ಕಾರ್ಡಿನಲ್ ಕ್ಯೂಪಿಚ್: ಸಿನೊಡಾಲಿಟಿ ಎಂದರೆ ನೃತ್ಯದಂತಿರುವ ಒಂದು ಪಯಣ.
ವ್ಯಾಟಿಕನ್ ವರದಿ
ಕಾರ್ಡಿನಲ್ ಬ್ಲೇಸ್ ಜೋಸೆಫ್ ಕ್ಯೂಪಿಚ್ ರವರು, ವ್ಯಾಟಿಕನ್ ಮೀಡಿಯಾಕ್ಕಾಗಿ ಬರೆದ ತಮ್ಮ ಚಿಂತನ ಲೇಖನದಲ್ಲಿ, ಕ್ರೊಯೇಷಿಯಾದ ಸಾಂಪ್ರದಾಯಿಕ ‘ಕೊಲೊ’ ನೃತ್ಯವನ್ನು ಧರ್ಮ ಸಭೆಯ ಸಿನೊಡಾಲಿಟಿಯನ್ನು ಅರ್ಥಮಾಡಿಕೊಳ್ಳಲು ಸುಂದರವಾದ ರೂಪಕವಾಗಿ ಬಳಸಿದ್ದಾರೆ. ವೃತ್ತಾಕಾರದಲ್ಲಿ ಕೈಹಿಡಿದು ಒಗ್ಗಟ್ಟಿನಿಂದ ನೃತ್ಯ ಮಾಡುವ ಈ ಸಂಪ್ರದಾಯದಂತೆ, ಸಿನೊಡಾಲಿಟಿಯೂ ಎಲ್ಲರೂ ಒಟ್ಟಾಗಿ ಒಂದೇ ಮಾರ್ಗದಲ್ಲಿ ಸಾಗುವ ಜೀವನಶೈಲಿಯಾಗಿದೆ ಎಂದು ಅವರು ವಿವರಿಸುತ್ತಾರೆ. ವೈಯಕ್ತಿಕ ಪ್ರದರ್ಶನಕ್ಕಿಂತ ಸಾಮೂಹಿಕ ಸಾಮರಸ್ಯಕ್ಕೆ ಆದ್ಯತೆ ನೀಡುವುದು ಸಿನೊಡಾಲಿಟಿಯ ಮೂಲತತ್ವವಾಗಿದೆ.
ನೃತ್ಯವು ಸಂಗೀತವನ್ನು ಆಲಿಸುವುದರಿಂದ ಆರಂಭವಾಗುವಂತೆ, ಸಿನೊಡಾಲಿಟಿಯೂ ಆಲಿಸುವ ಮನೋಭಾವದಿಂದ ಆರಂಭವಾಗುತ್ತದೆ. ಪವಿತ್ರಾತ್ಮನ ಧ್ವನಿ, ದೇವರ ವಾಕ್ಯ, ಧರ್ಮ ಸಭೆಯ ಸಂಪ್ರದಾಯ ಹಾಗೂ ವಿಶೇಷವಾಗಿ ಸಮಾಜದ ಅಂಚಿನಲ್ಲಿರುವವರ ಧ್ವನಿಯನ್ನು ಗಮನವಿಟ್ಟು ಆಲಿಸುವುದು ಸಿನೊಡಲ್ ಪಯಣದ ಮೊದಲ ಹೆಜ್ಜೆಯಾಗಿದೆ. ಈ ಆಲಿಸುವ ಮನೋಭಾವವೇ ಸಮುದಾಯವನ್ನು ಒಂದೇ ಲಯದಲ್ಲಿ ಮುನ್ನಡೆಸುತ್ತದೆ.
ಕಾರ್ಡಿನಲ್ ಕ್ಯೂಪಿಚ್ ರವರ ಪ್ರಕಾರ, ಉತ್ತಮ ನೃತ್ಯದಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಪಾತ್ರವಿದ್ದರೂ ಎಲ್ಲರೂ ಒಂದೇ ಲಯದಲ್ಲಿ ಹೆಜ್ಜೆ ಹಾಕುತ್ತಾರೆ. ಅದೇ ರೀತಿ, ಧರ್ಮ ಸಭೆಯಲ್ಲಿ ಧರ್ಮಾಧ್ಯಕ್ಷರು, ಯಾಜಕರು, ಧಾರ್ಮಿಕರು ಮತ್ತು ಸಾಮಾನ್ಯ ವಿಶ್ವಾಸಿಗಳು ತಮ್ಮದೇ ಆದ ವರಗಳು ಹಾಗೂ ಜವಾಬ್ದಾರಿಗಳನ್ನು ಹೊಂದಿದ್ದರೂ, ಎಲ್ಲರೂ ಸುವಾರ್ತೆಯ ಧ್ಯೇಯಕ್ಕಾಗಿ ಸಹಜವಾಬ್ದಾರಿಯೊಂದಿಗೆ ಕಾರ್ಯನಿರ್ವಹಿಸಬೇಕು. ನಾಯಕತ್ವ ಎಂದರೆ ಇತರರನ್ನು ನಿಯಂತ್ರಿಸುವುದಲ್ಲ; ಪ್ರತಿಯೊಬ್ಬರೂ ತಮ್ಮ ಕೊಡುಗೆಯನ್ನು ನೀಡಲು ಅವಕಾಶ ಕಲ್ಪಿಸುವುದಾಗಿದೆ.
ಸಿನೊಡಾಲಿಟಿಯು ಸೃಜನಶೀಲತೆ, ಪರಸ್ಪರ ಗೌರವ ಮತ್ತು ಹೊಂದಾಣಿಕೆಯನ್ನು ಸಹ ಒತ್ತಿಹೇಳುತ್ತದೆ. ಭಿನ್ನಾಭಿಪ್ರಾಯಗಳು ಎದುರಾದಾಗ ಅವುಗಳನ್ನು ಸಂಘರ್ಷವಾಗಿ ಅಲ್ಲ, ಪರಸ್ಪರ ಸಂವಾದದ ಮೂಲಕ ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಅವಕಾಶವಾಗಿ ನೋಡಬೇಕು. ಹಾಗೆಯೇ, ಧರ್ಮ ಸಭೆ ಎಲ್ಲರಿಗೂ ಸ್ಥಳ ನೀಡುವ ಸಮುದಾಯವಾಗಿರಬೇಕು. ವಿಶೇಷವಾಗಿ ಇದುವರೆಗೆ ಕಡೆಗಣಿಸಲ್ಪಟ್ಟವರನ್ನು ಒಳಗೊಳ್ಳುವ ಮೂಲಕ ಸರ್ವರ ಸಹಭಾಗಿತ್ವವನ್ನು ಖಚಿತಪಡಿಸಬೇಕು.
ಕೊನೆಯಲ್ಲಿ ಕಾರ್ಡಿನಲ್ ಕ್ಯೂಪಿಚ್ ರವರು, ಸಿನೊಡಾಲಿಟಿ ಇಂದಿನ ಕಾಲಕ್ಕೆ ಮಾತ್ರ ಸೀಮಿತವಲ್ಲ ಎಂದು ನೆನಪಿಸುತ್ತಾರೆ. ಅದು ಪವಿತ್ರ ಗ್ರಂಥ, ಧರ್ಮ ಸಭೆಯ ಬೋಧನೆ, ಪವಿತ್ರರು ಮತ್ತು ಹಿಂದಿನ ತಲೆಮಾರುಗಳ ಪರಂಪರೆಯೊಂದಿಗೆ ನಿರಂತರ ಸಂವಾದ ನಡೆಸುತ್ತಾ ಮುಂದುವರಿಯುವ ಪಯಣವಾಗಿದೆ. ಈ ರೀತಿಯಾಗಿ, ಸಿನೊಡಾಲಿಟಿ ಧರ್ಮ ಸಭೆಯನ್ನು ಪವಿತ್ರ ತ್ರಿತ್ವದ ಪ್ರೀತಿ ಮತ್ತು ಏಕತೆಯ ಪ್ರತಿಬಿಂಬವನ್ನಾಗಿ ರೂಪಿಸುತ್ತದೆ. ದೇವರ ದೈವಿಕ ಲಯಕ್ಕೆ ಕಿವಿಗೊಟ್ಟು, ಒಗ್ಗಟ್ಟಿನಿಂದ ಮುಂದೆ ಸಾಗುವ ಈ ಪಯಣವೇ ಲೋಕಕ್ಕೆ ಧರ್ಮ ಸಭೆಯ ಜೀವಂತ ಸಾಕ್ಷಿಯಾಗಿದೆ.