ಬಾಲ ಯೇಸುವಿನ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಕಾರ್ಡಿನಲ್ ಪರೋಲಿನ್ ಮಾತನಾಡುತ್ತಿರುವುದು ಬಾಲ ಯೇಸುವಿನ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಕಾರ್ಡಿನಲ್ ಪರೋಲಿನ್ ಮಾತನಾಡುತ್ತಿರುವುದು 

ಕಾರ್ಡಿನಲ್ ಪಾರೋಲಿನ್: ಅಂಗದಾನವು ಮರಣವನ್ನು ಮೀರುವ ಪ್ರೀತಿಯ ಕೃತ್ಯ

ಕಾರ್ಡಿನಲ್ ಪಿಯೆತ್ರೊ ಪಾರೋಲಿನ್ ರವರು ಬಾಲಯೇಸು ಮಕ್ಕಳ ಆಸ್ಪತ್ರೆಯ ಹೊಸ ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿ, ದಾನದ ಸಂಸ್ಕೃತಿ ಎಂಬ ಶೀರ್ಷಿಕೆಯ ಸಮ್ಮೇಳನದಲ್ಲಿ ಭಾಷಣ ಮಾಡಿದರು. ಪ್ರತಿಯೊಂದು ಕೊಡುಗೆಯೂ ಮಾನವ ಕೈಗಳ ಮೂಲಕ ಹರಿದುಬರುವ ದೈವಿಕ ಕೃಪೆಯಾಗುತ್ತದೆ ಎಂದು ಅವರು ದೃಢಪಡಿಸಿದರು.

ವ್ಯಾಟಿಕನ್ ವರದಿ

 ಪಿಯೆತ್ರೊ ಪಾರೋಲಿನ್ ರವರು ರೋಮ್‌ನ ಬಾಲಯೇಸು ಮಕ್ಕಳ ಆಸ್ಪತ್ರೆಯಲ್ಲಿ ಹೊಸದಾಗಿ ನವೀಕರಿಸಲಾದ ಡಯಾಲಿಸಿಸ್ ವಿಭಾಗಕ್ಕೆ ಭೇಟಿ ನೀಡಿ, “ದಾನದ ಸಂಸ್ಕೃತಿ” ಎಂಬ ಸಮ್ಮೇಳನದಲ್ಲಿ ಮಾತನಾಡಿದರು. ಇಂದಿನ ಜಗತ್ತಿನಲ್ಲಿ ಎಲ್ಲವನ್ನೂ ಲಾಭ, ಕಾರ್ಯಕ್ಷಮತೆ ಮತ್ತು ಉಪಯೋಗ ಎಂಬ ಮಾನದಂಡಗಳಲ್ಲಿ ಅಳೆಯಲಾಗುತ್ತಿರುವ ಸಂದರ್ಭದಲ್ಲಿ, ನಾವು ಏನು ನೀಡಬಹುದು? ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು. ಅವರ ಉತ್ತರ ಸ್ಪಷ್ಟವಾಗಿತ್ತು ನಾವು ಬಹಳಷ್ಟು, ಅಂದರೆ ನಮ್ಮಲ್ಲಿರುವ ಎಲ್ಲವನ್ನೂ ನೀಡಬಹುದು.

ಕಾರ್ಡಿನಲ್ ಪಾರೋಲಿನ್ ರವರ ಮಾತಿನಲ್ಲಿ, ಹಣವೂ ಸಹ ಪ್ರೀತಿಯಿಂದ ಪ್ರೇರಿತವಾದಾಗ ನ್ಯಾಯದ ಸಾಧನವಾಗುತ್ತದೆ. ದೇವರ ಮೇಲಿನ ನಂಬಿಕೆ ಅಗತ್ಯವಾದರೂ, ದೇವರು ಮಾನವರ ಮೂಲಕ ಕಾರ್ಯನಿರ್ವಹಿಸುತ್ತಾನೆ ಎಂದು ಅವರು ಹೇಳಿದರು. ಆರ್ಥಿಕ ದಾನವು ಮಾನವ ಗೌರವವನ್ನು ಪುನಃಸ್ಥಾಪಿಸಿ, ಭವಿಷ್ಯದ ಚಿಕಿತ್ಸೆಗೆ ದಾರಿ ಮಾಡಿಕೊಡುತ್ತದೆ. ಆಸ್ಪತ್ರೆಯನ್ನು ಬೆಂಬಲಿಸುವ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿ, ಇದು ಕೇವಲ ದಾನವಲ್ಲ, ಜೀವನ ಮತ್ತು ಗೌರವವನ್ನು ರಕ್ಷಿಸುವ ಗುರಿಯಲ್ಲಿ ಪಾಲ್ಗೊಳ್ಳುವಿಕೆಯಾಗಿದೆ ಎಂದು ಹೇಳಿದರು.

ಅಂಗದಾನದ ಕುರಿತು ಮಾತನಾಡಿದ ಅವರು, ಇದು ಮರಣವನ್ನು ಮೀರುವ ಪ್ರೀತಿಯ ಕೃತ್ಯ ಎಂದು ವಿವರಿಸಿದರು. ತೀವ್ರ ದುಃಖದ ಮಧ್ಯೆಯೂ, ಪೋಷಕರು ತಮ್ಮ ಮಕ್ಕಳ ಅಂಗಗಳನ್ನು ದಾನ ಮಾಡುವ ಮೂಲಕ ಇನ್ನೊಬ್ಬ ಮಗುವಿಗೆ ಹೊಸ ಜೀವನ, ಭರವಸೆ ಮತ್ತು ಭವಿಷ್ಯವನ್ನು ನೀಡುತ್ತಾರೆ. ಮಾನವ ಜೀವನವು ಸಂಬಂಧ ಮತ್ತು ಸಹಭಾಗಿತ್ವವಾಗಿದ್ದು, ದಾನವಾದ ದೇಹದಲ್ಲಿ ಮರಣವನ್ನು ಮೀರಿಸುವ ಪ್ರೀತಿ ತೂಗುತಿರುತ್ತದೆ ಎಂದು ಅವರು ಹೇಳಿದರು.

ಅವರು ಎಲ್ಲರಿಗೂ ಸಾಧ್ಯವಾಗುವ ಮತ್ತೊಂದು ಮಹತ್ವದ ದಾನವೆಂದರೆ “ಸಮಯ” ಎಂದು ಹೇಳಿದರು. ಒಬ್ಬರ ಮಾತನ್ನು ಆಲಿಸುವುದು, ಅವರೊಂದಿಗೆ ನಡೆಯುವುದು ಮತ್ತು “ನೀನು ನನಗೆ ಮಹತ್ವದವನು/ವಳು” ಎಂದು ಹೇಳುವುದು ಅತ್ಯುನ್ನತ ದಾನವಾಗಿದೆ. ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಸೇವೆ ಸಲ್ಲಿಸುವ ಸ್ವಯಂಸೇವಕರು, ವೈದ್ಯರು ಮತ್ತು ಆರೋಗ್ಯಸೇವಕರು ತಾಂತ್ರಿಕ ಪರಿಣತಿ ಹಾಗೂ ಮಾನವೀಯತೆಯ ಸಮನ್ವಯದ ಮೂಲಕ ನಿಜವಾದ ಕರ್ತವ್ಯವನ್ನು ನೆರವೇರಿಸುತ್ತಿದ್ದಾರೆ ಎಂದು ಅವರು ಕೊಂಡಾಡಿದರು.

ಕಿಡ್ನಿ ಪ್ರತಿರೋಪಣ ಪಡೆದ ಯುವಕ ಸಮುವೇಲೆ ಗಾಲಿಂಬೆರ್ಥಿ ತನ್ನ ಅನುಭವವನ್ನು ಹಂಚಿಕೊಂಡನು. ದೀರ್ಘಕಾಲದ ಡಯಾಲಿಸಿಸ್ ಚಿಕಿತ್ಸೆಯಿಂದ ಅವನ ಯೌವನದ ದಿನಗಳು ಆಸ್ಪತ್ರೆಯಲ್ಲೇ ಕಳೆದವು. ಆದರೆ ದಾನವಾದ ಕಿಡ್ನಿ ಮೂಲಕ ಅವನಿಗೆ ಹೊಸ ಜೀವನ ದೊರಕಿತು; ಕ್ರೀಡೆಯಲ್ಲಿ ಯಶಸ್ಸು ಸಾಧಿಸಿ ವಿಶ್ವ ಮಟ್ಟದಲ್ಲೂ ಜಯಗಳಿಸಿದನು. “ನನ್ನ ಜೀವ ಉಳಿಸಿದ ದಾನಿದಾತನಿಗಾಗಿ ಪ್ರತಿದಿನ ಪ್ರಾರ್ಥಿಸುತ್ತೇನೆ” ಎಂದು ಅವನು ಭಾವುಕರಾಗಿ ಹೇಳಿದನು.

17 ಫೆಬ್ರವರಿ 2026, 16:42