ಜಗದ್ಗುರುಗಳ ದಾನಾಧಿಕಾರಿ: ಬಡವರೇ ಧರ್ಮ ಸಭೆಯಲ್ಲಿ ನಮ್ಮ ನಡೆಗೆ ದಿಕ್ಕು ತೋರಿಸುವ ದಿಕ್ಸೂಚಿ.
ವ್ಯಾಟಿಕನ್ ವರದಿ
ಅಪೋಸ್ಟೋಲಿಕ್ ಆಲ್ಮೊನ್ರಿ, ಜಗದ್ಗುರುಗಳ ದಾನಸೇವೆಗೆ ಮೀಸಲಾಗಿರುವ ಕಚೇರಿ, ಸಂತ ಪೇತ್ರರ ಚೌಕದ ಸಮೀಪದ ವ್ಯಾಟಿಕನ್‌ನ ಸಂತ'ಅನ್ನಾ ಗೇಟ್ ಬಳಿ ಸದಾ ಜನರಿಂದ ತುಂಬಿರುತ್ತದೆ. ಅಲ್ಲಿ ಇರುವ “ಹೌಸ್ ಆಫ್ ಜಕ್ಕಾಯಸ್” ಎಂಬ ಸ್ಥಳದಲ್ಲಿ ಬಡವರು ಮತ್ತು ಅಗತ್ಯದಲ್ಲಿರುವವರ ಬೇಡಿಕೆಗಳನ್ನು ಆಲಿಸಿ ಅವರಿಗೆ ನೆರವು ನೀಡಲಾಗುತ್ತದೆ. ಆವರಣದಲ್ಲಿ ಕೆನಡಾದ ಕಲಾವಿದ ತಿಮೋತಿ ಶ್ಮಾಲ್ಜ್ ರಚಿಸಿದ "ಮನೆಯಿಲ್ಲದ ಯೇಸು" ಶಿಲ್ಪವೂ ಇದೆ.
ಮಾರ್ಚ್ 12ರಂದು ಜಗದ್ಗುರು XIVನೇ ಲಿಯೋರವರು ಆರ್ಚ್ಬಿಷಪ್ ಲೂಯಿಸ್ ಮರಿನ್ ಡಿ ಸ್ಯಾನ್ ಮಾರ್ಟಿನ್ ರವರನ್ನು ದತ್ತಿ ಸೇವೆಗಾಗಿ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ಆಗಿ ನೇಮಿಸಿದರು. ಈ ಹೊಸ ಜವಾಬ್ದಾರಿಯ ಕುರಿತು ಮಾತನಾಡಿದ ಅವರು, ಇದು ತಮಗೆ ಸುವಾರ್ತೆ ಮತ್ತು ನೈಜ ದಾನಧರ್ಮದೊಂದಿಗೆ ನೇರ ಸಂಪರ್ಕವನ್ನು ನೀಡಿದೆ ಎಂದು ಹೇಳಿದರು. ಬಡವರೇ ಈ ಸೇವೆಯ ಕೇಂದ್ರ ಮತ್ತು ದಿಕ್ಕು ತೋರಿಸುವವರು ಎಂದು ಅವರು ಒತ್ತಿಹೇಳಿದರು.
ಈ ಡಿಕಾಸ್ಟರಿಯ ಕಾರ್ಯ ಬಹಳ ವಿಶಾಲವಾಗಿದೆ. ಪ್ರೇಷಿತರ ಆಶೀರ್ವಾದಗಳ ಮೂಲಕ ಸಂಗ್ರಹವಾಗುವ ನೆರವು ಬಡವರ ಸೇವೆಗೆ ಬಳಸಲಾಗುತ್ತದೆ. ಜೊತೆಗೆ ಸಂತ ಪೇತ್ರರ ಚೌಕದಲ್ಲಿ ದಾಖಲೆಗಳಿಲ್ಲದ ಬಡವರಿಗೆ ಆರೋಗ್ಯಸೇವೆ ನೀಡುವ ಎರಡು ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 120 ಸ್ವಯಂಸೇವಕ ವೈದ್ಯರು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ನಾನಸೌಲಭ್ಯ, ಆಶ್ರಯ, ಆಹಾರ ಹಾಗೂ ಸ್ವಚ್ಛತಾ ಸೇವೆಗಳನ್ನೂ ಒದಗಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಡಿಕಾಸ್ಟರಿ ನೆರವು ಕಾರ್ಯಗಳನ್ನು ನಡೆಸುತ್ತಿದೆ. ವಿಶೇಷವಾಗಿ ಉಕ್ರೇನ್, ಗಾಜಾ ಪಟ್ಟಿ, ಲೆಬನಾನ್ ಮತ್ತು ಆಫ್ರಿಕಾ ದೇಶಗಳಿಗೆ ಮಾನವೀಯ ನೆರವು ಕಳುಹಿಸಲಾಗುತ್ತಿದೆ. ಈ ಎಲ್ಲ ಕಾರ್ಯಗಳು ಪ್ರೇಷಿತರ ರಾಯಭಾರಿಗಳ ಸಹಕಾರದೊಂದಿಗೆ ನಡೆಯುತ್ತಿವೆ.
ಆರ್ಚ್‌ಬಿಷಪ್ ಮಾರಿನ್ ರವರ ಮಾತಿನಲ್ಲಿ, ಕ್ರೈಸ್ತ ಜೀವನದ ಕೇಂದ್ರವೇ ಪ್ರೀತಿ ಮತ್ತು ದಾನಧರ್ಮ. “ದೇವರು ಪ್ರೀತಿಯೇ” ಎಂಬ ಅರ್ಥದ ಡೀಯುಸ್ ಕ್ಯಾರಿಟಾಸ್ ಎಸ್ಟ್ ಎಂಬ ವಾಕ್ಯವನ್ನು ಅವರು ತಮ್ಮ ಬಿಷಪ್ ಧ್ಯೇಯವಾಕ್ಯವಾಗಿಸಿಕೊಂಡಿದ್ದಾರೆ. ಬಡವರಲ್ಲಿ ಕ್ರಿಸ್ತನನ್ನು ಕಾಣಬೇಕು, ಅವರ ಮುಖದಲ್ಲಿ ಕ್ರಿಸ್ತನ ಮುಖವೇ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು. ಬಡವರು ಕೇವಲ ಒಂದು ವರ್ಗವಲ್ಲ, ಪ್ರತಿಯೊಬ್ಬ ಬಡ ವ್ಯಕ್ತಿಗೂ ತನ್ನದೇ ಮುಖ ಮತ್ತು ಕಥೆ ಇದೆ ಎಂದು ಅವರು ನೆನಪಿಸಿದರು.
ಕೊನೆಯಲ್ಲಿ ಅವರು, ಬಡವರೊಂದಿಗೆ ಹತ್ತಿರವಾಗಿರುವುದರಿಂದ ತಮ್ಮ ವಿಶ್ವಾಸ ಮತ್ತು ಯಾಜಕತ್ವ ಇನ್ನಷ್ಟು ಆಳವಾಗಿದೆ ಎಂದು ಹೇಳಿದರು. “ಬಡವರು ನಮಗೆ ಸುವಾರ್ತೆಯನ್ನು ಸಾರುತ್ತಾರೆ. ನಾವು ಅವರಿಗೆ ಕ್ರಿಸ್ತನ ಪ್ರೀತಿಯನ್ನು ನೀಡುತ್ತೇವೆ, ಅವರ ಮೂಲಕವೇ ಕ್ರಿಸ್ತನನ್ನು ಮತ್ತೆ ಕಂಡುಕೊಳ್ಳುತ್ತೇವೆ,” ಎಂದು ಅವರು ಹೇಳಿದರು. ದಾನಧರ್ಮವನ್ನು ಕೇವಲ ತತ್ವವಾಗಿ ಅಲ್ಲ, ಬದುಕಿನ ಕೇಂದ್ರವಾಗಿ ಮಾಡಬೇಕು ಎಂದು ಅವರು ಕರೆ ನೀಡಿದರು.