22025ರ ವಾರ್ಷಿಕ ವರದಿ: ಇನ್ಸ್ಟಿಟ್ಯೂಟ್ ಫಾರ್ ದಿ ವರ್ಕ್ಸ್ ಆಫ್ ರಿಲಿಜನ್ ಕಳೆದ ಹತ್ತು ವರ್ಷಗಳಲ್ಲೇ ಅತ್ಯಧಿಕ ನಿವ್ವಳ ಆದಾಯ ದಾಖಲಿಸಿದೆ.
ವ್ಯಾಟಿಕನ್ ವರದಿ
ವೆಸಾಕ್ ಹಬ್ಬದ ಮುನ್ನ, ವ್ಯಾಟಿಕನ್‌ನ ಅಂತರಧರ್ಮೀಯ ಸಂವಾದಕ್ಕಾಗಿ ಡಿಕ್ಯಾಸ್ಟರಿ ವಿಶ್ವದಾದ್ಯಂತದ ಬೌದ್ಧ ಸಮುದಾಯಗಳಿಗೆ ತನ್ನ ವಾರ್ಷಿಕ ಸಂದೇಶವನ್ನು ಬಿಡುಗಡೆ ಮಾಡಿದೆ. ಈ ಸಂದೇಶದಲ್ಲಿ ಕ್ರೈಸ್ತರು ಮತ್ತು ಬೌದ್ಧರು “ಶಸ್ತ್ರರಹಿತ ಮತ್ತು ಶಸ್ತ್ರಗಳನ್ನು ನಿರಸ್ತ್ರಗೊಳಿಸುವ ಶಾಂತಿ” ಬೆಳೆಸಲು ಒಟ್ಟಾಗಿ ನಡೆಯಬೇಕೆಂದು ಆಹ್ವಾನಿಸಲಾಗಿದೆ. ವಿಭಾಗದ ಮುಖ್ಯಸ್ಥ ಕಾರ್ಡಿನಲ್ ಜಾರ್ಜ್ ಜಾಕೋಬ್ ಕೂವಕಾಡ್ ಹಾಗೂ ಕಾರ್ಯದರ್ಶಿ ಮೊನ್ಸಿನಿಯರ್ ಇಂದುನಿಲ್ ಜನಕರತ್ನೆ ಕೊಡಿತುುವಕ್ಕು ಕಂಕಣಮಲಗೆ ಸಹಿ ಮಾಡಿದ ಈ ಸಂದೇಶವು ಯುದ್ಧ, ವಿಭಜನೆ ಮತ್ತು ಅವಿಶ್ವಾಸದಿಂದ ಕೂಡಿದ ಇಂದಿನ ಜಗತ್ತಿನಲ್ಲಿ ಶಾಂತಿಯ ಮಹತ್ವವನ್ನು ಒತ್ತಿಹೇಳುತ್ತದೆ.
ವೆಸಾಕ್ ಬೌದ್ಧ ಧರ್ಮದ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ಗೌತಮ ಬುದ್ಧರ ಜನನ, ಜ್ಞಾನೋದಯ ಮತ್ತು ಅಂತಿಮ ನಿರ್ವಾಣವನ್ನು ಸ್ಮರಿಸುವ ಹಬ್ಬವಾಗಿದೆ. ಶ್ರೀಲಂಕಾ ಮತ್ತು ದಕ್ಷಿಣ ಏಷ್ಯಾದ ಥೇರವಾದ ಸಂಪ್ರದಾಯಗಳಿಂದ ಪೂರ್ವ ಏಷ್ಯಾ ಮತ್ತು ಹಿಮಾಲಯ ಪ್ರದೇಶಗಳ ಮಹಾಯಾನ ಹಾಗೂ ವಜ್ರಯಾನ ಪರಂಪರೆಗಳವರೆಗೆ ಬೌದ್ಧರು ಈ ಹಬ್ಬವನ್ನು ಪ್ರಾರ್ಥನೆ, ಧ್ಯಾನ, ಕರುಣೆಯ ಕಾರ್ಯಗಳು ಮತ್ತು ಬುದ್ಧರ ಬೋಧನೆಗಳಿಗೆ ನವೀಕೃತ ಬದ್ಧತೆಯೊಂದಿಗೆ ಆಚರಿಸುತ್ತಾರೆ.
ಸಂದೇಶದಲ್ಲಿ ಶಾಂತಿ ಕೇವಲ ರಾಜಕೀಯ ಆಶಯವಲ್ಲ ಅಥವಾ ಯುದ್ಧದ ಅನುಪಸ್ಥಿತಿಯೂ ಅಲ್ಲ,ಅದು ಮಾನವನ ಹೃದಯದಿಂದ ಆರಂಭವಾಗುತ್ತದೆ ಎಂದು ತಿಳಿಸಲಾಗಿದೆ. ಜಗದ್ಗುರು XIVನೇ ಲಿಯೋರವರ 2026ರ ವಿಶ್ವ ಶಾಂತಿ ದಿನದ ಸಂದೇಶವನ್ನು ಉಲ್ಲೇಖಿಸಿ, “ಶಾಂತಿ ಅಸ್ತಿತ್ವದಲ್ಲಿದೆ,ಅದು ನಮ್ಮೊಳಗೆ ವಾಸಿಸಲು ಬಯಸುತ್ತದೆ. ಅದು ನಮ್ಮ ಅರಿವನ್ನು ವಿಸ್ತರಿಸುವ ಮೃದು ಶಕ್ತಿಯನ್ನು ಹೊಂದಿದ್ದು, ಹಿಂಸೆಯನ್ನು ಎದುರಿಸಿ ಜಯಿಸುತ್ತದೆ” ಎಂದು ಹೇಳಲಾಗಿದೆ. ದ್ವೇಷ ಮತ್ತು ಭಯದ ಬಿರುಗಾಳಿಗಳ ನಡುವೆ ಸಣ್ಣ ಜ್ವಾಲೆಯಂತೆ ಕಾಣುವ ಶಾಂತಿಯನ್ನು ಕೂಡ ಕಾಪಾಡಬೇಕು ಎಂದು ಸಂದೇಶ ಒತ್ತಿಹೇಳುತ್ತದೆ.
ಇಂದಿನ ಯುದ್ಧಗಳು, ಜಾತಿ-ಧಾರ್ಮಿಕ ರಾಷ್ಟ್ರವಾದ ಮತ್ತು ಧರ್ಮದ ದುರುಪಯೋಗದ ಹಿನ್ನೆಲೆಯಲ್ಲಿ ಮಾನವಕುಲವು ಅನುಮಾನ ಮತ್ತು ವೈಮನಸ್ಸಿನ ಅಪಾಯಕಾರಿ ಚಕ್ರದಲ್ಲಿ ಸಿಲುಕುತ್ತಿದೆ ಎಂದು ವ್ಯಾಟಿಕನ್ ಎಚ್ಚರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಧಾರ್ಮಿಕ ಪರಂಪರೆಗಳ ಕರ್ತವ್ಯ ವಿಭಜನೆ ಹೆಚ್ಚಿಸುವುದಲ್ಲ, ಬದಲಾಗಿ ಗಾಯಗಳನ್ನು ಗುಣಪಡಿಸುವುದಾಗಿದೆ ಎಂದು ಹೇಳಿದೆ. “ಒಳ್ಳೆಯತನವೇ ನಿಜವಾದ ನಿರಸ್ತ್ರೀಕರಣ” ಎಂದು ಸಂದೇಶ ಹೇಳುತ್ತಿದ್ದು, ಅದು ಅನುಮಾನಗಳ ಚಕ್ರವನ್ನು ಮುರಿದು ಹೊಸ ಮಾರ್ಗಗಳನ್ನು ತೆರೆಯಬಲ್ಲದು ಎಂದು ತಿಳಿಸುತ್ತದೆ.
ಸಂದೇಶದಲ್ಲಿ ಬೌದ್ಧ ಧರ್ಮದ ಧಮ್ಮಪದ ಮತ್ತು ಮೆತ್ತ ಸುತ್ತದ ಉಪದೇಶಗಳನ್ನು ಉಲ್ಲೇಖಿಸಲಾಗಿದೆ. “ದ್ವೇಷವನ್ನು ದ್ವೇಷದಿಂದ ಶಮನಗೊಳಿಸಲಾಗುವುದಿಲ್ಲ, ದ್ವೇಷರಹಿತ ಮನೋಭಾವದಿಂದ ಮಾತ್ರ ಅದು ಶಮನವಾಗುತ್ತದೆ” ಎಂಬ ಬುದ್ಧರ ವಾಕ್ಯವನ್ನು ವಿಶೇಷವಾಗಿ ನೆನಪಿಸಲಾಗಿದೆ. ಇದೇ ರೀತಿ, “ಯಾರೂ ಮತ್ತೊಬ್ಬರನ್ನು ಮೋಸಗೊಳಿಸಬಾರದು ಅಥವಾ ಹೀನವಾಗಿ ಕಾಣಬಾರದು, ಕೋಪ ಅಥವಾ ದ್ವೇಷದಿಂದ ಯಾರಿಗೂ ಹಾನಿ ಬಯಸಬಾರದು” ಎಂಬ ಮೆತ್ತ ಸುತ್ತದ ಸಂದೇಶವನ್ನು ಪ್ರಸ್ತಾಪಿಸಲಾಗಿದೆ. ಈ ಬೋಧನೆಗಳು ಕರುಣೆ ಮತ್ತು ಆಂತರಿಕ ಶಾಂತಿಯ ಮೂಲಕ ಹಿಂಸೆಯ ಚಕ್ರವನ್ನು ಮುರಿಯುವ ಅಗತ್ಯವನ್ನು ತಿಳಿಸುತ್ತವೆ.
ಕ್ರೈಸ್ತ ಪರಂಪರೆಯಲ್ಲಿಯೂ ಯೇಸು ಕ್ರಿಸ್ತರು “ನಿಮ್ಮ ಶತ್ರುಗಳನ್ನು ಪ್ರೀತಿಸಿರಿ” ಮತ್ತು “ಶಾಂತಿ ಸ್ಥಾಪಕರೆ ಧನ್ಯರು” ಎಂಬ ಸುವಾರ್ತೆಯ ಸಂದೇಶಗಳನ್ನು ಉಲ್ಲೇಖಿಸಿ, ಬೌದ್ಧ ಮತ್ತು ಕ್ರೈಸ್ತ ಧರ್ಮಗಳ ನಡುವೆ ಆಳವಾದ ಆಧ್ಯಾತ್ಮಿಕ ಸಾಮ್ಯತೆಯಿದೆ ಎಂದು ವ್ಯಾಟಿಕನ್ ಹೇಳಿದೆ. ಶಾಂತಿ ಹೊರಗಿನಿಂದ ಹೇರಲ್ಪಡುವುದಲ್ಲ, ಅದು ಮೊದಲು ಹೃದಯಗಳನ್ನು ಬದಲಾಯಿಸುವ ಆಂತರಿಕ ಪರಿವರ್ತನೆಯಾಗಿದೆ ಎಂದು ಸಂದೇಶ ಒತ್ತಿಹೇಳುತ್ತದೆ. ಕೊನೆಯಲ್ಲಿ, ಧಾರ್ಮಿಕ ನಾಯಕರು ಸಂವಾದ ಮತ್ತು ಸೌಹಾರ್ದದ ನಿಜವಾದ ಸಹಭಾಗಿಗಳಾಗಬೇಕು ಹಾಗೂ ಪ್ರತಿಯೊಬ್ಬ ನಂಬಿಗಸ್ತರೂ “ಶಾಂತಿಯ ಶಿಲ್ಪಿಗಳಾಗಬೇಕು” ಎಂದು ಕರೆ ನೀಡಲಾಗಿದೆ.