2025ರ ವಾರ್ಷಿಕ ವರದಿ: ಇನ್ಸ್ಟಿಟ್ಯೂಟ್ ಫಾರ್ ದಿ ವರ್ಕ್ಸ್ ಆಫ್ ರಿಲಿಜನ್ ಕಳೆದ ಹತ್ತು ವರ್ಷಗಳಲ್ಲೇ ಅತ್ಯಧಿಕ ನಿವ್ವಳ ಆದಾಯ ದಾಖಲಿಸಿದೆ.
ವ್ಯಾಟಿಕನ್ ವರದಿ
ಇನ್ಸ್ಟಿಟ್ಯೂಟ್ ಫಾರ್ ದಿ ವರ್ಕ್ಸ್ ಆಫ್ ರಿಲಿಜನ್ (ಐಒಆರ್) ಮೇ 11 ಸೋಮವಾರ ತನ್ನ 2025ರ ವಾರ್ಷಿಕ ವರದಿಯನ್ನು ಪ್ರಕಟಿಸಿತು.
2025 ಡಿಸೆಂಬರ್ 31ರಂದು ಅಂತ್ಯಗೊಂಡ ಹಣಕಾಸು ವರ್ಷದ ಆರ್ಥಿಕ ಲೆಕ್ಕಪತ್ರಗಳನ್ನು IAS-IFRS ಮಾನದಂಡಗಳ ಪ್ರಕಾರ ಸಿದ್ಧಪಡಿಸಲಾಗಿದ್ದು, ಬಾಸೆಲ್ ಚೌಕಟ್ಟಿನ “ಮೂರನೇ ಸ್ತಂಭ”ಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ಒಳಗೊಂಡಿವೆ.
ವರದಿಯ ಪ್ರಕಾರ, ಐಒಆರ್ 2025ರಲ್ಲಿ 51 ಮಿಲಿಯನ್ ಯೂರೋಗಳ ನಿವ್ವಳ ಆದಾಯ ದಾಖಲಿಸಿದ್ದು, ಇದು ಹಿಂದಿನ ವರ್ಷದಿಗಿಂತ 55.5 ಶೇಕಡಾ ಹೆಚ್ಚಳವಾಗಿದೆ ಹಾಗೂ ಕಳೆದ ಹತ್ತು ವರ್ಷಗಳಲ್ಲಿ ದಾಖಲಾದ ಅತ್ಯುತ್ತಮ ಫಲಿತಾಂಶವಾಗಿದೆ.
ಸಂಸ್ಥೆಯ ಪ್ರಕಾರ, ಸುಧಾರಿತ ಕಾರ್ಯಾಚರಣೆ, ಶಿಸ್ತಿನೊಂದಿಗೆ ನಡೆದ ಹೂಡಿಕೆ ನಿರ್ವಹಣೆ, ಅನುಕೂಲಕರ ಮಾರುಕಟ್ಟೆ ಪರಿಸ್ಥಿತಿಗಳು ಹಾಗೂ ಗ್ರಾಹಕರ ಆಸ್ತಿ ಪ್ರಮಾಣದ ಏರಿಕೆಯಿಂದ ಈ ಸಾಧನೆ ಸಾಧ್ಯವಾಯಿತು. ಒಟ್ಟು ಗ್ರಾಹಕ ಆಸ್ತಿಗಳು 2024ರ 5.7 ಬಿಲಿಯನ್ ಯೂರೋಗಳಿಂದ 2025ರಲ್ಲಿ 5.9 ಬಿಲಿಯನ್ ಯೂರೋಗಳಿಗೆ ಏರಿಕೆಯಾದವು.
ಐಒಆರ್‌ನ ಬಡ್ಡಿ ಆದಾಯದ ಅಂತರವು 2024ರ 29.4 ಮಿಲಿಯನ್ ಯೂರೋಗಳಿಂದ 2025ರಲ್ಲಿ 32.3 ಮಿಲಿಯನ್ ಯೂರೋಗಳಿಗೆ ಏರಿಕೆಯಾಯಿತು. ಕಮಿಷನ್ ಆದಾಯವು 26.2 ಮಿಲಿಯನ್ ಯೂರೋಗಳಾಗಿದ್ದು, ಇದು ಹಿಂದಿನ ವರ್ಷದ ಮಟ್ಟಕ್ಕೆ ಸಮಾನವಾಗಿತ್ತು. ಮಧ್ಯವರ್ತಿ ಆದಾಯವು 2024ರ 51.5 ಮಿಲಿಯನ್ ಯೂರೋಗಳಿಂದ 66.3 ಮಿಲಿಯನ್ ಯೂರೋಗಳಿಗೆ ಏರಿಕೆಯಾಯಿತು.
ಹಣಕಾಸು ಸಂಸ್ಥೆಯ ಮೂಲ ಬಂಡವಾಳದ ಬಲವನ್ನು ಅಳೆಯುವ ಪ್ರಮುಖ ಮಾನದಂಡವಾದ “ಟಿಯರ್ 1 ಕ್ಯಾಪಿಟಲ್ ರೇಶಿಯೋ” 71.9 ಶೇಕಡಾಕ್ಕೆ ಏರಿಕೆಯಾಯಿತು. ನಿವ್ವಳ ಆಸ್ತಿಗಳು 83.4 ಮಿಲಿಯನ್ ಯೂರೋಗಳಷ್ಟು ಹೆಚ್ಚಾಗಿ 815.3 ಮಿಲಿಯನ್ ಯೂರೋಗಳಿಗೆ ತಲುಪಿದವು.
ವರದಿಯ ಪ್ರಕಾರ, ಐಒಆರ್‌ನ ಬಂಡವಾಳ ಮತ್ತು ದ್ರವ್ಯಸ್ಥಿತಿ ನಿರ್ವಹಣೆ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ಹಾಗೂ ದೀರ್ಘಕಾಲಿಕ ಸ್ಥಿರತೆಯನ್ನು ಖಚಿತಪಡಿಸುವ ಜಾಗರೂಕ ನೀತಿಯನ್ನು ಪ್ರತಿಬಿಂಬಿಸುತ್ತದೆ.
2025ರ ಉತ್ತಮ ಫಲಿತಾಂಶ ಮತ್ತು ಸಂಸ್ಥೆಯ ಬಂಡವಾಳ ಅಗತ್ಯಗಳನ್ನು ಪರಿಗಣಿಸಿ, ಕಾರ್ಡಿನಲ್‌ಗಳ ಆಯೋಗವು ಜಗದ್ಗುರು XIVನೇ ಲಿಯೋರವರು 24.3 ಮಿಲಿಯನ್ ಯೂರೋಗಳ ಲಾಭಾಂಶ ವಿತರಿಸಲು ಅನುಮೋದನೆ ನೀಡಿದರು. ಇದು 2024ರಿಗಿಂತ 76.1 ಶೇಕಡಾ ಹೆಚ್ಚಳವಾಗಿದ್ದು, ಧಾರ್ಮಿಕ ಮತ್ತು ದಾನಧರ್ಮ ಕಾರ್ಯಗಳಿಗೆ ಬೆಂಬಲ ನೀಡುವ ಐಒಆರ್‌ನ ಧ್ಯೇಯಕ್ಕೆ ಅನುಗುಣವಾಗಿದೆ.
ಐಒಆರ್‌ನ ಎಲ್ಲಾ ಹೂಡಿಕೆ ನಿರ್ವಹಣಾ ತಂತ್ರಗಳು ಧನಾತ್ಮಕ ಲಾಭವನ್ನು ದಾಖಲಿಸಿವೆ ಎಂದು ವರದಿ ತಿಳಿಸಿದೆ. ಸಂಸ್ಥೆ ಕಥೋಲಿಕ ನಂಬಿಕೆ ಮತ್ತು ಧರ್ಮ ಸಭೆಯ ಸಾಮಾಜಿಕ ಬೋಧನೆಗಳಿಗೆ ಅನುಗುಣವಾದ ಹೂಡಿಕೆಗಳನ್ನು ಉತ್ತೇಜಿಸುತ್ತಿರುವುದಾಗಿ ಹೇಳಿದೆ.
2025ರಲ್ಲಿ ಧಾರ್ಮಿಕ ಸಂಘಟನೆಗಳೊಂದಿಗೆ ಐಒಆರ್‌ನ ಸಂಬಂಧ ಇನ್ನಷ್ಟು ಬಲಪಟ್ಟಿದ್ದು, ಸೇವೆ ಪಡೆಯುತ್ತಿರುವ ಸಂಘಟನೆಗಳ ಸಂಖ್ಯೆಯಲ್ಲಿಯೂ ಹಾಗೂ ಆಸ್ತಿ ನಿರ್ವಹಣೆಯನ್ನು ಸಂಸ್ಥೆಗೆ ಒಪ್ಪಿಸಿರುವ ಸಂಘಟನೆಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದೆ.
ಲೆಕ್ಕಪತ್ರಗಳಿಗೆ ಡೆಲಾಯ್ಟ್ & ಟಚ್ ಸಂಸ್ಥೆಯಿಂದ ಯಾವುದೇ ಆಕ್ಷೇಪಣೆ ಇಲ್ಲದ ಪರಿಶೋಧನಾ ಅಭಿಪ್ರಾಯ ದೊರೆತಿದ್ದು, 2026ರ ಏಪ್ರಿಲ್ 28ರಂದು ಮೇಲ್ವಿಚಾರಣಾ ಮಂಡಳಿಯಿಂದ ಏಕಮತದಿಂದ ಅನುಮೋದಿಸಲಾಯಿತು. ನಂತರ ನಿಯಮಾವಳಿಗಳ ಪ್ರಕಾರ ಅದನ್ನು ಕಾರ್ಡಿನಲ್‌ಗಳ ಆಯೋಗಕ್ಕೆ ಕಳುಹಿಸಲಾಯಿತು.
2026ರ ಫೆಬ್ರವರಿಯಲ್ಲಿ, ಐಒಆರ್ ಮಾರ್ನಿಂಗ್ ಸ್ಟಾರ್ ಸಹಯೋಗದಲ್ಲಿ ಜಗತ್ತಿನ ಕಥೋಲಿಕ ಹೂಡಿಕೆಗಳಿಗೆ ಮಾನದಂಡಗಳಾಗಿ ಕಾರ್ಯನಿರ್ವಹಿಸುವ ಎರಡು ಹೊಸ ಷೇರು ಸೂಚ್ಯಂಕಗಳನ್ನು ಪ್ರಾರಂಭಿಸಿತು.
“ಮಾರ್ನಿಂಗ್‌ಸ್ಟಾರ್ ಐಒಆರ್ ಯುಎಸ್ ಕ್ಯಾಥೋಲಿಕ್ ಪ್ರಿನ್ಸಿಪಲ್ಸ್ ಜಿಆರ್ ಯುಎಸ್‌ಡಿ” ಸೂಚ್ಯಂಕ (ಟಿಕ್ಕರ್: MIORUCPG) ಹಾಗೂ “ಮಾರ್ನಿಂಗ್‌ಸ್ಟಾರ್ IOR ಯೂರೋಜೋನ್ ಕ್ಯಾಥೋಲಿಕ್ ತತ್ವಗಳು GR EUR” ಸೂಚ್ಯಂಕ (ಟಿಕ್ಕರ್: MIORECPG) ಹೂಡಿಕೆದಾರರಿಗೆ ನೈತಿಕ ಆಧಾರದ ಮೇಲೆ ಲಾಭ ಗಳಿಸುವ ಅವಕಾಶ ಒದಗಿಸುತ್ತವೆ.
2025ರ ಹಣಕಾಸು ಲೆಕ್ಕಪತ್ರಗಳ ಅನುಮೋದನೆಯೊಂದಿಗೆ, ಜೀನ್-ಬ್ಯಾಪ್ಟಿಸ್ಟ್ ಡಿ ಫ್ರಾನ್ಸ್ಸುರವರು ಐಒಆರ್ ಅಧ್ಯಕ್ಷರಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಿದರು. ಸಂಸ್ಥೆ ಅವರ ಸೇವೆ, ನಾಯಕತ್ವ ಮತ್ತು ಸಮರ್ಪಣೆಗೆ ಕೃತಜ್ಞತೆ ಸಲ್ಲಿಸಿದೆ. ಫ್ರಾಂಸ್ವಾ ಪೌಲಿರವರು ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.