FILES-VATICAN-POPE-HISTORY-NAZISM

"ಹಿಟ್ಲರ್‌ ವಿರುದ್ಧ ಟೀಕೆ ಮಾಡಿದ ಕಾರ್ಡಿನಲ್‌ರನ್ನು ಯೂಜೆನಿಯೋ ಪಚೆಲ್ಲಿ ರಕ್ಷಿಸಿದ ಘಟನೆ”.

“ಯೂಜೆನಿಯೋ ಪಚೆಲ್ಲಿ – ಹನ್ನೆರಡನೇ ಪಿಯಸ್ ರವರು : ದೇವರ ನಗರದ ಮತ್ತು ಮಾನವನ ನಗರದ ಮಧ್ಯೆ” ಎಂಬ ಶೀರ್ಷಿಕೆಯ ಸಮ್ಮೇಳನವು ಈ ವಾರ ರೋಮಿನಲ್ಲಿ ಕಾರ್ಡಿನಲ್ ಡೊಮಿನಿಕ್ ಮಾಮ್ಬರ್ಟಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದರಲ್ಲಿ ಉನ್ನತ ಮಟ್ಟದ ಅಕಾಡೆಮಿಯವರ ಮತ್ತು ಇತಿಹಾಸಕಾರರು, ಹಾಗೆಯೇ ವ್ಯಾಟಿಕನ್ ನ್ಯೂಸ್‌ನ ಸಂಪಾದಕೀಯ ನಿರ್ದೇಶಕ ಆಂಡ್ರಿಯಾ ಟೊರ್ನಿಯೆಲ್ಲಿ ಭಾಗವಹಿಸಿದರು.

ವ್ಯಾಟಿಕನ್ ವರದಿ

ಯೂಜೆನಿಯೋ ಪಚೆಲ್ಲಿರವರು ಜಗದ್ಗುರು XIನೇ ಪಿಯಸ್ ರವರ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಲದಲ್ಲಿ ನಡೆದ ಪ್ರಮುಖ ಘಟನೆಗಳಲ್ಲಿ ಒಂದು, ಚಿಕಾಗೋ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಜಾರ್ಜ್ ವಿಲಿಯಂ ಮುಂಡೆಲೆನ್ ರವರನ್ನು ಅವರು ರಕ್ಷಿಸಿದ ಘಟನೆ. 1937ರ ಮೇ 18ರಂದು, ಮುಂಡೆಲೆನ್ ರವರು ತಮ್ಮ ಯಾಜಕರಿಗೆ ನೀಡಿದ ಮುಚ್ಚಿದ ಸಭೆಯ ಭಾಷಣದಲ್ಲಿ ಅಡಾಲ್ಫ್ ಹಿಟ್ಲರ್ ಮತ್ತು ನಾಜಿ ಆಡಳಿತದ ವಿರುದ್ಧ ತೀವ್ರ ಟೀಕೆಯನ್ನು ವ್ಯಕ್ತಪಡಿಸಿದರು. ಜರ್ಮನಿಯ ಜನರು ಹೇಗೆ ಒಬ್ಬ ವಿದೇಶಿಯ ನಿಯಂತ್ರಣಕ್ಕೆ ಒಳಪಟ್ಟಿದ್ದಾರೆ ಎಂಬುದನ್ನು ಪ್ರಶ್ನಿಸುತ್ತಾ, ಅವರ ಮಾತುಗಳು ಅಮೆರಿಕಾದಾದ್ಯಂತ ಪ್ರಮುಖ ಸುದ್ದಿಯಾಯಿತು.

ಈ ಭಾಷಣದ ಪರಿಣಾಮವಾಗಿ, ಮೇ 24ರಂದು ಜರ್ಮನ್ ರಾಯಭಾರಿ ಡಿಯೆಗೋ ವಾನ್ ಬರ್ಗನ್ ರವರು ಕಾರ್ಡಿನಲ್ ಪಚೆಲ್ಲಿ ರವರನ್ನು ಭೇಟಿ ಮಾಡಿ, ಬೆರ್ಲಿನ್ ಸರ್ಕಾರದ ತೀವ್ರ ವಿರೋಧದ ನೋಟನ್ನು ಹಸ್ತಾಂತರಿಸಿದರು. ಇದಕ್ಕೆ ಪ್ರತಿಯಾಗಿ ಪಚೆಲ್ಲಿರವರು ಸ್ಪಷ್ಟವಾಗಿ ಉತ್ತರಿಸಿ, ಜರ್ಮನ್ ಸರ್ಕಾರವು ಧರ್ಮ ಸಭೆ ಮತ್ತು ಅದರ ನಾಯಕರ ವಿರುದ್ಧ ನಡೆಯುತ್ತಿರುವ ನಿರಂತರ ಅವಮಾನಗಳ ಬಗ್ಗೆ ಏನು ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಯನ್ನು ಎದುರು ಹಾಕಿದರು. ಅವರು, ಸರ್ಕಾರವೇ ಈ ದಾಳಿಗಳಿಗೆ ಹೊಣೆಗಾರ ಎಂಬುದನ್ನು ಸೂಚಿಸಿದರು.

ಮೇ 29ರಂದು ಜರ್ಮನ್ ರಾಯಭಾರಿ ಕಚೇರಿ ಮತ್ತೊಂದು ಗಂಭೀರ ನೋಟನ್ನು ಕಳುಹಿಸಿ, ಮುಂಡೆಲೆನ್ ರವರ ಹೇಳಿಕೆಯನ್ನು ವ್ಯಾಟಿಕನ್ ಸಾರ್ವಜನಿಕವಾಗಿ ಖಂಡಿಸಬೇಕೆಂದು ಒತ್ತಾಯಿಸಿತು. ಈ ಬೆಳವಣಿಗೆಯ ಹಿನ್ನೆಲೆದಲ್ಲಿ, ಜಗದ್ಗುರು XIನೇ ಪಿಯಸ್ ರವರು ಜೂನ್ 20ರಂದು ಕಾರ್ಡಿನಲ್‌ಗಳ ವಿಶೇಷ ಸಭೆಯನ್ನು ಕ್ಯಾಸ್ಟೆಲ್ ಗಾಂಡೋಲ್ಫೋದಲ್ಲಿ ಕರೆದರು. ಈ ಸಭೆಯಲ್ಲಿ ಪಚೆಲ್ಲಿರವರು ವಿಷಯವನ್ನು ವಿವರವಾಗಿ ಮಂಡಿಸಿದರು.

ಪಚೆಲ್ಲಿರವರು, ಮುಂಡೆಲೆನ್ ರವರ ಭಾಷಣವನ್ನು ವ್ಯಾಟಿಕನ್ ತಿದ್ದುವುದು ಅಥವಾ ಖಂಡಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಅಂಥ ಕ್ರಮವು ಹಿಟ್ಲರ್ ಮತ್ತು ನಾಜಿ ನಾಯಕತ್ವದ ಅಹಂಕಾರವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಅವರು ಎಚ್ಚರಿಸಿದರು. ಜೊತೆಗೆ, ಮುಂಡೆಲೆನ್ ರವರು ತಮ್ಮ ಮಾತುಗಳನ್ನು ಸ್ವತಃ ಸ್ಪಷ್ಟಪಡಿಸಬಹುದಾದರೂ, ಅದು ವ್ಯಾಟಿಕನ್ ಒತ್ತಡಕ್ಕೆ ಒಳಗಾಗಿ ಮಾಡಿದಂತೆ ಕಾಣಬಹುದು ಎಂದು ಹೇಳಿದರು.

ಜಗದ್ಗುರು XIನೇ ಪಿಯಸ್ ರವರು ಪಚೆಲ್ಲಿರವರ ಅಭಿಪ್ರಾಯವನ್ನು ಸಂಪೂರ್ಣವಾಗಿ ಬೆಂಬಲಿಸಿ, ಅವರನ್ನು ಅತ್ಯಂತ ಪ್ರಶಂಸಿಸಿದರು. ನಂತರ ವ್ಯಾಟಿಕನ್ ಜರ್ಮನ್ ರಾಯಭಾರಿ ಕಚೇರಿಗೆ ಕಳುಹಿಸಿದ ಪ್ರತಿಕ್ರಿಯೆಯಲ್ಲಿ, ಮುಂಡೆಲೆನ್ ರವರು ವ್ಯಾಟಿಕನ್ ಪರವಾಗಿ ಮಾತನಾಡಿಲ್ಲ ಮತ್ತು ತಮ್ಮ ದೇಶದ ಸಂವಿಧಾನ ನೀಡಿದ ಹಕ್ಕಿನಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿತು.

ಕೊನೆಗೆ, ವ್ಯಾಟಿಕನ್ ಜರ್ಮನ್ ಸರ್ಕಾರದ ವಿರುದ್ಧ ತನ್ನ ನಿಲುವನ್ನು ದೃಢವಾಗಿ ಉಳಿಸಿಕೊಂಡಿತು ಮತ್ತು ಸಮಾನ ಪರಿಸ್ಥಿತಿಯಲ್ಲಿ ಮಾತ್ರ ಈ ವಿಷಯದ ಚರ್ಚೆ ಸಾಧ್ಯವೆಂದು ತಿಳಿಸಿತು. ಅಂತಿಮವಾಗಿ ಜರ್ಮನಿಯ ವಿರೋಧ ಫಲಪ್ರದವಾಗಲಿಲ್ಲ. 1937ರ ಜುಲೈ 17ರಂದು ಜಗದ್ಗುರು XIನೇ ಪಿಯಸ್ ರವರು ಚಿಕಾಗೋ ಯಾತ್ರಿಕರನ್ನು ಭೇಟಿಯಾದಾಗ, ಅವರ ಮಹಾಧರ್ಮಾಧ್ಯಕ್ಷ ಮುಂಡೆಲೆನ್ ರವರನ್ನು ದೇವರ ಮತ್ತು ಧರ್ಮ ಸಭೆಯ ಹಕ್ಕುಗಳನ್ನು ರಕ್ಷಿಸಿದ ಧೈರ್ಯಶಾಲಿ ನಾಯಕರೆಂದು ಪ್ರಶಂಸಿಸಿದರು.

05 ಮೇ 2026, 21:23