ಕಾರ್ಡಿನಲ್ ಪರೋಲಿನ್ ರವರಿಗೆ ಯುರೋಪಿಯನ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ. ಕಾರ್ಡಿನಲ್ ಪರೋಲಿನ್ ರವರಿಗೆ ಯುರೋಪಿಯನ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ.  (ANSA)

ಕಾರ್ಡಿನಲ್ ಪಾರೋಲಿನ್ ರವರು ಯುರೋಪಿಗೆ ಶಾಂತಿಯತ್ತ ತನ್ನ ಬದ್ಧತೆಯನ್ನು ಪುನರುಜ್ಜೀವನಗೊಳಿಸಲು ಕರೆ ನೀಡಿದರು.

ಯುರೋಪಿನ ಸಂಸತ್ತಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಜಾಗತಿಕ ಉದ್ವಿಗ್ನತೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಶಾಂತಿಯನ್ನು ಕಾಪಾಡಲು ಹೊಸ ಪ್ರಯತ್ನಗಳನ್ನು ಕೈಗೊಳ್ಳಬೇಕೆಂಬ ಕಾಡಿ೯ನಲ್ ಪಿಯತ್ರೋ ಪಾರೋಲಿನ್ ರವರ ಮೂಲಕ ಜಗದ್ಗುರು XIVನೇ ಲಿಯೋರವರ ಕರೆಯನ್ನು ತಿಳಿಸಲಾಯಿತು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರ ಶುಭಾಶಯಗಳನ್ನು ಯುರೋಪಿನ ಒಕ್ಕೂಟದ ಸಂಸತ್ತಿನ ಪೂರ್ಣಸಭೆಗೆ ತಲುಪಿಸಿದ  ಕಾಡಿ೯ನಲ್ ಪಿಯತ್ರೋ ಪಾರೋಲಿನ್ ರವರು, ಜನಾಂಗಗಳ ನಡುವಿನ ಸೌಹಾರ್ದತೆ ಯುರೋಪಿಯನ್ ಒಕ್ಕೂಟದ ಮೌಲ್ಯಗಳ ಮೇಲೆ “ಆಧಾರಿತವಾದ ಒಂದು ಭರವಸೆ” ಆಗಿದ್ದು, ಶಾಂತಿಯನ್ನು ರಕ್ಷಿಸುವ ಉದ್ದೇಶದ ನೈಜ ನಿರ್ಧಾರಗಳ ಮೂಲಕ ಅದನ್ನು “ನಿರಂತರವಾಗಿ ಪೋಷಿಸಬೇಕು” ಎಂದು ತಮ್ಮ ಭಾಷಣದಲ್ಲಿ ಹೇಳಿದರು.

ಕಾರ್ಡಿನಲ್ ಕಾರ್ಯದರ್ಶಿಯಾಗಿರುವ ಅವರು ಸ್ಟ್ರಾಸ್ಬರ್ಗ್‌ನ ಯುರೋಪಿಯನ್ ಸಂಸತ್ತಿನಲ್ಲಿ ಉಪಸ್ಥಿತರಿದ್ದರು. ಯುರೋಪಿಯನ್ ಏಕೀಕರಣ ಮತ್ತು ಯುರೋಪಿನ ಮೌಲ್ಯಗಳ ಪ್ರಚಾರ ಹಾಗೂ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಪ್ರದಾನವಾಗುವ ಪ್ರಥಮ “ಯುರೋಪಿಯನ್ ಆರ್ಡರ್ ಆಫ್ ಮೆರಿಟ್” ಪ್ರಶಸ್ತಿಯನ್ನು ಸ್ವೀಕರಿಸಲು ಅವರನ್ನು ಆಯ್ಕೆ ಮಾಡಲಾಗಿತ್ತು.

ಶಾಂತಿಯನ್ನು ಉತ್ತೇಜಿಸುವುದು ಮತ್ತು ಕಾಪಾಡುವುದು ಅಗತ್ಯವೆಂಬ ಒಕ್ಕೂಟದ “ಸಾಮೂಹಿಕ ನಂಬಿಕೆಯ” ಮೂಲದಲ್ಲಿ, ಯುರೋಪಿನ ಕ್ರೈಸ್ತ ಇತಿಹಾಸದಲ್ಲಿ ಆಳವಾಗಿ ಬೇರೂರಿರುವ ಮೌಲ್ಯಗಳಿವೆ ಎಂದು ಕಾರ್ಡಿನಲ್ ಹೇಳಿದರು. ಇವುಗಳು ಇಂದಿಗೂ ಪ್ರಭಾವಶಾಲಿ ಸಾಕ್ಷ್ಯವನ್ನು ನೀಡಬಲ್ಲವು ಎಂದು ಅವರು ಅಭಿಪ್ರಾಯಪಟ್ಟರು.

“ಮುಖ್ಯವಾಗಿ ಮಾನವ ಗೌರವದ ಘೋಷಣೆಯಿದೆ. ಅದು ಆಲಂಘನೀಯವಾದದ್ದು ಮತ್ತು ಜೀವನದ ಪ್ರತಿಯೊಂದು ಹಂತದಲ್ಲಿಯೂ ಸದಾ ರಕ್ಷಿಸಲ್ಪಡಬೇಕು.”ಎಂದು ಅವರು ಮುಂದುವರಿಸಿದರು.

ಅಂತಿಮವಾಗಿ, ಕಾರ್ಡಿನಲ್ ಪಾರೋಲಿನ್ ರವರು, “ಒಟ್ಟಾಗಿ ಶಾಂತಿಯ ಶಿಲ್ಪಿಗಳಾಗಲು” ಯುರೋಪಿಯನ್ ಸಂಸ್ಥೆಗಳೊಂದಿಗೆ ಸಹಕರಿಸಲು ಜಗದ್ಗುರುಗಳ ಅಧಿಕಾರ ಸ್ಥಳವು ಸಿದ್ಧವಿದೆ ಎಂದು ಪುನರುಚ್ಚರಿಸಿದರು.

ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ

ಯುರೋಪಿನ ಏಕತೆಯ ಆರಂಭಿಕ ಘಟ್ಟವೆಂದು ಪರಿಗಣಿಸಲ್ಪಡುವ ಶೂಮನ್ ಘೋಷಣೆಯ 75ನೇ ವಾರ್ಷಿಕೋತ್ಸವದ ಅಂಗವಾಗಿ “ಯುರೋಪಿಯನ್ ಆರ್ಡರ್ ಆಫ್ ಮೆರಿಟ್” ಪ್ರಶಸ್ತಿಯನ್ನು ಪ್ರಾರಂಭಿಸಲಾಯಿತು.

ಯುರೋಪಿಯನ್ ಸಂಸತ್ತಿನ ವೆಬ್‌ಸೈಟ್‌ನಲ್ಲಿ ತಿಳಿಸಿರುವಂತೆ, ಇದು ಯುರೋಪಿಯನ್ ಒಕ್ಕೂಟದ ಸಂಸ್ಥೆಗಳು ನೀಡುವ ತನ್ನ ರೀತಿಯ ಮೊದಲ ಯುರೋಪಿಯನ್ ಗೌರವ ಪ್ರಶಸ್ತಿಯಾಗಿದೆ. ಇದು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಮತ್ತು ಅಲಂಕಾರಗಳಿಗೆ ಪೂರಕವಾಗಿ, ಸಮಗ್ರ ಯುರೋಪನ್ನು ಬಲಪಡಿಸುವ ಪ್ರಯತ್ನಗಳನ್ನು ಗೌರವಿಸುತ್ತದೆ.

ಜಾಗತಿಕ ಅನಿಶ್ಚಿತತೆಯ ಈ ಕಾಲದಲ್ಲಿ, ಶಾಂತಿ, ಪ್ರಜಾಪ್ರಭುತ್ವ ಮತ್ತು ಮಾನವ ಗೌರವವನ್ನು ರಕ್ಷಿಸುವವರನ್ನು ಸನ್ಮಾನಿಸುವ ಮೂಲಕ ಸಾಮೂಹಿಕ ಮೌಲ್ಯಗಳನ್ನು ಪುನರುಚ್ಚರಿಸುವುದೇ ಇದರ ಉದ್ದೇಶವಾಗಿದೆ.

ಈ ಪ್ರಶಸ್ತಿ ಪಡೆದ ಇಪ್ಪತ್ತು ಮಂದಿಯ ಪೈಕಿ, ಕಾರ್ಡಿನಲ್ ಪಾರೋಲಿನ್ ರವರೊಂದಿಗೆ, ಜರ್ಮನಿಯ ಮಾಜಿ ಚಾನ್ಸಲರ್ ಏಂಜೆಲಾ ಮರ್ಕೆಲ್, ಪೋಲ್ಯಾಂಡ್‌ನ ಮಾಜಿ ಅಧ್ಯಕ್ಷ ಲೆಚ್ ವಾಲೆಸಾ, ಹಾಗೂ ಪೋಚು೯ಗಲ್‌ನ ಮಾಜಿ ಪ್ರಧಾನಮಂತ್ರಿ ಮತ್ತು ಅಧ್ಯಕ್ಷ ಅನಿಬಲ್ ಕ್ಯಾವಾಕೊ ಸಿಲ್ವಾ ಕೂಡ ಸೇರಿದ್ದರು..

19 ಮೇ 2026, 16:35