TOPSHOT-ETHIOPIA-CLIMATE-AGRICULTURE-DROUGHT TOPSHOT-ETHIOPIA-CLIMATE-AGRICULTURE-DROUGHT  (AFP or licensors)

ದಕ್ಷಿಣ ಸುಡಾನ್: ಸುಮಾರು ಅರ್ಧ ಮಿಲಿಯನ್ ಮಕ್ಕಳು ಪೌಷ್ಟಿಕಾಂಶ ಕೊರತೆಯ ಅಪಾಯ

ಹಿಂಸಾಚಾರ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ (UNICEF) ವರದಿ ಪ್ರಕಾರ ದಕ್ಷಿಣ ಸುಡಾನ್‌ನಲ್ಲಿ 4,50,000ಕ್ಕೂ ಹೆಚ್ಚು ಮಕ್ಕಳು ತೀವ್ರ ಪೌಷ್ಟಿಕಾಂಶ ಕೊರತೆಯ ಅಪಾಯದಲ್ಲಿದ್ದಾರೆ. ದೇಶದಲ್ಲಿನ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ ಪ್ರತಿನಿಧಿಗಳು, “ಅತ್ಯಂತ ದುರ್ಬಲ ಹಾಗೂ ಸ್ಥಳಾಂತರಿತ ಸಮುದಾಯಗಳನ್ನು ತಲುಪಲು ಮಾನವೀಯ ನೆರವು ಮತ್ತು ಸಹಾಯ ಕಾರ್ಯಕರ್ತರಿಗೆ ತ್ವರಿತ, ನಿರ್ಬಂಧರಹಿತ ಮತ್ತು ಸುರಕ್ಷಿತ ಪ್ರವೇಶ” ನೀಡುವಂತೆ ಮನವಿ ಮಾಡಿದ್ದಾರೆ.

ಲೇಖಕರು: ಕೀಲ್ ಗಸ್ಸಿ

ದಕ್ಷಿಣ ಸುಡಾನ್‌ನಲ್ಲಿ ಮುಂದುವರಿದಿರುವ ಹಿಂಸಾಚಾರದ ಪರಿಣಾಮವಾಗಿ 4,50,000ಕ್ಕೂ ಹೆಚ್ಚು ಮಕ್ಕಳು ಪ್ರಸ್ತುತ ತೀವ್ರ ಪೌಷ್ಟಿಕಾಂಶ ಕೊರತೆಯ  ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ (UNICEF) ವರದಿ ಮಾಡಿದೆ. ಆಂತರಿಕ ಸಂಘರ್ಷವು ಸಾಮೂಹಿಕ ಸ್ಥಳಾಂತರಕ್ಕೆ ಕಾರಣವಾಗಿದ್ದು, ಜೊಂಗ್ಲೈ ರಾಜ್ಯದಲ್ಲಿ ಅಗತ್ಯ ಆರೋಗ್ಯ ಹಾಗೂ ಪೌಷ್ಟಿಕ ಸೇವೆಗಳು ಸ್ಥಗಿತಗೊಂಡಿವೆ.

ಮಕ್ಕಳಿಗೆ ಅಪಾಯಕರ ಪರಿಸ್ಥಿತಿ

ವರದಿಗಳ ಪ್ರಕಾರ, 2026ರ ಆರಂಭದಿಂದಲೇ ಜೊಂಗ್ಲೈ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದಿಂದ ಸುಮಾರು 2,50,000 ಜನರು ಸ್ಥಳಾಂತರಗೊಂಡಿದ್ದಾರೆ—ವಿಶೇಷವಾಗಿ ರಾಜ್ಯದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ. ದೇಶದಲ್ಲಿನ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ ಪ್ರತಿನಿಧಿ ನೋಲಾ ಸ್ಕಿನ್ನರ್ ಅವರು ಹಿಂಸಾಚಾರದಿಂದ ನೇರವಾಗಿ ಪರಿಣಾಮಕ್ಕೊಳಗಾಗುತ್ತಿರುವ ಮಹಿಳೆಯರು ಮತ್ತು ಮಕ್ಕಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು.

“ಈ ಪ್ರದೇಶಗಳಲ್ಲಿ ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ಅತ್ಯಂತ ಹೆಚ್ಚಾಗಿದೆ ಎಂಬುದು ನಮಗೆ ತಿಳಿದಿದೆ. ಚಿಕಿತ್ಸೆ ಪಡೆಯದ ಅಪೌಷ್ಟಿಕ ಮಕ್ಕಳು ಸಾವಿನ ಅಪಾಯಕ್ಕೆ 12 ಪಟ್ಟು ಹೆಚ್ಚು ಒಳಗಾಗುತ್ತಾರೆ,” ಎಂದು ಅವರು ಹೇಳಿದರು. ಸಂಘರ್ಷದಲ್ಲಿರುವ ಎಲ್ಲ ಪಕ್ಷಗಳಿಗೆ ತಕ್ಷಣದ ಶಾಂತಿಗೆ ಕರೆ ನೀಡಿ, ಮಾನವೀಯ ನೆರವು ಹಾಗೂ ಸಹಾಯ ಕಾರ್ಯಕರ್ತರು ಅತಿಹೆಚ್ಚು ಅಪಾಯದಲ್ಲಿರುವ ಸ್ಥಳಾಂತರಿತ ಸಮುದಾಯಗಳನ್ನು ತಲುಪಲು ತ್ವರಿತ, ನಿರ್ಬಂಧರಹಿತ ಮತ್ತು ಸುರಕ್ಷಿತ ಪ್ರವೇಶ ಕಲ್ಪಿಸುವಂತೆ ಅವರು  ತುರ್ತು ಮನವಿ ಮಾಡಿದರು.

ಅಂಚಿನಲ್ಲಿರುವ ವ್ಯವಸ್ಥೆ

ಇದಲ್ಲದೆ, ಸಂಘರ್ಷವು ತುರ್ತು ಮಾನವೀಯ ನೆರವು ತಲುಪುವುದನ್ನು ತೀವ್ರವಾಗಿ ನಿರ್ಬಂಧಿಸಿದೆ. ನದಿ, ವಾಯು ಮತ್ತು ರಸ್ತೆ ಮಾರ್ಗಗಳಲ್ಲಿ ಸಂಚಾರದ ಮೇಲೆ ವಿಧಿಸಲಾದ ನಿರ್ಬಂಧಗಳಿಂದ ಮಾನವೀಯ ಸಂಸ್ಥೆಗಳು ಅತಿಸಂಕಟದಲ್ಲಿರುವ ಸಮುದಾಯಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಜೊಂಗ್ಲೈ ರಾಜ್ಯದ ಆರು ಕೌಂಟಿಗಳಲ್ಲಿ ಈಗಾಗಲೇ ಆಹಾರ ಸರಬರಾಜು ಸಂಪೂರ್ಣವಾಗಿ ಮುಗಿದಿದೆ ಅಥವಾ ಮುಗಿಯುವ ಹಂತದಲ್ಲಿದ. ಇದು ಅಲ್ಲಿ ತೀವ್ರ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಸಾವಿರಾರು ಮಕ್ಕಳಿಗೆ ಅತ್ಯಂತ ಗಂಭೀರ ಸಮಸ್ಯೆಯಾಗಿದೆ.

ದೇಶಾದ್ಯಂತ ಸುಮಾರು 17 ಆರೋಗ್ಯ ಕೇಂದ್ರಗಳು ಮುಚ್ಚಲ್ಪಟ್ಟಿವೆ ಎಂದು ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ ವರದಿ ಮಾಡಿದ್ದು, ಇದರ ಪರಿಣಾಮವಾಗಿ ಸಂಬಂಧಿತ ಪೌಷ್ಟಿಕ ಸೇವೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಆರೋಗ್ಯ ಹಾಗೂ ಪೌಷ್ಟಿಕ ಸರಬರಾಜುಗಳ ಲೂಟಿಯ 10 ಪ್ರಕರಣಗಳು ದಾಖಲಾಗಿವೆ. ಇದರ ಅರ್ಧದಷ್ಟು ಪ್ರಕರಣಗಳು ಜೊಂಗ್ಲೈ ರಾಜ್ಯದಲ್ಲೇ ನಡೆದಿವೆ.

ಅತ್ಯಂತ ಅಗತ್ಯವಿರುವ ಪ್ರದೇಶಗಳಿಗೆ ತಲುಪುವಲ್ಲಿ ಕಷ್ಟಗಳಿದ್ದರೂ, ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ ಪರಿಸ್ಥಿತಿಗೆ ತುರ್ತು ಪ್ರತಿಕ್ರಿಯೆ ನೀಡುತ್ತಿದೆ. ಜೊಂಗ್ಲೈ ರಾಜ್ಯದ ಡುಕ್ ಕೌಂಟಿಗೆ ಕಾಲರಾ ಸ್ಫೋಟದ ಅಪಾಯವಿರುವ ಹಿನ್ನೆಲೆಯಲ್ಲಿ ನೀರು ಶುದ್ಧೀಕರಣ ಉಪಕರಣಗಳು, ಬಕೆಟ್‌ಗಳು ಹಾಗೂ ಸಾಬೂನುಗಳನ್ನು ಕಳುಹಿಸಲಾಗುತ್ತಿದೆ, 

ಜೊಂಗ್ಲೈ ರಾಜ್ಯದ ಅಕೋಬೋ ಪಟ್ಟಣಕ್ಕೂ ಮಲೇರಿಯಾ ಚಿಕಿತ್ಸಾ ಔಷಧಿಗಳು, ತೀವ್ರ ಅಪೌಷ್ಟಿಕ ಮಕ್ಕಳಿಗಾಗಿ ವಿಶೇಷ ಆಹಾರ ಹಾಗೂ 10,000ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಬಲ್ಲ ತುರ್ತು ಆರೋಗ್ಯ ಕಿಟ್‌ಗಳನ್ನು ಒದಗಿಸಲಾಗಿದೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

03 ಫೆಬ್ರವರಿ 2026, 01:14