ವೆನಿಸ್ ಬಿಯೆನ್ನೇಲ್‌ನಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಪವಿಲಿಯನ್: "ಕಿವಿಯೇ ಆತ್ಮದ ಕಣ್ಣು".
ವ್ಯಾಟಿಕನ್ ವರದಿ
2026ರ ವೆನಿಸ್ ಬಿಯೆನ್ನೇಲ್‌ನಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಪವಿಲಿಯನ್ “ಆಲಿಸುವಿಕೆ” ಎಂಬ ಕೇಂದ್ರ ಕಲ್ಪನೆಗೆ ಆಧಾರಿತವಾಗಿದ್ದು, ಜರ್ಮನಿಯ ಸಂತ ಹಾಗೂ ಧರ್ಮ ಸಭೆಯ ಡಾಕ್ಟರ್ ಹಿಲ್ಡೆಗಾರ್ಡ್ ಆಫ್ ಬಿಂಗನ್ ರವರ ಜೀವನ ಮತ್ತು ಕೃತಿಗಳಿಂದ ಪ್ರೇರಿತವಾಗಿದೆ. ಮೇ 9ರಿಂದ ನವೆಂಬರ್ 22ರವರೆಗೆ ನಡೆಯುವ 61ನೇ ಅಂತರರಾಷ್ಟ್ರೀಯ ಕಲಾ ಪ್ರದರ್ಶನದ ಭಾಗವಾಗಿರುವ ಈ ಪ್ರದರ್ಶನದ ಕಲ್ಪನೆ ಏಪ್ರಿಲ್ 27ರಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರಿಚಯಿಸಲಾಯಿತು. ಈ ಪವಿಲಿಯನ್ ಅನ್ನು “ಜಗತ್ತಿನ ವೀಕ್ಷಣಾಲಯ” ಎಂದು ಕಾರ್ಡಿನಲ್ ಜೋಸೆ ಟೊಲೆಂಟಿನೊ ದೆ ಮೆಂಡೋಂಸಾ ವಿವರಿಸಿದರು.
ಜಗದ್ಗುರು XIVನೇ ಲಿಯೋರವರು ಏಪ್ರಿಲ್ 11ರಂದು ಶಾಂತಿಗಾಗಿ ಜಪಮಾಲೆಯಲ್ಲಿ ಹೇಳಿದ ಮಾತುಗಳು ಈ ಪವಿಲಿಯನ್‌ನ ಹೃದಯವಾಗಿವೆ: “ನಾವು ಏನನ್ನು ಬೆನ್ನಟ್ಟುತ್ತಿದ್ದೇವೆ ಎಂಬುದೇ ಗೊತ್ತಿಲ್ಲದ ಜಗತ್ತಿನ ವೇಗದಿಂದ ನಾವು ಒತ್ತಡಕ್ಕೊಳಗಾಗಬಾರದು, ಬದಲಿಗೆ ಜೀವನದ ಲಯಕ್ಕೆ, ಸೃಷ್ಟಿಯ ಸೌಹಾರ್ದತೆಗೆ ಮರಳಿ ಅದರ ಗಾಯಗಳನ್ನು ಗುಣಪಡಿಸುವ ಸೇವೆಗೆ ತೊಡಗಬೇಕು.” ಸಂಘರ್ಷ ಮತ್ತು ಉದ್ವಿಗ್ನತೆಯಿಂದ ಕೂಡಿದ ಜಗತ್ತಿನಲ್ಲಿ ಕಲೆ ಹೊಸ ದೃಷ್ಟಿಕೋನಗಳನ್ನು ನೀಡಬಲ್ಲದು, ಆದ್ದರಿಂದ ಕಲಾವಿದರ ಧ್ವನಿಯನ್ನು ಪ್ರವಾದಿಗಳಂತೆ ಆಲಿಸಬೇಕೆಂದು ಅವರು ಒತ್ತಿ ಹೇಳಿದರು.
“ಆತ್ಮದ ಕಣ್ಣು ಕಿವಿಯೇ” ಎಂಬ ಶೀರ್ಷಿಕೆಯ ಈ ಪವಿಲಿಯನ್ ನಿಧಾನತೆ, ಧ್ಯಾನ, ಆಲಿಸುವಿಕೆ ಮತ್ತು ಕಾಳಜಿ ಎಂಬ ವಿಷಯಗಳನ್ನು ಒಳಗೊಂಡಿದೆ. ಕಾರ್ಡಿನಲ್ ರವರ ಪ್ರಕಾರ ಇಂದಿನ ಕಾಲಕ್ಕೆ ಹೊಸ ಮಾರ್ಗದರ್ಶಕರು ಅಗತ್ಯವಿದ್ದು, ಸಂತ ಹಿಲ್ಡೆಗಾರ್ಡ್ ರವರ ಬಹುಸ್ವರ ವ್ಯಕ್ತಿತ್ವ ಏಕತಾನತೆಯ ವಿರುದ್ಧ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಅವರ ಸೃಜನಶೀಲ ದೃಷ್ಟಿಕೋನವು ಹೆಚ್ಚು ಸಮಾವೇಶಕ ಸಮಾಜದ ರೂಪುಗೊಳಿಸುವಿಕೆಗೆ ಮತ್ತು ಸಹೋದರತ್ವದ ಮನೋಭಾವ ಬೆಳೆಸಲು ಪ್ರೇರಣೆ ನೀಡುತ್ತದೆ.
ಈ ಯೋಜನೆ 24 ಕಲಾವಿದರ ಕೃತಿಗಳನ್ನು ವೆನಿಸ್‌ನ ಎರಡು ವಿಶಿಷ್ಟ ಸ್ಥಳಗಳೊಂದಿಗೆ ಹೊಂದಾಣಿಕೆ ಮಾಡುತ್ತದೆ ಕನ್ನಡರೇಜಿಯೋ ಪ್ರದೇಶದ ಮಿಸ್ಟಿಕಲ್ ಗಾರ್ಡನ್ ಮತ್ತು ಕಾಸ್ಟೆಲ್ಲೋ ಪ್ರದೇಶದ ಸಂತ ಮರಿಯಾ ಆಸಿಲಿಯಾತ್ರಿಚೆ ಸಂಕೀರ್ಣ. ಮಿಸ್ಟಿಕಲ್ ಗಾರ್ಡನ್‌ನಲ್ಲಿ ಶಬ್ದ, ಸಂಗೀತ ಮತ್ತು ಮೌನದ ಮೂಲಕ ಹಿಲ್ಡೆಗಾರ್ಡ್ ಅವರ ಪರಂಪರೆಯೊಂದಿಗೆ ಸಂವಾದ ನಡೆಸುವ ಕೃತಿಗಳು ಪ್ರದರ್ಶಿಸಲ್ಪಡುತ್ತವೆ. ಭೇಟಿ ನೀಡುವವರು ಹೆಡ್‌ಫೋನ್‌ಗಳ ಮೂಲಕ ನಡೆದು ಹೋಗುತ್ತಾ ಪ್ರಕೃತಿಯ ಧ್ವನಿ ಮತ್ತು ತಮ್ಮ ಒಳಗಿನ ಧ್ವನಿಯನ್ನು ಅನುಭವಿಸುವ ಅವಕಾಶವನ್ನು ಪಡೆಯುತ್ತಾರೆ.
ಈ ಪವಿಲಿಯನ್ ಒಂದು ಸಮಗ್ರ ಅನುಭವವನ್ನು ನೀಡುತ್ತದೆ, ಇಲ್ಲಿ ಸಂಗೀತವನ್ನು ಜ್ಞಾನದ ರೂಪವೆಂದು ಕಾಣಲಾಗಿದೆ ಅದು ವ್ಯಕ್ತಿಯನ್ನೂ ಜಗತ್ತನ್ನೂ ಸಂಪರ್ಕಿಸುವ ಸೇತುವೆಯಾಗಿದೆ. ಹಿಲ್ಡೆಗಾರ್ಡ್ ಮತ್ತು ಸಂತ ತೆರೇಸಾ ರವರ ಆಧ್ಯಾತ್ಮಿಕ ದೃಷ್ಟಿಕೋನಗಳು ಮನುಷ್ಯನ ಆತ್ಮದ ಒಳಗಿನ “ಮಿಸ್ಟಿಕಲ್ ಗಾರ್ಡನ್” ಕಡೆಗೆ ಮಾರ್ಗದರ್ಶನ ನೀಡುತ್ತವೆ. ಮೌನವು ನಮ್ಮೊಳಗಿನ ಧ್ವನಿಯನ್ನು ಆಲಿಸಲು ಪ್ರೇರೇಪಿಸಿ, ಎಲ್ಲರಿಗೂ ಉತ್ತಮ ಮತ್ತು ಸುಂದರ ಜಗತ್ತನ್ನು ನಿರ್ಮಿಸುತ್ತಿದ್ದೇವೆಯೇ ಎಂದು ಪರಿಶೀಲಿಸಲು ನಮಗೆ ಸಹಾಯ ಮಾಡುತ್ತದೆ.
ಇನ್ನೊಂದೆಡೆ, ಸಂತ ಮರಿಯಾ ಆಸಿಲಿಯಾತ್ರಿಚೆ ಸಂಕೀರ್ಣವನ್ನು ಆಧುನಿಕ ಸ್ಕ್ರಿಪ್ಟೋರಿಯಂ ಆಗಿ ರೂಪಾಂತರಿಸಲಾಗುತ್ತದೆ, ಅಲ್ಲಿ ಹಿಲ್ಡೆಗಾರ್ಡ್ ಅವರ ಗ್ರಂಥಗಳು, ಕಲಾಕೃತಿಗಳು ಮತ್ತು ಧಾರ್ಮಿಕ ಸಂಗೀತದ ಮೂಲಕ ದೈವಿಕ ಪ್ರೀತಿಯ ಅರಿವು ಮೂಡುತ್ತದೆ. ಜಗದ್ಗುರು XVIನೇ ಬೆನೇಡಿಕ್ಟ್ ರವರ ಮಾತುಗಳಂತೆ, “ಸೃಷ್ಟಿ ದೇವರ ಪ್ರೀತಿಯ ಕ್ರಿಯೆಯಾಗಿದ್ದು, ಎಲ್ಲಾ ಸೃಷ್ಟಿಗಳ ಮೂಲಕ ಆ ಪ್ರೀತಿ ನದಿಯಂತೆ ಹರಿಯುತ್ತದೆ.” ಈ ಪವಿಲಿಯನ್ ಆ ದೈವಿಕ ಪ್ರೀತಿಯನ್ನು ಆಲಿಸುವ ಮೂಲಕ ಅನುಭವಿಸಲು ಆಹ್ವಾನ ನೀಡುತ್ತದೆ.