ನ್ಯೂಯಾರ್ಕ್‌ನಲ್ಲಿರುವ ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಚೇರಿಯಲ್ಲಿ ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೇಲೆ ಕ್ಯಾಚ್ಚಾರವರು ನ್ಯೂಯಾರ್ಕ್‌ನಲ್ಲಿರುವ ಸಂಯುಕ್ತ ರಾಷ್ಟ್ರಗಳ ಪ್ರಧಾನ ಕಚೇರಿಯಲ್ಲಿ ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೇಲೆ ಕ್ಯಾಚ್ಚಾರವರು 

ಜಗದ್ಗುರಗಳ ಅಧಿಕಾರ ಸ್ಥಳ: ಸಾಮಾಜಿಕ ಅಭಿವೃದ್ಧಿ ಮತ್ತು ನ್ಯಾಯವು ಸಾಮಾನ್ಯ ಹಿತದ ಸಾಧನೆಯತ್ತ ಕೇಂದ್ರೀಕೃತವಾಗಿರಬೇಕು

ಸಂಯುಕ್ತ ರಾಷ್ಟ್ರಗಳಲ್ಲಿನ ಜಗದ್ಗುರುಗಳ ಶಾಶ್ವತ ವೀಕ್ಷಕರಾದ ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೇಲೆ ಕ್ಯಾಚ್ಚಾರವರು, ಸಾಮಾಜಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವ ಮೂಲಕ ವ್ಯಕ್ತಿಗಳು, ಕುಟುಂಬಗಳು ಮತ್ತು ಇತರ ಸಮುದಾಯಗಳು ಸಾಮಾನ್ಯ ಹಿತವನ್ನು ಸಾಧಿಸಲು ರಾಷ್ಟ್ರಗಳು ನೆರವಾಗಬೇಕು ಎಂದು ಕರೆ ನೀಡಿದರು.

ವ್ಯಾಟಿಕನ್ ವರದಿ

ಫೆಬ್ರವರಿ 4ರಂದು ನಡೆದ ಸಭೆಯಲ್ಲಿ, ಸಂಯುಕ್ತ ರಾಷ್ಟ್ರಗಳಲ್ಲಿನ ಜಗದ್ಗುರುಗಳ ಅಧಿಕಾರ ಸ್ಥಳದ ಶಾಶ್ವತ ವೀಕ್ಷಕರಾದ ಮಹಾಧರ್ಮಾಧ್ಯಕ್ಷ ಗ್ಯಾಬ್ರಿಯೇಲೆ ಕ್ಯಾಚ್ಚಾರವರು, ಸಾಮಾಜಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವು ಸಾಮಾನ್ಯ ಹಿತವನ್ನು ಸಾಧಿಸುವತ್ತ ಕೇಂದ್ರೀಕೃತವಾಗಿರಬೇಕು ಎಂದು ಹೇಳಿದರು. ಈ ಗುರಿಯನ್ನು ಸಾಧಿಸಲು ರಾಷ್ಟ್ರಗಳು ತಮ್ಮ ನಾಗರಿಕರಿಗೆ ಅಗತ್ಯ ಸಹಾಯ ಒದಗಿಸಬೇಕು ಎಂದು ಅವರು ಒತ್ತಿಹೇಳಿದರು. ಸಮಾಜದ ಏಕತೆ, ಒಗ್ಗಟ್ಟು ಮತ್ತು ವ್ಯವಸ್ಥೆಯನ್ನು ಖಚಿತಪಡಿಸುವ ಜವಾಬ್ದಾರಿ ರಾಜ್ಯದ ಮೇಲಿದ್ದು, ಪ್ರತಿಯೊಬ್ಬ ನಾಗರಿಕನ ಸಹಭಾಗಿತ್ವದೊಂದಿಗೆ ಸಾಮಾನ್ಯ ಹಿತವನ್ನು ಸಾಧಿಸಬಹುದು ಎಂದು ಅವರು ವಿವರಿಸಿದರು.

ಸಾಮಾನ್ಯ ಹಿತವನ್ನು ಸಾಧಿಸುವ ಜವಾಬ್ದಾರಿ ವ್ಯಕ್ತಿಗಳಿಗೂ ರಾಜ್ಯಕ್ಕೂ ಸೇರಿದೆ ಎಂದು ಮಹಾಧರ್ಮಾಧ್ಯಕ್ಷರು ತಿಳಿಸಿದರು. ಆದರೆ, ವ್ಯಕ್ತಿಗಳು, ಕುಟುಂಬಗಳು ಮತ್ತು ಮಧ್ಯವರ್ತಿ ಸಮುದಾಯಗಳು ಒಬ್ಬರೇ ತಮ್ಮ ಸಂಪೂರ್ಣ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಜನರು ಸಾಂಸ್ಕೃತಿಕ, ನೈತಿಕ ಮತ್ತು ಆತ್ಮಿಕ ಗುರಿಗಳನ್ನು ತಲುಪಲು ಅಗತ್ಯವಿರುವ ವಸ್ತುನಿಷ್ಠ ಸಂಪನ್ಮೂಲಗಳು ಮತ್ತು ಸ್ವಾತಂತ್ರ್ಯಗಳನ್ನು ಒದಗಿಸುವುದೇ ರಾಜಕೀಯ ಸಂಸ್ಥೆಗಳ ಪಾತ್ರವೆಂದು ಅವರು ವಿವರಿಸಿದರು.

ಕುಟುಂಬವು ಸಮಾಜದ ಸಹಜ ಮತ್ತು ಮೂಲಭೂತ ಘಟಕವಾಗಿರುವುದರಿಂದ, ಸರ್ಕಾರಗಳು ಅದನ್ನು ಗೌರವಿಸಿ ಬೆಂಬಲಿಸಬೇಕು ಹಾಗೂ ಅಗತ್ಯವಿದ್ದಾಗ ಸೂಕ್ತ ನೆರವನ್ನು ಒದಗಿಸಬೇಕು ಎಂದು ಮಹಾಧರ್ಮಾಧ್ಯಕ್ಷ ಕ್ಯಾಚ್ಚಾರವರು ಕರೆ ನೀಡಿದರು. ಕುಟುಂಬವು ಒಳಗೊಳ್ಳುವಿಕೆ, ಐಕ್ಯತೆ ಮತ್ತು ಸಾಮಾಜಿಕ ಏಕೀಕರಣದಂತಹ ಮೌಲ್ಯಗಳನ್ನು ಬೆಳೆಸುವ ಪ್ರಮುಖ ಕೇಂದ್ರವಾಗಿದೆ ಎಂದು ಅವರು ಹೇಳಿದರು.

ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಸಾಧಿಸಲು ಮಾನವ ವ್ಯಕ್ತಿಯ ಹಿತ ಮತ್ತು ಅವನ/ಅವಳ ಗೌರವಕ್ಕೆ ಕೇಂದ್ರ ಸ್ಥಾನ ನೀಡುವುದು ಅತ್ಯಾವಶ್ಯಕವೆಂದು ಅವರು ಒತ್ತಿಹೇಳಿದರು. ಆಹಾರ, ನೀರು, ವಸತಿ, ಗುಣಮಟ್ಟದ ಆರೋಗ್ಯಸೇವೆ, ಶಿಕ್ಷಣ ಮತ್ತು ಸ್ವಾತಂತ್ರ್ಯಗಳಂತಹ ಮೂಲಭೂತ ಅಗತ್ಯಗಳನ್ನು ಪೂರೈಸುವುದು ಇದರ ಭಾಗವಾಗಿದೆ. ಇದಕ್ಕಾಗಿ ಸರ್ಕಾರಗಳ ಒಳಗೂ ಹೊರಗೂ ಹಾಗೂ ಧಾರ್ಮಿಕ ಸಂಸ್ಥೆಗಳಂತಹ ಪಾಲುದಾರರೊಂದಿಗೆ ಪರಿಣಾಮಕಾರಿ ಸಂಯೋಜನೆ ಅಗತ್ಯವಿದೆ ಎಂದು ಅವರು ಹೇಳಿದರು.

ಕೊನೆಗೆ, ಜಗದ್ಗುರು XIVನೇ ಲಿಯೋರವರು ಡೆಲೆಕ್ಸಿ ತೆ ಎಂಬ ಪ್ರೇಷಿತರ ಉತ್ತೇಜನೆಯಲ್ಲಿ ನೀಡಿದ ಬಡತನದ ಸಂರಚನಾತ್ಮಕ ಕಾರಣಗಳನ್ನು ತ್ವರಿತವಾಗಿ ಎದುರಿಸಬೇಕೆಂಬ ಕರೆಯನ್ನು ನೆನಪಿಸಿದ ಮಹಾಧರ್ಮಾಧ್ಯಕ್ಷರು, ಜಗದ್ಗುರುಗಳ ಅಧಿಕಾರ ಸ್ಥಳದ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ದೃಢವಾಗಿ ಬದ್ಧವಾಗಿದ್ದು, ಸಾಮಾನ್ಯ ಹಿತ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವ ಎಲ್ಲ ಪ್ರಯತ್ನಗಳಿಗೆ ಮುಂದುವರಿದು ಬೆಂಬಲ ನೀಡಲಿದೆ ಎಂದು ತಿಳಿಸಿದರು.

05 ಫೆಬ್ರವರಿ 2026, 17:31