ಅಣ್ವಸ್ತ್ರ ಅಭ್ಯಾಸ ನಡೆಸಿದ ರಷ್ಯಾ ಮತ್ತು ಬೆಲಾರಸ್. (ANSA) ಅಣ್ವಸ್ತ್ರ ಅಭ್ಯಾಸ ನಡೆಸಿದ ರಷ್ಯಾ ಮತ್ತು ಬೆಲಾರಸ್. (ANSA)  (ANSA)

ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ ಪರಿಶೀಲನಾ ಸಮ್ಮೇಳನದಲ್ಲಿ ಒಪ್ಪಂದಕ್ಕೆ ಬರಲ

ಅಣ್ವಸ್ತ್ರಗಳ ಹರಡುವಿಕೆಯನ್ನು ತಡೆಯುವ ಒಪ್ಪಂದವನ್ನು ಪರಿಶೀಲಿಸಲು ವಿಶ್ವಸಂಸ್ಥೆಯಲ್ಲಿ ನಾಲ್ಕು ವಾರಗಳ ಕಾಲ ನಡೆದ ಸಮ್ಮೇಳನವು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದೆ.

ವ್ಯಾಟಿಕನ್ ವರದಿ

ಅಣ್ವಸ್ತ್ರಗಳ ಅಪ್ರಸರಣ ಒಪ್ಪಂದದ (NPT) 11ನೇ ಪರಿಶೀಲನಾ ಸಮ್ಮೇಳನವು ಶುಕ್ರವಾರ ಅಂತಿಮ ದಾಖಲೆ ಅಂಗೀಕಾರವಿಲ್ಲದೆ ಮುಕ್ತಾಯಗೊಂಡಿತು. ಇದರಿಂದ ಭಾಗವಹಿಸಿದ್ದ ರಾಷ್ಟ್ರಗಳ ನಡುವೆ ಇನ್ನೊಮ್ಮೆ ಆಳವಾದ ಭಿನ್ನಾಭಿಪ್ರಾಯಗಳು ಬೆಳಕಿಗೆ ಬಂದವು.

ವಿಶ್ವಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಸಮ್ಮೇಳನದಲ್ಲಿ, ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿ, ಒಪ್ಪಂದದ ಅನುಷ್ಠಾನವನ್ನು ಪರಿಶೀಲಿಸುವುದಕ್ಕೂ ಅಣ್ವಸ್ತ್ರ ಅಪ್ರಸರಣ, ನಿರಸ್ತ್ರೀಕರಣ ಮತ್ತು ಅಣುಶಕ್ತಿಯ ಶಾಂತಿಯುತ ಬಳಕೆಯ ಕುರಿತು ಹೊಸ ಬದ್ಧತೆಗಳನ್ನು ರೂಪಿಸುವುದಕ್ಕೂ ಪ್ರಯತ್ನಿಸಿದರು. ಆದರೆ, ಹಲವು ವಾರಗಳ ಮಾತುಕತೆಗಳ ಬಳಿಕವೂ ಪ್ರತಿನಿಧಿಗಳು ಸಾಮಾನ್ಯ ಅಂತಿಮ ಪಠ್ಯದ ಕುರಿತು ಒಮ್ಮತಕ್ಕೆ ಬರಲು ವಿಫಲರಾದರು. ಭಿನ್ನಾಭಿಪ್ರಾಯಗಳ ಪ್ರಮುಖ ಅಂಶಗಳಲ್ಲಿ ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದ ಆತಂಕಗಳು, ಅಣ್ವಸ್ತ್ರ ಸಂಗ್ರಹಗಳ ಆಧುನೀಕರಣ ಮತ್ತು ಸಶಸ್ತ್ರ ಸಂಘರ್ಷ ಪೀಡಿತ ಪ್ರದೇಶಗಳಲ್ಲಿನ ಅಣು ಸೌಲಭ್ಯಗಳ ಕುರಿತ ಉದ್ವಿಗ್ನತೆಗಳು ಸೇರಿದ್ದವು. ಜಾಗತಿಕ ರಾಜಕೀಯ ಅಸ್ಥಿರತೆ ನಿರಂತರವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸಮ್ಮೇಳನವು ಏಕೀಕೃತ ಪ್ರತಿಕ್ರಿಯೆಯನ್ನು ರೂಪಿಸಲು ವಿಫಲವಾದುದಕ್ಕೆ ಹಲವಾರು ಪ್ರತಿನಿಧಿ ಮಂಡಳಿಗಳು ನಿರಾಶೆ ವ್ಯಕ್ತಪಡಿಸಿವೆ.

ಒಪ್ಪಂದ

1970ರಲ್ಲಿ ಜಾರಿಗೆ ಬಂದ ಅಣ್ವಸ್ತ್ರಗಳ ಅಪ್ರಸರಣ ಒಪ್ಪಂದ (NPT), ಅಂತರರಾಷ್ಟ್ರೀಯ ನಿರಸ್ತ್ರೀಕರಣ ವ್ಯವಸ್ಥೆಯ ಪ್ರಮುಖ ಅಡಿಪಾಯಗಳಲ್ಲಿ ಒಂದಾಗಿ ಉಳಿದಿದೆ. ಇದರ ಉದ್ದೇಶಗಳಲ್ಲಿ ಅಣ್ವಸ್ತ್ರಗಳ ಹರಡುವಿಕೆಯನ್ನು ತಡೆಯುವುದು, ಅಣುಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರವನ್ನು ಉತ್ತೇಜಿಸುವುದು ಮತ್ತು ಸಂಪೂರ್ಣ ಅಣ್ವಸ್ತ್ರ ನಿರಸ್ತ್ರೀಕರಣದ ಗುರಿಯನ್ನು ಮುಂದುವರಿಸುವುದು ಸೇರಿವೆ.

ಸಮ್ಮೇಳನದ ಅವಧಿಯಲ್ಲಿ,  ಭಾಗವಹಿಸಿದವರಲ್ಲಿ ಅನೇಕರು ರಾಷ್ಟ್ರಗಳ ನಡುವೆ ವಿಶ್ವಾಸವನ್ನು ಮರುಸ್ಥಾಪಿಸುವ ಅಗತ್ಯವನ್ನು ಮತ್ತು ಬಹುಪಕ್ಷೀಯ ಸಂವಾದವನ್ನು ಬಲಪಡಿಸುವ ತುರ್ತು ಅವಶ್ಯಕತೆಯನ್ನು ಒತ್ತಿ ಹೇಳಿದರು. ಅಣ್ವಸ್ತ್ರಗಳನ್ನು ಬಳಸುವುದರಿಂದ ಉಂಟಾಗಬಹುದಾದ ಭೀಕರ ಪರಿಣಾಮಗಳಿಗೆ ಸಂಬಂಧಿಸಿದ ಮಾನವೀಯ ಕಳವಳಗಳನ್ನೂ ಪದೇಪದೇ ಒತ್ತಿಹೇಳಲಾಯಿತು.

ಪೂಜ್ಯ ಜಗದ್ಗುರುಗಳು ಮತ್ತು ಜಗದ್ಗುರುಗಳ ಅಧಿಕಾರ ಪೀಠ

ಜಗದ್ಗುರುಗಳ ಅಧಿಕಾರ ಪೀಠವು ಸದಾ ಸಮಗ್ರ ನಿರಸ್ತ್ರೀಕರಣಕ್ಕೂ ಮತ್ತು ಅಣ್ವಸ್ತ್ರಗಳ ಸಂಪೂರ್ಣ ನಿರ್ಮೂಲನೆಗೂ ಕರೆ ನೀಡುತ್ತ ಬಂದಿದೆ. ಪರಸ್ಪರ ವಿನಾಶದ ಭೀತಿಯ ಮೇಲೆ ಶಾಂತಿಯನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಅದು ದೃಢವಾಗಿ ಹೇಳಿದೆ. ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ, ದಿವಂಗತ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಹಾಗೂ ಅವರ ಪೂರ್ವಾಧಿಕಾರಿಗಳು ನೀಡಿದ ಮನವಿಗಳನ್ನು ಪ್ರತಿಧ್ವನಿಸುತ್ತಾ, ವಿಶ್ವಸಂಸ್ಥೆಯಲ್ಲಿನ ಜಗದ್ಗುರುಗಳ ಅಧಿಕಾರ ಪೀಠದ ವೀಕ್ಷಕರು ಮತ್ತು ಪ್ರತಿನಿಧಿ ಮಂಡಳಿಗಳು, ಸಂವಾದ, ಸಹಕಾರ ಮತ್ತು ನ್ಯಾಯ ಹಾಗೂ ಸಹೋದರತ್ವದ ಮೇಲೆ ಆಧಾರಿತ ನಿಜವಾದ ಶಾಂತಿಯನ್ನು ಸಾಧಿಸುವ ನೈತಿಕ ಜವಾಬ್ದಾರಿಯನ್ನು ಅಂತರರಾಷ್ಟ್ರೀಯ ಸಮುದಾಯ ಹೊಂದಿದೆ ಎಂದು ನಿರಂತರವಾಗಿ ಒತ್ತಿಹೇಳಿವೆ.

ಸಮ್ಮೇಳನವು ಯಾವುದೇ ಒಪ್ಪಂದವಿಲ್ಲದೆ ಅಂತ್ಯಗೊಂಡಿದ್ದರೂ, ಹೆಚ್ಚುತ್ತಿರುವ ಅಸ್ಥಿರ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ಅಣ್ವಸ್ತ್ರಗಳು ಉಂಟುಮಾಡುವ ಗಂಭೀರ ಅಪಾಯಗಳ ಕುರಿತು ಚರ್ಚೆಗಳು ಮುಂದುವರಿದ ಜಾಗೃತಿಯನ್ನು ತೋರಿಸಿವೆ ಎಂದು ರಾಜತಾಂತ್ರಿಕರು ಗಮನಿಸಿದರು. ಜೊತೆಗೆ, ಮಾತುಕತೆಗಳ ಮಾರ್ಗಗಳನ್ನು ಉಳಿಸಿಕೊಳ್ಳುವ ಅಗತ್ಯವನ್ನೂ ಅವರು ಒತ್ತಿಹೇಳಿದರು.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

23 ಮೇ 2026, 12:22