ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸಲು ಡಿಕ್ಯಾಸ್ಟ್ರಿಯ "ತೀವ್ರ ವಾರ" ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸಲು ಡಿಕ್ಯಾಸ್ಟ್ರಿಯ "ತೀವ್ರ ವಾರ" 

ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ವಿಭಾಗದ ‘ತೀವ್ರ ಅಧ್ಯಯನ ವಾರ’.

ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ವಿಭಾಗದ ಸಿಬ್ಬಂದಿ, ಸಹೋದ್ಯೋಗಿಗಳು, ಸ್ವಯಂಸೇವಕರು ಮತ್ತು ತರಬೇತಿ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನೂ ಒಳಗೊಂಡಂತೆ ಅನುಭವ ಹಂಚಿಕೆ ಮತ್ತು ಹೊಸ ಕಾರ್ಯಕ್ರಮಗಳನ್ನು ಪ್ರಸ್ತಾಪಿಸುವ ಉದ್ದೇಶದಿಂದ ಒಂದು ವಾರದ ಸಭೆಗಾಗಿ ರೋಮಿನಲ್ಲಿ ಒಂದಾಗಿದ್ದಾರೆ. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಕಾರ್ಡಿನಲ್ ಮೈಕೆಲ್ ಝೆರ್ನಿರವರು, “ಜಗದ್ಗುರುಗಳು ಮತ್ತು ವಿಶ್ವದಾದ್ಯಂತದ ಬಿಷಪ್‌ಗಳ ಧ್ಯೇಯ ಕಾರ್ಯಕ್ಕೆ ಬೆಂಬಲ ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ವಿಭಾಗದ ಸಿಬ್ಬಂದಿ, ಸಹೋದ್ಯೋಗಿಗಳು, ಸ್ವಯಂಸೇವಕರು ಮತ್ತು ತರಬೇತಿ ವಿದ್ಯಾರ್ಥಿಗಳು ಏಪ್ರಿಲ್ 23ರಿಂದ 30ರವರೆಗೆ ರೋಮಿನ ಪಲಾಝೊ ಸ್ಯಾನ್ ಕ್ಯಾಲಿಸ್ಟೊ ಕೇಂದ್ರ ಕಚೇರಿಯಲ್ಲಿ ನಡೆದ “ತೀವ್ರ ಅಧ್ಯಯನ ವಾರ” ಕಾರ್ಯಕ್ರಮಕ್ಕಾಗಿ ಒಂದಾಗಿದ್ದರು. ರೋಮಿನ ಹೊರಗೆ ಸೇವೆ ಸಲ್ಲಿಸುತ್ತಿರುವ “ಡಯಾಸ್ಪೋರಾ” ಸಹೋದ್ಯೋಗಿಗಳನ್ನೂ ಒಳಗೊಂಡ ಈ ಕಾರ್ಯಕ್ರಮದಲ್ಲಿ ಅನುಭವ ಹಂಚಿಕೆ, ಹೊಸ ಯೋಜನೆಗಳ ಪ್ರಸ್ತಾವನೆ ಹಾಗೂ ಪರಸ್ಪರ ಸಹಕಾರಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಭಾಗವಹಿಸಿದವರು ವ್ಯಾಟಿಕನ್ ಸಂಗ್ರಹಾಲಯಗಳು, ಬೋರ್ಗೊ ಲೌದಾಟೊ ಸಿ’ ಹಾಗೂ ಸಂತ ಪೇತ್ರರ ಚೌಕದಲ್ಲಿ ನಡೆದ ಜಗದ್ಗುರು XIVನೇ ಲಿಯೋರವರ ರೆಜಿನಾ ಚೆಲಿ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

2023ರಲ್ಲಿ ಆರಂಭವಾದ “ಇಂಟೆನ್ಸಿವ್ ವೀಕ್” ಪರಂಪರೆ ಮುಂದುವರಿದಿದ್ದು, ಈ ಕಾರ್ಯಕ್ರಮದ ಮೂರು ಪ್ರಮುಖ ಉದ್ದೇಶಗಳನ್ನು ವಿಭಾಗದ ಮುಖ್ಯಸ್ಥ ಕಾರ್ಡಿನಲ್ ಮೈಕೆಲ್ ಝೆರ್ನಿ ವಿವರಿಸಿದರು. ಅವುಗಳೆಂದರೆ  ಇಂದಿನ ಕಾಲಘಟ್ಟದಲ್ಲಿ ವಿಭಾಗದ ಧ್ಯೇಯವನ್ನು ಮರುಪರಿಶೀಲಿಸುವುದು, ಒಳಾಂಗಣ ಸಂವಹನವನ್ನು ಬಲಪಡಿಸುವುದು ಹಾಗೂ ಮುಖ್ಯ ಕಚೇರಿ ಮತ್ತು ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸುವ ಸಹೋದ್ಯೋಗಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದು. ಧರ್ಮ ಸಭೆ ಮೇಲಿನಿಂದ ಆದ್ಯತೆಗಳನ್ನು ಹೇರುವುದಿಲ್ಲ ಬದಲಾಗಿ ಸ್ಥಳೀಯ ಧರ್ಮ ಸಭೆಗಳ ಮಾತುಗಳನ್ನು ಆಲಿಸಿ, ಅವರ ಪರಿಸ್ಥಿತಿಗಳಲ್ಲಿ ಸಮಗ್ರ ಮಾನವ ಅಭಿವೃದ್ಧಿಗೆ ಅಡ್ಡಿಯಾಗುವ ಸಮಸ್ಯೆಗಳನ್ನು ಪರಿಹರಿಸಲು ಜೊತೆಯಾಗುತ್ತದೆ ಎಂದು ಕಾರ್ಡಿನಲ್ ಹೇಳಿದರು.

ವಿಭಾಗದ ಕಾರ್ಯದರ್ಶಿ ಸಿಸ್ಟರ್ ಅಲೆಸ್ಸಾಂದ್ರಾ ಸ್ಮೆರಿಲ್ಲಿ ಈ ವಾರವನ್ನು “ದೈನಂದಿನ ಕಾರ್ಯದಿಂದ ವಿರಾಮ ಪಡೆದು ಹೊಸ ಶಕ್ತಿ ಪಡೆಯುವ ಸಮಯ” ಎಂದು ವರ್ಣಿಸಿದರು. “ಜ್ಞಾನ” ಎಂಬುದನ್ನು ಅವರು ಮಾರ್ಗದರ್ಶಕ ಪದವಾಗಿ ಸೂಚಿಸಿದರು. ಇದೇ ವೇಳೆ ಉಪಕಾರ್ಯದರ್ಶಿ ಮೊನ್ಸಿನಿಯರ್ ಜೊಸೆಫ್ ಬರ್ಲಾಶ್, ಡಯಾಸ್ಪೋರಾ ಕೇವಲ ಆಡಳಿತಾತ್ಮಕ ವ್ಯವಸ್ಥೆಯಲ್ಲ, ಅದು ಜಗತ್ತಿನ ಪ್ರತಿಯೊಂದು ಭಾಗದಲ್ಲೂ ಹಾಜರಿರುವ ಧರ್ಮ ಸಭೆಯ ಪ್ರತಿರೂಪವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಪ್ರಮುಖ ಅಧಿವೇಶನಗಳಲ್ಲಿ ಒಂದರಲ್ಲಿ, ಕಾರ್ಡಿನಲ್ ಫ್ಯಾಬಿಯೊ ಬ್ಯಾಗಿಯೊರವರು “ಕಾರ್ಯಕ್ರಮಗಳನ್ನು ಆಯೋಜಿಸುವುದೇ ಗುರಿಯಲ್ಲ, ಜನರನ್ನು ಮತ್ತು ಪ್ರಕ್ರಿಯೆಗಳನ್ನು ಜೊತೆಗೊಳ್ಳುವುದೇ ಮುಖ್ಯ” ಎಂದು ಒತ್ತಿಹೇಳಿದರು. ಸ್ಥಳೀಯ ಧರ್ಮ ಸಭೆಗಳಲ್ಲಿ ದೀರ್ಘಕಾಲಿಕ ಪಾಸ್ಟರಲ್ ಫಲಿತಾಂಶಗಳನ್ನು ತರಬಲ್ಲ ಪ್ರಯತ್ನಗಳಿಗೆ ಬೆಂಬಲ ನೀಡುವುದು ವಿಭಾಗದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಫ್ಲಾರೆನ್ಸ್‌ನ ಯುರೋಪಿಯನ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್‌ನ ಪ್ರಧಾನ ಕಾರ್ಯದರ್ಶಿ ಡಾ. ಪಾಸ್ಕ್ವಾಲೆ ಫೆರಾರಾರವರು ಜಗತ್ತಿನ ವಿವಿಧ ಸಂಘರ್ಷಗಳು ಮತ್ತು ಆರ್ಥಿಕ ಹಿತಾಸಕ್ತಿಗಳ ಪರಿಣಾಮವಾಗಿ ಕುಸಿಯುತ್ತಿರುವ ಜಾಗತಿಕ ವ್ಯವಸ್ಥೆಯ ಕುರಿತು ಚಿಂತನೆ ಹಂಚಿಕೊಂಡರು.

ವಾರದ ಅವಧಿಯಲ್ಲಿ ಒಳಾಂಗಣ ಸಂವಹನವನ್ನು ಸುಧಾರಿಸಲು ಹೊಸ ತಂತ್ರಗಳನ್ನು ಚರ್ಚಿಸಲಾಯಿತು. ಸಿಬ್ಬಂದಿಯನ್ನು ಹಲವು ಗುಂಪುಗಳಾಗಿ ವಿಭಜಿಸಿ ಸಭೆಗಳ ಪರಿಣಾಮಕಾರಿತ್ವ, ಕಚೇರಿಗಳ ನಡುವಿನ ಸಹಕಾರ ಹಾಗೂ ಮಾಹಿತಿಯ ನಿರ್ವಹಣೆ ಕುರಿತು ಪ್ರಾಯೋಗಿಕ ಚರ್ಚೆಗಳು ನಡೆದವು. ಏಪ್ರಿಲ್ 28ರಂದು ಬೋರ್ಗೊ ಲೌದಾಟೊ ಸಿ’ ನಲ್ಲಿ ವಿಶೇಷ ಕಾರ್ಯಕ್ರಮ ನಡೆಯಿತು. ಅಲ್ಲಿ ಸೃಷ್ಟಿಯ ಸಂರಕ್ಷಣೆಗೆ ಸಂಬಂಧಿಸಿದ ಹೊಸ ಪ್ರಾರ್ಥನಾ ವಿಧಾನದೊಂದಿಗೆ ಪವಿತ್ರ ಬಲಿಪೂಜೆ ಆಚರಿಸಲಾಯಿತು. ನಂತರ “ಬಡವರ ಮತ್ತು ಭೂಮಿಯ ಅಳಿಕೆಯನ್ನು ಆಲಿಸುವುದು” ಎಂಬ ಸೈನೋಡ್ ಅಧ್ಯಯನದ ಆಧಾರದ ಮೇಲೆ ಧ್ಯಾನ ಕಾರ್ಯಕ್ರಮ ನಡೆಯಿತು. ಬಡವರನ್ನು ಕೇವಲ ಸಹಾಯ ಸ್ವೀಕರಿಸುವವರಾಗಿ ಅಲ್ಲ, ಬದಲಾಗಿ ಸಮಾಜದ ಸಕ್ರಿಯ ಭಾಗಿಯಾಗಿಯೇ ಪರಿಗಣಿಸಬೇಕು ಎಂಬ ಸಂದೇಶಕ್ಕೆ ಹೆಚ್ಚಿನ ಮಹತ್ವ ನೀಡಲಾಯಿತು.

ಅಂತಿಮ ಸಭೆಯಲ್ಲಿ ಕಾರ್ಡಿನಲ್ ಚೆರ್ನಿ, ವಿಶ್ವದ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿರುವ ವಿಪತ್ತುಗಳ ಸಂದರ್ಭಗಳಲ್ಲಿ ಎಲ್ಲರೂ ಜಾಗರೂಕರಾಗಿ ಮತ್ತು ಸಹಾನುಭೂತಿಯೊಂದಿಗೆ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು. ಜಗದ್ಗುರು XIVನೇ ಲಿಯೋರವರು ಮಧ್ಯ ಆಫ್ರಿಕಾದ ಕಥೋಲಿಕ ವಿಶ್ವವಿದ್ಯಾಲಯದಲ್ಲಿ ನೀಡಿದ ಸಂದೇಶವನ್ನು ಉಲ್ಲೇಖಿಸಿ, “ನೇರವಾದ ಮನಸ್ಸುಗಳಿಲ್ಲದೆ ಯಾವುದೇ ಸಮಾಜವು ಬೆಳೆಯಲು ಸಾಧ್ಯವಿಲ್ಲ” ಎಂದು ನೆನಪಿಸಿದರು. ಡಿಜಿಟಲ್ ಯುಗದಲ್ಲಿ ಎಲ್ಲವನ್ನೂ ಹೇಳಬಹುದಾದ ಪರಿಸ್ಥಿತಿಯಲ್ಲೂ “ಪವಿತ್ರ ಅಶಾಂತಿ” ಮತ್ತು “ನೇರ ಮನಸ್ಸು” ಸಮಗ್ರ ಮಾನವ ಅಭಿವೃದ್ಧಿಯತ್ತ ಸಾಗುವ ಸಾಮೂಹಿಕ ಪ್ರಯಾಣಕ್ಕೆ ಬಲವಾದ ಅಡಿಪಾಯವಾಗಿವೆ ಎಂದು ಅವರು ಹೇಳಿದರು.

11 ಮೇ 2026, 18:20