ಅಕ್ಟೋಬರ್ 9ರಂದು ಸ್ಮರಣೋತ್ಸವದೊಂದಿಗೆ ಸಂತ ಜಾನ್ ಹೆನ್ರಿ ನ್ಯೂಮನ್ ರವರನ್ನು ಸಾಮಾನ್ಯ ರೋಮನ್ ಕ್ಯಾಲೆಂಡರ್‌ನಲ್ಲಿ ದಾಖಲಿಸಲಾಗಿದೆ.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ಧರ್ಮ ಸಭೆಯ ಡಾಕ್ಟರ್ ಆಗಿರುವ ಸಂತ ಜಾನ್ ಹೆನ್ರಿ ನ್ಯೂಮನ್ ರವರನ್ನು ಸಾಮಾನ್ಯ ರೋಮನ್ ಕ್ಯಾಲೆಂಡರ್‌ನಲ್ಲಿ ಸೇರಿಸಿ, ಅವರ ಐಚ್ಛಿಕ ಸ್ಮರಣೋತ್ಸವವನ್ನು ಅಕ್ಟೋಬರ್ 9ರಂದು ಆಚರಿಸಲು ಅನುಮೋದಿಸಿದ್ದಾರೆ ಎಂದು ದೈವಿಕ ಆರಾಧನೆ ಮತ್ತು ಸಂಸ್ಕಾರಗಳ ಶಿಸ್ತು ವಿಭಾಗವು 2026ರ ಫೆಬ್ರವರಿ 3ರಂದು ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
19ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಆಂಗ್ಲಿಕನ್ ಯಾಜಕರಾಗಿದ್ದ ನ್ಯೂಮನ್ ರವರು, 1845ರಲ್ಲಿ ಕಥೋಲಿಕ ಧರ್ಮಕ್ಕೆ ಪರಿವರ್ತಿತರಾಗಿ, ನಂತರ ಕಾರ್ಡಿನಲ್ ಪದವಿಗೂ ಏರಿದರು. ಜಗದ್ಗುರು XVI ನೇ ಬೆನೆಡಿಕ್ಟ್ ರವರು 2010ರಲ್ಲಿ ಅವರನ್ನು ಧನ್ಯರೆಂದು ಘೋಷಿಸಿದ್ದು, ಜಗದ್ಗುರು ಫ್ರಾನ್ಸಿಸ್ ರವರು 2019ರಲ್ಲಿ ಅವರನ್ನು ಸಂತರೆಂದು ಘೋಷಿಸಿದರು. 2025ರ ನವೆಂಬರ್ 1ರಂದು ಜಗದ್ಗುರು XIVನೇ ಲಿಯೋರವರು ಸಂತ ಥಾಮಸ್ ಅಕ್ವಿನಾಸ್ ರವರೊಂದಿಗೆ, ಧರ್ಮ ಸಭೆಯ ಶಿಕ್ಷಣ ಧರ್ಮ ಪ್ರಚಾರ ಕಾರ್ಯದ ಸಹ-ಪೋಷಕರಾಗಿಯೂ ಹಾಗೂ ಧರ್ಮ ಸಭೆಯ ಡಾಕ್ಟರ್ ಆಗಿಯೂ ಅವರನ್ನು ಘೋಷಿಸಿದರು.
ಇತ್ತೀಚಿನ ಗೌರವವನ್ನು ಗಮನದಲ್ಲಿಟ್ಟುಕೊಂಡು, ವಿಶ್ವಾಸಿಗಳ ಸಮುದಾಯಕ್ಕೆ ಅಪಾರ ಮಹತ್ವ ಹೊಂದಿದ ಈ ಪವಿತ್ರ ಐಚ್ಛಿಕ ಸ್ಮರಣೋತ್ಸವವನ್ನು, ಅವರು 1845ರಲ್ಲಿ ಕಥೋಲಿಕ ಧರ್ಮಕ್ಕೆ ಪರಿವರ್ತಿತರಾದ ದಿನವಾದ ಅಕ್ಟೋಬರ್ 9ರಂದು ಆಚರಿಸಲು ಅಧಿಸೂಚನೆ ಅನುಮತಿಸಿದೆ.
ಈ ಸ್ಮರಣೋತ್ಸವವನ್ನು ಪವಿತ್ರ ಬಲಿಪೂಜೆ ಹಾಗೂ ದೈವಾರಾಧನವಿಧಿಯ ರೋಮನ್ ಪೂಜಾ ಗ್ರಂಥ
ಆಚರಣೆಗೆ ಸಂಬಂಧಿಸಿದ ಎಲ್ಲಾ ಕ್ಯಾಲೆಂಡರ್‌ಗಳು ಮತ್ತು ದೈವಾರಾಧನಾ ವಿಧಿ ಪುಸ್ತಕಗಳಲ್ಲಿ ಸೇರಿಸಲಾಗುವುದು ಎಂದು ಅಧಿಸೂಚನೆ ತಿಳಿಸುತ್ತದೆ. ಅದರೊಂದಿಗೆ ಸೇರಿಸಿರುವ ದೈವಾರಾಧನಾ ವಿಧಿ ಪಠ್ಯಗಳನ್ನು ಅನುವಾದಿಸಿ,ಅನುಮೋದಿಸಿ, ಈ ಡಿಕ್ಯಾಸ್ಟರಿಯ ದೃಢೀಕರಣದ ನಂತರ ಪ್ರಕಟಿಸುವ ಜವಾಬ್ದಾರಿ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ ಮೇಲಿದೆ.
ಅಧಿಸೂಚನೆ, ದೇವರ ಕೃಪೆಯ ಸೌಮ್ಯ ಬೆಳಕು ನ್ಯೂಮನ್ ರವರನ್ನು ಕಥೋಲಿಕ ಧರ್ಮ ಸಭೆಯೊಳಗೆ ಶಾಂತಿಯನ್ನು ಕಂಡುಕೊಳ್ಳುವಂತೆ ನಡೆಸಿತು ಎಂದು ಒತ್ತಿ ಹೇಳುತ್ತದೆ. ದೇವರು ನನಗೆ ನಿರ್ದಿಷ್ಟ ಸೇವೆಯನ್ನು ನೀಡಲು ನನ್ನನ್ನು ಸೃಷ್ಟಿಸಿದ್ದಾನೆ ನಾನು ಈ ಮಹಾ ಕಾರ್ಯದಲ್ಲಿ ಒಂದು ಕೊಂಡಿ ಎಂಬ ಅವರ ಮಾತುಗಳು, ಅವರ ಜೀವನದ ಅರ್ಥವನ್ನು ಪ್ರತಿಬಿಂಬಿಸುತ್ತವೆ.
ಅವರ ದೀರ್ಘ ಜೀವನದ ಪೂರ್ತಿ ಅವಧಿಯಲ್ಲಿ, ಕಾರ್ಡಿನಲ್ ನ್ಯೂಮನ್ ರವರು ಬಡವರಿಗೆ ಸೇವೆ ಸಲ್ಲಿಸಿ, ಬೋಧನೆ ಹಾಗೂ ಉಪದೇಶದಲ್ಲಿ ತೊಡಗಿಸಿಕೊಂಡು, ನಿರಂತರ ಬೌದ್ಧಿಕ ಅನ್ವೇಷಣೆಯನ್ನು ನಡೆಸಿದರು ಎಂದು ಅಧಿಸೂಚನೆ ಹೇಳುತ್ತದೆ. ನೆರಳುಗಳಿಂದ ಹೊರಬಂದು ಸತ್ಯದ ಪೂರ್ಣತೆಯತ್ತ ಸಾಗುವ ಅವರ ನಿರಂತರ ಹುಡುಕಾಟವು, ಪುನರುತ್ಥಾನಿ ಕರ್ತನ ಪ್ರತಿಯೊಬ್ಬ ಶಿಷ್ಯನಿಗೂ ಪ್ರಕಾಶಮಾನ ಮಾದರಿಯಾಗಿದೆ ಎಂದು ಅದು ಕೊನೆಗೊಳಿಸುತ್ತದೆ.