ಕಾಡಿ೯ನಲ್ ಪರೋಲಿನ್ ರವರು ಕಾಡಿ೯ನಲ್ ಪರೋಲಿನ್ ರವರು   (ANSA)

ಕಾರ್ಡಿನಲ್ ಪ್ಯಾರೊಲಿನ್ ರವರು: ಶಾಂತಿಗಾಗಿ ಕರೆ ನೀಡುವ ಧ್ವನಿಗಳು ಇನ್ನಷ್ಟು ಅಗತ್ಯವಿದೆ.

ಇಟಾಲಿಯನ್ ತ್ರೈಮಾಸಿಕ ಪತ್ರಿಕೆ 'ಸಂಭಾಷಣೆ'ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೋ ಪ್ಯಾರೊಲಿನ್ ರವರು ರಾಜತಾಂತ್ರಿಕತೆಯ ನಾಜೂಕು ಸ್ವಭಾವ, ಬಲಿಷ್ಠರ ತರ್ಕದ ಏರಿಕೆ, ವಿಶ್ವಸಂಸ್ಥೆಯ ಮಹತ್ವ, ಮತ್ತು ಅಣ್ವಸ್ತ್ರ ಭಂಡಾರಗಳನ್ನು ಖಾಲಿ ಮಾಡುವ ಅಗತ್ಯತೆ ಕುರಿತು ಚರ್ಚಿಸುತ್ತಾರೆ.

ವ್ಯಾಟಿಕನ್ ವರದಿ

ಕಾರ್ಡಿನಲ್ ಪಿಯೆತ್ರೋ ಪ್ಯಾರೊಲಿನ್ ರವರು ಇಟಾಲಿಯನ್ ತ್ರೈಮಾಸಿಕ ಪತ್ರಿಕೆ ಸಂಭಾಷಣೆಗೆ ನೀಡಿದ ಸಂದರ್ಶನದಲ್ಲಿ, ಶಾಂತಿ ಶಸ್ತ್ರಾಸ್ತ್ರಗಳಿಂದ ಅಥವಾ ಬಲಿಷ್ಠ ರಾಷ್ಟ್ರಗಳ ಸಮತೋಲನದಿಂದ ಖಚಿತವಾಗುತ್ತದೆ ಎಂಬ ಕಲ್ಪನೆ ಒಂದು ಭ್ರಮೆ (ಉಟೋಪಿಯಾ) ಎಂದು ಹೇಳಿದ್ದಾರೆ. ಅವರ ಮಾತಿನಲ್ಲಿ, ಶಾಂತಿ ಅಂತಾರಾಷ್ಟ್ರೀಯ ಒಪ್ಪಂದಗಳು, ಸಂವಾದ ಮತ್ತು ಸಹಕಾರದಿಂದ ಮಾತ್ರ ಸಾಧ್ಯ. ಅವರು ಶಸ್ತ್ರಸಜ್ಜಿಕೆಯ ವಿರುದ್ಧ ತೀವ್ರವಾಗಿ ಮಾತನಾಡಿ, ವಿಶೇಷವಾಗಿ ಅಣ್ವಸ್ತ್ರ ಭಂಡಾರಗಳನ್ನು ಖಾಲಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಣ್ವಸ್ತ್ರ ಕಡಿತ ಒಪ್ಪಂದಗಳನ್ನು ನವೀಕರಿಸುವಲ್ಲಿ ವಿಫಲವಾದುದು, ಮಾನವ ಜೀವನವನ್ನೇ ನಾಶಮಾಡುವಂತಹ ಮಾರಕ ಸಾಧನಗಳ ನಿರ್ಮಾಣಕ್ಕೆ ಇನ್ನಷ್ಟು ಅವಕಾಶ ನೀಡಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಅವರು ಶಾಂತಿಯ ಪರವಾಗಿ ಇನ್ನಷ್ಟು ಧ್ವನಿಗಳ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ. ಅಸ್ತ್ರಾಸ್ತ್ರ ಸ್ಪರ್ಧೆಯ ಹುಚ್ಚತನದ ವಿರುದ್ಧ, ಬಡ ಮತ್ತು ಬಲಹೀನರ ಪರವಾಗಿ, ನ್ಯಾಯ ಮತ್ತು ಕರುಣೆಯ ಆಧಾರದ ಮೇಲೆ ಹೊಸ ಆರ್ಥಿಕ ಮಾದರಿಗಳನ್ನು ರೂಪಿಸುವ ಪರವಾಗಿ ಹೆಚ್ಚು ಧ್ವನಿಗಳು ಕೇಳಿಬರಬೇಕು ಎಂದು ಅವರು ಹೇಳಿದ್ದಾರೆ. ಹಣದ ಪೂಜೆಯ ಬದಲು, ಮಾನವೀಯ ಮೌಲ್ಯಗಳು ಮತ್ತು ದುರ್ಬಲರ ರಕ್ಷಣೆಯು ಪ್ರಮುಖವಾಗಬೇಕು ಎಂಬುದನ್ನು ಅವರು ಒತ್ತಿಹೇಳುತ್ತಾರೆ.

ರಷ್ಯಾ ಉಕ್ರೇನ್ ಯುದ್ಧವನ್ನು ಅವರು “ಗಾಯ” ಎಂದು ವರ್ಣಿಸಿ, ಅದರ ಭೀಕರ ಪರಿಣಾಮಗಳು ಸಮರ್ಪಕವಾಗಿ ಗಮನಿಸಲ್ಪಡುತ್ತಿಲ್ಲ ಎಂದು ಹೇಳಿದ್ದಾರೆ. ಲಕ್ಷಾಂತರ ಜನರ ಜೀವಹಾನಿ, ನಗರಗಳ ಮತ್ತು ಮೂಲಸೌಕರ್ಯಗಳ ನಾಶವನ್ನು ಅವರು ಉಲ್ಲೇಖಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವೀಯತೆ ಮತ್ತು ಜವಾಬ್ದಾರಿತ್ವ ಹೆಚ್ಚಾಗಬೇಕಾದರೆ, ಅನೇಕ ದೇಶಗಳು ಮತ್ತೆ ಶಸ್ತ್ರಸಜ್ಜಿಕೆಗೆ ಮೊರೆ ಹೋಗುತ್ತಿರುವುದು ನೋವು ತಂದಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಮತ್ತು ಗಾಜಾ ಸಂದರ್ಭಗಳನ್ನು ಹೋಲಿಸಿ, ಕೆಲವು ರಾಷ್ಟ್ರಗಳು ದ್ವಂದ್ವ ಮಾನದಂಡಗಳನ್ನು ಅನುಸರಿಸುತ್ತಿವೆ ಎಂದು ಅವರು ಟೀಕಿಸಿದ್ದಾರೆ. ಉಕ್ರೇನ್‌ನ ಮೇಲೆ ನಡೆದ ದಾಳಿಗಳನ್ನು ಖಂಡಿಸಿದ ದೇಶಗಳು, ಗಾಜಾದ ನಾಶದ ಬಗ್ಗೆ ಅದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಇದು “ಬಲದ ಪ್ರಾಮುಖ್ಯತೆ”ಯನ್ನು ತೋರಿಸುತ್ತದೆ  ಅಂದರೆ ಅಂತಾರಾಷ್ಟ್ರೀಯ ಕಾನೂನುಗಳನ್ನು ಅನುಕೂಲವಾಗುವಾಗ ಮಾತ್ರ ಬಳಸುವುದು, ಬೇರೆ ಸಂದರ್ಭಗಳಲ್ಲಿ ಅವನ್ನು ನಿರ್ಲಕ್ಷಿಸುವುದು. ಈ ಸ್ಥಿತಿಗೆ ರಾಜತಾಂತ್ರಿಕತೆಯ ದುರ್ಬಲತೆ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಡಿನಲ್ ಪ್ಯಾರೊಲಿನ್ ರವರು ರಾಜತಾಂತ್ರಿಕತೆಯನ್ನು “ಸಾಧ್ಯತೆಯ ಕಲೆ” ಎಂದು ವಿವರಿಸಿ, ಅದು ವಾಸ್ತವಿಕತೆಯಿಂದ ಪ್ರಾರಂಭವಾಗಬೇಕು ಮತ್ತು ಸಹನಶೀಲತೆಯನ್ನು ಅಗತ್ಯವಿದೆ ಎಂದು ಹೇಳಿದ್ದಾರೆ. ಯುರೋಪ್ ಒಗ್ಗಟ್ಟಿನ ಧ್ವನಿಯಲ್ಲಿ ಮಾತನಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿ, ಜನರಲ್ಲಿ ಯುರೋಪಿಯನ್ ಗುರುತಿನ ಭಾವನೆ ಪುನರುಜ್ಜೀವನಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿಶ್ವಸಂಸ್ಥೆಯ ಮಹತ್ವವನ್ನು ಅವರು ಪುನರುಚ್ಚರಿಸಿ, ಬಲಿಷ್ಠರ ತರ್ಕವನ್ನು ನಿಯಂತ್ರಿಸಲು ಅಂತಾರಾಷ್ಟ್ರೀಯ ಸಂಸ್ಥೆಗಳು ಅಗತ್ಯವೆಂದು ಹೇಳಿದ್ದಾರೆ.

ಕೊನೆಯಲ್ಲಿ, ಮಾನವೀಯತೆಯನ್ನು ಕಾಪಾಡುವುದು ಅತ್ಯಂತ ಮುಖ್ಯ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರ್ಣ ಭಾಷೆಯ ಬಳಕೆ ಹೆಚ್ಚುತ್ತಿರುವುದನ್ನು ಅವರು ಖಂಡಿಸಿ, ಅದು ಭಯ ಮತ್ತು ವೈಮನಸ್ಯವನ್ನು ಹುಟ್ಟಿಸುತ್ತದೆ ಎಂದು ತಿಳಿಸಿದ್ದಾರೆ. ಕ್ರೈಸ್ತರಾಗಿ, ನಾವು ಪ್ರತಿದಿನದ ಜೀವನದಲ್ಲಿ ಪ್ರೀತಿ, ಶಾಂತಿ ಮತ್ತು ಗೌರವವನ್ನು ತೋರಿಸಬೇಕು. ದ್ವೇಷ, ಯುದ್ಧ ಮತ್ತು ಹಿಂಸಾಚಾರವು ಇತರರ ಮುಖವನ್ನು ಮರೆತಾಗ ಆರಂಭವಾಗುತ್ತದೆ ಎಂದು ಅವರು ಸಂದೇಶ ನೀಡುತ್ತಾರೆ.

08 ಏಪ್ರಿಲ್ 2026, 18:38