ಏಡ್ಸ್ ಆರೈಕೆ ಮತ್ತು ತಡೆಗಟ್ಟುವಿಕೆಯಲ್ಲಿ ಯಾರನ್ನೂ ಕಡೆಗಣಿಸಬೇಡಿ: ಜಗದ್ಗುರುಗಳ ಅಧಿಕಾರ ಸ್ಥಳದ ಕರೆ.
ವ್ಯಾಟಿಕನ್ ವರದಿ
ಎಚ್‌ಐವಿ ಸೋಂಕಿನ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ವಿಶ್ವವು ಸಾಧಿಸಿರುವ ಪ್ರಗತಿಯನ್ನು ಸ್ವಾಗತಿಸಿರುವ ಜಗದ್ಗುರುಗಳ ಅಧಿಕಾರ ಸ್ಥಳವು, ಏಡ್ಸ್ ನಿರ್ಮೂಲನೆಗಾಗಿ ಜಾಗತಿಕ ಮಟ್ಟದಲ್ಲಿ ನವೀಕೃತ ಬದ್ಧತೆಯ ಅಗತ್ಯವನ್ನು ಒತ್ತಿಹೇಳಿದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿರುವ ಅನೇಕ ಜನರು ಇನ್ನೂ ಜೀವ ರಕ್ಷಿಸುವ ಚಿಕಿತ್ಸೆಯಿಂದ ವಂಚಿತರಾಗಿರುವುದರಿಂದ, ಎಲ್ಲರಿಗೂ ಸಮಾನ ಆರೋಗ್ಯ ಸೇವೆ ದೊರೆಯುವಂತೆ ಹೆಚ್ಚಿನ ಪ್ರಯತ್ನಗಳನ್ನು ಕೈಗೊಳ್ಳಬೇಕೆಂದು ಅದು ಕರೆ ನೀಡಿದೆ.
ಶುಕ್ರವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ 2026ರ ಎಚ್‌ಐವಿ/ಏಡ್ಸ್ ಕುರಿತ ಉನ್ನತ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳ ಅಧಿಕಾರ ಸ್ಥಳದ ವಿಶ್ವಸಂಸ್ಥೆಯ ಶಾಶ್ವತ ವೀಕ್ಷಕ ನಿಯೋಗವು, 2010ರಿಂದ ವಿಶ್ವದ ಬಹುತೇಕ ಪ್ರದೇಶಗಳಲ್ಲಿ ಹೊಸ ಎಚ್‌ಐವಿ ಸೋಂಕುಗಳ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿತು. ಜೊತೆಗೆ, ಆಂಟಿರೆಟ್ರೋವೈರಲ್ ಚಿಕಿತ್ಸೆಯ ವ್ಯಾಪಕ ಲಭ್ಯತೆಯಿಂದ ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿರುವವರು ಹೆಚ್ಚು ದೀರ್ಘಕಾಲ ಮತ್ತು ಉತ್ತಮ ಆರೋಗ್ಯದೊಂದಿಗೆ ಬದುಕಲು ಸಾಧ್ಯವಾಗಿದೆ ಎಂದು ತಿಳಿಸಿತು.
ಎಲ್ಲರಿಗೂ ನಿರಂತರ ಆರೋಗ್ಯ ಸೇವೆ ದೊರೆಯಲು ಆರೋಗ್ಯ ವ್ಯವಸ್ಥೆಗಳಲ್ಲಿ ಹೂಡಿಕೆ, ವೈದ್ಯಕೀಯ ಸಂಶೋಧನೆ ಹಾಗೂ ಔಷಧಿಗಳ ಸ್ಥಳೀಯ ಉತ್ಪಾದನೆಯನ್ನು ನಿರಂತರವಾಗಿ ಬಲಪಡಿಸುವುದು ಅತ್ಯಗತ್ಯ ಎಂದು ನಿಯೋಗವು ಒತ್ತಿಹೇಳಿತು. ಈ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರ ಮಾತುಗಳನ್ನು ಉಲ್ಲೇಖಿಸಿದ ಜಗದ್ಗುರುಗಳು ಅಧಿಕಾರ ಸ್ಥಳವು, "ಕಲ್ಯಾಣದ ಸುಳ್ಳು ಭ್ರಮೆಗಳನ್ನು ಹಿಡಿದು ಸಮಾಜವು ವೇಗವಾಗಿ ಮುನ್ನಡೆಯುತ್ತಿರುವಾಗ, ಬಡತನ ಮತ್ತು ದುರ್ಬಲತೆಯಲ್ಲಿ ಬದುಕುತ್ತಿರುವ ಅನೇಕರನ್ನು ನಿರ್ಲಕ್ಷಿಸುವ ಸಮಾಜವನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಎಚ್ಚರಿಸಿತು.
ವಿಶೇಷವಾಗಿ ಮಕ್ಕಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ನಿಯೋಗವು, ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿರುವವರಲ್ಲಿ ಮಕ್ಕಳು ಕೇವಲ ಮೂರು ಪ್ರತಿಶತದಷ್ಟಿದ್ದರೂ, ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿನ ಕೊರತೆಯಿಂದಾಗಿ ಎಚ್‌ಐವಿ ಸಂಬಂಧಿತ ಸಾವುಗಳಲ್ಲಿ ಅವರ ಪಾಲು ಹನ್ನೆರಡು ಪ್ರತಿಶತವಿದೆ ಎಂದು ತಿಳಿಸಿತು. ಗರ್ಭಧಾರಣೆಯ ಅವಧಿಯಲ್ಲಿ, ಹೆರಿಗೆ ಸಮಯದಲ್ಲಿ ಹಾಗೂ ಹೆರಿಗೆಯ ನಂತರ ತಾಯಂದಿರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು, ಮಕ್ಕಳಿಗೆ ಆರಂಭಿಕ ಹಂತದಲ್ಲೇ ಪರೀಕ್ಷೆ ನಡೆಸುವುದು ಮತ್ತು ಮಕ್ಕಳಿಗೆ ಸೂಕ್ತ ಔಷಧಿಗಳನ್ನು ಲಭ್ಯವಾಗುವಂತೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅದು ಹೇಳಿತು.
ತನ್ನ ಭಾಷಣದ ಕೊನೆಯಲ್ಲಿ, ಈ ರೋಗದಿಂದ ಬಾಧಿತರಾದವರ ಆರೈಕೆಯಲ್ಲಿ ಧರ್ಮ ಸಭೆಯ ಬದ್ಧತೆಯನ್ನು ಜಗದ್ಗುರುಗಳ ಅಧಿಕಾರ ಸ್ಥಳವು ಪುನರುಚ್ಚರಿಸಿತು. "ವಿಶ್ವದಾದ್ಯಂತ ಎಚ್‌ಐವಿ ಸಂಬಂಧಿತ ಆರೋಗ್ಯ ಸೇವೆಗಳ ಸುಮಾರು ನಾಲ್ಕನೇ ಒಂದು ಭಾಗವನ್ನು ಒದಗಿಸುತ್ತಿರುವ ಕಥೋಲಿಕ ಆರೋಗ್ಯ ಸಂಸ್ಥೆಗಳು, ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿರುವ ಪ್ರತಿಯೊಬ್ಬರೂ ತಮ್ಮ ಅಂತರ್ಗತ ಮಾನವ ಘನತೆಗೆ ಅನುಗುಣವಾಗಿ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆಯುವಂತೆ ತಮ್ಮ ಸೇವೆಯನ್ನು ಮುಂದುವರಿಸಲಿವೆ" ಎಂದು ನಿಯೋಗವು ತಿಳಿಸಿತು.