UKRAINE-RUSSIA-CONFLICT

ಉಕ್ರೇನ್‌ನಲ್ಲಿನ ಪ್ರೇಷಿತರ ಪ್ರತಿನಿಧಿ: ಭಾರೀ ದಾಳಿಗಳು ಯುದ್ಧ ಅಂತ್ಯಗೊಳಿಸುವ ಯಾವುದೇ ಉದ್ದೇಶ ಇಲ್ಲವೆಂಬುದನ್ನು ಸೂಚಿಸುತ್ತವೆ.

ಉಕ್ರೇನ್‌ನ ಪ್ರೇಷಿತರ ಪ್ರತಿನಿಧಿಯಾಗಿರುವ ಆರ್ಚ್‌ಬಿಷಪ್ ವಿಶ್ವಲ್ದಾಸ್ ಕುಲ್ಬೊಕಾಸ್ ರವರು ಮೇ 13–14ರಂದು ಉಕ್ರೇನಿನಲ್ಲಿ ನಡೆದ ವಿಶೇಷವಾಗಿ ತೀವ್ರವಾದ ರಷ್ಯಾದ ಬಾಂಬ್ ದಾಳಿಗಳನ್ನು ವಿವರಿಸಿ, ಮಾನವೀಯ ಸೇವಾ ಕಾರ್ಯಕರ್ತರ ಮೇಲಿನ ದಾಳಿಗಳನ್ನು ಖಂಡಿಸಿದರು. ಜನತೆಗೆ ನೆರವು ತಲುಪದಂತೆ ಮಾಡುವ ಉದ್ದೇಶದಿಂದಲೇ ಈ ದಾಳಿಗಳನ್ನು “ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ” ಎಂದು ಅವರು ಹೇಳಿದರು.

ವ್ಯಾಟಿಕನ್ ವರದಿ

“ಕಳೆದ ಕೆಲವು ಗಂಟೆಗಳು ಮತ್ತೊಮ್ಮೆ ಸಂಪೂರ್ಣ ದೇಶಕ್ಕೆ ಅತ್ಯಂತ ಭಾರವಾಗಿದ್ದವು. ಮೇ 13ರಿಂದ ಮೇ 14ರ ನಡುವೆ ಅನೇಕ ಬಾಂಬ್ ದಾಳಿಗಳು ನಡೆದವು,” ಎಂದು ಉಕ್ರೇನ್‌ನ ಪ್ರೇಷಿತರ ಪ್ರತಿನಿಧಿಯಾಗಿರುವ ಆರ್ಚ್‌ಬಿಷಪ್ ವಿಶ್ವಲ್ದಾಸ್ ಕುಲ್ಬೊಕಾಸ್ ರವರು ಗುರುವಾರ ಸಂಜೆ ದೂರವಾಣಿ ಮೂಲಕ ವ್ಯಾಟಿಕನ್ ನ್ಯೂಸ್‌ಗೆ ತಿಳಿಸಿದ್ದಾರೆ.

ಯುದ್ಧ ಆರಂಭವಾದ ನಂತರ ರಷ್ಯಾ ನಡೆಸಿದ ಅತಿ ಭೀಕರ ದಾಳಿಯೆಂದು ವಿವರಿಸಲ್ಪಟ್ಟ ಈ ಘಟನೆಯ ಕುರಿತು ಮಾತನಾಡಿದ ಅವರು, ರಾಜಧಾನಿಯಾದ ಕೀವ್‌ನಲ್ಲಿ ಮಾತ್ರ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದು, 48 ಮಂದಿ ಗಾಯಗೊಂಡಿದ್ದಾರೆ; ಅವರಲ್ಲಿ ಮಕ್ಕಳು ಕೂಡ ಸೇರಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಆರ್ಚ್‌ಬಿಷಪ್ ವಿಶ್ವಲ್ದಾಸ್ ಕುಲ್ಬೊಕಾಸ್ ರವರು, “ಉಕ್ರೇನ್ ಅಧಿಕಾರಿಗಳು ಪಶ್ಚಿಮ ಭಾಗದ ಇವಾನೋ-ಫ್ರಾಂಕಿವ್ಸ್ಕ್, ಉಝ್‌ಹೊರೋಡ್ ಮತ್ತು ಇತರ ನಗರಗಳಿಗೆ ತಲುಪಿದ 1,500ಕ್ಕೂ ಹೆಚ್ಚು ದೂರಪಾಲಿ ಡ್ರೋನ್‌ಗಳನ್ನು ಎಣಿಸಿದ್ದಾರೆ. ನಂತರ ರಾತ್ರಿ ವೇಳೆಯಲ್ಲಿ ಕೀವ್‌ನ ಮೇಲೆ ದಾಳಿ ನಡೆಯಿತು, ಡ್ರೋನ್‌ಗಳು ಮತ್ತು ಸುಮಾರು ಅರವತ್ತು ಕ್ಷಿಪಣಿಗಳು, ಹೆಚ್ಚಿನವು ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿದ್ದವು” ಎಂದು ವಿವರಿಸಿದರು.

ಮಾನವೀಯ ನೆರವು ವಾಹನಗಳ ಮೇಲಿನ ದಾಳಿಗಳು ಆತಂಕಕಾರಿ

ಖೇರ್ಸನ್‌ನಲ್ಲಿ ಮಾನವೀಯ ನೆರವು ವಿತರಿಸುತ್ತಿದ್ದ ವೇಳೆ, ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಗೆ ಸೇರಿದ ವಿಶ್ವಸಂಸ್ಥೆಯ ವಾಹನದ ಮೇಲೂ ದಾಳಿ ನಡೆದಿರುವುದಾಗಿ ಪ್ರತಿನಿಧಿ ತೀವ್ರ ಕಳವಳ ವ್ಯಕ್ತಪಡಿಸಿದರು. ಈ ವಾಹನಗಳು ಸ್ಪಷ್ಟ ಗುರುತು ಹೊಂದಿದ್ದು, ಉಕ್ರೇನ್ ಮತ್ತು ರಷ್ಯಾ ಎರಡೂ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಿದ ಬಳಿಕವೇ ಸಂಚರಿಸುತ್ತವೆ ಎಂದು ಅವರು ಹೇಳಿದರು.

ಇವು ಉದ್ದೇಶಪೂರ್ವಕ ದಾಳಿಗಳೇ ಎಂಬುದು ಸ್ಪಷ್ಟವಾಗಿದೆ ಮತ್ತು “ಇದು ಮೊದಲ ಬಾರಿಯಲ್ಲ” ಎಂದು ಅವರು ಹೇಳಿದರು.

“ಸ್ಪಷ್ಟ ಗುರುತು ಹೊಂದಿರುವ ಮಾನವೀಯ ಕಾರ್ಯಕರ್ತರನ್ನು ಜನತೆಗೆ ನೆರವು ತಲುಪದಂತೆ ಮಾಡಲು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುವುದು ಅತ್ಯಂತ ಆತಂಕಕಾರಿ ವಿಷಯ” ಎಂದು ಪ್ರೇಷಿತರ ಪ್ರತಿನಿಧಿ ಹೇಳಿದರು.

ರಾಯಭಾರಿಗಳ ಪ್ರದೇಶಕ್ಕೂ ಕ್ಷಿಪಣಿ ಅವಶೇಷಗಳು ಬಿದ್ದವು

“ಕೆಲವು ಕ್ಷಿಪಣಿ ಅವಶೇಷಗಳು ರಾಯಭಾರಿಗಳ ಪ್ರದೇಶಕ್ಕೂ ಬಿದ್ದವು,” ಎಂದು ಆರ್ಚ್‌ಬಿಷಪ್ ಹೇಳಿದರು. ಆದರೆ ಜನರು ಅಥವಾ ಕಟ್ಟಡಗಳಿಗೆ ದೊಡ್ಡ ಮಟ್ಟದ ಹಾನಿ ಸಂಭವಿಸಲಿಲ್ಲ ಎಂದರು.

“ಕ್ಷಿಪಣಿಗಳೊಂದಿಗೆ ಸಣ್ಣ ತುಂಡುಗಳೂ ಬರುತ್ತವೆ,” ಎಂದು ಅವರು ಹೇಳಿ, “ಈ ಬೆಳಿಗ್ಗೆಯೂ ನಾವು ಕೆಲವು ಅವಶೇಷಗಳನ್ನು ಕಂಡುಕೊಂಡೆವು” ಎಂದು ತಿಳಿಸಿದರು.

ತಾವು ತಮ್ಮ ಸಂಪರ್ಕ ಜಾಲದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ ಅವರು, ರಾಯಭಾರಿಗಳಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕೀವ್‌ನ ಬಸಿಲಿಯನ್ ಪಿತೃಗಳ ಮಠದಲ್ಲಿನ ಸೇಂಟ್ ಬಾಸಿಲ್ ದಿ ಗ್ರೇಟ್ ಧರ್ಮ ಸಭೆಯ ಧರ್ಮ ಕೇಂದ್ರದ  ಗುರುಗಳಾಗಿರುವ ಫಾದರ್ ರಫೈಲ್ ಸ್ಟೆಫುರಾಕ್ ರವರೊಂದಿಗೆ ಮಾತನಾಡಿದ್ದಾಗಿ ಹೇಳಿದರು. ಆ ಧರ್ಮಸಭೆ ಹಲವು ತಿಂಗಳುಗಳಿಂದ ದುರಸ್ತಿ ಕಾರ್ಯದಲ್ಲಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಡ್ರೋನ್ ಮತ್ತು ಕ್ಷಿಪಣಿಗಳ ಅವಶೇಷಗಳಿಂದ ಧರ್ಮ ಸಭೆಯ ಮೇಲ್ಛಾವಣಿಯಲ್ಲಿ 57 ರಂಧ್ರಗಳು ಉಂಟಾಗಿದ್ದವು ಎಂದು ಅವರು ವಿವರಿಸಿದರು. ಮಳೆನೀರು ಭಾರಿಯಾಗಿ ಒಳನುಗ್ಗುತ್ತಿದ್ದ ಕಾರಣ ಮೇಲ್ಛಾವಣಿಯನ್ನು ದುರಸ್ತಿ ಮಾಡಬೇಕಾಯಿತು ಎಂದರು.

ಶಾಂತಿಗಾಗಿ ಪ್ರಾರ್ಥನೆ

ಡ್ನಿಪ್ರೋ ನದಿಯ ಎಡ ದಂಡೆಯಲ್ಲಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ಪ್ರೇಷಿತರ ಪ್ರತಿನಿಧಿ ಹೇಳಿದರು. ಅಲ್ಲಿ “ಒಂದೇ ರಾತ್ರಿ 16ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ, ನೂರಾರು ಮಂದಿ ಗಾಯಗೊಂಡಿದ್ದಾರೆ, ಮತ್ತು ಮತ್ತೆ ನಗರದ ಅರ್ಧ ಭಾಗ ನೀರಿಲ್ಲದೆ ಉಳಿದಿದೆ” ಎಂದು ಅವರು ತಿಳಿಸಿದರು.

ಈ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಕೆಲವು ರಾಜತಾಂತ್ರಿಕರೊಂದಿಗೆ ಈ ವಿಚಾರವನ್ನು ಚರ್ಚಿಸಿದ್ದಾಗಿ ಆರ್ಚ್‌ಬಿಷಪ್ ಹೇಳಿದರು. ಅವರು, “ಈ ಮಟ್ಟದ ತೀವ್ರತೆಯಲ್ಲಿ ಬಾಂಬ್ ದಾಳಿಗಳು ಮುಂದುವರಿದರೆ, ಅದು ಒಳ್ಳೆಯ ಸೂಚನೆಯಲ್ಲ, ಬದಲಾಗಿ ಯುದ್ಧವನ್ನು ಮುಂದುವರಿಸುವ ಇಚ್ಛೆಯನ್ನು ಸೂಚಿಸುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದರು.

“ನಾವು ಮಾಡಬಹುದಾದದ್ದು ಒಂದೇ,” ಎಂದು ಪ್ರೇಷಿತರ ಪ್ರತಿನಿಧಿ ಕೊನೆಯಲ್ಲಿ ಹೇಳಿದರು, “ಅದು ಶಾಂತಿಗಾಗಿ ಪ್ರಾರ್ಥಿಸುವುದು.”

15 ಮೇ 2026, 19:26