ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಡಿನಲ್ ಲೋಪೆಸ್ ರೊಮೆರೊ ತಾತ್ಕಾಲಿಕವಾಗಿ ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿದರು.
ವ್ಯಾಟಿಕನ್ ವರದಿ
ರಬಾತ್‌ನ ಆರ್ಚ್‌ಬಿಷಪ್ ಹಾಗೂ ಸೇಲೇಸಿಯನ್ ಸಭೆಯ ಸದಸ್ಯರಾದ ಕಾರ್ಡಿನಲ್ ಕ್ರಿಸ್ಟೋಬಲ್ ಲೋಪೆಸ್ ರೊಮೆರೊರವರು, ವಯಸ್ಕ ಮಹಿಳೆಯರೊಂದಿಗೆ ಅನುಚಿತ ವರ್ತನೆ ನಡೆಸಿದರೆಂಬ ಆರೋಪಗಳ ಕುರಿತು ಧರ್ಮ ಸಭೆ ನಡೆಸುತ್ತಿರುವ ಪ್ರಾಥಮಿಕ ತನಿಖೆ ಪೂರ್ಣಗೊಳ್ಳುವವರೆಗೆ ಸಾರ್ವಜನಿಕ ಪಾಸ್ಟೋರಲ್ ಸೇವೆಯಿಂದ ತಾತ್ಕಾಲಿಕವಾಗಿ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ.
ಜುಲೈ 7ರ ಬುಧವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, 74 ವರ್ಷದ ಸ್ಪ್ಯಾನಿಷ್ ಕಾರ್ಡಿನಲ್ ಅವರು, ಈ ತನಿಖೆಯು ಈಗ “ರೋಮಿನ ಕಥೋಲಿಕ ಧರ್ಮ ಸಭೆಯ ವಶದಲ್ಲಿದೆ” ಎಂದು ತಿಳಿಸಿ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ತನಿಖೆಯ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ, ಸಾರ್ವಜನಿಕ ಆರಾಧನಾ ಆಚರಣೆಗಳಿಗೆ ಅಧ್ಯಕ್ಷತೆ ವಹಿಸುವುದರಿಂದ ಹಾಗೂ ಪಾಸ್ಟೋರಲ್ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಾತ್ಕಾಲಿಕವಾಗಿ ದೂರವಿರುವುದಾಗಿ ಅವರು ಹೇಳಿದರು.
ಈ ಪರಿಸ್ಥಿತಿಯು ವಿಶ್ವಾಸಿಗಳಲ್ಲಿ ನೋವು ಮತ್ತು ಸಹಜವಾದ ಪ್ರಶ್ನೆಗಳನ್ನು ಹುಟ್ಟುಹಾಕಿರುವುದನ್ನು ಒಪ್ಪಿಕೊಂಡ ಕಾರ್ಡಿನಲ್ ಲೋಪೆಸ್ ರೊಮೆರೊ, ಎಲ್ಲರೂ ಸಹಾನುಭೂತಿ ಮತ್ತು ಅರ್ಥೈಸುವ ಮನೋಭಾವ ತೋರಬೇಕೆಂದು ವಿನಂತಿಸಿದರು. ಅಲ್ಲದೆ, ಧರ್ಮಪ್ರಾಂತ್ಯದ ಸಮುದಾಯಕ್ಕೆ ಈ ವಿಷಯವನ್ನು ಯಾವುದೇ ವಿಳಂಬವಿಲ್ಲದೆ ತಿಳಿಸುವುದು ಅಗತ್ಯವೆಂದರು.
ನೋವು ಅನುಭವಿಸುತ್ತಿರುವವರಿಗಾಗಿ, ಮೊರಾಕೊದಲ್ಲಿರುವ ಧರ್ಮ ಸಭೆಗಾಗಿ ಹಾಗೂ ತಮಗಾಗಿಯೂ ಪ್ರಾರ್ಥಿಸುವಂತೆ ಅವರು ವಿಶ್ವಾಸಿಗಳನ್ನು ಆಹ್ವಾನಿಸಿದರು. ಎಲ್ಲರೂ ಏಕತೆಯಲ್ಲಿ ಉಳಿದು, ವಿಶ್ವಾಸದಿಂದ ಸುವಾರ್ತೆಯ ಸಂದೇಶದಂತೆ ಬದುಕುವುದನ್ನು ಮುಂದುವರಿಸಬೇಕೆಂದು ಅವರು ಉತ್ತೇಜಿಸಿದರು.
ಇದಲ್ಲದೆ, ಎಎಫ್ಪಿ ಸುದ್ದಿ ಸಂಸ್ಥೆಗೆ ನೀಡಿದ ಪ್ರತ್ಯೇಕ ಹೇಳಿಕೆಯಲ್ಲಿ, ಕಾರ್ಡಿನಲ್ ಅವರು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಮತ್ತೊಮ್ಮೆ ಪುನರುಚ್ಚರಿಸಿ, “ನಾನು ಯಾವುದೇ ರೀತಿಯ ದೈಹಿಕ ದಾಳಿ, ಹಿಂಸೆ ಅಥವಾ ಲೈಂಗಿಕ ಕಿರುಕುಳ ಎಸಗಿಲ್ಲ” ಎಂದು ಸ್ಪಷ್ಟಪಡಿಸಿದರು.