ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗಲ್ಲಾಘರ್ ರವರು ಮೇ 11ರ ಸೋಮವಾರ ಕೇಪ್ ವರ್ಡ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭ. ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗಲ್ಲಾಘರ್ ರವರು ಮೇ 11ರ ಸೋಮವಾರ ಕೇಪ್ ವರ್ಡ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭ.  (ANSA)

ಆರ್ಚ್‌ಬಿಷಪ್ ಗ್ಯಾಲಘರ್: ವ್ಯಾಟಿಕನ್‌ನ ರಾಜತಾಂತ್ರಿಕ ಸೇವೆ ಶತಮಾನಗಳಿಂದ ಶಾಂತಿಗಾಗಿ ಕಾರ್ಯನಿರ್ವಹಿಸಿದೆ.

ಜಗದ್ಗುರುಗಳ ಅಧಿಕಾರ ಸ್ಥಳದೊಂದಿಗೆ ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವದ ಅಂಗವಾಗಿ ಕೇಪ್ ವರ್ಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾಗಿರುವ ಆರ್ಚ್‌ಬಿಷಪ್ ಗ್ಯಾಲಘರ್ ರವರು ಭಾಷಣ ಮಾಡಿದರು. ಆ ಭಾಷಣದಲ್ಲಿ ಅವರು ಜಗದ್ಗುರುಗಳ ರಾಜತಾಂತ್ರಿಕತೆಯ ಕಾರ್ಯಪದ್ಧತಿಗಳನ್ನು ವಿವರಿಸಿದರು.

ವ್ಯಾಟಿಕನ್ ವರದಿ

ಜೀವನದ ರಕ್ಷಣೆ, ಕುಟುಂಬ, ಧಾರ್ಮಿಕ ಸ್ವಾತಂತ್ರ್ಯ, ಮಾನವ ಹಕ್ಕುಗಳು, ಪ್ರಜಾಪ್ರಭುತ್ವ, ಬಹುಪಕ್ಷೀಯತೆ ಹಾಗೂ ಅಂತರರಾಷ್ಟ್ರೀಯ ಕಾನೂನುಗಳು ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಕೇಪ್ ವರ್ಡ್ ಹಂಚಿಕೊಂಡಿರುವ “ಮೂಲಭೂತ ಮೌಲ್ಯಗಳು” ಎಂದು ಪರಿಗಣಿಸಲ್ಪಟ್ಟಿವೆ.

ಇವುಗಳ ಜೊತೆಗೆ ಸಂಘರ್ಷಗಳು, ಹವಾಮಾನ ಸಂಕಟ, ಅಸಮಾನತೆಗಳು, ವಲಸೆ, ತಾಂತ್ರಿಕ ಪರಿವರ್ತನೆಗಳು, ಮಾದಕ ವಸ್ತುಗಳ ಕಳ್ಳಸಾಗಣೆ, ಮೌಲ್ಯಗಳ ಸಂಕಟ, ವ್ಯಕ್ತಿಕೇಂದ್ರಿತ ಮನೋಭಾವ ಮತ್ತು ಸತ್ಯದ ಅರಿವಿನ ನಷ್ಟ ಇತ್ಯಾದಿ ಪ್ರಮುಖ “ಜಾಗತಿಕ ಸವಾಲುಗಳು” ಕೂಡ ಇವೆ.

ಈ ಸಮಗ್ರ ಚಿತ್ರಣವನ್ನು ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ರವರು ಮೇ 11 ಸೋಮವಾರ ಕೇಪ್ ವರ್ಡ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಮಂಡಿಸಿದರು.

ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಕೇಪ್ ವರ್ಡ್ ನಡುವಿನ ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವದ ಅಂಗವಾಗಿ ಅವರು ಮೇ 14ರವರೆಗೆ ಆ ಆಫ್ರಿಕಾ ದ್ವೀಪ ಗಣರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.

ಶಾಂತಿಯೇ ಕೇಂದ್ರ ಗುರಿ

“ಒಂದು ಯುವ ಸ್ವಾಯತ್ತ ರಾಷ್ಟ್ರ ಮತ್ತು ವಿಶ್ವದ ಅತ್ಯಂತ ಹಳೆಯ ರಾಜತಾಂತ್ರಿಕ ಸಂಸ್ಥೆಗಳಲ್ಲೊಂದರ ನಡುವೆ ಅರ್ಧ ಶತಮಾನದ ಸಂವಾದ, ಸಹಕಾರ ಮತ್ತು ನಿಜವಾದ ಸ್ನೇಹ” ಎಂದು ಆರ್ಚ್‌ಬಿಷಪ್ ಅವರು ಸ್ಪ್ಯಾನಿಷ್ ಭಾಷಣದಲ್ಲಿ ಹೇಳಿದರು.

ಶಾಂತಿ ಸ್ಥಾಪನೆ ಹಾಗೂ ಮಾನವ ವ್ಯಕ್ತಿಯ ಗೌರವವನ್ನು ರಕ್ಷಿಸಿ ಉತ್ತೇಜಿಸುವ “ಕೇಂದ್ರ ಗುರಿ”ಯತ್ತ ದಿಕ್ಕು ತೋರಿಸುವ “ದೀರ್ಘ ಐತಿಹಾಸಿಕ ಪರಂಪರೆ”ಯಿಂದ ಜಗದ್ಗುರುಗಳ ರಾಜತಾಂತ್ರಿಕತೆ ಬಲಪಡಿಸಲಾಗಿದೆ ಎಂದು ಅವರು ಒತ್ತಿಹೇಳಿದರು.

ಈ ಹಿನ್ನೆಲೆಯಲ್ಲಿ, 11ನೇ ಶತಮಾನದಲ್ಲಿ ಗ್ರೆಗೋರಿಯನ್ ಸುಧಾರಣೆಯ ಅವಧಿಯಲ್ಲಿ ಚಯಧಮ೯ಸಭೆಯೊಳಗೆ “ಲೆಗೇಶನ್ ಹಕ್ಕ”ನ್ನು ಸಂಸ್ಥಾಗತಗೊಳಿಸುವ ಮೂಲಕ ಜಗದ್ಗುರುಗಳ ರಾಜತಾಂತ್ರಿಕತೆಯ ಉದ್ಭವವಾದುದನ್ನು ಅವರು ಸ್ಮರಿಸಿದರು.

ನಂತರ, 15ನೇ ಶತಮಾನದಲ್ಲಿ ತಾತ್ಕಾಲಿಕ ದೌತ್ಯಗಳಿಂದ ಶಾಶ್ವತ ದೌತ್ಯಗಳಿಗೆ ನಡೆದ ಪರಿವರ್ತನೆಯ ಮೂಲಕ  ನಂತರ ಇತರೆ ರಾಷ್ಟ್ರಗಳೂ ಅನುಸರಿಸಿದ ಆಧುನಿಕ ರಾಜತಾಂತ್ರಿಕತೆಯ ಪ್ರಮುಖ ಲಕ್ಷಣವಾದ ಸಂಸ್ಥಾತ್ಮಕ ಸ್ಥಿರತೆ ಸಾಧಿಸಲಾಯಿತು ಎಂದು ಹೇಳಿದರು.

ಕೊನೆಗೆ, 16ನೇ ಮತ್ತು 17ನೇ ಶತಮಾನಗಳಲ್ಲಿ ಜಗದ್ಗುರುಗಳ ರಾಜತಾಂತ್ರಿಕತೆಯ ಬಲವರ್ಧನೆಯ ಕುರಿತು ಮಾತನಾಡಿದ ಅವರು, ರಾಯಭಾರಿಗಳು, ಲೆಗೇಟ್‌ಗಳು ಮತ್ತು ಇಂಟರ್‌ನುನ್ಚಿಯೋಗಳ ನಡುವಿನ ಭೇದವನ್ನು ಉಲ್ಲೇಖಿಸಿದರು.

ಜಗದ್ಗುರುಗಳ ಅಧಿಕಾರ ಸ್ಥಳದ ರಾಜತಾಂತ್ರಿಕ ಸಂಬಂಧಗಳು

“ಪ್ರಸ್ತುತ ಜಗದ್ಗುರುಗಳ ಅಧಿಕಾರ ಸ್ಥಳ 184 ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ್ದು, ಜೊತೆಗೆ ಯುರೋಪಿಯನ್ ಯೂನಿಯನ್ ಮತ್ತು ಸುವೆರಿನ್ ಮಿಲಿಟರಿ ಆರ್ಡರ್ ಆಫ್ ಮಾಲ್ಟಾವೊಂದಿಗೂ ಸಂಬಂಧಗಳನ್ನು ಕಾಪಾಡಿಕೊಂಡಿದೆ,” ಎಂದು ಆರ್ಚ್‌ಬಿಷಪ್ ಗ್ಯಾಲಘರ್ ಹೇಳಿದರು.

ರೋಮಿನಲ್ಲಿ ನೆಲೆಸಿರುವ 93 ರಾಜತಾಂತ್ರಿಕ ಮಿಷನ್‌ಗಳು ಜಗದ್ಗುರುಗಳ ಅಧಿಕಾರ ಸ್ಥಳದ ಮಾನ್ಯತೆ ಪಡೆದಿವೆ ಎಂದು ಅವರು ವಿವರಿಸಿದರು.

ಜಗದ್ಗುರುಗಳಿಗೆ‌ ಸೇವೆ ಸಲ್ಲಿಸುವ ಕಾರ್ಯದಲ್ಲಿ ಸ್ಟೇಟ್ ಕಾರ್ಯದರ್ಶಿತ್ವದ ಕಾರ್ಯವಿಧಾನ ಹಾಗೂ ಜಗದ್ಗುರುಗಳ ರಾಜತಾಂತ್ರಿಕತೆಯ ಕಾರ್ಯಪದ್ಧತಿಗಳನ್ನು ಅವರು ವಿವರಿಸಿದರು.

“ಶಾಂತಿ, ನ್ಯಾಯ ಹಾಗೂ ಮಾನವ ಗೌರವದ ರಕ್ಷಣೆ ಮತ್ತು ಉತ್ತೇಜನಕ್ಕಾಗಿ ಶತಮಾನಗಳಿಂದ ಅಭಿವೃದ್ಧಿಯಾದ ಅನುಭವದ” ಹಿನ್ನೆಲೆಯಲ್ಲಿ, ಕೇಪ್ ವರ್ಡ್ ಗಣರಾಜ್ಯದೊಂದಿಗೆ ಸಂಬಂಧಗಳು 1975ರಲ್ಲಿ ದೇಶ ಸ್ವಾತಂತ್ರ್ಯ ಘೋಷಿಸುವುದಕ್ಕೂ ಮುನ್ನವೇ ಆರಂಭವಾಗಿದ್ದವು ಎಂದು ಅವರು ತಿಳಿಸಿದರು.

1970ರ ಜುಲೈ 1ರಂದು ವ್ಯಾಟಿಕನ್‌ನಲ್ಲಿ ಜಗದ್ಗುರು VIನೇ ಪೌಲ್ ರವರು ಆಫ್ರಿಕಾದ ಸ್ವಾತಂತ್ರ್ಯ ಚಳವಳಿಗಳ ನಾಯಕರಾದ ಅಗೋಸ್ತಿನ್ಹೊ ನೆಟೊ, ಮಾರ್ಸೆಲಿನೊ ದೊಸ್ ಸಾಂತೋಸ್ ಮತ್ತು ಅಮಿಲ್ಕರ್ ಕಬ್ರಾಲ್ ಸೇರಿದಂತೆ ಹಲವರನ್ನು ಭೇಟಿಯಾದ ವಿಚಾರವನ್ನು ಗ್ಯಾಲಘರ್ ಸ್ಮರಿಸಿದರು.

ಆ ಸಭೆ “ಪೋರ್ಚುಗಲ್‌ನೊಂದಿಗೆ ಸಂಬಂಧಗಳ ತಾತ್ಕಾಲಿಕ ವ್ಯತ್ಯಯಕ್ಕೆ ಕಾರಣವಾದರೂ, ಆಫ್ರಿಕಾ ಜನರ ಹೋರಾಟ ಮತ್ತು ಜನಾಂಗಗಳ ಗೌರವಕ್ಕೆ ಧರ್ಮ ಸಭೆ ನೀಡಿದ ಧೈರ್ಯಶಾಲಿ ಬೆಂಬಲವನ್ನು ತೋರಿಸಿತು” ಎಂದು ಅವರು ಹೇಳಿದರು.

ಕೇಪ್ ವರ್ಡ್‌ನಲ್ಲಿನ ಧರ್ಮಸಭೆ

ಇನ್ನೊಂದೆಡೆ, ಧರ್ಮ ಸಭೆಯ ಉಪಸ್ಥಿತಿ ಕೇಪ್ ವರ್ಡ್ ಗಣರಾಜ್ಯದ ಇತಿಹಾಸದಲ್ಲೇ ಆಳವಾಗಿ ಬೇರುಬಿಟ್ಟಿದ್ದು, ಅದರ ಗುರುತಿನ ಭಾಗವಾಗಿದೆ. 1462ರಲ್ಲಿ ಆಫ್ರಿಕಾ ದ್ವೀಪಸಮೂಹಕ್ಕೆ ಬಂದ ಮೊದಲ ನಿವಾಸಿಗಳಲ್ಲಿ ಕಥೋಲಿಕ ಮಿಷನರಿಗಳು ಸೇರಿದ್ದು, ಅವರು ಅಲ್ಲಿನ ಸಂಸ್ಕೃತಿ, ಕಲೆ, ಸಂಗೀತ ಮತ್ತು ಆಚರಣೆಗಳ ಮೇಲೆ ಆಳವಾದ ಪ್ರಭಾವ ಬೀರಿದರು.

1533ರಲ್ಲಿ ಉಪ ಸಹಾರಾ ಆಫ್ರಿಕಾದ ಮೊದಲ ಧರ್ಮಪ್ರಾಂತ್ಯವಾದ ಸ್ಯಾಂಟಿಯಾಗೊ ಡೆ ಕಾಬೊ ವರ್ಡೆ ಧರ್ಮಪ್ರಾಂತ್ಯ ಸ್ಥಾಪಿಸಲ್ಪಟ್ಟಿತು. ಇದರಿಂದ ಆ ನೆಲ “ಸುವಾರ್ತಾ ಪ್ರಸಾರ ಮತ್ತು ಸಾಮಾಜಿಕ ಸಂಘಟನೆಯ ಕೇಂದ್ರವಾಗಿ, ಶಾಲೆಗಳು, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಮೂಲಕ ಬೆಳೆಯಿತು” ಎಂದು ಗ್ಯಾಲಘರ್ ಹೇಳಿದರು.

“ರಾಜಕೀಯ ಅಥವಾ ಆರ್ಥಿಕ ವ್ಯವಸ್ಥೆಗಳನ್ನು ಪ್ರಸ್ತಾಪಿಸುವುದರಿಂದ ದೂರವಿದ್ದು, ಮಾನವ ಗೌರವಕ್ಕೆ ಮಾನ್ಯತೆ ದೊರಕಬೇಕು ಮತ್ತು ತನ್ನ ಧರ್ಮಕಾರ್ಯವನ್ನು ನೆರವೇರಿಸಲು ಧರ್ಮ ಸಭೆಗೆ ಸ್ವಾತಂತ್ರ್ಯ ಇರಬೇಕು ಎಂಬುದನ್ನೇ ಧರ್ಮ ಸಭೆ ಕೇಳುತ್ತದೆ” ಎಂದು ರಾಷ್ಟ್ರಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಸ್ಪಷ್ಟಪಡಿಸಿದರು.

ಈ ಹಿನ್ನೆಲೆಯಲ್ಲಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಹಾಯವನ್ನು ಖಚಿತಪಡಿಸುವ ಉದ್ದೇಶದಿಂದ 2013ರಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ಕೇಪ್ ವರ್ಡ್ ನಡುವೆ ನಡೆದ ಒಪ್ಪಂದವನ್ನು ಅವರು ಉಲ್ಲೇಖಿಸಿದರು.

ಪ್ರೀತಿ ಮತ್ತು ಸತ್ಯದ ಮೇಲೆ ಆಧಾರಿತ ಸಂಬಂಧಗಳು

ಆರ್ಚ್‌ಬಿಷಪ್ ಗ್ಯಾಲಘರ್ ರವರು “ಭರವಸೆ ಮತ್ತು ಮೌಲ್ಯಗಳ ರಾಜತಾಂತ್ರಿಕತೆಯನ್ನು” ಉತ್ತೇಜಿಸುವಂತೆ ಕರೆ ನೀಡಿದರು. ನಿರಾಯುಧ ಮತ್ತು ಶಾಂತಿಯನ್ನು ಉಂಟುಮಾಡುವ ಶಾಂತಿಗಾಗಿ ಜಗದ್ಗುರುಗಳು‌ ನೀಡಿದ ಕರೆಗೆ ಅನುಗುಣವಾಗಿ, “ಪ್ರೀತಿ ಮತ್ತು ಸತ್ಯದ ಮೇಲೆ ಆಧಾರಿತ ಸಂಬಂಧಗಳನ್ನು” ರೂಪಿಸಬೇಕೆಂದು ಅವರು ಹೇಳಿದರು.

ಕೊನೆಯಲ್ಲಿ, ಕೇಪ್ ವರ್ಡ್‌ನ ನಾಯಕರು ಮತ್ತು ಜನತೆ “ಸಾಮೂಹಿಕ ಹಿತ, ನ್ಯಾಯ, ಏಕತೆ ಮತ್ತು ಐಕ್ಯತೆಯ ಹುಡುಕಾಟದಲ್ಲಿ ಸ್ಥಿರವಾಗಿರಲಿ” ಎಂದು ಪ್ರೋತ್ಸಾಹಿಸಿದರು.

ಇದೇ ಸೋಮವಾರ, ಆರ್ಚ್‌ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ರವರ ಸಮ್ಮುಖದಲ್ಲಿ, 2013ರ ದ್ವಿಪಕ್ಷೀಯ ಒಪ್ಪಂದದ ಜಾರಿಗೆ ಸಂಬಂಧಿಸಿದ ಪ್ರೋಟೋಕಾಲ್‌ಗೆ ಸ್ಥಳೀಯ ಧರ್ಮ ಸಭೆ ಸಹಿ ಹಾಕಿತು.

12 ಮೇ 2026, 11:27