ಕೃಷಿ ಶಾಂತಿ ಮತ್ತು ಭರವಸೆಯ ಸಾಧನವಾಗಬಹುದು:IFAD ಅಧ್ಯಕ್ಷರು
ಸುಮಾರು 2.5 ರಿಂದ 2.6 ಬಿಲಿಯನ್ ಜನರು—ಅಂದರೆ ಜಗತ್ತಿನ ಜನಸಂಖ್ಯೆಯ ಸುಮಾರು ಮೂರನೇ ಭಾಗ—ತಮ್ಮ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ ಎಂದು FAOನ ಇತ್ತೀಚಿನ ಅಂಕಿಅಂಶಗಳು ತಿಳಿಸುತ್ತವೆ. ಆದರೆ ಸಂಘರ್ಷ, ಹವಾಮಾನ ಬದಲಾವಣೆ, ಸಂಪನ್ಮೂಲಗಳ ಕೊರತೆ ಮುಂತಾದ ಅನೇಕ ಸವಾಲುಗಳ ಕಾರಣದಿಂದ, ಅನೇಕರು ಆಹಾರ ಅಸುರಕ್ಷತೆಯನ್ನು ಎದುರಿಸುತ್ತಿದ್ದಾರೆ.ದಿನದ ಊಟಕ್ಕೂ ಸಾಕಷ್ಟು ಆಹಾರ ಸಿಗದೆ ಕಷ್ಟಪಡುವ ಸುಡಾನ್‌ನ ಮಗು, ಸಂಕಷ್ಟದ ನಡುವೆ ಉದ್ಯೋಗ ಹುಡುಕುವ ಬಾಂಗ್ಲಾದೇಶದ ಯುವಕನಂತಹ ಅಂಕಿಗಳ ಹಿಂದೆ ಇರುವ ಚಿಂತಾಜನಕ ಮುಖಗಳನ್ನು ಅಂತರರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ ಗಮನಿಸುತ್ತದೆ.
ಅಂತರರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ (IFAD) 92 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಜನಸಂಖ್ಯೆಯ ಸಮೃದ್ಧಿ, ಆಹಾರ ಭದ್ರತೆ ಹಾಗೂ ಸಂಕಷ್ಟ ಎದುರಿಸುವ ಸಾಮರ್ಥ್ಯವನ್ನು (resilience) ಹೆಚ್ಚಿಸುವ ಯೋಜನೆಗಳು ಮತ್ತು ಮುಂದಾಳತ್ವಗಳನ್ನು ಅನುಷ್ಠಾನಗೊಳಿಸುತ್ತಿದೆ.
ಇತರ ಅಭಿವೃದ್ಧಿ ಸಂಸ್ಥೆಗಳಿಗಿಂತ IFADನ್ನು ವಿಭಿನ್ನಗೊಳಿಸುವ ಅಂಶವೆಂದರೆ, ಇದು ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡುತ್ತದೆ ಮತ್ತು ಸಾಮಾನ್ಯವಾಗಿ ಸರ್ಕಾರಗಳು, ಸಮುದಾಯಗಳು ಹಾಗೂ ಖಾಸಗಿ ವಲಯದ ಜೊತೆಗೂಡಿ ಯೋಜನೆಗಳಿಗೆ ಸಹ-ಹಣಕಾಸು ಒದಗಿಸುತ್ತದೆ. ಈ ಸಂಯುಕ್ತ ಹಣಕಾಸು ವ್ಯವಸ್ಥೆಯಿಂದ ಎಲ್ಲಾ ಪಾಲುದಾರರು ಯೋಜನೆಯ ಮೇಲಿನ ಮಾಲೀಕತ್ವ ಮತ್ತು ಜವಾಬ್ದಾರಿಯನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಮೊದಲ ಮೈಲಿಗೆ ಹೂಡಿಕೆ
IFADನ ಕಾರ್ಯದ ಕೇಂದ್ರಬಿಂದು “ಗ್ರಾಮೀಣ ಜನರಲ್ಲಿ ಹೂಡಿಕೆ ಮಾಡುವುದು”. ಆದರೆ ಇದು ಕೇವಲ ಸಾಕಷ್ಟು ಆಹಾರ ಉತ್ಪಾದಿಸುವ ಪ್ರಶ್ನೆಯಷ್ಟೇ ಅಲ್ಲ. ಸಂಸ್ಥೆಯ ಅಧ್ಯಕ್ಷರಾದ ಡಾ. ಆಲ್ವಾರೋ ಲಾರಿಯೋ ವಿವರಿಸುವಂತೆ, “ಈ ಸಮುದಾಯಗಳಿಗೆ ಅಗತ್ಯವಾದ ಒಳಪೂರೈಕೆಗಳು (inputs), ತಂತ್ರಜ್ಞಾನ, ಸಂಗ್ರಹಣಾ ಸೌಲಭ್ಯಗಳು ಮತ್ತು ಮಾರುಕಟ್ಟೆಗಳ ಪ್ರವೇಶ ಇರಬೇಕು; ಜೊತೆಗೆ ಸಾಲ (credit), ವಿಮೆ, ನೀರು, ಸೂಕ್ತ ಮಣ್ಣು ಮತ್ತು ಬೀಜಗಳಿಗೆ ಲಭ್ಯತೆ ಇರಬೇಕು” ಎಂಬುದೂ ಅತ್ಯಂತ ಮುಖ್ಯ.
ಅವರು ಹೇಳುವಂತೆ, ಇದು ಉತ್ಪಾದನೆ ಮಾತ್ರವಲ್ಲ—ಕೃಷಿಯನ್ನು ಒಂದು ವ್ಯವಹಾರ (business)ವಾಗಿ ರೂಪಿಸುವ ವಿಚಾರವೂ ಹೌದು. ಅಂತಿಮ ಗುರಿ ಗ್ರಾಮೀಣ ಸಮುದಾಯಗಳ ಜನರಿಗೆ ದೀರ್ಘಕಾಲಿಕ ಹಾಗೂ ಧನಾತ್ಮಕ ಭವಿಷ್ಯ ನಿರ್ಮಿಸುವುದು—ಒಂದು ದಿನಕ್ಕೆ ಆಹಾರ ಒದಗಿಸುವುದಲ್ಲ, ಜೀವನಪೂರ್ತಿ ಪೋಷಿಸುವ ದಿಕ್ಕಿನಲ್ಲಿ ವ್ಯವಸ್ಥೆ ಕಟ್ಟುವುದು. ಸಣ್ಣ ರೈತರು (smallholder farmers) ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಹೂಡಿಕೆ ಮಾಡುವುದೇ IFADಯ “ಮೊದಲ ಮೈಲಿಗ ಹೂಡಿಕೆ”ಯ ಅರ್ಥ.
ಡಾ. ಲಾರಿಯೋ ಹೇಳುವಂತೆ, ಇವರೇ ಆಹಾರ ಉತ್ಪಾದಕರು. ಇದರಿಂದ ಅಭಿವೃದ್ಧಿಶೀಲ ಆರ್ಥಿಕತೆಗಳು ಅಥವಾ ನಗರಗಳಿಂದ ಮಾತ್ರ ಆಹಾರ “ಸ್ವೀಕರಿಸುವುದಕ್ಕೆ” ಒತ್ತು ನೀಡುವುದಲ್ಲ, “ದೃಷ್ಟಿಕೋನದ ಬದಲಾವಣೆ” ಅಗತ್ಯ.
ಆಹಾರ ಬೆಳೆಯುವವರು ಹಾಗೂ ಭೂಮಿಯನ್ನು ಕಾಪಾಡುವವರಿಗೆ ಆದ್ಯತೆ ಮತ್ತು ಹೂಡಿಕೆ ನೀಡಲಾಗುತ್ತದೆ. ಈ ಬೆಂಬಲವಿಲ್ಲದೆ ಪುರುಷರು ಮತ್ತು ಮಹಿಳೆಯರು ತಮ್ಮ ಜೀವನ ಸಾಗಿಸುವುದಕ್ಕೂ ಕಷ್ಟಪಡುತ್ತಾರೆ; ಮಾರಾಟಕ್ಕೆ ಸಾಕಷ್ಟು ಉತ್ಪಾದಿಸಿ ತಮ್ಮ ದುಡಿಮೆಯ ಫಲ ಪಡೆಯುವುದಂತೂ ಇನ್ನೂ ದೂರ.
“ಬಡತನ—ಅತಿದಾರಿದ್ರ್ಯ—ಇದರಲ್ಲಿ ಸುಮಾರು 80% ಗ್ರಾಮೀಣ ಪ್ರದೇಶಗಳಲ್ಲಿಯೇ ಇದೆ” ಎಂದು ಡಾ. ಲಾರಿಯೋ ಒತ್ತಿಹೇಳುತ್ತಾರೆ. “ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿಯೂ ಗ್ರಾಮೀಣ ಪ್ರದೇಶಗಳಿಗೆ ಸಾಕಷ್ಟು ಹೂಡಿಕೆ ಆಗುವುದಿಲ್ಲ” ಎಂಬುದು ಅವರ ಗಮನಾರ್ಹ ಟೀಕೆ. ಬದಲಾಗಿ ಮತ್ತೊಂದು ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಆದರೆ IFAD ಅಧ್ಯಕ್ಷರ ಪ್ರಕಾರ, ಗ್ರಾಮೀಣ ಪ್ರದೇಶಗಳಿಗಾಗಿ ಕೃಷಿ ಎಂಬ ಆರ್ಥಿಕ ಉತ್ಪಾದನಾ ಕ್ಷೇತ್ರ ಅತ್ಯಂತ ಮಹತ್ವದ್ದಾಗಿದೆ.
“ಕೃಷಿ ಇತರ ಕ್ಷೇತ್ರಗಳಿಗಿಂತ ಆರ್ಥಿಕ ಬೆಳವಣಿಗೆಗೆ ಎರಡು-ಮೂರು ಪಟ್ಟು ಹೆಚ್ಚು ಪರಿಣಾಮಕಾರಿ” ಎಂದು ಅವರು ಹೇಳುತ್ತಾರೆ, ಏಕೆಂದರೆ ಅನೇಕ ಸಮುದಾಯಗಳು ಮತ್ತು ರಾಷ್ಟ್ರಗಳು ಇನ್ನೂ ಕೃಷಿಯ ಮೇಲೆಯೇ ಗಟ್ಟಿಯಾಗಿ ಅವಲಂಬಿತವಾಗಿವೆ. ಆದ್ದರಿಂದ ಸ್ಥಳೀಯ ಪೂರೈಕೆ ಸರಪಳಿಗಳು ನಿರ್ಮಾಣವಾಗಬೇಕು; ಅವುಗಳು ಸುಲಭವಾಗಿ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಜೊತೆ ಸಂಪರ್ಕ ಹೊಂದುವಂತಾಗಬೇಕು.
ಶಾಂತಿಯ ಸಾಧನ
ಜಗತ್ತಿನ ಹಲವು ದೇಶಗಳಲ್ಲಿ ಹಣಕಾಸಿನ ಕೊರತೆಯನ್ನು ಎದುರಿಸುವ ಸಂದರ್ಭದಲ್ಲಿ, IFAD ಜನರ ಅಗತ್ಯಗಳಿಗೆ ತಕ್ಕಂತೆ ವಿಶೇಷ ಕಾರ್ಯಕ್ರಮಗಳು ಮತ್ತು ಮುಂದಾಳತ್ವಗಳನ್ನು ರೂಪಿಸುತ್ತದೆ.
ಉದಾಹರಣೆಗೆ, ಜಗತ್ತಿನ ಅತ್ಯಂತ ಭೀಕರ ಮಾನವೀಯ ಸಂಕಷ್ಟ ಎದುರಿಸುತ್ತಿರುವ ಸುಡಾನ್‌ನಲ್ಲಿ, ಸಣ್ಣ ರೈತರಿಗೆ ಆಹಾರ ಭದ್ರತೆ ಹೆಚ್ಚಿಸಲು, ಆದಾಯವನ್ನು ಹೆಚ್ಚಿಸಲು ಮತ್ತು ಸಂಕಷ್ಟ ಎದುರಿಸುವ ಶಕ್ತಿಯನ್ನು ನಿರ್ಮಿಸಲು ಉದ್ದೇಶಿಸಿದ ಯೋಜನೆಯನ್ನು ಸಂಸ್ಥೆ ಆರಂಭಿಸಿದೆ. ಅಲ್ಲದೆ, ಪರಿಸ್ಥಿತಿಯನ್ನು ಸುಧಾರಿಸುವ ಮಾರ್ಗಗಳ ಕುರಿತು ಚರ್ಚಿಸಲು ಡಾ. ಲಾರಿಯೋ ದೇಶದ ಸದಸ್ಯರು ಮತ್ತು ಸಚಿವರನ್ನು ಭೇಟಿ ಮಾಡುತ್ತಿರುವುದನ್ನೂ ವಿವರಿಸುತ್ತಾರೆ.
ಅವರು ಹೇಳುವಂತೆ, ಆಹಾರ ಉತ್ಪಾದನೆ ಮತ್ತು ಪೂರೈಕೆ ಮುಖ್ಯವೇ ಸರಿ; ಆದರೆ ಅದಕ್ಕಿಂತಲೂ ಅಗತ್ಯವಾದದ್ದು ಜನರಿಗೆ ಉತ್ತಮ ಭವಿಷ್ಯದ ನಿರೀಕ್ಷೆ ಮೂಡಿಸುವ ವಾತಾವರಣ ನಿರ್ಮಿಸುವುದು—“ಅವರು ಮುಂದುವರಿದು ಕೆಲಸ ಮಾಡಬಲ್ಲರು, ಉತ್ಪಾದಿಸಬಲ್ಲರು, ಆಹಾರ ಲಭ್ಯವಾಗುವಂತಾಗಬೇಕು” ಎಂಬ ಆಶಾವಾದ.
ಸುಡಾನ್‌ನಂತಹ ದೇಶಗಳಲ್ಲಿ ಹಿಂಸೆ ಮತ್ತು ಸಂಘರ್ಷಗಳಿಂದ ನೆರವು ಒದಗಿಸುವುದೇ ಕಷ್ಟವಾಗಿರುವಾಗ, ಸಂಘರ್ಷ ಮತ್ತು ಆಹಾರ ಅಸುರಕ್ಷತೆ ನಡುವಿನ ನೇರ ಸಂಬಂಧವನ್ನು ಡಾ. ಲಾರಿಯೋ ಸೂಚಿಸುತ್ತಾರೆ. ಸಂಘರ್ಷವೇ “ಹಸಿವಿನ ಚಾಲಕ, ಬಡತನದ ಚಾಲಕ” ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.
ಆದರೆ ದೃಷ್ಟಿಕೋನ ಬದಲಿಸಿ, ಜನಕೇಂದ್ರಿತ ನೋಟವನ್ನು ಅಳವಡಿಸಿಕೊಂಡರೆ, ಕೃಷಿಯೇ ಶಾಂತಿಯ ಸಾಧನವಾಗಬಹುದು. “ನಮ್ಮ ದೃಷ್ಟಿಯಲ್ಲಿ ಕೃಷಿ ಸಮುದಾಯಗಳನ್ನು ಒಂದಾಗಿಸುವ ಮಾರ್ಗ. ಅನೇಕ ಸಂದರ್ಭಗಳಲ್ಲಿ ಶಾಂತಿ ಮಧ್ಯಸ್ಥಿಕೆಗೆ ಮಾತ್ರವಲ್ಲ, ಭರವಸೆಯನ್ನು ಬೆಳೆಸುವ ಸಾಧನವಾಗಿಯೂ ಕೃಷಿ ಕೆಲಸ ಮಾಡಬಹುದು” ಎಂದು ಡಾ. ಲಾರಿಯೋ ಒತ್ತಿ ಹೇಳುತ್ತಾರೆ.
ಇದರಿಂದ ರಾಜಕೀಯ ಮಾರ್ಗಗಳನ್ನು ಕೈಬಿಡಬೇಕು ಎಂಬ ಅರ್ಥವಿಲ್ಲ. ಪೂಜ್ಯ ಜಗದ್ಗುರು ಲಿಯೋ ಅವರಂತಹ ಧ್ವನಿಗಳು ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಕಡೆಗೆ ಜಾಗತಿಕ ಗಮನ ಸೆಳೆಯಲು ಸಹಾಯ ಮಾಡುತ್ತವೆ.
ಅಮೆರಿಕಾಗೆ ಸೇರಿದ ಜಗದ್ಗುರುಗಳಿಗಿರುವ ವಿಶೇಷ ನಂಟು
ಜನವರಿ 15ರ ಬೆಳಗ್ಗೆ IFAD ಅಧ್ಯಕ್ಷರು ವ್ಯಾಟಿಕನ್ ನಲ್ಲಿ ಪೂಜ್ಯ ಜಗದ್ಗುರುಗಳನ್ನು ಭೇಟಿಯಾದರು. ಆ ಭೇಟಿಯಲ್ಲಿ ಬದುಕು ರೂಪಾಂತರಿಸುವ ಕಾರ್ಯ ಮತ್ತು ಜನರಲ್ಲಿ ಭರವಸೆಯನ್ನು ಬೆಳೆಸುವ ಮಹತ್ವದ ಬಗ್ಗೆ ಚರ್ಚೆಯಾಯಿತು ಎಂದು ಡಾ. ಲಾರಿಯೋ ಹೇಳುತ್ತಾರೆ. “ಭರವಸೆಯ ಅಂಶ ಅತ್ಯಂತ ಮುಖ್ಯ, ಏಕೆಂದರೆ ಅದು ನಮ್ಮೆಲ್ಲರಿಗೂ ಮುಂದಿನ ದಿನಗಳತ್ತ ನೋಡುವ ಶಕ್ತಿ ನೀಡುತ್ತದೆ” ಎಂದು ಅವರು ಹೇಳಿದರು.
ಬೆಳಗಿನ ಸಭೆಯಲ್ಲಿ, ಪೂಜ್ಯ ಜಗದ್ಗುರು ಲಿಯೋ ಅವರು ಧರ್ಮಾಧ್ಯಕ್ಷರಾಗಿದ್ದ ಪೆರುವಿನ ಕೆಲವು ಸಮುದಾಯಗಳಲ್ಲಿ IFAD ಮಾಡುತ್ತಿರುವ ಕೆಲಸಗಳ ಕುರಿತು ಮಾತನಾಡಲಾಯಿತು. ಗ್ರಾಮೀಣ ಸಮುದಾಯಗಳು ಎದುರಿಸುವ ಸಂಕಷ್ಟವನ್ನು ಜಗದ್ಗುರುಗಳು ವಿಶೇಷವಾಗಿ ಗುರುತಿಸಿದರು: “ಅವರು ಅದ್ಭುತ ಆಹಾರವನ್ನು ಉತ್ಪಾದಿಸುತ್ತಿದ್ದರು, ಆದರೆ ಅದರ ಫಲವನ್ನು ಅವರು ಪಡೆಯುತ್ತಿರಲಿಲ್ಲ” ಎಂದು ಜಗದ್ಗುರುಗಳು ಹೇಳಿದುದನ್ನು ಡಾ. ಲಾರಿಯೋ ಉಲ್ಲೇಖಿಸುತ್ತಾರೆ.
ಇದೇ ವಿಷಯ, ಡಾ. ಲಾರಿಯೋ ಹೇಳುವಂತೆ, ಈ ಚರ್ಚೆಯ ಕೇಂದ್ರಬಿಂದು.
ಆದರೆ IFADನ ನೆಲಮಟ್ಟದ ಕಾರ್ಯಕ್ರಮಗಳು ಮತ್ತು ಮುಂದಾಳತ್ವಗಳ ಮೂಲಕ, ಈ ಸಮುದಾಯಗಳಿಗೆ ಅಗತ್ಯವಾದ ಸಾಧನಗಳು, ಪ್ರವೇಶ ಮತ್ತು ಸಂಪನ್ಮೂಲಗಳು ಲಭ್ಯವಾಗಬೇಕು; ಅವರು ತಮ್ಮನ್ನು ಮಾತ್ರವಲ್ಲ, ಅವರ ಮೇಲೆ ಅವಲಂಬಿತವಾಗಿರುವ ಸಮುದಾಯಗಳನ್ನೂ ಪೋಷಿಸಲು ಶಕ್ತರಾಗಬೇಕು ಎಂಬುದೇ ಆಶಯ.
ನಮ್ಮ ಲೇಖನವನ್ನು ಓದಿದಕ್ಕಾಗಿ ಧನ್ಯವಾದಗಳು. ದಿನನಿತ್ಯದ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ನವೀಕೃತ ಮಾಹಿತಿಯನ್ನು ಪಡೆಯಬಹುದು.
ಇಲ್ಲಿ ಕ್ಲಿಕ್ಕಿಸಿ https://www.vaticannews.va/en/newsletter-registration.html