2026.02.03 I Cavalieri di Colombo in Polonia 2026.02.03 I Cavalieri di Colombo in Polonia 

ಉಕ್ರೇನ್: ಕೊಲಂಬಸ್ ನೈಟ್ಸ್ ಮತ್ತು ಮಾಲ್ಟಾ ಆರ್ಡರ್‌ ಸಂಘಟನೆಗಳಿಂದ ಸಂಯುಕ್ತ ಮಾನವೀಯ ನೆರವಿನ ಪ್ರಯತ್ನಗಳು

ಯುದ್ಧಪೀಡಿತ ಉಕ್ರೇನ್‌ನಲ್ಲಿ ಅಗತ್ಯದಲ್ಲಿರುವವರಿಗೆ ಮಾನವೀಯ ನೆರವನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು, ಎರಡು ಪ್ರಮುಖ ಕ್ರೈಸ್ತ ದಾನಿ ಸಂಘಟನೆಗಳಾದ ಕೊಲಂಬಸ್ ಸರದಾರರು (ಕೊಲಂಬಸ್ ನೈಟ್ಸ್) ಮತ್ತು ಮಾಲ್ಟಾ ಪಂಥ (ಮಾಲ್ಟಾ ಆರ್ಡರ್) ತಮ್ಮ ಸಂಪನ್ಮೂಲಗಳನ್ನು ಒಟ್ಟುಗೂಡಿಸಿವೆ.

ಲೇಖಕರು: ಕ್ಯಾರೋಲ್ ದರ್ಮೊರೋಸ್

ಉಕ್ರೇನ್ ಯುದ್ಧವು ಎರಡು ಪ್ರಮುಖ ಕ್ರೈಸ್ತ ದಾನಧರ್ಮ ಸಂಘಟನೆಗಳಾದ ನೈಟ್ಸ್ ಆಫ್ ಕೊಲಂಬಸ್ ಮತ್ತು ಮಾಲ್ಟಾ ಧಾರ್ಮಿಕ ಸಂಘದ ನಡುವೆ ಇನ್ನಷ್ಟು ನಿಕಟ ಸಹಕಾರಕ್ಕೆ ಕಾರಣವಾಗಿದೆ. “ಕಿಂಡರ್‌ಮೊಬಿಲ್” ಯೋಜನೆ ಹಾಗೂ ವೃತ್ತಿಪರ ಪ್ರಾಥಮಿಕ ಚಿಕಿತ್ಸೆ ತರಬೇತಿಯ ಮೂಲಕ, ಯುದ್ಧದಿಂದ ಹೆಚ್ಚು ಬಾಧಿತವಾದ ಮಕ್ಕಳಿಗೆ ಮಾನಸಿಕ ಬೆಂಬಲ ನೀಡಲಾಗುತ್ತಿದೆ; ಜೊತೆಗೆ, ವಯಸ್ಕರು ತುರ್ತು ಪರಿಸ್ಥಿತಿಗಳಲ್ಲಿ ಜೀವ ಉಳಿಸುವ ಕೌಶಲ್ಯಗಳನ್ನು ಕಲಿಯುತ್ತಿದ್ದಾರೆ.

ನೈಟ್ಸ್ ಆಫ್ ಕೊಲಂಬಸ್ ಮತ್ತು ಮಾಲ್ಟಾ ಧಾರ್ಮಿಕ ಸಂಘದ ಈ ಸಹಭಾಗಿತ್ವವು ವಾಸ್ತವ ಅಗತ್ಯಗಳಿಂದ ಮೂಡಿಬಂದಿದೆ. ಮಾಲ್ಟೀಸ್ ರಿಲೀಫ್ ಸರ್ವೀಸ್‌ನ ಯೋಜನಾ ಸಂಯೋಜಕಿ ವಾಲೆಂಟಿನಾ ಪಲಿಹೂಹಾ ಅವರ ಪ್ರಕಾರ, ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ನೈಟ್ಸ್ ಆಫ್ ಕೊಲಂಬಸ್ ಮೊದಲು ಮಾಲ್ಟಾ ಸಂಘವನ್ನು ಸಂಪರ್ಕಿಸಿತು.

“ಮಾಲ್ಟೀಸರ್ ರಿಲೀಫ್ ಸರ್ವೀಸ್‌ನ ಸ್ವಯಂಸೇವಕರು ಮಕ್ಕಳಿಗೆ ಮಾನಸಿಕ-ಭಾವನಾತ್ಮಕ ಬೆಂಬಲ ನೀಡುವಲ್ಲಿ ಬಲವಾದ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ; ಅದೇ ವೇಳೆ, ಇಂತಹ ಸಭೆಗಳನ್ನು ಆಯೋಜಿಸಲು ನೈಟ್ಸ್ ಆಫ್ ಕೊಲಂಬಸ್‌ಗೆ ಅನೇಕ ಬೇಡಿಕೆಗಳು ಬರುತ್ತಿವೆ,” ಎಂದು ಅವರು ಹೇಳಿದರು.

ಮಾಲ್ಟೀಸರ್ ಇಂಟರ್‌ನ್ಯಾಷನಲ್ ಎಂಬುದು ಸ್ವಾಯತ್ತ ಮಾಲ್ಟಾ ಧಾರ್ಮಿಕ ಸಂಘದ ಜಾಗತಿಕ ಮಾನವೀಯ ನೆರವು ಸಂಸ್ಥೆಯಾಗಿದೆ.

ಮಕ್ಕಳಿಗಾಗಿ ಸುರಕ್ಷಿತ ವಾತಾವರಣ

ಈ ಉಪಕ್ರಮದ ಪ್ರಮುಖ ಅಂಶವೇ “ಕಿಂಡರ್‌ಮೊಬಿಲ್”. ಯುದ್ಧದಿಂದ ಉಂಟಾದ ಆಘಾತದಿಂದ ಬಾಧಿತ ಮಕ್ಕಳನ್ನು ತಲುಪುವ ಚಲಿಸುವ (ಮೊಬೈಲ್) ಬೆಂಬಲ ಕಾರ್ಯಕ್ರಮ. ಮನೋವೈದ್ಯೆ ವಿಕ್ಟೋರಿಯಾ ಶುಲ್ಹಾ ಅವರು, ಈ ಸಂಕಟದ ಸಮಯದಲ್ಲಿ ಮಕ್ಕಳಿಗೆ “ಮಾನಸಿಕ–ಭಾವನಾತ್ಮಕ ನೆಮ್ಮದಿ” ನೀಡುವ ಸುರಕ್ಷಿತ ವಾತಾವರಣವನ್ನು ಒದಗಿಸುವುದೇ ಇದರ ಮುಖ್ಯ ಉದ್ದೇಶ ಎಂದು ಒತ್ತಿಹೇಳುತ್ತಾರೆ. ಅವರ ಮಾತಿನಲ್ಲಿ, ಇದರ ಕಲ್ಪನೆ ಸರಳವಾಗಿದೆ: ಮಕ್ಕಳಿಗೆ ಮತ್ತೆ ಬಾಲ್ಯವನ್ನು ಅನುಭವಿಸಲು ಅವಕಾಶ ನೀಡುವುದು.

ಈ ಯೋಜನೆ ಭಯ ಮತ್ತು ವಾಪಸಾತಿ ಮನೋಭಾವವನ್ನು(withdrawal)ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವೆಲಿಕಾ ಬೆರೆಜೊವಿಟ್ಸಿಯಾದ ಜೋಸ್ಯಫ್ ಸ್ಲಿಪೈಜ್ ಹೆಸರಿನ ಕೌನ್ಸಿಲ್ ನಂ. 18687 ಸದಸ್ಯ ರೋಮನ್ ಜಿಂಕೆವಿಚ್, ಅನೇಕ ಮಕ್ಕಳು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಮಾತನಾಡುತ್ತಾರೆ.

“ಮಕ್ಕಳು ತಾವಾಗಿ ವೈಯಕ್ತಿಕವಾಗಿ ಮತ್ತು ಸಮಾಜದಿಂದ ಹಿಂದೆ ಸರಿಯುತ್ತಿದ್ದಾರೆ; ತಮ್ಮೊಳಗಿನ ಭಯದಿಂದಾಗಿ ಯಾರನ್ನೂ ನಂಬಲು ಕಷ್ಟಪಡುತ್ತಾರೆ. ‘ಕಿಂಡರ್‌ಮೊಬಿಲ್’ ಯೋಜನೆ ಮಕ್ಕಳಿಗೆ ತಮ್ಮನ್ನು ತಾವು ತೆರೆದುಕೊಳ್ಳಲು, ತಮ್ಮ ಪ್ರತಿಭೆಗಳನ್ನು ಕಂಡುಕೊಳ್ಳಲು ಮತ್ತು ಅವರು ನಿಜವಾಗಿ ಯಾರು ಎಂಬುದನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ,” ಎಂದು ಅವರು ಹೇಳುತ್ತಾರೆ. ಕಾರ್ಯಕ್ರಮದ ಅವಧಿಯಲ್ಲಿ ಮಕ್ಕಳು ತಂಡದ ಆಟಗಳು ಹಾಗೂ ಕಲಾ ಚಿಕಿತ್ಸೆಯಲ್ಲಿ ಭಾಗವಹಿಸುತ್ತಾರೆ. 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪುಟ್ಟ ಬಾಲಕಿ ದಾರಿಯಾ ಉತ್ಸಾಹದಿಂದ ನೆನಪಿಸಿಕೊಂಡು, “ನನಗೆ ಎಲ್ಲ ಆಟಗಳೂ ತುಂಬಾ ಇಷ್ಟವಾದವು. ಕ್ರೀಡಾ ಆಟಗಳೂ ಇದ್ದವು—ನಾವು ತಂಡವಾಗಿ ಒಟ್ಟಾಗಿ ಕೆಲಸ ಮಾಡಿದೆವು,” ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಜೀವ ರಕ್ಷಣೆಯ ಪಾಠ

ಮಕ್ಕಳಿಗೆ ನೀಡುವ ಮಾನಸಿಕ ಬೆಂಬಲದ ಜೊತೆಗೆ, ನೈಟ್ಸ್ ಆಫ್ ಕೊಲಂಬಸ್ ಸಂಘವು ಪ್ರಥಮ ಚಿಕಿತ್ಸಾ ತರಬೇತಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಇಂದಿನ ಉಕ್ರೇನ್ ವಾಸ್ತವಿಕತೆಯಲ್ಲಿ, ಈ ಕೌಶಲ್ಯ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಗತ್ಯವಾಗಿದೆ. ಟೆರ್ನೋಪಿಲ್‌ನ ಕೌನ್ಸಿಲ್ ಸಂಖ್ಯೆ 17487ರ ಸದಸ್ಯ ಮಿರೊಸ್ಲಾವ್ ಜ್ವಾರಿಚ್  “ಸಹೋದರತ್ವ, ಏಕತೆ, ದೇಶಭಕ್ತಿ ಮತ್ತು ಕರುಣೆ ನಮ್ಮ ನೈಟ್ಸ್ ಆಫ್ ಕೊಲಂಬಸ್ ಸಂಘದ ಮೂಲ  ತತ್ವಗಳು. ಪ್ರಥಮ ಚಿಕಿತ್ಸಾ ತರಬೇತಿಯಿಂದ ಯಾರಾದರೂ ಅಸ್ವಸ್ಥರಾಗಿದ್ದಾರೆ ನಾವು ನಾವು ಸಹಾಯ ಮಾಡಬಹುದೆಂಬ ಧೈರ್ಯ ಮತ್ತು ಸಾಮರ್ಥ್ಯವಿರುತ್ತದೆ.”

ಈ ತರಬೇತಿಯ ಪ್ರಾಯೋಗಿಕ ಮೌಲ್ಯವನ್ನು ವಾಸಿಲ್ ಯಾತ್ಸಿನಿಕ್ ದೃಢಪಡಿಸುತ್ತಾರೆ. ಅವರು ಈಗಾಗಲೇ ಹಲವು ಬಾರಿ ತಮ್ಮ ಜ್ಞಾನವನ್ನು ಬಳಸಿದ್ದಾರೆ, ಅದರಲ್ಲಿ ಒಂದು ವೇಳೆ ಬಸ್ ನಿಲ್ದಾಣದಲ್ಲಿ ಅಚೇತನನಾಗಿದ್ದ ವ್ಯಕ್ತಿಗೆ ಸಹಾಯ ಮಾಡಿದ ಅನುಭವವೂ ಸೇರಿದೆ. ಯಾತ್ಸಿನಿಕ್, “ಯಾರು ಹೆಚ್ಚು ತಿಳಿದಿರುತ್ತಾರೋ, ಮತ್ತು ಹೆಚ್ಚು ಅಭ್ಯಾಸ ಮಾಡುತ್ತಾರೋ ಅವರು ತಮ್ಮ ಜ್ಞಾನವನ್ನು ನೈಜ ಪರಿಸ್ಥಿತಿಯಲ್ಲಿ ಬಳಸಿದಾಗ ಫಲಿತಾಂಶ ಯಾವಾಗಲೂ ಉತ್ತಮವಾಗಿರುತ್ತದೆ. ನಾನು ಪುರುಷರನ್ನು ನೈಟ್ಸ್ ಆಫ್ ಕೊಲಂಬಸ್‌ಗೆ ಸೇರಲು ಪ್ರೋತ್ಸಾಹಿಸುತ್ತೇನೆ, ಏಕೆಂದರೆ ಈ ಸಮುದಾಯದಲ್ಲಿ ನೀವು ಬೆಳೆಯುತ್ತೀರಿ” ಎಂದು ಕರೆಯನ್ನು ಸಹ ನೀಡಿದರು.

ಸೇವೆಯ ಹಂಚಿಕೊಂಡ ಧ್ಯೇಯ

ಭಾಗವಹಿಸಿದವರ ಪ್ರಕಾರ, ನೈಟ್ಸ್ ಆಫ್ ಕೊಲಂಬಸ್ ಮತ್ತು ಮಾಲ್ಟಾ ಸಂಘಗಳ ಸಹಕಾರವು ಹಂಚಿಕೊಂಡ ಮೌಲ್ಯಗಳ ಸ್ವಾಭಾವಿಕ ಫಲವಾಗಿದೆ.

ನೈಟ್ಸ್ ಆಫ್ ಕೊಲಂಬಸ್ ಸದಸ್ಯರೂ ಹಾಗೂ ಗುರುದೀಕ್ಷಾಭ್ಯರ್ಥಿಯೂ ಆದ ನಜಾರ್ ಬಾಚಿನ್‌ಸ್ಕಿ,  “ನಮ್ಮ ಧ್ಯೇಯ ಒಂದೇ—ಬಡವರು ಮತ್ತು ಅಗತ್ಯದಲ್ಲಿರುವವರಿಗೆ ಸಹಾಯ ಮಾಡುವುದು. ನಾವು ಒಂದಾಗಿ ಕೈಜೋಡಿಸಿ ಒಟ್ಟಾಗಿ ಸೇವೆ ಮಾಡಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು   ಈ ಸಹಕಾರವು ಯುದ್ಧದ ಪರಿಣಾಮಗಳನ್ನು ತಗ್ಗಿಸುವುದಷ್ಟೇ ಅಲ್ಲ, ಕ್ರೈಸ್ತ ಸಹೋದರತ್ವದ ನೆಲೆಯ ಮೇಲೆ ಭವಿಷ್ಯದ ಸಮಾಜವನ್ನು ಮರುನಿರ್ಮಿಸಲು ದೃಢವಾದ ಅಡಿಪಾಯವನ್ನೂ ಹಾಕುತ್ತದೆ.


ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

03 ಫೆಬ್ರವರಿ 2026, 01:05