FILES-LIBYA-ITALY-FRANCE-SUDAN-MIGRANTS-EU-NGO FILES-LIBYA-ITALY-FRANCE-SUDAN-MIGRANTS-EU-NGO  (AFP or licensors)

ಮಧ್ಯ ಮೆಡಿಟರೇನಿಯನ್‌ನಲ್ಲಿ ಭೀಕರ ವಲಸಿಗರ ದುರಂತ: ಸುಮಾರು 1,000 ಮಂದಿ ನಾಪತ್ತೆ ಅಥವಾ ಮೃತರೆಂಬ ಭೀತಿ

ಭೀಕರ ಚಂಡಮಾರುತದ ಮಧ್ಯದಲ್ಲೇ ಹಲವು ದೋಣಿಗಳು ಸಮುದ್ರಕ್ಕೆ ಹೊರಟ ಹಿನ್ನೆಲೆಯಲ್ಲಿ, ಅನೇಕಜನರು ಕಾಣೆಯಾಗಿದ್ದಾರೆ ಎಂದು ಇಟಲಿಯ ಸಹಾಯ ಸಂಸ್ಥೆಯೊಂದು ತಿಳಿಸಿದೆ.

ಲೇಖಕರು: ಪಿಯೆರ್ ಫ್ರಾನ್ಸೆಸ್ಕೊ ಲೊರೆಟೊ

ಹ್ಯಾರಿ ಚಂಡಮಾರುತದಿಂದ ಉಂಟಾದ ತೀವ್ರ ಹವಾಮಾನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಧ್ಯ ಮೆಡಿಟರೇನಿಯನ್ ಸಮುದ್ರದಲ್ಲಿ ಸುಮಾರು 1,000 ವಲಸಿಗರು ಮೃತರಾಗಿರಬಹುದು ಅಥವಾ ನಾಪತ್ತೆಯಾಗಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಸೋಮವಾರ, ಇಟಾಲಿಯ ಸ್ವಯಂಸೇವಾ ಸಂಸ್ಥೆ ಮೆಡಿಟರೇನಿಯಾ ಸೇವಿಂಗ್ ಹ್ಯೂಮನ್ಸ್ (Mediterranea Saving Humans) ಬದುಕುಳಿದವರ ಹೇಳಿಕೆಗಳು ಹಾಗೂ ಅಧಿಕೃತ ಎಚ್ಚರಿಕೆಗಳನ್ನು ಉಲ್ಲೇಖಿಸಿ ಹೇಳಿಕೆ ಬಿಡುಗಡೆ ಮಾಡಿತು. ಪ್ರಬಲ ಚಂಡಮಾರುತ ಪ್ರದೇಶವನ್ನು ಅಪ್ಪಳಿಸಿದ ವೇಳೆ ಹಲವು ದೋಣಿಗಳು ಮುಳುಗಿದವು ಎಂದು ಸಂಸ್ಥೆ ತಿಳಿಸಿದೆ. ಸಂಸ್ಥೆಯ ಅಧ್ಯಕ್ಷೆ ಲೌರಾ ಮಾರ್ಮೊರಾಲೆ, ತೀವ್ರ ಹವಾಮಾನ ಪರಿಸ್ಥಿತಿಯ ನಡುವೆ ಇಟಾಲಿ ಹಾಗೂ ಮಾಲ್ಟಾ ಅಧಿಕಾರಿಗಳು ಹುಡುಕಾಟ ಮತ್ತು ರಕ್ಷಣಾ ಕಾರ್ಯಗಳಿಗೆ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ತೀವ್ರವಾಗಿ ಖಂಡಿಸಿದ್ದಾರೆ.

ಲಿಬಿಯಾದ ವಲಸಿಗ ಜಾಲ (Refugees in Libya) ಮತ್ತು ಟ್ಯುನೀಷಿಯಾದ ವಲಸಿಗ ಜಾಲಗಳು (Refugees in Tunisia) ಲಿಬಿಯಾ ಹಾಗೂ ಟ್ಯುನೀಷಿಯಾದ ವಲಸಿಗ ಸಮುದಾಯಗಳಿಂದ ಸಂಗ್ರಹಿಸಿದ ಹೊಸ ಸಾಕ್ಷ್ಯಗಳ ಆಧಾರದ ಮೇಲೆ ಸಂಸ್ಥೆ ಈ ಅಂದಾಜು ಮಾಡಿದೆ.

ಈ ಸಾಕ್ಷ್ಯಗಳು ಯುರೋಪಿಯನ್ ಅಧಿಕಾರಿಗಳು ಇದುವರೆಗೆ ಒಪ್ಪಿಕೊಂಡಿರುವುದಕ್ಕಿಂತಲೂ ಪರಿಸ್ಥಿತಿ ಬಹಳ ಗಂಭೀರವಾಗಿತ್ತೆಂದು ಸೂಚಿಸುತ್ತವೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಚಂಡಮಾರುತ ಪ್ರದೇಶವನ್ನು ಅಪ್ಪಳಿಸುತ್ತಿದ್ದ ವೇಳೆ ಟ್ಯುನೀಷಿಯಾದ ಸ್ಫ್ಯಾಕ್ಸ್ (Sfax) ನಗರದಿಂದ ಬಹಳಷ್ಟು ದೋಣಿಗಳು ಸಮುದ್ರಕ್ಕೆ ಹೊರಟಿದ್ದವು; ಅವುಗಳಲ್ಲಿ ಅನೇಕವು ತಮ್ಮ ಗಮ್ಯಸ್ಥಾನ ತಲುಪಲು ಅಥವಾ ಹಿಂದಿರುಗಲು ವಿಫಲವಾಗಿವೆ.

ಹ್ಯಾರಿ ಚಂಡಮಾರುತ  ಮಧ್ಯ ಮೆಡಿಟರೇನಿಯನ್‌ನಲ್ಲಿ ಅಬ್ಬರಿಸುತ್ತಿದ್ದಾಗ ದೋಣಿಗಳು ಪ್ರಯಾಣ ಆರಂಭಿಸಿದ್ದವು. ಆ ಸಮಯದಲ್ಲಿ ಅಲೆಗಳು 7 ಮೀಟರ್‌ಗಿಂತ ಹೆಚ್ಚು ಎತ್ತರಕ್ಕೆ ಏರಿದ್ದವು ಮತ್ತು ಗಾಳಿಯ ವೇಗ ಗಂಟೆಗೆ 54 (knots)ನಾಟ್ಸ್‌ಗಿಂತಲೂ ಹೆಚ್ಚಿತ್ತು.

ರೋಮ್‌ನ ಸಮುದ್ರ ರಕ್ಷಣಾ ಸಮನ್ವಯ ಕೇಂದ್ರ ಕಳುಹಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಜನವರಿ 24ರ ವೇಳೆಗೆ ಕನಿಷ್ಠ 380 ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಆ ಬಳಿಕ ಯುರೋಪಿಯನ್ ಸಮುದ್ರಾಧಿಕಾರಿಗಳು ಯಾವುದೇ ಹೊಸ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ ಎಂದು ಸ್ವಯಂಸೇವಾ ಸಂಸ್ಥೆ ಗಮನಸೆಳೆದಿದೆ.

ಇನ್ನೂ ಕರಾಳ ಚಿತ್ರ

ಇಟಲಿಯ ಸ್ವಯಂಸೇವಾ ಸಂಸ್ಥೆ ಮೆಡಿಟರೇನಿಯಾ ಸೇವಿಂಗ್ ಹ್ಯೂಮನ್ಸ್ (Mediterranea Saving Humans) ಕೂಡ, ಪ್ರತ್ಯಕ್ಷ ಸಾಕ್ಷ್ಯಗಳು ಹಾಗೂ ನಡೆಯುತ್ತಿರುವ ತನಿಖೆಗಳು ಬಹಿರಂಗಪಡಿಸಿರುವ ವಾಸ್ತವಕ್ಕೆ ಹೋಲಿಸಿದರೆ, ಅಧಿಕೃತವಾಗಿ ನೀಡಿರುವ ಅಂಕಿ-ಅಂಶಗಳು ಪರಿಸ್ಥಿತಿಯ ಗಂಭೀರತೆಯನ್ನು ಬಹಳ ಕಡಿಮೆ ತೋರಿಸುತ್ತವೆ ಎಂದು ಹೇಳಿದೆ.

ಸಂಪೂರ್ಣ ದೋಣಿಗಳೇ ಗುರುತುಸಿಗದಂತೆ ಕಣ್ಮರೆಯಾಗಿರುವುದರಿಂದ ಕುಟುಂಬಗಳು ತಮ್ಮ ಆತ್ಮೀಯರನ್ನು ಹುಡುಕುತ್ತಾ ತೀವ್ರ ಆತಂಕದಲ್ಲಿ ಇದ್ದಾರೆ. ವರದಿಗಳ ಪ್ರಕಾರ, ಒಬ್ಬ ಕಳ್ಳಸಾಗಣೆದಾರನು ತಲಾ 50–55 ಪ್ರಯಾಣಿಕರನ್ನು ತುಂಬಿಕೊಂಡ ಐದು ದೋಣಿ ಗುಂಪುಗಳನ್ನು (convoys) ಸಮುದ್ರಕ್ಕೆ ಕಳುಹಿಸಿದ್ದಾನೆ.

ಸಮುದಾಯ ಮೂಲಗಳು ಹೇಳುವಂತೆ, ಸ್ಫ್ಯಾಕ್ಸ್ (Sfax) ದಕ್ಷಿಣದ ವಿವಿಧ ಸ್ಥಳಗಳಿಂದ ಅನೇಕರು ಹೊರಟಿದ್ದರು; ಅವರಲ್ಲಿ ಬಹುಪಾಲು ಜನ ಈಗ ನಾಪತ್ತೆಯಾಗಿದ್ದಾರೆ. ಜನವರಿ 22ರಂದು ಕೇವಲ ಒಂದು ದೋಣಿಯಷ್ಟೇ ಲ್ಯಾಂಪೆಡುಸಾ (Lampedusa) ತಲುಪಿದೆ ಎಂದು ವರದಿಯಾಗಿದೆ — ಅದರಲ್ಲಿ ಒಬ್ಬ ಮೃತದೇಹ ಕಂಡುಬಂದಿದ್ದು, 1 ವರ್ಷದ ಅವಳಿ-ಜವಳಿ ಮಕ್ಕಳು ಸಮುದ್ರದಲ್ಲಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ.

ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಮಾಲ್ಟಾ ಅಧಿಕಾರಿಗಳು ಸಮುದ್ರ ತೀರದಲ್ಲಿ ಗಣನೀಯ ಸಂಖ್ಯೆಯ ಮೃತದೇಹಗಳನ್ನು ಪತ್ತೆಹಚ್ಚಿರುವುದು ಇನ್ನಷ್ಟು ಆತಂಕ ಮೂಡಿಸಿದೆ. ಮಾನವೀಯ ಸಹಾಯ ಸಂಸ್ಥೆಗಳು ಈ ಸ್ಥಿತಿಯನ್ನು “ಅಭೂತಪೂರ್ವ ದುರಂತ” ಎಂದು ವರ್ಣಿಸಿವೆ ಮತ್ತು ಸತ್ಯ ಹಾಗೂ ಹೊಣೆಗಾರಿಕೆಗೆ ಆಗ್ರಹಿಸಿವೆ. ಮುಂದಿನ ಜೀವಹಾನಿಯನ್ನು ತಡೆಯಲು, ಹುಡುಕಾಟ–ರಕ್ಷಣಾ  ಕಾರ್ಯಾಚರಣೆಗಳನ್ನು ತಕ್ಷಣ ಸುಧಾರಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಿವೆ.

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

 

03 ಫೆಬ್ರವರಿ 2026, 01:10