ದೇವರ ಸೌಮ್ಯ ಬೆಳಕು ನ್ಯೂಮನ್ ರವರನ್ನು ಧರ್ಮ ಸಭೆಯ ಶಾಂತಿಯತ್ತ ಹೇಗೆ ನಡೆಸಿತು ಎಂಬ ಅವರ ಆಧ್ಯಾತ್ಮಿಕ ಪ್ರಯಾಣದ ಹೃದಯವನ್ನು ಬಿಚ್ಚಿಡುತ್ತವೆ. ನೆರಳುಗಳಿಂದ ಹೊರಬಂದು ಸಂಪೂರ್ಣ ಸತ್ಯದ ಬೆಳಕಿಗೆ ತಲುಪಬೇಕೆಂಬ ನಮ್ಮ ಪ್ರಾರ್ಥನೆಗೂ ಇದು ಪ್ರೇರಣೆಯಾಗುತ್ತದೆ.
ಸಂತ ಜಾನ್ ಹೆನ್ರಿ ನ್ಯೂಮನ್ ರವರು ದೇವರ ಕೃಪೆಯ ಬೆಳಕಿನಿಂದ ಮುನ್ನಡೆದು, ಕಥೋಲಿಕ ಧರ್ಮಸಭೆಯೊಳಗೆ ಶಾಂತಿಯನ್ನು ಕಂಡ ವ್ಯಕ್ತಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಅವರ ಗಂಭೀರ ಧರ್ಮಶಾಸ್ತ್ರೀಯ ಹಾಗೂ ಚರ್ಚಾಶಾಸ್ತ್ರೀಯ ಕೊಡುಗೆಗಳು, ಹಾಗೆಯೇ ಕಾವ್ಯಾತ್ಮಕ ಮತ್ತು ಭಕ್ತಿಪರ ಬರಹಗಳು, ಇಂದಿಗೂ ವಿಶ್ವಾಸಿಗಳ ಆತ್ಮೀಯ ಮತ್ತು ಬೌದ್ಧಿಕ ಪ್ರಯಾಣಕ್ಕೆ ದೀಪವಾಗಿ ಬೆಳಗುತ್ತಿವೆ. ನೆರಳುಗಳನ್ನು ಮೀರಿ ಸತ್ಯದ ಪೂರ್ಣತೆಯನ್ನು ತಲುಪುವ ಅವರ ಸ್ಥಿರ ಹುಡುಕಾಟವು, ಪುನರುತ್ಥಾನಿ ಪ್ರಭುವಿನ ಪ್ರತಿಯೊಬ್ಬ ಶಿಷ್ಯನಿಗೂ ಪ್ರಕಾಶಮಾನ ಮಾದರಿಯಾಗಿದೆ.