ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್‌ನ ಸಮಗ್ರ ಸಭೆಯ ಸಂದರ್ಭದಲ್ಲಿ ಎಲ್ಲರಿಗೂ ಆರೋಗ್ಯ ರಕ್ಷಣೆಯ ಸಭೆಯಲ್ಲಿ ಭಾಗವಹಿಸುವವರೊಂದಿಗೆ ಜಗದ್ಗುರು XIVನೇ ಲಿಯೋರವರ ಸಭೆ. ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್‌ನ ಸಮಗ್ರ ಸಭೆಯ ಸಂದರ್ಭದಲ್ಲಿ ಎಲ್ಲರಿಗೂ ಆರೋಗ್ಯ ರಕ್ಷಣೆಯ ಸಭೆಯಲ್ಲಿ ಭಾಗವಹಿಸುವವರೊಂದಿಗೆ ಜಗದ್ಗುರು XIVನೇ ಲಿಯೋರವರ ಸಭೆ.  (AFP or licensors)

ಎಲ್ಲರಿಗೂ ಆರೋಗ್ಯಸೇವೆ ವಾಸ್ತವವಾಗಿಸಲು ವ್ಯಾಟಿಕನ್ ಕಾರ್ಯಾಗಾರ

ಎಲ್ಲರಿಗೂ ಆರೋಗ್ಯಸೇವೆ: ಸ್ಥಿರತೆ ಮತ್ತು ಸಮಾನತೆ ಎಂಬ ವಿಷಯದ ಮೇಲೆ ಎರಡು ದಿನಗಳ ಕಾರ್ಯಾಗಾರವನ್ನು ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಆಯೋಜಿಸಿದೆ. ಈ ಕಾರ್ಯಾಗಾರವನ್ನು ಜಗದ್ಗುರುಗಳ ಅಧಿಕಾರ ಸ್ಥಳದ ಕಛೇರಿಯಲ್ಲಿ ಪರಿಚಯಿಸಲಾಯಿತು. ತಜ್ಞರು ಹೇಳುವಂತೆ, ದೃಢವಾದ ಇಚ್ಛಾಶಕ್ತಿ ಇದ್ದಲ್ಲಿ ಎಲ್ಲರಿಗೂ ಆರೋಗ್ಯಸೇವೆಯನ್ನು ಸಾಧ್ಯವಾಗಿಸುವ ಮಾರ್ಗವನ್ನು ಕಂಡುಹಿಡಿಯಲು ಸಾಧ್ಯವಿದೆ.

ವ್ಯಾಟಿಕನ್ ವರದಿ

ಪಾಂಟಿಫಿಕಲ್ ಅಕಾಡೆಮಿ ಫಾರ್ ಲೈಫ್ ಈ ವರ್ಷದ ಪ್ಲೀನರಿ ಸಭೆಯನ್ನು ಎಲ್ಲರಿಗೂ ಆರೋಗ್ಯಸೇವೆ ಸ್ಥಿರತೆ ಮತ್ತು ಸಮಾನತೆ ಎಂಬ ವಿಷಯದ ಕಾರ್ಯಾಗಾರ ಸುತ್ತಮುತ್ತ ನಡೆಸಿತು. ರೆಂಜೊ ಪೆಗೊರಾರೊರವರು ಚರ್ಚೆಗಳ ಉದ್ದೇಶ ಮತ್ತು ಪ್ರಗತಿಯನ್ನು ವಿವರಿಸಿದರು. ಜಗದ್ಗುರು XIVನೇ ಲಿಯೋರವರು ತಮ್ಮ ಸಂದೇಶದಲ್ಲಿ ಸಂಘರ್ಷಗಳಿಂದ ಬಳಲುತ್ತಿರುವ ಜಗತ್ತಿನಲ್ಲಿ ಜೀವ ಮತ್ತು ಆರೋಗ್ಯವನ್ನು ಉತ್ತೇಜಿಸಲು ಹಾಗೂ ಸಾಮಾನ್ಯ ಹಿತದ ಅರಿವನ್ನು ಬಲಪಡಿಸಲು ಕರೆ ನೀಡಿದರು.

ಡಾ. ಎಝೆಕಿಯೆಲ್ ಇಮ್ಯಾನುಯೆಲ್ ರವರು ಉತ್ತಮ ಆರೋಗ್ಯ ವ್ಯವಸ್ಥೆ ಐದು ಪ್ರಮುಖ ಗುರಿಗಳನ್ನು ಹೊಂದಿರಬೇಕು ಎಂದರು. ಎಲ್ಲರಿಗೂ ವ್ಯಾಪ್ತಿ, ಕೈಗೆಟಕುವ ವೆಚ್ಚ, ಉನ್ನತ ಗುಣಮಟ್ಟ, ನಗರ–ಗ್ರಾಮ ಅಸಮಾನತೆ ಕಡಿತ ಮತ್ತು ಜನರು ಹಾಗೂ ಆರೋಗ್ಯ ಕಾರ್ಯಕರ್ತರ ತೃಪ್ತಿ. ಮಕ್ಕಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುವುದು ಸಾಮಾಜಿಕ ಹೊಣೆಗಾರಿಕೆ ಎಂದು ಅವರು ಹೇಳಿದರು. ಖಾಸಗಿ ವಿಮೆ ಸಾರ್ವಜನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸದೆ ಬಲಪಡಿಸಬೇಕು ಎಂದು ಒತ್ತಿಹೇಳಿದರು.

ವೆಚ್ಚ ನಿಯಂತ್ರಣಕ್ಕಾಗಿ ದೇಶೀಯ ಬಜೆಟ್ ಮಿತಿಗಳನ್ನು ನಿಗದಿಪಡಿಸಿ, ಜನರು ಸಾಲದ ಹೊಣೆ ಹೊರುವ ಪರಿಸ್ಥಿತಿ ತಪ್ಪಿಸಬೇಕು ಎಂದರು. ಗುಣಮಟ್ಟದ ಆರೈಕೆಗಾಗಿ ದೀರ್ಘಕಾಲದ ರೋಗಗಳು, ತಾಯಿ–ಮಗು ಆರೋಗ್ಯ, ಸಾಂಕ್ರಾಮಿಕ ರೋಗಗಳು ಹಾಗೂ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. ಆಸ್ಪತ್ರೆ ಆಧಾರಿತ ಸೇವೆಯಿಂದ ಸಮುದಾಯ ಮತ್ತು ಮನೆ ಆಧಾರಿತ ಆರೈಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಹೊಸ ಎಐ ತಂತ್ರಜ್ಞಾನಗಳು ದೂರ ಪ್ರದೇಶಗಳಲ್ಲಿ ಸೇವೆ ವಿಸ್ತರಿಸಲು ಸಹಕಾರಿ ಎಂದು ಹೇಳಿದರು.

ಶೀಲಾ ಟ್ಲೌ ಅವರು ಆಫ್ರಿಕಾದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯನ್ನು ವಿವರಿಸಿದರು. ಎಚ್ ಐ ವಿ/ ಏಡ್ಸ್,ಮಲೇರಿಯಾ ಮತ್ತು ಕ್ಷಯರೋಗ ವಿರುದ್ಧ ಹೂಡಿಕೆಗಳಿಂದ ಮಹತ್ವದ ಫಲಿತಾಂಶಗಳು ಕಂಡುಬಂದಿವೆ. ಬೋಟ್ಸ್ವಾನ ಮುಂತಾದ ದೇಶಗಳಲ್ಲಿ ತಾಯಿ–ಮಗು ಎಚ್ ಐ ವಿ ಹರಡುವಿಕೆಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಆದರೆ ತಾಯಿ ಮತ್ತು ಶಿಶು ಮರಣ ಪ್ರಮಾಣ ಇನ್ನೂ ಉನ್ನತವಾಗಿರುವುದನ್ನು ಅವರು ಎಚ್ಚರಿಸಿದರು.

ಈ ವರ್ಷದ “ಗಾರ್ಡಿಯನ್ ಆಫ್ ಲೈಫ್” ಪ್ರಶಸ್ತಿಯನ್ನು ರಾಬರ್ಟ್ ವಿಟಿಲ್ಲೊರವರಿಗೆ ಪ್ರದಾನಿಸಲಾಯಿತು. ಅವರು ವಲಸಿಗರು ಮತ್ತು ಶರಣಾರ್ಥಿಗಳ ಆರೋಗ್ಯದ ಪರವಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ವಲಸೆಯನ್ನು ಸಮಸ್ಯೆಯಾಗಿ ನೋಡದೆ, ಸಮಾಜವನ್ನು ಸಮೃದ್ಧಗೊಳಿಸಿದ ಮಾನವ ವಾಸ್ತವಿಕತೆಯಾಗಿ ನೋಡಬೇಕು ಎಂದು ಅವರು ಹೇಳಿದರು. ಆರೋಗ್ಯ ಸಮಾನತೆ ಕೇವಲ ಹಣಕಾಸಿನಿಂದಲ್ಲ, ದೀರ್ಘಕಾಲಿಕ ಸಮುದಾಯ ಬದ್ಧತೆಯಿಂದ ಸಾಧ್ಯವೆಂದು ಅವರು ಸಮಾರೋಪಿಸಿದರು.

17 ಫೆಬ್ರವರಿ 2026, 16:54