TOPSHOT-SPAIN-CANARY-ISLANDS-MIGRANTS TOPSHOT-SPAIN-CANARY-ISLANDS-MIGRANTS  (AFP or licensors)

‘ಸ್ಪೇನ್‌ನಲ್ಲಿ ವಲಸಿಗರ ಕಾನೂನುಬದ್ಧ ನೋಂದಣಿ: ಪ್ರತಿಯೊಬ್ಬ ವ್ಯಕ್ತಿಗೂ ತಾನೇ ಒಂದು ಗುರಿ’

ಸ್ಪೇನ್ ಸರ್ಕಾರ ದಾಖಲೆರಹಿತ ಲಕ್ಷಾಂತರ ವಲಸಿಗರಿಗೆ ಕಾನೂನುಬದ್ಧ ವಾಸದ ಹಕ್ಕು ನೀಡುವ ಇತ್ತೀಚಿನ ನಿರ್ಧಾರಕ್ಕೆ ಸಂಬಂಧಿಸಿ ಜೆಸುಯಿಟ್ ಶರಣಾರ್ಥಿ ಸೇವೆಯ ಅಂತಾರಾಷ್ಟ್ರೀಯ ವಕಾಲತ್ತು ಸಲಹೆಗಾರರಾದ ಅಮಾಯಾ ವಾಲ್ಕಾರ್ಸೆಲ್ ಪ್ರತಿಕ್ರಿಯಿಸಿದ್ದಾರೆ.

ಲೇಖಕರು: ಜೋಸೆಫ್ ಟಲ್ಲೊಚ್

ಕಳೆದ ತಿಂಗಳು ಸ್ಪೇನ್ ಸಚಿವ ಸಂಪುಟ ದಾಖಲೆರಹಿತ ಲಕ್ಷಾಂತರ ವಲಸಿಗರಿಗೆ ಕಾನೂನುಬದ್ಧ ವಾಸದ ಹಕ್ಕು ನೀಡುವ ಆದೇಶವನ್ನು ಅನುಮೋದಿಸಿದೆ. ಇತರ ದೇಶಗಳಲ್ಲಿ ವಲಸೆ ವಿಚಾರದಲ್ಲಿ ಬಂಧನ ಮತ್ತು ದೇಶನಿರ್ಬಂಧ ಚರ್ಚೆಗಳು ಮುಂದುವರಿಯುತ್ತಿರುವ ಸಮಯದಲ್ಲಿ, ಈ ನಿರ್ಧಾರ ಗಮನಾರ್ಹವೆಂದು ವಿಶ್ಲೇಷಿಸಲಾಗಿದೆ.

ಜೆಸುಯಿಟ್ ಶರಣಾರ್ಥಿ ಸೇವೆಯ ಅಂತಾರಾಷ್ಟ್ರೀಯ ವಕಾಲತ್ತು ಸಲಹೆಗಾರರಾದ ಅಮಾಯಾ ವಾಲ್ಕಾರ್ಸೆಲ್ ಅವರ ಪ್ರಕಾರ, ಸ್ಪೇನ್‌ನಲ್ಲಿ ಅಕ್ರಮ ವಲಸಿಗರು “ವರ್ಷಗಳ ಕಾಲ ನೆರಳಿನಲ್ಲಿ ಬದುಕುತ್ತಿದ್ದರು.” ಅಂದಾಜು 5 ಲಕ್ಷದಿಂದ 10 ಲಕ್ಷ ಮಂದಿಗೆ ಈ ನಿಯಮಿತೀಕರಣವು “ನಾಗರಿಕ ಅಸ್ತಿತ್ವದ ಮಾನ್ಯತೆ” ಹಾಗೂ “ಕಾನೂನು ಭದ್ರತೆಯತ್ತ ಒಂದು ಹೆಜ್ಜೆ” ಎಂದು ಅವರು ಹೇಳಿದ್ದಾರೆ.

ವ್ಯಾಟಿಕನ್ ಸುದ್ದಿಗೆ ಇಮೇಲ್ ಮೂಲಕ ಪ್ರತಿಕ್ರಿಯಿಸಿದ ವಾಲ್ಕಾರ್ಸೆಲ್, ಕೃಷಿ, ಆತಿಥ್ಯ, ನಿರ್ಮಾಣ ಹಾಗೂ ಗೃಹಕಾರ್ಯ ಕ್ಷೇತ್ರಗಳಲ್ಲಿ ವಲಸಿಗರು “ಅನಿವಾರ್ಯ” ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಆದರೆ ಅಧಿಕೃತ ಉದ್ಯೋಗ ಒಪ್ಪಂದಗಳು ಮತ್ತು ಭದ್ರತಾ ವ್ಯವಸ್ಥೆಗಳಿಲ್ಲದ ಕಾರಣ, ಅವರು ನಿರಂತರ ಅನಿಶ್ಚಿತತೆಯಲ್ಲೇ ಬದುಕುತ್ತಿದ್ದಾರೆ ಎಂದು ತಿಳಿಸಿದರು.

ಆರ್ಥಿಕ ಪ್ರಶ್ನೆಯಲ್ಲ; ನೈತಿಕತೆಯ ಸವಾಲು 

ವಲಸಿಗರ ಪರವಾದ ವಾದಗಳು ಸಾಮಾನ್ಯವಾಗಿ ಆರ್ಥಿಕ ದೃಷ್ಟಿಕೋನದಿಂದ ಮೂಡುತ್ತವೆ — ವೃದ್ಧಿಸುತ್ತಿರುವ ಜನಸಂಖ್ಯೆಯ ನಡುವೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಕಾರ್ಮಿಕಶಕ್ತಿ ಹಾಗೂ ಪಿಂಚಣಿ ವ್ಯವಸ್ಥೆಗೆ ವಲಸಿಗರ ಅವಶ್ಯಕತೆ ಇದೆ ಎಂಬುದು ಸಾಮಾನ್ಯ ಮಾತು.

ಆದರೆ ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೆಜ್, ಇತ್ತೀಚಿನ ಲೇಖನದಲ್ಲಿ, ವಲಸಿಗರ ಕಾನೂನುಬದ್ಧ ನೋಂದಣಿ ಮೊದಲ ಹಾಗೂ ಪ್ರಮುಖ ಕಾರಣ ನೈತಿಕತೆ ಎಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ, ಈ ವಲಸಿಗರು ಈಗಾಗಲೇ ಸ್ಪೇನ್ ಸಮಾಜದ ಭಾಗವಾಗಿದ್ದು, ಅದೇ ರೀತಿಯಲ್ಲಿ ಗೌರವಕ್ಕೆ   ಅರ್ಹರು.

ವಾರಾಂತ್ಯಗಳಲ್ಲಿ ಅವರು ಉದ್ಯಾನಗಳಲ್ಲಿ ಸಂಚರಿಸುತ್ತಾರೆ, ಹೋಟೆಲ್‌ಗಳಿಗೆ ತೆರಳುತ್ತಾರೆ, ಸ್ಥಳೀಯ ಫುಟ್‌ಬಾಲ್ ತಂಡಗಳಲ್ಲಿ ಪಾಲ್ಗೊಳ್ಳುತ್ತಾರೆ — ಆದರೆ ಇತ್ತಿಚೆಗೆ ಅವರಿಗೆ ಉನ್ನತ ಶಿಕ್ಷಣ, ತೆರಿಗೆ ಪಾವತಿ ಅಥವಾ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿಲ್ಲ ಎಂದು ಅವರು ಸೂಚಿಸಿದರು.

ಜೇಸೂಯಿಟ್ ಶರಣಾರ್ಥಿ ಸೇವೆಯ ಅಮಾಯಾ ವಾಲ್ಕಾರ್ಸೆಲ್, ಈ ವಿಚಾರವು ಕಥೋಲಿಕ ಸಾಮಾಜಿಕ ಬೋಧನೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದರು. ವಲಸಿಗರನ್ನು ಕೇವಲ ಆರ್ಥಿಕ ಸಂಪನ್ಮೂಲಗಳಾಗಿ ನೋಡುವುದು ತಪ್ಪು , ಧರ್ಮಸಭೆಯ ದೃಷ್ಟಿಯಲ್ಲಿ, “ಪ್ರತಿಯೊಬ್ಬ ಮಾನವನು ಸ್ವತಃ ಗುರಿ” — ಅವನು ಅನುಲ್ಲಂಘನೀಯ ಗೌರವ ಹೊಂದಿದವನು; ಅಲ್ಪಾವಧಿಯ ಅಗತ್ಯಗಳಿಗೆ ಬಳಸುವ ಸಾಧನ ಮಾತ್ರವಲ್ಲ.

ಮುಂದಿನ ಹೆಜ್ಜೆಗಳು

ಅಮಾಯಾ ವಾಲ್ಕಾರ್ಸೆಲ್ ಅವರ ಪ್ರಕಾರ, ವಲಸಿಗರ ಕಾನೂನುಬದ್ಧ ನೋಂದಣಿ ಮಹತ್ವದ ಹೆಜ್ಜೆಯಾದರೂ ಅದು ಅಂತಿಮ ಪರಿಹಾರವಲ್ಲ. ಈ ಕ್ರಮ ಪ್ರಾರಂಭದಲ್ಲಿ ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಜಾರಿಯಾಗಿರುವುದರಿಂದ, ನಂತರದ ಪರಿಸ್ಥಿತಿ ಬಗ್ಗೆ ಅನಿಶ್ಚಿತತೆ ಮುಂದುವರಿಯುತ್ತದೆ. ಜೊತೆಗೆ, ಇದು ಆಳವಾದ ರಚನಾತ್ಮಕ ಸುಧಾರಣೆಗಳ ಅಗತ್ಯವನ್ನು ನಿವಾರಿಸುವುದಿಲ್ಲ ಎಂದು ಅವರು ಸೂಚಿಸಿದರು.

ದೀರ್ಘಕಾಲೀನ ಏಕೀಕರಣ ನೀತಿಗಳು, ಬಲವಾದ ಕಾರ್ಮಿಕ ರಕ್ಷಣಾ ವ್ಯವಸ್ಥೆಗಳು ಹಾಗೂ ಕಾನೂನುಬದ್ಧ ವಲಸೆ ಮಾರ್ಗಗಳ ಸ್ಪಷ್ಟತೆ — ಇವು ಮುಂದಿನ ಪ್ರಮುಖ ಕ್ರಮಗಳಾಗಿವೆ ಎಂದು ವಾಲ್ಕಾರ್ಸೆಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿನೋಡಲ್ ನಾಗರಿಕ ಭಾಗವಹಿಸುವಿಕೆ

ಅಮಾಯಾ ವಾಲ್ಕಾರ್ಸೆಲ್ ಅವರ ಪ್ರಕಾರ, ಈ ನಿಯಮಿತೀಕರಣ ಕ್ರಮದ ಹಿಂದೆ ನಡೆದ ನಿರ್ಧಾರ ಪ್ರಕ್ರಿಯೆ ವಿಶಿಷ್ಟವಾಗಿತ್ತು. ವಲಸಿಗರ ನಿಯಮಿತೀಕರಣಕ್ಕಾಗಿ ಆರಂಭವಾದ ಮನವಿ 7 ಲಕ್ಷಕ್ಕೂ ಅಧಿಕ ಸಹಿಗಳನ್ನು ಸಂಗ್ರಹಿಸಿತು ಹಾಗೂ 900 ಕ್ಕೂ ಹೆಚ್ಚು ನಾಗರಿಕ ಸಂಘಟನೆಗಳ ಬೆಂಬಲವನ್ನು ಪಡೆದಿತು. ಈ ಸಂಘಟನೆಗಳಲ್ಲಿ ಕಥೋಲಿಕ ಧರ್ಮಸಭೆ ಕೂಡ ಸೇರಿತ್ತು ಎಂದು ಸ್ಪೇನ್ ಪ್ರಧಾನಮಂತ್ರಿ ಪೆಡ್ರೋ ಸಾಂಚೆಸ್ ಉಲ್ಲೇಖಿಸಿದರು.

17,000 ಕ್ಕೂ ಹೆಚ್ಚು ಸ್ವಯಂಸೇವಕರು ಮನೆ ಮನೆಗೆ ತೆರಳಿ, ವಿಶ್ವವಿದ್ಯಾಲಯಗಳು, ಸಮುದಾಯ ಕೇಂದ್ರಗಳು ಮತ್ತು ಚರ್ಚುಗಳಲ್ಲಿ ಸಂವಾದ ನಡೆಸಿ ಸಹಿಗಳನ್ನು ಸಂಗ್ರಹಿಸಿದರು. ಇದರಿಂದ ಮನವಿ ಸಂಸತ್ತಿನಲ್ಲಿ ಚರ್ಚೆಗೆ ಬರಲು ಸಾಧ್ಯವಾಯಿತು.

ಸ್ಪೇನ್ ಸಮಾಜದ ವಿವಿಧ ವಲಯಗಳ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಒಂದಾಗಿ ತಂದ ಈ ಪ್ರಕ್ರಿಯೆ, ಧರ್ಮಸಭೆಯ ಭಾಷೆಯಲ್ಲಿ ಹೇಳುವುದಾದರೆ, “ಸಿನೋಡಲ್ ನಾಗರಿಕ ಭಾಗವಹಿಸುವಿಕೆ”ಯ ರೂಪ ಪಡೆದಿದ್ದು, ವಿಭಜಿತ ಪರಿಸ್ಥಿತಿಗಳ ನಡುವೆ ಅಪೂರ್ವ ಸಾಮಾಜಿಕ ಚಳುವಳಿಯಾಗಿ ಪರಿಣಮಿಸಿದೆ ಎಂದು ವಾಲ್ಕಾರ್ಸೆಲ್ ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

19 ಫೆಬ್ರವರಿ 2026, 12:15