ಆಫ್ಘಾನಿಸ್ತಾನದಲ್ಲಿ ಶಾಲೆಯಲ್ಲಿರುವ ಹುಡುಗಿಯರು (ANSA) ಆಫ್ಘಾನಿಸ್ತಾನದಲ್ಲಿ ಶಾಲೆಯಲ್ಲಿರುವ ಹುಡುಗಿಯರು (ANSA)  (ANSA)

2021ರ ನಿಷೇಧದ ನಂತರ 10 ಲಕ್ಷಕ್ಕೂ ಹೆಚ್ಚು ಆಫ್ಘಾನ್ ಹುಡುಗಿಯರಿಗೆ ಶಿಕ್ಷಣ ನಿರಾಕರಣೆ

ವಿಶ್ವ ಸಂಸ್ಥೆಯ ಮಕ್ಕಳ ನಿಧಿ (UNICEF) ಹುಡುಗಿಯರ ಪ್ರೌಢ ಶಿಕ್ಷಣದ ಮೇಲಿನ ನಿರ್ಬಂಧಗಳು 2030ರ ವೇಳೆಗೆ 20 ಲಕ್ಷಕ್ಕೂ ಹೆಚ್ಚು ಆಫ್ಘಾನ್ ವಿದ್ಯಾರ್ಥಿನಿಯರ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದ್ದು, ಇದು ಆಫ್ಘಾನ್ ದೇಶದ ಆರೋಗ್ಯ, ಕಾರ್ಮಿಕ ಶಕ್ತಿ ಮತ್ತು ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಸೂಚಿಸಿದೆ.

ಲೇಖಕರು: ದೆಬೋರ ಕ್ಯಾಸ್ತೆಲ್ಲಾನೋ ಲುಬೋವ್

ವಿಶ್ವ ಸಂಸ್ಥೆಯ ಮಕ್ಕಳ ನಿಧಿಯ (UNICEF) ವರದಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಪ್ರೌಢ ಶಿಕ್ಷಣದ ಮೇಲಿನ ನಿರ್ಬಂಧಗಳಿಂದ ಕನಿಷ್ಠ 10 ಲಕ್ಷ ಹುಡುಗಿಯರ ಮೇಲೆ ನೇರ ಪ್ರತಿಕೂಲ ಪರಿಣಾಮ ಬೀರಿದೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳು ಮುಂದುವರಿದರೆ, 2030ರ ವೇಳೆಗೆ ಈ ಸಂಖ್ಯೆ 20 ಲಕ್ಷಕ್ಕೂ ಮೀರಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಯುನಿಸೆಫ್‌ನ ಹೊಸ ವಿಶ್ಲೇಷಣೆಯಾದ “ಆಫ್ಘಾನಿಸ್ತಾನದಲ್ಲಿ ಹುಡುಗಿಯರ ಶಿಕ್ಷಣ ಮತ್ತು ಮಹಿಳೆಯರ ಕಾರ್ಮಿಕ ಶಕ್ತಿ ಪಾಲ್ಗೊಳ್ಳುವಿಕೆಯಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಉಂಟಾಗುವ ವೆಚ್ಚ” ದ ಪ್ರಕಾರ, 2021ರಲ್ಲಿ ಪ್ರೌಢ ಶಿಕ್ಷಣದ ಮೇಲೆ ನಿಷೇಧ ಹೇರಿದ ನಂತರದಿಂದ 10 ಲಕ್ಷಕ್ಕಿಂತ ಹೆಚ್ಚು ಹುಡುಗಿಯರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸಲಾಗಿದೆ.

ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಕ್ಯಾಥರಿನ್ ರಸೆಲ್ ಮನವಿ ಮಾಡುತ್ತಾ, “ಹುಡುಗಿಯರ ಪ್ರೌಢ ಶಿಕ್ಷಣದ ಮೇಲಿನ ನಿಷೇಧವನ್ನು ತಕ್ಷಣವೇ ತೆಗೆದುಹಾಕುವಂತೆ ನಾವು ಅಧಿಕಾರಿಗಳಿಗೆ ವಿನಂತಿಸುತ್ತೇವೆ. ಜೊತೆಗೆ, ಹುಡುಗಿಯರ ಕಲಿಯುವ ಹಕ್ಕಿಗೆ ಬೆಂಬಲ ನೀಡುವಲ್ಲಿ ಅಂತರರಾಷ್ಟ್ರೀಯ ಸಮುದಾಯ ತನ್ನ ಬದ್ಧತೆಯನ್ನು ಮುಂದುವರಿಸಬೇಕು,” ಎಂದು ತಿಳಿಸಿದ್ದಾರೆ.

ಗಂಭೀರ ಭವಿಷ್ಯದ ಚಿತ್ರ

ಹುಡುಗಿಯರ ಶಿಕ್ಷಣ ಮತ್ತು ಮಹಿಳೆಯರ ಉದ್ಯೋಗದ ಮೇಲಿನ ನಿರ್ಬಂಧಗಳು ಮುಂದುವರಿದರೆ, 2030ರ ವೇಳೆಗೆ 25,000ಕ್ಕೂ ಹೆಚ್ಚು ಮಹಿಳಾ ಶಿಕ್ಷಕರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಯುನಿಸೆಫ್ ಎಚ್ಚರಿಸಿದೆ.

ವಿಶ್ವ ಸಂಸ್ಥೆಯ ಈ ಸಂಸ್ಥೆಯ ವಿಶ್ಲೇಷಣೆಯ ಪ್ರಕಾರ, ನಾಗರಿಕ ಸೇವೆಗಳಲ್ಲಿ ಮಹಿಳೆಯರ ಪ್ರತಿನಿಧಿತ್ವವು 2023ರಿಂದ 2025ರ ನಡುವೆ 21 ಶೇಕಡೆಯಿಂದ 17.7 ಶೇಕಡಕ್ಕೆ ಇಳಿಕೆಯಾಗಿದೆ. ತರಬೇತಿ ಪಡೆದ ಮಹಿಳಾ ವೃತ್ತಿಪರರ ಸಂಖ್ಯೆ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಕಡಿಮೆಯಾಗುತ್ತಿರುವುದು ಮಕ್ಕಳ ಶಿಕ್ಷಣ, ಆರೋಗ್ಯ ಫಲಿತಾಂಶಗಳು ಮತ್ತು ಭವಿಷ್ಯದ ಅವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಲಾಗಿದೆ.

ಈ ಕ್ಷೇತ್ರಗಳಲ್ಲಿ ಮಹಿಳೆಯರನ್ನು—ಅವರಿಗೆ ಕೆಲಸ ಮಾಡಲು ಅನುಮತಿ ಇರುವ ಹಾಗೂ ಅತ್ಯಂತ ಅಗತ್ಯವಿರುವ ಕ್ಷೇತ್ರಗಳಲ್ಲಿ—ಹೊರಗಿಡುವುದು ನೇರವಾಗಿ ಮಕ್ಕಳಿಗೆ ಹಾನಿ ಉಂಟುಮಾಡುತ್ತದೆ ಎಂದು ವರದಿ ಹೇಳುತ್ತದೆ. ಇದರಿಂದ ಶಾಲೆಗಳಲ್ಲಿ ಹುಡುಗಿಯರ ಸಂಖ್ಯೆಯ ಕಡಿಮೆಯೂ, ಮಹಿಳೆಯರು ಮತ್ತು ಮಕ್ಕಳಿಗೆ ದೊರೆಯುವ ಆರೈಕೆಯ ಕುಗ್ಗುವಿಕೆಯೂ ಸಂಭವಿಸಲಿದೆ.

ತಾಯಂದಿರ, ನವಜಾತ ಶಿಶುಗಳ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಮೇಲೆ ಪರಿಣಾಮ

ಮಹಿಳಾ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ, ತಾಯಂದಿರ, ನವಜಾತ ಶಿಶುಗಳ ಮತ್ತು ಮಕ್ಕಳ  ಆರೋಗ್ಯ ಸೇವೆಗಳು ನೇರವಾಗಿ ಸೀಮಿತಗೊಳ್ಳುತ್ತವೆ ಎಂದು ಯುನಿಸೆಫ್ ತಿಳಿಸಿದೆ. ಸಮಾಜದ ಸಾಂಸ್ಕೃತಿಕ ಸಂದರ್ಭಗಳಲ್ಲಿ ಮಹಿಳೆಯರು ಪುರುಷರಿಂದ ವೈದ್ಯಕೀಯ ಸೇವೆ ಪಡೆಯಲು ಅಸಾಧ್ಯವಾಗುವ ಪರಿಸ್ಥಿತಿಯೂ ಇದಕ್ಕೆ ಕಾರಣವಾಗಿದೆ.

“ಆಫ್ಘಾನಿಸ್ತಾನವು ಭವಿಷ್ಯದ ಶಿಕ್ಷಕರು, ದಾದಿಯರು, ವೈದ್ಯರು, ಸೂಲಗಿತ್ತಿಯರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ,” ಎಂದು ಕ್ಯಾಥರಿನ್ ರಸೆಲ್ ಹೇಳಿದ್ದಾರೆ. “ಅತ್ಯಾವಶ್ಯಕ ಸೇವೆಗಳನ್ನು ನಿರ್ವಹಿಸುವ ಈ ವೃತ್ತಿಪರರನ್ನು ಕಳೆದುಕೊಳ್ಳುವುದು, ಹುಡುಗಿಯರನ್ನು ಶಿಕ್ಷಣದಿಂದ ದೂರವಿಟ್ಟರೆ ಅನಿವಾರ್ಯ ವಾಸ್ತವಿಕತೆಯಾಗುತ್ತದೆ.”

ಇನ್ನೊಂದು ಪೀಳಿಗೆಯ ನಿಪುಣ ವೃತ್ತಿಪರರ ನಷ್ಟ

ತರಬೇತಿ ಪಡೆದ ಮಹಿಳಾ ವೃತ್ತಿಪರರನ್ನು ಕಳೆದುಕೊಳ್ಳುವ ಗಂಭೀರ ಸಮಸ್ಯೆಯ ಜೊತೆಗೆ, ಮುಂದಿನ ಪೀಳಿಗೆಯವರು ಅವರನ್ನು ಬದಲಾಯಿಸಲು ಅವಕಾಶವಿಲ್ಲದ ಪರಿಸ್ಥಿತಿಯತ್ತ ಈ ವರದಿ ಗಮನ ಸೆಳೆಯುತ್ತದೆ. “ಅನುಭವ ಹೊಂದಿರುವ ಮಹಿಳೆಯರು ನಿವೃತ್ತರಾಗುವಾಗ ಅಥವಾ ತಮ್ಮ ವೃತ್ತಿಯನ್ನು ತೊರೆಯುವಾಗ,ಹುಡುಗಿಯರಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಿ ಈ ಸ್ಥಾನಗಳನ್ನು ಅಲಂಕರಿಸಲು ಅವಕಾಶ ನೀಡಲಾಗುತ್ತಿಲ್ಲ” ಎಂದು ಸಂಸ್ಥೆ ಹೇಳಿದೆ.

ಪ್ರತಿ ವರ್ಷವೂ ವಿಳಂಬವಾಗುವುದರಿಂದ, ಆಫ್ಘಾನಿಸ್ತಾನ ಮತ್ತೊಂದು ಪೀಳಿಗೆಯ ನಿಪುಣ ವೃತ್ತಿಪರರನ್ನು ಕಳೆದುಕೊಳ್ಳುತ್ತಿದೆ ಎಂದು ವಿಶ್ವ ಸಂಸ್ಥೆಯ ಮಕ್ಕಳ ನಿಧಿ ಎಚ್ಚರಿಸಿದೆ. ಈ ಸವಾಲಿನ ನಡುವೆ, ಹುಡುಗಿಯರ ಪ್ರೌಢ ಮತ್ತು ಉನ್ನತ ಶಿಕ್ಷಣದ ಹಕ್ಕುಗಳನ್ನು ಪುನಃಸ್ಥಾಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಯುನಿಸೆಫ್ ಮನವಿ ಮಾಡಿದೆ. ಜೊತೆಗೆ, ಪ್ರಾಥಮಿಕ ಶಿಕ್ಷಣದಲ್ಲಿ ಹೂಡಿಕೆಯನ್ನು ಮುಂದುವರಿಸುವುದು ಅಗತ್ಯವಿದೆ, ಏಕೆಂದರೆ ಅದು ಆಫ್ಘಾನಿಸ್ತಾನದ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಭವಿಷ್ಯದಲ್ಲಿ ಮಹತ್ತರ ಪಾತ್ರವಹಿಸುತ್ತದೆ.

“ಆಫ್ಘಾನ್ ಹುಡುಗಿಯರಿಗೆ ಪ್ರೌಢ ಶಿಕ್ಷಣದ ಪ್ರವೇಶವನ್ನು ನಿರಾಕರಿಸುವುದು, ಒಂದು ಸಂಪೂರ್ಣ ರಾಷ್ಟ್ರದ ಸಾಮರ್ಥ್ಯವನ್ನೇ ಕಸಿದುಕೊಳ್ಳುವುದಾಗಿದೆ—ಇದರಿಂದ ಹುಡುಗಿಯರು, ಅವರ ಕುಟುಂಬಗಳು ಮತ್ತು ಸಮುದಾಯಗಳು ದಾರಿದ್ರ್ಯದಲ್ಲಿ ಸಿಲುಕುತ್ತವೆ; ಆರೋಗ್ಯ ಫಲಿತಾಂಶಗಳು ಕುಗ್ಗುತ್ತವೆ; ಹಾಗೂ ಶಿಕ್ಷಣ ಪಡೆದ ಮಹಿಳೆಯರ ಪೀಳಿಗೆ ಉಂಟುಮಾಡಬಹುದಾದ ಆರ್ಥಿಕ ಶಕ್ತಿಯನ್ನು ಕಸಿದುಕೊಂಡಂತಾಗುತ್ತದೆ” ಎಂದು ರಸೆಲ್ ಹೇಳಿದ್ದಾರೆ.

ಯುನಿಸೆಫ್‌ನ ಬದ್ಧತೆ

ವಿಶ್ವ ಸಂಸ್ಥೆಯ ಮಕ್ಕಳ ಸಂಸ್ಥೆಯಾದ ಯುನಿಸೆಫ್ (UNICEF), ವಿಶ್ವದಾದ್ಯಂತ ಪ್ರತಿಯೊಬ್ಬ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ಅತ್ಯಂತ ಹಿಂದುಳಿದ ಮಕ್ಕಳಿಗಾಗಿ ಹಾಗೂ ತಲುಪಲು ಕಷ್ಟವಾಗುವ ಪ್ರದೇಶಗಳಲ್ಲಿ, 190ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದೆ.

ನಿರ್ಬಂಧಗಳ ನಡುವೆಯೂ, ಈ ವಿಶ್ವ ಸಂಸ್ಥೆಯ ಏಜೆನ್ಸಿ ಆಫ್ಘಾನಿಸ್ತಾನದಲ್ಲಿ ಮಕ್ಕಳ ಶಿಕ್ಷಣಕ್ಕೆ ತನ್ನ ಬೆಂಬಲವನ್ನು ಮುಂದುವರಿಸುತ್ತಿದೆ. 2025ರಲ್ಲಿ, ಸರ್ಕಾರಿ ಶಾಲೆಗಳಲ್ಲಿರುವ 37 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತುರ್ತು ಸಹಾಯ ಒದಗಿಸಲಾಗಿದೆ; 442,000 ಮಕ್ಕಳು—ಅವರಲ್ಲಿ 66 ಶೇಕಡಾ ಹುಡುಗಿಯರು—ಸಮುದಾಯ ಆಧಾರಿತ ಕಲಿಕಾ ಯೋಜನೆಗಳಿಂದ ಲಾಭ ಪಡೆದಿದ್ದಾರೆ; ಹಾಗೂ 232 ಶಾಲೆಗಳು ನಿರ್ಮಿಸಲ್ಪಟ್ಟಿವೆ ಅಥವಾ ಪುನರ್ನಿರ್ಮಿಸಲ್ಪಟ್ಟಿವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

28 ಏಪ್ರಿಲ್ 2026, 20:00