ಬಂಧನ ಬಂಧನ 

ಸೌದಿ ಅರೇಬಿಯಾದಲ್ಲಿ ಸುಮಾರು 200 ಇಥಿಯೋಪಿಯನ್ನರಿಗೆ ಮರಣದಂಡನೆ ಶಿಕ್ಷೆ

ಸೌದಿ ಅರೇಬಿಯಾದಲ್ಲಿ 200 ಇಥಿಯೋಪಿಯನ್ ವಲಸಿಗರು ಮರಣದಂಡನೆಯ ಭೀತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಅಡಿಗ್ರಾಟ್ ಕಥೋಲಿಕ ಎಪಾರ್ಕಿಯ ಧರ್ಮಾಧ್ಯಕ್ಷರು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಸಂವಾದ ಮತ್ತು ಕರುಣೆಗೆ ಮನವಿ ಮಾಡಿದ್ದಾರೆ.

ಲೇಖಕರು: ರೋಬೆರ್ಟೊ ಪಾಗ್ಲಿಯಲೋಂಗಾ

ಇಥಿಯೋಪಿಯಾ ಮೂಲದ 200ಕ್ಕೂ ಹೆಚ್ಚು ಜನರು, ಅವರಲ್ಲಿ ಅನೇಕರು ಯುವಜನರಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಸೌದಿ ಅರೇಬಿಯಾದಲ್ಲಿ ಮರಣದಂಡನೆಗೆ ಒಳಗಾಗುವ ಅಪಾಯದಲ್ಲಿದ್ದಾರೆ ಎಂದು ವರದಿಯಾಗಿದೆ. ಕಳೆದ ವಾರ ಆನ್‌ಲೈನ್ ಪತ್ರಿಕೆ ಆಡಿಸ್ ಸ್ಟ್ಯಾಂಡರ್ಡ್, ಟಿಗ್ರೇ ಯುವಜನ ಕಚೇರಿಯ ಮಾಹಿತಿಯನ್ನು ಉಲ್ಲೇಖಿಸಿ ಈ ವಿಷಯವನ್ನು ವರದಿ ಮಾಡಿತ್ತು.

ಮಾನವ ಹಕ್ಕುಗಳ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆ ಈ ಸಂಖ್ಯೆಯನ್ನು ನೇರವಾಗಿ ದೃಢೀಕರಿಸಲು ಸಾಧ್ಯವಾಗಲಿಲ್ಲ. ಆದರೆ, ಮಾದಕವಸ್ತು ಸಾಗಣೆ ಮತ್ತು ಹೊಂದಿಕೆ ಸಂಬಂಧಿತ ಅಪರಾಧಗಳಲ್ಲಿ ಈಗಾಗಲೇ ಶಿಕ್ಷೆಗೆ ಗುರಿಯಾಗಿರುವ 65 ಇಥಿಯೋಪಿಯನ್ ವಲಸಿಗರು ಪ್ರಸ್ತುತ ಖಮೀಸ್ ಮುಶಾಯಿತ್ ಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಇದಲ್ಲದೆ, ಏಪ್ರಿಲ್ 21ರಂದು ಇನ್ನೂ ಮೂರು ಮರಣದಂಡನೆ ಶಿಕ್ಷೆಗಳನ್ನು ಜಾರಿಗೊಳಿಸಲಾಗಿದೆ ಎಂದು ವರದಿಯಾಗಿದೆ.

ಟಿಗ್ರೇ ಯುದ್ಧದಿಂದ ಪಲಾಯನ ಮಾಡಿದ ಇಥಿಯೋಪಿಯನ್ನರು

ಮಾನವ ಹಕ್ಕುಗಳ ವೀಕ್ಷಣಾ ಸಂಸ್ಥೆ, ಬಂಧಿತರಲ್ಲಿ ಮೂವರ ಪರಿಸ್ಥಿತಿಯನ್ನು ತಿಳಿದಿರುವ ಮೂಲಗಳನ್ನು ಸಂಪರ್ಕಿಸಲು ಯಶಸ್ವಿಯಾಯಿತು. ಅವರ ಪ್ರಕಾರ, ಈ ಬಂಧಿತರು ನಿರಾಶ್ರಿತರಾಗಿದ್ದಾರೆ.

2020ರಿಂದ 2022ರವರೆಗೆ ನಡೆದ ಟಿಗ್ರೇ ಪ್ರದೇಶದ (ಉತ್ತರ ಇಥಿಯೋಪಿಯಾ) ರಕ್ತಪಾತಮಯ ಸಂಘರ್ಷದ ವೇಳೆ ಅವರು ಅಲ್ಲಿಂದ ಪಲಾಯನ ಮಾಡಿದ್ದರು ಎಂದು ತಿಳಿಸಲಾಗಿದೆ. ಆ ಪ್ರದೇಶದಲ್ಲಿ ಇಂದಿಗೂ ಮಾನವೀಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ.

ಮೂಲಗಳ ಪ್ರಕಾರ, ಅವರು ಜಿಬೂಟಿ ಮತ್ತು ಯೆಮೆನ್ ಮೂಲಕ ಸಾಗುವ ಅಪಾಯಕಾರಿ ಹಾಗೂ ಕುಖ್ಯಾತ “ಪೂರ್ವ ಮಾರ್ಗ”ವನ್ನು ಅನುಸರಿಸಿ ಸೌದಿ ಅರೇಬಿಯಾಗೆ ತಲುಪಿದ್ದರು. ಅಲ್ಲಿ ಅಬ್ಹಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, 2023 ಮತ್ತು 2024ರ ನಡುವೆ ಸೌದಿ ಪೊಲೀಸರು ಅವರನ್ನು ಬಂಧಿಸಿದರು.

ಅವರ ಬಳಿಯಲ್ಲಿ ಪತ್ತೆಯಾದ ಪದಾರ್ಥ “ಖಾತ್” ಆಗಿತ್ತು — ಸೌದಿ ಅರೇಬಿಯಾದಲ್ಲಿ ನಿಷೇಧಿತವಾಗಿರುವ ಒಂದು ಸಸ್ಯ. ಆ ದೇಶದಲ್ಲಿ ಮಾದಕವಸ್ತುಗಳ ವಿರುದ್ಧ ಅತ್ಯಂತ ಕಠಿಣ ಕಾನೂನುಗಳಿವೆ. ಖಾತ್ ಎಂಬುದು ಪೂರ್ವ ಆಫ್ರಿಕಾದ ಮೂಲದ ಒಂದು ಪೊದೆಸಸ್ಯವಾಗಿದ್ದು, ಅದರ ಎಲೆಗಳನ್ನು ಜಗಿದಾಗ ಅಂಫೆಟಮೈನ್ ಮಾದರಿಯ ಉದ್ರೇಕಕಾರಿ ಪರಿಣಾಮ ಉಂಟಾಗುತ್ತದೆ.

ಇಥಿಯೋಪಿಯಾದ ಕಥೋಲಿಕ ಎಪಾರ್ಕಿಯ ಧರ್ಮಾಧ್ಯಕ್ಷರ ಮನವಿ

ಮೇ 5ರಂದು, ಅಡಿಗ್ರಾಟ್ ಕ್ಯಾಥೋಲಿಕ್ ಎಪಾರ್ಕಿಯ ಧರ್ಮಾಧ್ಯಕ್ಷರಾದ ತೆಸ್ಫಸೆಲಾಸ್ಸಿ ಮೆಧಿನ್, ಮಾನವ ಗೌರವವನ್ನು ರಕ್ಷಿಸುವ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಮಾನವೀಯ ಸೇವಾ ಸಂಘಟನೆಗಳಿಗೆ ಹೃದಯಸ್ಪರ್ಶಿ ಮನವಿಯನ್ನು ಮಾಡಿದರು. 200 ಬಂಧಿತರ ಜೀವ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಅವರು ವಿನಂತಿಸಿದರು.

“ಅಡಿಗ್ರಾಟ್ ಕಥೋಲಿಕ ಎಪಾರ್ಕಿಯ ಕುರುಬನಾಗಿ, ನಾನು ಕೇವಲ ಧಾರ್ಮಿಕ ನಾಯಕರಾಗಿ ಮಾತ್ರವಲ್ಲ, ಸರ್ವಶಕ್ತನ ಸ್ವರೂಪ ಮತ್ತು ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟ ಪ್ರತಿಯೊಂದು ಮಾನವ ಆತ್ಮದ ಅಮೂಲ್ಯ ಮೌಲ್ಯಕ್ಕೆ ಸಾಕ್ಷಿಯಾಗಿರುವವನಾಗಿ ನನ್ನ ಧ್ವನಿಯನ್ನು ಎತ್ತುತ್ತಿದ್ದೇನೆ,” ಎಂದು ಅವರು ತಮ್ಮ ಸಂದೇಶದಲ್ಲಿ ಆರಂಭಿಸಿದರು.

ಏಕೆಂದರೆ, “ಜೀವವು ಸೃಷ್ಟಿಕರ್ತನ ಕೊಡುಗೆ — ಅದು ಪವಿತ್ರವಾದುದು, ಅಲಂಘನೀಯವಾದುದು ಮತ್ತು ಗರ್ಭಧಾರಣೆಯಿಂದ ಸಹಜ ಮರಣದವರೆಗೆ ರಕ್ಷಿಸಲ್ಪಡಬೇಕಾದದ್ದು ಎಂದು ನಮ್ಮ ನಂಬಿಕೆ ಬೋಧಿಸುತ್ತದೆ” ಎಂದು ಅವರು ಹೇಳಿದರು.

ಕರುಣೆಯಿಂದ ಮೃದುಗೊಳ್ಳುವ ನ್ಯಾಯ

ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಕಾನೂನಿನ ಆಳ್ವಿಕೆಯನ್ನು ಕಾಪಾಡುವ ಅಗತ್ಯವನ್ನು ಒಪ್ಪಿಕೊಂಡಿದ್ದರೂ, ಎಪಾರ್ಕಿಯ ಧರ್ಮಾಧ್ಯಕ್ಷರು “ಕರುಣೆಯಿಂದ ಮೃದುಗೊಳ್ಳುವಾಗ ನ್ಯಾಯ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ” ಎಂದು ಒತ್ತಿಹೇಳಿದರು.

ವಾಸ್ತವವಾಗಿ, “ಈ 200 ಜನರಿಗೆ ಮರಣದಂಡನೆ ಜಾರಿಗೊಳಿಸುವುದು ಮಾನವ ಜೀವಗಳ ಅಪರಿಹಾರ್ಯ ನಷ್ಟವಾಗಿದ್ದು, ಇಥಿಯೋಪಿಯಾದಲ್ಲಿ ಉಳಿದಿರುವ ಅವರ ಕುಟುಂಬಗಳಿಗೆ ಹೃದಯವಿದ್ರಾವಕ ಹೊಡೆತವಾಗಲಿದೆ. ಅವರಲ್ಲಿ ಅನೇಕರು ಈಗಾಗಲೇ ಬಡತನ ಮತ್ತು ಸ್ಥಳಾಂತರದ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಸೌದಿ ಅಧಿಕಾರಿಗಳೊಂದಿಗೆ ಸಂವಾದಕ್ಕೆ ಮನವಿ

ಆದ್ದರಿಂದ, ಧರ್ಮಾಧ್ಯಕ್ಷ ಮೆಧಿನ್ ಅವರು, ಸಂಬಂಧಿತ ಅಂತರರಾಷ್ಟ್ರೀಯ ಸಂಸ್ಥೆಗಳು “ತುರ್ತು ಉನ್ನತ ಮಟ್ಟದ ಸಂವಾದವನ್ನು ಸೌದಿ ಅರೇಬಿಯಾ ರಾಜ್ಯದ ಅಧಿಕಾರಿಗಳೊಂದಿಗೆ ಆರಂಭಿಸಿ, ಮರಣದಂಡನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಅವುಗಳನ್ನು ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು” ಎಂದು ಹೃತ್ಪೂರ್ವಕವಾಗಿ ವಿನಂತಿಸಿದರು.

ಕೊನೆಯಲ್ಲಿ, “ಪುನರ್ವಸತಿ, ಪಶ್ಚಾತ್ತಾಪ ಮತ್ತು ವಿಮೋಚನೆಯ ಸಾಧ್ಯತೆಯನ್ನು ಒದಗಿಸುವ ಮರಣದಂಡನೆಗೆ ಪರ್ಯಾಯ ಮಾರ್ಗಗಳನ್ನು ಉತ್ತೇಜಿಸುವುದು ಅತ್ಯಂತ ಮುಖ್ಯ” ಎಂದು ಅವರು ಒತ್ತಿಹೇಳಿದರು.

“ಇವರು ಮಕ್ಕಳು, ತಂದೆ-ತಾಯಿಗಳು, ಸಹೋದರರು ಮತ್ತು ಸಹೋದರಿಯರು. ಅವರ ಜೀವನವು ಯಾವುದೇ ತಪ್ಪಿಗಿಂತಲೂ ಮೀರಿದ ಅಂತರ್ಗತ ಮೌಲ್ಯವನ್ನು ಹೊಂದಿದೆ, ಆದ್ದರಿಂದ, ಪ್ರಯತ್ನಗಳನ್ನು “ಪ್ರೀತಿ ಮತ್ತು ಕರುಣೆಯ ನಾಗರಿಕತೆಯನ್ನು” ಬೆಳೆಸುವತ್ತ ಕೇಂದ್ರೀಕರಿಸಬೇಕು ಎಂದು ಅವರು ಸಮಾರೋಪಗೊಳಿಸಿದರು.

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ: ಮರಣದಂಡನೆ ಅಂಗೀಕಾರಾರ್ಹವಲ್ಲ

ಏಪ್ರಿಲ್ 24ರಂದು, ಅಮೆರಿಕದ ಇಲಿನಾಯಿಸ್ ರಾಜ್ಯದಲ್ಲಿ ಮರಣದಂಡನೆ ರದ್ದುಗೊಂಡ 15ನೇ ವರ್ಷದ ಸ್ಮರಣಾರ್ಥ, ಚಿಕಾಗೋದ ಡೆಪಾಲ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ ವೀಡಿಯೊ ಸಂದೇಶದಲ್ಲಿ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಮರಣದಂಡನೆ ವಿರುದ್ಧ ಧರ್ಮಸಭೆಯ ನಿಲುವನ್ನು ಪುನರುಚ್ಚರಿಸಿದರು.

“ಸಾಮಾನ್ಯ ಹಿತವನ್ನು ಕಾಪಾಡುವುದು ಮತ್ತು ನ್ಯಾಯದ ಅವಶ್ಯಕತೆಗಳನ್ನು ಪೂರೈಸುವುದು ಮರಣದಂಡನೆಗೆ ಮೊರೆ ಹೋಗದೇ ಕೂಡ ಸಾಧ್ಯ” ಎಂದು ಅವರು ಪುನಃ ಹೇಳಿದರು.

“ಗರ್ಭಧಾರಣೆಯ ಕ್ಷಣದಿಂದ ಸಹಜ ಮರಣದವರೆಗೆ ಪ್ರತಿಯೊಂದು ಮಾನವ ಜೀವವೂ ಪವಿತ್ರವಾದದ್ದು ಮತ್ತು ರಕ್ಷಿಸಲ್ಪಡಲು ಅರ್ಹವಾಗಿದೆ ಎಂದು ಕಥೋಲಿಕ ಧರ್ಮಸಭೆ ನಿರಂತರವಾಗಿ ಬೋಧಿಸಿದೆ” ಎಂದು ಅವರು ನೆನಪಿಸಿದರು.

2018ರಲ್ಲಿ ಜಗದ್ಗುರುಗಳಾದ ಫ್ರಾನ್ಸಿಸ್ ಅನುಮೋದಿಸಿದ ಕಥೋಲಿಕ ಧರ್ಮಸಭೆಯ ಧರ್ಮೋಪದೇಶದ “ಹೊಸ ಆವೃತ್ತಿ”ಯ 2267ನೇ ಪರಿಚ್ಛೇದವನ್ನು ಉಲ್ಲೇಖಿಸಿದ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ, “ಅತ್ಯಂತ ಗಂಭೀರ ಅಪರಾಧಗಳನ್ನು ಎಸಗಿದ ನಂತರವೂ ವ್ಯಕ್ತಿಯ ಗೌರವ ಕಳೆದುಹೋಗುವುದಿಲ್ಲ” ಎಂದು ಹೇಳಿದರು. ಅಪರಾಧಿಗಳಿಗೆ ಯಾವಾಗಲೂ ವಿಮೋಚನೆಯ ಸಾಧ್ಯತೆ ಇರುತ್ತದೆ ಎಂದು ಅವರು ಒತ್ತಿಹೇಳಿದರು.

“ಆದ್ದರಿಂದ, ಶುಭಸಂದೇಶದ ಬೆಳಕಿನಲ್ಲಿ, ‘ಮರಣದಂಡನೆ ವ್ಯಕ್ತಿಯ ಅಲಂಘನೀಯತೆ ಮತ್ತು ಗೌರವದ ಮೇಲಿನ ದಾಳಿ ಆಗಿರುವುದರಿಂದ ಅದು ಅಂಗೀಕಾರಾರ್ಹವಲ್ಲ’ ಎಂದು ಧರ್ಮಸಭೆ ಬೋಧಿಸುತ್ತದೆ; ಮತ್ತು ಅದರ ವಿಶ್ವವ್ಯಾಪಿ ನಿರ್ಮೂಲನೆಗಾಗಿ ದೃಢಸಂಕಲ್ಪದಿಂದ ಕಾರ್ಯನಿರ್ವಹಿಸುತ್ತದೆ.”

ಇದಕ್ಕಿಂತ ಒಂದು ದಿನ ಮೊದಲು, ಏಪ್ರಿಲ್ 23ರಂದು, ಆಫ್ರಿಕಾದಿಂದ ಹಿಂದಿರುಗುವ ವಿಮಾನಯಾನ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ “ಅನ್ಯಾಯಕರವಾದ ಎಲ್ಲ ಕೃತ್ಯಗಳನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದರು.

“ಮಾನವ ಜೀವವನ್ನು ಕಸಿದುಕೊಳ್ಳುವುದನ್ನು ನಾನು ಖಂಡಿಸುತ್ತೇನೆ. ಮರಣದಂಡನೆಯನ್ನು ನಾನು ಖಂಡಿಸುತ್ತೇನೆ. ಮಾನವ ಜೀವವನ್ನು ಗೌರವಿಸಬೇಕು ಮತ್ತು ಗರ್ಭಧಾರಣೆಯಿಂದ ಸಹಜ ಮರಣದವರೆಗೆ ಪ್ರತಿಯೊಬ್ಬರ ಜೀವವೂ ಗೌರವಿಸಲ್ಪಟ್ಟು ರಕ್ಷಿಸಲ್ಪಡಬೇಕು ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

12 ಮೇ 2026, 19:38