PALESTINIAN-ISRAEL-CONFLICT-GAZA PALESTINIAN-ISRAEL-CONFLICT-GAZA  (AFP or licensors)

ಯುದ್ಧವಿರಾಮದ ಬಳಿಕವೂ ಗಾಜಾದಲ್ಲಿ ಕನಿಷ್ಠ 100 ಮಕ್ಕಳು ಹತರಾಗಿದ್ದಾರೆ: ವಿಶ್ವ ಸಂಸ್ಥೆಯ ಮಕ್ಕಳ ನಿಧಿ

ಅಕ್ಟೋಬರ್ ಆರಂಭದಲ್ಲಿ ಜಾರಿಗೆ ಬಂದ ಯುದ್ಧವಿರಾಮದ ನಂತರವೂ ಗಾಜಾದಲ್ಲಿ ಕನಿಷ್ಠ 100 ಮಕ್ಕಳು ಹತರಾಗಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿ (UNICEF) ಗಂಭೀರ ಆತಂಕ ವ್ಯಕ್ತಪಡಿಸಿದೆ. ದೆಬೋರಾ ಕ್ಯಾಸ್ಟೆಲ್ಲಾನೊ ಲುಬೊವ್

ಅಕ್ಟೋಬರ್ ಆರಂಭದಲ್ಲಿ ಜಾರಿಗೆ ಬಂದ ಯುದ್ಧವಿರಾಮದ ನಂತರವೂ ಗಾಜಾ ಪ್ರದೇಶದಲ್ಲಿ ಕನಿಷ್ಠ 100 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿಯ ವಕ್ತಾರ ಜೇಮ್ಸ್ ಎಲ್ಡರ್ ಅವರು ಮಂಗಳವಾರ ಸ್ವಿಟ್ಜರ್‌ಲ್ಯಾಂಡ್‌ನ ಜಿನೇವಾದಲ್ಲಿ ತಿಳಿಸಿದ್ದಾರೆ.

ಈ ಅಂಕಿ-ಅಂಶವು ಸರಾಸರಿ ದಿನಕ್ಕೆ ಒಬ್ಬ ಮಗು ಸಾವನ್ನಪ್ಪುತ್ತಿರುವುದಕ್ಕೆ ಸಮಾನವಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ಅವಧಿಯಲ್ಲಿ ನೂರಾರು ಮಕ್ಕಳು ಗಂಭೀರ ಗಾಯಗಳಿಗೆ ಒಳಗಾಗಿದ್ದಾರೆ.

ಯುದ್ಧವಿರಾಮದ ಬಳಿಕ ಬಾಂಬ್ ದಾಳಿ ಹಾಗೂ ಗುಂಡಿನ ಸದ್ದುಗಳಲ್ಲಿ ಕೆಲಮಟ್ಟಿನ ಇಳಿಕೆ ಕಂಡುಬಂದಿದ್ದರೂ, ಗಾಜಾ ಪಟ್ಟಿಯಲ್ಲಿ ಕನಿಷ್ಠ 60 ಗಂಡು ಮಕ್ಕಳು ಹಾಗೂ 40 ಹೆಣ್ಣು ಮಕ್ಕಳು ಹತರಾಗಿರುವುದು UNICEF ದಾಖಲೆಗಳಲ್ಲಿ ಸ್ಪಷ್ಟವಾಗಿದೆ ಎಂದು ಎಲ್ಡರ್ ತಿಳಿಸಿದ್ದಾರೆ.

ಈ ಅಂಕಿಅಂಶಗಳು ಸಮರ್ಪಕ ಮಾಹಿತಿ ಲಭ್ಯವಿದ್ದ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿದ್ದು, ವಾಸ್ತವಿಕ ಸಂಖ್ಯೆ ಇನ್ನೂ ಹೆಚ್ಚಿನದಾಗಿರಬಹುದೆಂದು ಅವರು ಎಚ್ಚರಿಸಿದ್ದಾರೆ.

ಅಗತ್ಯ ಸರಕುಗಳ ಕೊರತೆ: ಮಾನವೀಯ ನೆರವಿಗೆ ತೀವ್ರ ಅಡಚಣೆ

ಈ ನಿರಂತರ ದಾಳಿಗಳ ನಡುವೆಯೇ ಗಾಜಾಗೆ ಅಗತ್ಯ ವಸ್ತುಗಳ ಪ್ರವೇಶಕ್ಕೆ ಗಂಭೀರ ನಿರ್ಬಂಧಗಳು ಮುಂದುವರಿದಿರುವುದರಿಂದ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ ಎಂದು ಯುನಿಸೆಫ್ ಎಚ್ಚರಿಸಿದೆ.

ವೈದ್ಯಕೀಯ ಸಾಮಗ್ರಿಗಳು, ಅಡುಗೆ ಅನಿಲ, ಇಂಧನ, ಹಾಗೂ ನೀರು–ಸ್ವಚ್ಛತಾ ವ್ಯವಸ್ಥೆಗಳನ್ನು ನಿರ್ವಹಿಸಲು ಅಗತ್ಯವಿರುವ ಉಪಕರಣಗಳ ಕೊರತೆ ಗಾಜಾದಾದ್ಯಂತ ತೀವ್ರವಾಗಿ ಕಂಡುಬರುತ್ತಿದೆ ಎಂದು ಎಲ್ಡರ್ ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ, ಹಿಂಸಾಚಾರದ ಪ್ರಮಾಣದಲ್ಲಿ ಕಂಡುಬಂದಿರುವ ಇಳಿಕೆಯನ್ನು ನಿಜವಾದ ಭದ್ರತೆಯಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿ ಒತ್ತಾಯಿಸಿದೆ.

ಅದಕ್ಕಾಗಿ, “ಮಾನವೀಯ ನೆರವಿಗೆ ಸಂಪೂರ್ಣ ಪ್ರವೇಶವನ್ನು ತೆರೆಯಬೇಕು, ವೈದ್ಯಕೀಯ ಸ್ಥಳಾಂತರಗಳನ್ನು ಮಹತ್ತರವಾಗಿ ಹೆಚ್ಚಿಸಬೇಕು ಮತ್ತು ಗಾಜಾದಲ್ಲಿ ಮಕ್ಕಳ ಹತ್ಯೆ ನಿಜವಾಗಿಯೂ ಅಂತ್ಯಗೊಳ್ಳುವ ತಿರುವಿನ ಕ್ಷಣವಾಗಿ ಇದನ್ನು ರೂಪಿಸಬೇಕು” ಎಂದು ಸಂಸ್ಥೆ ಆಗ್ರಹಿಸಿದೆ.

ಯುದ್ಧವಿರಾಮದಿಂದ ಸೀಮಿತವಾದರೂ ಕೆಲವು ಮುನ್ನಡೆ

ಈ ಕಠಿಣ ಪರಿಸ್ಥಿತಿಗಳ ನಡುವೆಯೂ, ಯುದ್ಧವಿರಾಮವು ಕೆಲ ಕ್ಷೇತ್ರಗಳಲ್ಲಿ ಸೀಮಿತ ಆದರೆ ಸ್ಪಷ್ಟವಾದ ಪ್ರಗತಿಗೆ ಅವಕಾಶ ಮಾಡಿಕೊಟ್ಟಿದೆ ಎಂದು UNICEF ತಿಳಿಸಿದೆ.

ಆರೋಗ್ಯ ಕ್ಷೇತ್ರದಲ್ಲಿ, ಯುನಿಸೆಫ್ ಹಾಗೂ ಅದರ ಸಹಭಾಗಿಗಳು ಮೂಲಭೂತ ಆರೋಗ್ಯ ಸೇವೆಗಳನ್ನು ವಿಸ್ತರಿಸಿದ್ದು, ವಿಶೇಷವಾಗಿ ಉತ್ತರ ಗಾಜಾದಲ್ಲಿ ಲಸಿಕಾಕರಣ ಕಾರ್ಯಗಳಿಗೆ ವೇಗ ನೀಡಲಾಗಿದೆ. ಈ ಪ್ರದೇಶವು ಯುದ್ಧದ ಅವಧಿಯಲ್ಲಿ ಸಂಪೂರ್ಣವಾಗಿ ನೆರವಿನಿಂದ ವಂಚಿತವಾಗಿತ್ತು.

ಅದೇ ರೀತಿ, ಸ್ವಚ್ಛತಾ ಕಾರ್ಯಗಳನ್ನೂ ಹೆಚ್ಚಿಸಲಾಗಿದ್ದು, ತಿಂಗಳಿಗೆ ಸುಮಾರು 1,000 ಟನ್ ಘನ ತ್ಯಾಜ್ಯವನ್ನು ತೆರವುಗೊಳಿಸಲು ಲಭ್ಯವಿರುವ ಎಲ್ಲ ಮಾರ್ಗಗಳನ್ನು ಬಳಸಲಾಗುತ್ತಿದೆ.

ಅಪಾರ ನೋವಿನ ಎದುರು ಸಣ್ಣ ಸಾಧನೆಗಳು

ಇತ್ತೀಚಿನ ಚಳಿ ಹಾಗೂ ಮಳೆಯ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು, UNICEF ಸುಮಾರು ಒಂದು ಮಿಲಿಯನ್ ಉಷ್ಣ ಕಂಬಳಿಗಳನ್ನು ಹಾಗೂ ಲಕ್ಷಾಂತರ ಮಕ್ಕಳಿಗಾಗಿ ಚಳಿಗಾಲದ ಬಟ್ಟೆ ಕಿಟ್‌ಗಳನ್ನು ವಿತರಿಸಿದೆ. ಜೊತೆಗೆ ನೀರು ಪೈಪ್‌ಲೈನ್‌ಗಳು, ಪಂಪಿಂಗ್ ಕೇಂದ್ರಗಳು ಹಾಗೂ ಮಲಿನಜಲ ಜಾಲದ ದುರಸ್ತಿಗೂ ನೆರವು ನೀಡಲಾಗಿದೆ.

ಪೋಷಣಾ ಕ್ಷೇತ್ರದಲ್ಲಿ, ಗಾಜಾದಾದ್ಯಂತ 70ಕ್ಕೂ ಹೆಚ್ಚು ಹೊಸ ಪೋಷಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇದರಿಂದ ಹಸಿವಿನ ಮಹಾಮಾರಿಯನ್ನು ತಪ್ಪಿಸಲು ಸಾಧ್ಯವಾಗಿದೆ.

ಆದರೆ ದೀರ್ಘಕಾಲದ ಸಂಘರ್ಷದಿಂದ ಗಾಜಾದ ಮಕ್ಕಳ ಜೀವನ ಅಕಲ್ಪನೀಯ ಕಷ್ಟಗಳಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ, ಈ ಸಾಧನೆಗಳು ಅತ್ಯಂತ ಸೀಮಿತವಾಗಿವೆ ಎಂದು ಎಲ್ಡರ್ ಸ್ಪಷ್ಟಪಡಿಸಿದ್ದಾರೆ.

ಗಾಜಾದ ಮಕ್ಕಳು ಇನ್ನೂ ಭಯದ ವಾತಾವರಣದಲ್ಲೇ ಬದುಕುತ್ತಿದ್ದು, ಅವರ ಮನೋವೈಜ್ಞಾನಿಕ ಗಾಯಗಳಿಗೆ ಸೂಕ್ತ ಚಿಕಿತ್ಸೆಯು ಬಹುತೇಕ ಲಭ್ಯವಿಲ್ಲ ಎಂಬುದನ್ನು ಅವರು ವಿಷಾದದಿಂದ ಹೇಳಿದರು.

“ಬಾಂಬ್ ದಾಳಿಯನ್ನು ನಿಧಾನಗೊಳಿಸುವ ಯುದ್ಧವಿರಾಮವು ಪ್ರಗತಿಯ ಸಂಕೇತವಾದರೂ,ಆದರೆ ಅದು ಮಕ್ಕಳನ್ನು ಇನ್ನೂ ಸಮಾಧಿ ಮಾಡುತ್ತಲೇ ಇದ್ದರೆ, ಆ ಪ್ರಗತಿ ಸಾಕಾಗುವುದಿಲ್ಲ” ಎಂದು ಎಲ್ಡರ್ ಹೇಳಿದರು.

13 ಜನವರಿ 2026, 17:02