“ಕುಟುಂಬದೊಳಗಿನ ಸಮಗ್ರ ಪರಿಸರಶಾಸ್ತ್ರ ಕುರಿತು ವ್ಯಾಟಿಕನ್ ದಸ್ತಾವೇಜನ್ನು ಪ್ರಕಟಿಸಿದೆ.”
ವ್ಯಾಟಿಕನ್ ವರದಿ
ವ್ಯಾಟಿಕನ್ “ಕುಟುಂಬದ ಜೀವನದಲ್ಲಿನ ಸಮಗ್ರ ಪರಿಸರಶಾಸ್ತ್ರ” ಎಂಬ ಶೀರ್ಷಿಕೆಯ ದಸ್ತಾವೇಜನ್ನು ಪ್ರಕಟಿಸಿದೆ. ಇದು ಕುಟುಂಬದೊಳಗೆ ಸೃಷ್ಟಿಯ ಸಂರಕ್ಷಣೆ ಮತ್ತು ಮಾನವ ಜೀವನದ ಆರೈಕೆಯನ್ನು ಹೇಗೆ ಬದುಕಿನಲ್ಲಿ ಅನ್ವಯಿಸಬೇಕು ಎಂಬುದರ ಮೇಲೆ ಕೇಂದ್ರೀಕರಿಸಿದೆ.
ಸೋಮವಾರ ಬಿಡುಗಡೆಗೊಂಡ ಈ ದಸ್ತಾವೇಜು, ಬಡವರ ಮತ್ತು ಭೂಮಿಯ ಕೂಗುಗಳನ್ನು ಆಲಿಸಿ, ಅದಕ್ಕೆ ಸ್ಪಷ್ಟವಾದ ಪ್ರತಿಕ್ರಿಯೆಯನ್ನು ನೀಡಬೇಕೆಂದು ಜಗದ್ಗುರು ಫ್ರಾನ್ಸಿಸ್ ರವರು ಮತ್ತು ಜಗದ್ಗುರು XIVನೇ ಲಿಯೋರವರು ನೀಡಿದ ಕರೆಗೆ ಪ್ರತಿಕ್ರಿಯೆಯಾಗಿ ಉದ್ದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ದಸ್ತಾವೇಜು ಅಮೋರಿಸ್ ಲೇಟಿಟಿಯಾ ಮತ್ತು ಲೌದಾಟೊ ಸಿ’ ಎಂಬ ಬೋಧನೆಗಳ ತತ್ವಗಳಿಂದ ಪ್ರೇರಿತವಾಗಿದೆ. ಇದು ಸಮಗ್ರ ಮಾನವ ಅಭಿವೃದ್ಧಿಗಾಗಿ ಇರುವ ಡಿಕಾಸ್ಟರಿ ಮತ್ತು ಕ್ರೈಸ್ತ, ಕುಟುಂಬ ಮತ್ತು ಜೀವನಕ್ಕಾಗಿ ಇರುವ ಡಿಕಾಸ್ಟರಿಗಳ ಸಂಯುಕ್ತ ಪ್ರಯತ್ನದ ಫಲವಾಗಿದ್ದು, ತತ್ವಜ್ಞರು, ಸಲಹೆಗಾರರು ಮತ್ತು ವಿವಾಹಿತ ದಂಪತಿಗಳ ನೇರ ಭಾಗವಹಿಸುವಿಕೆಯಿಂದ ರೂಪುಗೊಂಡಿದೆ.
“ಕುಟುಂಬದ ಮೌಲ್ಯಗಳು ಸಮಾಜ ಬೆಳೆಯುವ ಫಲವತ್ತಾದ ನೆಲವಾಗಿದೆ. ನಮ್ಮ ಸಾಮಾನ್ಯ ಗೃಹವನ್ನು ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಸರಿಯಾಗಿ ಕಾಪಾಡಲು ಕುಟುಂಬಗಳು ಮಾದರಿಯಾಗಬೇಕು,” ಎಂದು ಡಿಕಾಸ್ಟರಿಗಳ ಮುಖ್ಯಸ್ಥರಾದ ಕಾರ್ಡಿನಲ್ ಮೈಕೆಲ್ ಕ್ಜೆರ್ನಿ ಮತ್ತು ಕಾರ್ಡಿನಲ್ ಕೆವಿನ್ ಫಾರೆಲ್ ರವರು ಹೇಳಿದ್ದಾರೆ. ಅನೇಕ ಕುಟುಂಬಗಳು ತಮ್ಮ ನೆರೆಹೊರೆಯವರನ್ನು ಮತ್ತು ಭೂಮಿಯನ್ನು ಕಾಪಾಡುವಲ್ಲಿ ತೊಡಗಿಸಿಕೊಂಡಿದ್ದು, ಯೇಸು ಕ್ರಿಸ್ತನಲ್ಲಿರುವ ನಿರೀಕ್ಷೆಯನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ.
ದಸ್ತಾವೇಜು ಕುಟುಂಬದ ಮೌಲ್ಯಗಳನ್ನು ಹೀಗಾಗಿ ವಿವರಿಸುತ್ತದೆ. ನಿಸ್ವಾರ್ಥತೆ, ಸಹನೆ, ಸಮರ್ಪಣೆ, ಜೀವನದ ಸ್ವೀಕಾರ ಮತ್ತು ರಕ್ಷಣೆ, ಪರಸ್ಪರ ಪೂರಕತೆ, ಪೀಳಿಗೆಯ ನಡುವಿನ ಸಂಬಂಧಗಳು, ಇತರ ಕುಟುಂಬಗಳೊಂದಿಗೆ ಏಕತೆ, ಹಾಗೂ ಜ್ಞಾನ ಮತ್ತು ಸಂಪ್ರದಾಯಗಳ ಸಂಗ್ರಹಣೆ.
ಈ ದಸ್ತಾವೇಜು ಕುಟುಂಬಗಳು, ಧರ್ಮ ಸಭೆಯ ಗುಂಪುಗಳು ಮತ್ತು ವ್ಯಕ್ತಿಗಳಿಗೆ ಪರಿಸರ ಸಮಸ್ಯೆಗಳನ್ನು ಎದುರಿಸಲು ಹಾಗೂ ಪ್ರತಿಯೊಬ್ಬರ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸಲು ಮಾರ್ಗಸೂಚಿಗಳನ್ನು ನೀಡುತ್ತದೆ. ಮೊದಲ ಭಾಗವು ಮೂಲಭೂತ ತತ್ವಗಳನ್ನು ವಿವರಿಸುವುದಾದರೆ, ಎರಡನೇ ಭಾಗವು ಲೌದಾಟೊ ಸಿ’ ಯಲ್ಲಿನ ಏಳು ಪ್ರಮುಖ ಉದ್ದೇಶಗಳನ್ನು ಆಧರಿಸಿದ ವಿಷಯಾಧಾರಿತ ಅಧ್ಯಾಯಗಳನ್ನು ಒಳಗೊಂಡಿದೆ.
ಅವುಗಳಲ್ಲಿ ಭೂಮಿಯ ಕೂಗು ಮತ್ತು ಬಡವರ ಕೂಗುಗಳನ್ನು ಆಲಿಸುವುದು, ಪರಿಸರ ಸ್ನೇಹಿ ಆರ್ಥಿಕತೆಯನ್ನು ಉತ್ತೇಜಿಸುವುದು, ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, ಶಿಕ್ಷಣ ಮತ್ತು ಆಧ್ಯಾತ್ಮಿಕತೆಯಲ್ಲಿ ಸಮಗ್ರ ಪರಿಸರಶಾಸ್ತ್ರವನ್ನು ಬೆಳೆಸುವುದು, ಮತ್ತು ಸಮುದಾಯ ಜೀವನದಲ್ಲಿ ಕುಟುಂಬಗಳ ಸಕ್ರಿಯ ಭಾಗವಹಿಸುವಿಕೆ ಸೇರಿವೆ. ಪ್ರತಿಯೊಂದು ಅಧ್ಯಾಯವು ವಿವರಣೆ, ಪರಿಣಾಮಗಳು, ಚಿಂತನೆಗೆ ಪ್ರಶ್ನೆಗಳು ಮತ್ತು ಕಾರ್ಯಗಳ ಸೂಚನೆಗಳನ್ನು ಒಳಗೊಂಡಿದೆ.
ಈ ದಸ್ತಾವೇಜು ಮುಖ್ಯವಾಗಿ ಕುಟುಂಬಗಳಿಗೆ ಉದ್ದೇಶಿತವಾದರೂ, ಸೃಷ್ಟಿಯ ಆರೈಕೆ ಮತ್ತು ಮಾನವ ಗೌರವದ ಉತ್ತೇಜನ ಎಲ್ಲರಿಗೂ ಸಂಬಂಧಪಟ್ಟ ವಿಷಯವಾಗಿರುವುದರಿಂದ ಎಲ್ಲರಿಗೂ ಉಪಯುಕ್ತವಾಗಿದೆ ಎಂದು ಪ್ರಕಟಣೆ ತಿಳಿಸುತ್ತದೆ. ಕುಟುಂಬಗಳು ಸಮಾಜದ ಮೂಲ ಅಂಶವಾಗಿರುವುದರಿಂದ, ಈ ಮಹತ್ವದ ಸಾಂಸ್ಕೃತಿಕ ಬದಲಾವಣೆಗೆ ಚಾಲಕಶಕ್ತಿಯಾಗಬಹುದು ಎಂದು ಅದು ಸೂಚಿಸುತ್ತದೆ.
“ಕುಟುಂಬದ ಜೀವನದಲ್ಲಿನ ಸಮಗ್ರ ಪರಿಸರಶಾಸ್ತ್ರ” ಎಂಬ ದಸ್ತಾವೇಜು ಎರಡೂ ಡಿಕಾಸ್ಟರಿಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಐದು ಭಾಷೆಗಳಲ್ಲಿ ಉಚಿತವಾಗಿ ಲಭ್ಯವಿದೆ.