ಪ್ಯಾಟಿ ಸ್ಮಿತ್ ರವರು ವೆನಿಸ್ ಬಿಯೆನ್ನೆಲ್ ನಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ (Holy See) ಮಂಟಪವನ್ನು ಉದ್ಘಾಟಿಸಿದರು.
ವ್ಯಾಟಿಕನ್ ವರದಿ
2026ರ ಮೇ 8ರಂದು ನಡೆಯುವ ವೆನಿಸ್ ಬಿಯೆನ್ನೆಲ್ 61ನೇ ಅಂತರರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ,ಪ್ಯಾಟಿ ಸ್ಮಿತ್ ರವರ ವಿಶಿಷ್ಟ ಧ್ವನಿಯಲ್ಲಿ ಅರ್ಪಿಸಲಾದ “ಧ್ವನಿಯ ಪ್ರಾರ್ಥನೆ” ಜಗದ್ಗುರುಗಳ ಅಧಿಕಾರ ಸ್ಥಳದ ಮಂಟಪದ ಉದ್ಘಾಟನೆಯನ್ನು ನೆರವೇರಿಸಲಿದೆ.
ಅಂತರರಾಷ್ಟ್ರೀಯ ಪ್ರಯೋಗಾತ್ಮಕ ಧ್ವನಿ ಕಲಾ ಸಮೂಹವಾದ ಸೌಂಡ್ವಾಕ್ ಕಲೆಕ್ಟಿವ್ ಜೊತೆಗೂಡಿ, ಪ್ಯಾಟಿ ಸ್ಮಿತ್ ರವರು ಶುಕ್ರವಾರ ಮಧ್ಯಾಹ್ನ ವೆನಿಸ್ನ “ಚರ್ಚ್ ಆಫ್ ಸಾಂಟಾ ಮಾರಿಯಾ ಡಿ ನಜರೆತ್" — ಸಾಮಾನ್ಯವಾಗಿ "ಸ್ಕಾಲ್ಜಿ ಚರ್ಚ್" ಎಂದು ಕರೆಯಲ್ಪಡುವ ದೇವಾಲಯದಲ್ಲಿ —" ಸೋನಿಕ್ ಪ್ರೇಯರ್” ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಈ ಪ್ರದರ್ಶನವನ್ನು ಸಂಸ್ಕೃತಿ ಮತ್ತು ಶಿಕ್ಷಣದ ಡಿಕಾಸ್ಟರಿ ಪ್ರೋತ್ಸಾಹಿಸಿದೆ.
ಅಂತರ್ಮುಖ ಮತ್ತು ಧ್ಯಾನಮಯ ಸ್ವಭಾವವನ್ನು ಉಳಿಸಿಕೊಳ್ಳುವ ಉದ್ದೇಶದಿಂದ, ಈ ಕಾರ್ಯಕ್ರಮವನ್ನು ಸೀಮಿತ ಸಂಖ್ಯೆಯ ಅತಿಥಿಗಳಿಗೆ ಮಾತ್ರ ಮೀಸಲಿರಿಸಲಾಗಿದೆ. "ಕಿವಿ ಆತ್ಮದ ಕಣ್ಣು" ಎಂಬ ಶೀರ್ಷಿಕೆಯ ಜಗದ್ಗುರುಗಳ ಅಧಿಕಾರ ಸ್ಥಳದ ಮಂಟಪದ ಇದು ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿದ್ದು, 2026ರ ಮೇ 9ರಿಂದ ನವೆಂಬರ್ 22ರವರೆಗೆ ನಡೆಯಲಿರುವ ಈ ಪ್ರದರ್ಶನವು, ಶ್ರವಣವನ್ನು ಕಲಾತ್ಮಕ, ಆತ್ಮಿಕ ಮತ್ತು ಮಾನವೀಯ ಅನುಭವವಾಗಿ ಅನ್ವೇಷಿಸುವ ಆಳವಾದ ಪಯಣಕ್ಕೆ ಭೇಟಿ ನೀಡುವವರನ್ನು ಆಹ್ವಾನಿಸಲಿದೆ.
ಹಿಲ್ಡೆಗಾರ್ಡ್ ರವರ ಆತ್ಮಸ್ಫೂರ್ತಿ
ಈ ಯೋಜನೆಗೆ ಪ್ರೇರಣೆಯಾಗಿರುವವರು ಬಿಂಗೆನ್ನ ಹಿಲ್ಡೆಗಾರ್ಡ್ — ಅವರು ಒಬ್ಬ ಮಿಸ್ಟಿಕ್, ಸಂಗೀತಗಾರ್ತಿ, ಧರ್ಮಶಾಸ್ತ್ರಜ್ಞೆ ಮತ್ತು ಧರ್ಮ ಸಭೆಯ ಡಾಕ್ಟರ್ ಆಗಿದ್ದರು. ಧ್ವನಿಯನ್ನು ಜ್ಞಾನ ಮತ್ತು ಆಂತರಿಕ ಸೌಹಾರ್ದತೆಯ ಮಾರ್ಗವೆಂದು ಅವರು ಅರ್ಥೈಸಿದ ದೃಷ್ಟಿಕೋನವೇ ಈ ಯೋಜನೆಯ ಹೃದಯವಾಗಿದೆ.
ಈ ಹಿನ್ನೆಲೆಯಲ್ಲೇ, ಕಾವ್ಯ, ಸಂಗೀತ ಮತ್ತು ಆತ್ಮಿಕ ಅನ್ವೇಷಣೆಯನ್ನು ತಮ್ಮ ಕಲೆಯಲ್ಲಿ ಒಂದಾಗಿಸಿರುವ ಪ್ಯಾಟಿ ಸ್ಮಿತ್ ರವರ ಆಯ್ಕೆಗೆ ವಿಶೇಷ ಮಹತ್ವ ದೊರಕಿದೆ. “ಹಿಲ್ಡೆಗಾರ್ಡ್ಗಾಗಿ ಧ್ವನಿಯು ಆತ್ಮ ಮತ್ತು ಜಗತ್ತಿನ ನಡುವಿನ ಸೇತುವೆಯಾಗಿತ್ತು. ಪ್ಯಾಟಿ ಸ್ಮಿತ್ ರವರ ಕೃತಿಗಳಲ್ಲಿಯೂ ಇದೇ ಪ್ರೇರಣೆ ಕಾಣಿಸುತ್ತದೆ,” ಎಂದು ಕ್ಯುರೇಟರ್ಗಳಾದ ಹಾನ್ಸ್ ಉಲ್ರಿಚ್ ಓಬ್ರಿಸ್ಟ್ ಮತ್ತು ಬೆನ್ ವಿಕರ್ಸ್ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಪ್ಯಾಟಿ ಸ್ಮಿತ್ ರವರೊಂದಿಗೆ ಸ್ಟೀಫನ್ ಕ್ರಾಸ್ನಿಯಾನ್ಸ್ಕಿ, ಸಿಮೋನೆ ಮೆರ್ಲಿ, ಡಿಯೆಗೋ ಎಸ್ಪಿನೋಸಾ ಕ್ರೂಜ್ ಗೋನ್ಸಾಲೆಜ್ ಮತ್ತು ಪೆಡ್ರೋ ಮೈಯಾ ಭಾಗವಹಿಸಲಿದ್ದಾರೆ. ಧ್ವನಿ, ಎಲೆಕ್ಟ್ರಾನಿಕ್ ಸಂಗೀತ, ತಾಳವಾದ್ಯಗಳು ಮತ್ತು ದೃಶ್ಯಕಲೆಯ ಸಂಯೋಜನೆಯ ಮೂಲಕ, ಸಂಗೀತ ಕಛೇರಿ, ಧ್ಯಾನ ಮತ್ತು ಧ್ವನಿ ಸ್ಥಾಪನೆಯ ಅನುಭವವನ್ನು ಒಳಗೊಂಡ ವಿಶಿಷ್ಟ ಕಾರ್ಯಕ್ರಮವನ್ನು ಅವರು ಆಯೋಜಿಸಲಿದ್ದಾರೆ.
ಎರಡು ಸ್ಥಳಗಳು, ಒಂದೇ ಆಹ್ವಾನ: ನಿಧಾನವಾಗಿ ಬದುಕಲು
ಜಗದ್ಗುರುಗಳ ಅಧಿಕಾರ ಸ್ಥಳದ ಮಂಟಪವು ವೆನಿಸ್ನ ಎರಡು ವಿಭಿನ್ನ ಸ್ಥಳಗಳಲ್ಲಿ ವಿಸ್ತರಿಸಿದೆ. ಮೊದಲನೆಯದು, ಕ್ಯಾನರೆಜಿಯೊ ಪ್ರದೇಶದಲ್ಲಿರುವ "ಗಿಯಾರ್ಡಿನೊ ಮಿಸ್ಟಿಕೊ ಡೀ ಕಾರ್ಮೆಲಿಟಾನಿ ಸ್ಕಾಲ್ಜಿ" ಎಂಬ ರಹಸ್ಯಮಯ ಕಾರ್ಮೆಲೈಟ್ ತೋಟ. ಸಾಮಾನ್ಯವಾಗಿ ಸಾರ್ವಜನಿಕರಿಗೆ ಮುಚ್ಚಿರಿಸುವ ಈ ಸ್ಥಳವನ್ನು, ಪ್ಯಾಟಿ ಸ್ಮಿತ್, ಬ್ರಯಾನ್ ಈನೋ, ಮೆರೆಡಿತ್ ಮಾಂಕ್ ಮತ್ತು ಜಿಮ್ ಜಾರ್ಮುಶ್ ಮೊದಲಾದ ಕಲಾವಿದರ ಕೃತಿಗಳೊಂದಿಗೆ ಪ್ರಕೃತಿಯ ಧ್ವನಿಗಳನ್ನು ಸಂಯೋಜಿಸಿ, ಆಳವಾದ ಧ್ವನಿಯ ಅನುಭವದ ಸ್ಥಳವನ್ನಾಗಿ ಪರಿವರ್ತಿಸಲಾಗಿದೆ.
ಇನ್ನೊಂದು ಸ್ಥಳ ಕ್ಯಾಸ್ಟೆಲೊ ಪ್ರದೇಶದಲ್ಲಿರುವ “ಕಾಂಪ್ಲೆಸೊ ಡಿ ಸಾಂಟಾ ಮಾರಿಯಾ ಆಸಿಲಿಯಾಟ್ರಿಸ್”, ಇದು 2025ರ ವ್ಯಾಟಿಕನ್ ವಾಸ್ತುಶಿಲ್ಪ ಬಿಯೆನ್ನೇಲ್ ಯೋಜನೆಯ ಕೇಂದ್ರವಾಗಿತ್ತು. ಇಲ್ಲಿ, ಸ್ಥಾಪನೆಗಳು, ಜೀವಂತ ಆರ್ಕೈವ್ಗಳು ಮತ್ತು ಹಿಲ್ಡೆಗಾರ್ಡ್ ರವರ ಆತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಕೃತಿಗಳ ಮೂಲಕ “ಆಧುನಿಕ ಸ್ಕ್ರಿಪ್ಟೋರಿಯಂ” ರೂಪುಗೊಂಡಿದೆ.
ಈ ಮಂಟಪದ ಆಯುಕ್ತರಾಗಿರುವವರು ಜೋಸ್ ಟೊಲೆಂಟಿನೊ ಡಿ ಮೆಂಡೋನ್ಕಾ ಆಗಿದ್ದು, ಕ್ಯುರೇಟರ್ಗಳಾಗಿ ಹಾನ್ಸ್ ಉಲ್ರಿಚ್ ಓಬ್ರಿಸ್ಟ್ ಮತ್ತು ಬೆನ್ ವಿಕರ್ಸ್ ಕಾರ್ಯನಿರ್ವಹಿಸುತ್ತಿದ್ದಾರೆ.
ವೇಗ, ಗದ್ದಲ ಮತ್ತು ಚಿತ್ತಭಂಗದಿಂದ ಕೂಡಿದ ಇಂದಿನ ಕಾಲಘಟ್ಟಕ್ಕೆ ಸಾಂಸ್ಕೃತಿಕ ಹಾಗೂ ಆತ್ಮಿಕ ಪ್ರತಿಕ್ರಿಯೆಯಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಕಲೆಯು ಧ್ಯಾನ, ಶಾಂತಿ, ಸಂವಾದ ಮತ್ತು ಭವಿಷ್ಯದ ನಿರೀಕ್ಷೆಯನ್ನು ಮೂಡಿಸುವ ಸ್ಥಳವಾಗಬಹುದು ಎಂದು ಕಾರ್ಡಿನಲ್ ಟೊಲೆಂಟಿನೊ ಮಂಟಪದ ಪರಿಚಯ ಸಂದರ್ಭದಲ್ಲಿ ಒತ್ತಿಹೇಳಿದರು.
ಮಂಟಪದ ಅಧಿಕೃತ ಉದ್ಘಾಟನೆ ಸಂಜೆ 6 ಗಂಟೆಗೆ ನಡೆಯಲಿದ್ದರೂ, ಅದರ ಮೊದಲ ಭಾಷೆ ಸಂಗೀತದ — ಅಥವಾ ಇನ್ನೂ ಆಳವಾಗಿ ಹೇಳುವುದಾದರೆ, “ಆಲಿಸುವಿಕೆಯ” — ಭಾಷೆಯಾಗಿರಲಿದೆ.