ತೆಹ್ರಾನ್‌ನ ಉದ್ಯಾನವನವೊಂದರಲ್ಲಿ ಪ್ರದರ್ಶನಕ್ಕಿಡಲಾಗಿರುವ ಇರಾನ್ ಕ್ಷಿಪಣಿಗಳ ದೃಶ್ಯ. (ಚಿತ್ರ ಕೃಪೆ: AFP ಅಥವಾ ಪರವಾನಗಿದಾರರು) ತೆಹ್ರಾನ್‌ನ ಉದ್ಯಾನವನವೊಂದರಲ್ಲಿ ಪ್ರದರ್ಶನಕ್ಕಿಡಲಾಗಿರುವ ಇರಾನ್ ಕ್ಷಿಪಣಿಗಳ ದೃಶ್ಯ. (ಚಿತ್ರ ಕೃಪೆ: AFP ಅಥವಾ ಪರವಾನಗಿದಾರರು) 

ಐದನೇ ವಾರಕ್ಕೆ ಕಾಲಿಟ್ಟ ಶಮನವಾಗುವ ಲಕ್ಷಣಗಳಿಲ್ಲದ ಇರಾನ್ ಯುದ್ಧ

ಅಮೆರಿಕ ಅಧ್ಯಕ್ಷರು ಇರಾನ್ ಅನ್ನು “ಶಿಲಾಯುಗಕ್ಕೆ ಹಿಂತಿರುಗಿಸುವ” ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿರುವ ಸಂದರ್ಭದಲ್ಲಿ, ಅಮೆರಿಕ ಮತ್ತು ಇಸ್ರಾಯೇಲ್ ಪಡೆಗಳು ದಾಳಿಗಳನ್ನು ಹೆಚ್ಚಿಸುತ್ತಿರುವುದರ ಮಧ್ಯೆ, ತೆಹ್ರಾನ್ ತನ್ನ ಪ್ರತಿದಾಳಿಯನ್ನು ಮುಂದುವರಿಸುವುದಾಗಿ ಹೇಳಿದೆ.

ಲೇಖಕರು: ಲಿಂಡಾ ಬೋರ್ಡೊನಿ

ಮಧ್ಯಪ್ರಾಚ್ಯದ ಯುದ್ಧವು ಶೀಘ್ರದಲ್ಲಿ ಅಂತ್ಯವಾಗುವ ನಿರೀಕ್ಷೆಗಳು ಗುರುವಾರ ಕ್ಷೀಣಗೊಂಡವು, ಏಕೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಇನ್ನಷ್ಟು ಕಠಿಣ ದಾಳಿಗಳನ್ನು ಮುಂದುವರಿಸುವುದಾಗಿ ಘೋಷಿಸಿದರು.

ಬುಧವಾರ ಸಂಜೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, “ಈ ಕಾರ್ಯವನ್ನು ಬಹಳ ಬೇಗ ಪೂರ್ಣಗೊಳಿಸುತ್ತೇನೆ” ಎಂದು ಅಮೆರಿಕ ಜನತೆಗೆ ಹೇಳಿದರು; ಆದರೆ ಯುದ್ಧವನ್ನು ಯಾವಾಗ ಅಂತ್ಯಗೊಳಿಸುವುದು ಎಂಬ ಕುರಿತು ಯಾವುದೇ ಸಮಯಮಿತಿಯನ್ನು ಸೂಚಿಸಲಿಲ್ಲ.

ಇದರ ಮಧ್ಯೆ, ಇರಾನ್ ಇಸ್ರಾಯೇಲ್ ಮತ್ತು ಗಲ್ಫ್ ಅರಬ್ ರಾಷ್ಟ್ರಗಳ ಮೇಲೆ ಮತ್ತಷ್ಟು ಕ್ಷಿಪಣಿಗಳನ್ನು ಹಾರಿಸಿ, ತನ್ನ ನೆರೆಯ ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಇನ್ನೂ ಉಳಿದಿದೆ ಎಂಬುದನ್ನು ತೋರಿಸಿತು. ಇದು ಅಮೆರಿಕ ಅಧ್ಯಕ್ಷರ “ಇರಾನ್‌ನಿಂದ ಬಂದ ಬೆದರಿಕೆ ಬಹುತೇಕ ನಿವಾರಣೆಯಾಗಿದೆ” ಎಂಬ ಹೇಳಿಕೆಗೆ ವಿರುದ್ಧವಾಗಿದೆ.

ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ದಾಳಿಗಳು ಮತ್ತು ಹೋರ್ಮುಜ್ ಕಣಿವೆಯ ಮೇಲೆ ಅದರ ನಿಯಂತ್ರಣವು ಜಾಗತಿಕ ಇಂಧನ ಸರಬರಾಜನ್ನು ವ್ಯತ್ಯಯಗೊಳಿಸಿದೆ, ಇದರಿಂದ ಮಧ್ಯಪ್ರಾಚ್ಯವನ್ನು ಮೀರಿ ಜಗತ್ತಿನಾದ್ಯಂತ ಪರಿಣಾಮಗಳು ಕಾಣಿಸುತ್ತಿವೆ.

ಗುರುವಾರವೇ, ತೈಲದ ಬೆಲೆಗಳು ಏರಿಕೆಯಾಗುತ್ತಿರುವ ಮತ್ತು ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ, ಸುಮಾರು 40 ರಾಷ್ಟ್ರಗಳು ಆನ್‌ಲೈನ್ ಸಭೆಗಳ ಮೂಲಕ ಸಾಗರ ಸಂಚಾರದ ಸ್ವಾತಂತ್ರ್ಯವನ್ನು ಪುನಃಸ್ಥಾಪಿಸಲು ಮಾರ್ಗಗಳನ್ನು ಪರಿಶೀಲಿಸುತ್ತಿವೆ.

ಸಾವಿರಾರು ಮಂದಿ ಬಲಿ

ಇದೇ ಸಮಯದಲ್ಲಿ, ಫೆಬ್ರವರಿ 28ರಿಂದ ಅಮೆರಿಕ ಮತ್ತು ಇಸ್ರಾಯೇಲ್ ಇರಾನ್ ಮೇಲೆ ವಾಯುದಾಳಿಗಳನ್ನು ಆರಂಭಿಸಿದ ನಂತರ, ಮಧ್ಯಪ್ರಾಚ್ಯದಾದ್ಯಂತ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಇದರಿಂದ ಇರಾನ್ ಇಸ್ರಾಯೇಲ್, ಅಮೆರಿಕ ನೆಲೆಗಳು ಮತ್ತು ಗಲ್ಫ್ ರಾಷ್ಟ್ರಗಳ ಮೇಲೆ ಪ್ರತಿದಾಳಿಗಳನ್ನು ನಡೆಸಿ, ಲೆಬನಾನ್‌ನಲ್ಲಿ ಹೊಸ ಯುದ್ಧಮುಖವನ್ನು ತೆರೆಯಿತು.

ಗುರುವಾರ, ತೆಹ್ರಾನ್ ಮತ್ತು ಪಶ್ಚಿಮದ ಕರಜ್ ನಗರವನ್ನು ಸಂಪರ್ಕಿಸುವ ಸೇತುವೆ ಮೇಲೆ ನಡೆದ ವಾಯುದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ ಎಂದು ಇರಾನ್ ತಿಳಿಸಿತು. ಇದಲ್ಲದೆ, ಕೆಲವು ಪ್ರಮುಖ ಉಕ್ಕು ಉತ್ಪಾದನಾ ಘಟಕಗಳು ಮತ್ತು ತೆಹ್ರಾನ್‌ನ  ಪಾಶ್ಚರ್ ವೈದ್ಯಕೀಯ ಸಂಶೋಧನಾ  ಸಂಸ್ಥೆಗೆ ಗಂಭೀರ ಹಾನಿಯಾಗಿದೆ.

ದೇಶದ ಕ್ರಾಂತಿಕಾರಿ ರಕ್ಷಕ ಪಡೆಗಳು, ಗಲ್ಫ್ ರಾಷ್ಟ್ರಗಳಲ್ಲಿ ಅಮೆರಿಕ ಸಂಪರ್ಕ ಹೊಂದಿರುವ ಉಕ್ಕು ಮತ್ತು ಅಲ್ಯೂಮಿನಿಯಂ ಘಟಕಗಳನ್ನು ಗುರಿಯಾಗಿಸಿಕೊಂಡಿದ್ದೇವೆ ಎಂದು ತಿಳಿಸಿವೆ ಮತ್ತು ಇರಾನ್ ಕೈಗಾರಿಕೆಗಳ ಮೇಲೆ ಮತ್ತೆ ದಾಳಿ ನಡೆದರೆ ಇಂತಹ ದಾಳಿಗಳನ್ನು ಮತ್ತಷ್ಟು ಹೆಚ್ಚಿಸಲಾಗುವುದು ಎಂದು ಎಚ್ಚರಿಸಿವೆ.

ಬಾಗ್ದಾದ್‌ನ ಅಮೆರಿಕ ರಾಯಭಾರ ಕಚೇರಿ, ಮುಂದಿನ 24 ರಿಂದ 48 ಗಂಟೆಗಳ ಒಳಗೆ ರಾಜಧಾನಿಯಲ್ಲಿ ಇರಾನ್ ಬೆಂಬಲಿತ ಸೇನಾಪಡೆ ದಾಳಿಗಳು ಸಂಭವಿಸಬಹುದೆಂದು ಎಚ್ಚರಿಕೆ ನೀಡಿ, ತನ್ನ ನಾಗರಿಕರು ಇರಾಕ್ ತೊರೆಯುವಂತೆ ಸೂಚಿಸಿದೆ.

ಅಂತರಾಷ್ಟ್ರೀಯ ಹಣಕಾಸು ನಿಧಿ, ವಿಶ್ವ ಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಇಂಧನ ಸಂಸ್ಥೆಗಳು ಬುಧವಾರ ಈ ಯುದ್ಧವು “ಗಂಭೀರ, ಜಾಗತಿಕ ಮತ್ತು ಅಸಮತೋಲನಕಾರಿ ಪರಿಣಾಮಗಳನ್ನು” ಉಂಟುಮಾಡುತ್ತಿದೆ ಎಂದು ಎಚ್ಚರಿಸಿವೆ. ಪರಿಣಾಮವಾಗಿ, ಹೆಚ್ಚು ಹೊಡೆತ ಅನುಭವಿಸಿದ ದೇಶಗಳಿಗೆ ಆರ್ಥಿಕ ನೆರವು ನೀಡುವ ಸಾಧ್ಯತೆಯೊಂದಿಗೆ, ಸಂಯೋಜಿತ ಪ್ರತಿಕ್ರಿಯೆಯನ್ನು ರೂಪಿಸಲು ಅವುಗಳು ಮುಂದಾಗಿವೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

02 ಏಪ್ರಿಲ್ 2026, 18:57