ಗಾಜಾದಿಂದ ರೋಮ್‌ಗೆ: ಸಪಿಯೆನ್ಸಾ ವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ ವಿದ್ಯಾರ್ಥಿಗಳು
ಲೇಖಕರು: ಆಂಟೊನೆಲ್ಲಾ ಪಾಲೆರ್ಮೊ ಮತ್ತು ಲಿಂಡಾ ಬೋರ್ಡೋನಿ
ಈ ವಾರ ರೋಮ್‌ಗೆ ಆಗಮಿಸಿದ ಗಾಜಾ ಪ್ರದೇಶದ 72 ವಿದ್ಯಾರ್ಥಿಗಳಿಗೆ, ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುವ ಈ ಅವಕಾಶವು ಕೇವಲ ಶೈಕ್ಷಣಿಕ ಪಯಣದ ಆರಂಭವಲ್ಲ; ಯುದ್ಧದಿಂದ ಮುರಿದುಹೋಗಿದ್ದ ಭವಿಷ್ಯವನ್ನು ಮರುನಿರ್ಮಿಸುವ ಹೊಸ ಅಧ್ಯಾಯವಾಗಿದೆ.
ನಾದಾ ಜೌದಾ ಮತ್ತು ಸಾಲೆಂ ಅಬುಮುಸ್ತಫಾ, ರೋಮ್‌ನ ಸಪಿಯೆನ್ಸಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದ ನಾಲ್ವರು ವಿದ್ಯಾರ್ಥಿಗಳಲ್ಲಿ ಇಬ್ಬರು. ಈ ಮಾನವೀಯ ಮತ್ತು ಶೈಕ್ಷಣಿಕ ಯೋಜನೆಯನ್ನು ವಿಶ್ವವಿದ್ಯಾಲಯ, ರೋಮ್ ಧರ್ಮಕ್ಷೇತ್ರ ಮತ್ತು ಸಂತ್ ಎಜಿಡಿಯೋ ಸಮುದಾಯವು ಒಟ್ಟಾಗಿ ಮುಂದಾಳತ್ವವಹಿಸಿವೆ.
ಅವರ ಹೊಸ ಪಯಣವು ವಿಶೇಷ ಕ್ಷಣದೊಂದಿಗೆ ಆರಂಭವಾಯಿತು. ಭವಿಷ್ಯದ ನಾಯಕರನ್ನು ರೂಪಿಸಿ, ಅವರನ್ನು ಶಾಂತಿಯ ಶಿಲ್ಪಿಗಳನ್ನಾಗಿ ಮಾಡುವ ವಿಶ್ವವಿದ್ಯಾಲಯದ ಧ್ಯೇಯವನ್ನು ಪ್ರಶಂಸಿಸಲು ಬಂದಿದ್ದ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರನ್ನು ಸ್ವಾಗತಿಸುವ ಅವಕಾಶ ಅವರಿಗೆ ದೊರೆಯಿತು.
ಸಪಿಯೆನ್ಸಾ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಗಾಜಾ ಪ್ರದೇಶದಿಂದ ವಿಶ್ವವಿದ್ಯಾಲಯ ಮಾನವೀಯ ಮಾರ್ಗವನ್ನು ತೆರೆಯುವ ಒಪ್ಪಂದದ ಬಗ್ಗೆ ಕೂಡ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಫೆಬ್ರವರಿಯಲ್ಲಿ ಸಹಿ ಮಾಡಲಾದ ಈ ಒಪ್ಪಂದವು, ಗಾಜಾ ಯುದ್ಧದಿಂದ ಬಾಧಿತರಾದ ಯುವ ಪ್ಯಾಲೆಸ್ತೀನಿಯರಿಗೆ ಇಟಲಿಯಲ್ಲಿ ತಮ್ಮ ವಿಶ್ವವಿದ್ಯಾಲಯ ಶಿಕ್ಷಣವನ್ನು ಮುಂದುವರಿಸಲು ಅವಕಾಶ ಕಲ್ಪಿಸುವುದನ್ನು ಉದ್ದೇಶಿಸಿದೆ. ಇದರಲ್ಲಿ ವಿದ್ಯಾರ್ಥಿವೇತನ, ವಸತಿ ಹಾಗೂ ಸಮಾಜದಲ್ಲಿ ಬೆರೆಸುವ ಕಾರ್ಯಕ್ರಮಗಳೂ ಸೇರಿವೆ.
ವಿಶ್ವವಿದ್ಯಾಲಯದಲ್ಲಿ ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ
ವಿಶ್ವವಿದ್ಯಾಲಯಗಳು ಭೇಟಿಯ, ಸಂವಾದದ ಮತ್ತು ಶಾಂತಿ ನಿರ್ಮಾಣದ ಸ್ಥಳಗಳಾಗಬೇಕು ಎಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಶೈಕ್ಷಣಿಕ ಸಮುದಾಯವನ್ನು ಪ್ರೋತ್ಸಾಹಿಸಿದ ಸಂದರ್ಭದಲ್ಲಿ, ಗಾಜಾ ಪ್ರದೇಶದ ವಿದ್ಯಾರ್ಥಿಗಳ ಸಾನ್ನಿಧ್ಯವು ಅಧ್ಯಯನ ಮತ್ತು ಸಂಶೋಧನೆಯಲ್ಲಿ ಹೂಡಿಕೆ ಮಾಡುವ ಅಗತ್ಯಕ್ಕೆ ಸ್ಪರ್ಶಿಸುವ ಸಾಕ್ಷಿಯಾಯಿತು.
ಅವರ ಮಾತುಗಳಲ್ಲಿ ಹೇಳುವುದಾದರೆ, ಇದು “ಜೀವನಕ್ಕೆ ನೀಡುವ ಒಂದು ಮೂಲಭೂತ ‘ಹೌದು’ — ನಿರಪರಾಧ ಜೀವಕ್ಕೆ, ಯುವ ಜೀವಕ್ಕೆ, ಮತ್ತು ಶಾಂತಿ ಹಾಗೂ ನ್ಯಾಯಕ್ಕಾಗಿ ಕೂಗುತ್ತಿರುವ ಜನರ ಜೀವಕ್ಕೆ ನೀಡುವ ‘ಹೌದು’” ಆಗಿದೆ. ನಾದಾ, ಸಾಲೆಂ ಮತ್ತು ಸಪಿಯೆನ್ಸಾದಲ್ಲಿರುವ ಅವರಿಬ್ಬರು ಸಹಪಾಠಿಗಳು, 2025–2026ನೇ ಶೈಕ್ಷಣಿಕ ವರ್ಷದಲ್ಲಿ ಇಂಗ್ಲಿಷ್ ಭಾಷೆಯ ಪದವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಈ ವಿಶೇಷ ಯೋಜನೆಯ ಮೂಲಕ ಪ್ರವೇಶ ಪಡೆದ ಎಲ್ಲಾ ಪ್ಯಾಲೆಸ್ತೀನ್ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ವಿದ್ಯಾರ್ಥಿವೇತನವನ್ನು ಮೀಸಲಿಟ್ಟಿದೆ. ಜೊತೆಗೆ, ಅವರ ಅಧ್ಯಯನ ಅವಧಿಯೆಲ್ಲಾ ಶೈಕ್ಷಣಿಕ ಮಾರ್ಗದರ್ಶನ, ನಿರ್ದೇಶನ ಸೇವೆಗಳು, ಆರೋಗ್ಯ ಸಹಾಯ ಮತ್ತು ಮಾನಸಿಕ ಬೆಂಬಲವನ್ನು ಒದಗಿಸಲಾಗುತ್ತದೆ. ಇದರಲ್ಲಿ ವಿಶ್ವವಿದ್ಯಾಲಯದ ಸಮಾಲೋಚನಾ ಕೇಂದ್ರದ ಸೇವೆಗಳೂ ಸೇರಿವೆ.
ಇನ್ನೊಂದೆಡೆ, ರೋಮ್ ಧರ್ಮಕ್ಷೇತ್ರವು ವಿದ್ಯಾರ್ಥಿಗಳು ಇಟಲಿಗೆ ಬಂದ ದಿನದಿಂದ 2029ರ ಮಾರ್ಚ್ ತನಕ ವಿಶ್ವವಿದ್ಯಾಲಯ ನಿವಾಸಗಳಲ್ಲಿ ಉಚಿತ ವಸತಿಯನ್ನು ಒದಗಿಸಲಿದೆ. ತಮ್ಮ ಸಂಶೋಧನಾ ಪ್ರಬಂಧಗಳನ್ನು ಪೂರ್ಣಗೊಳಿಸಲು ಅಗತ್ಯವಿದ್ದರೆ, ವಸತಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸುವ ಅವಕಾಶವೂ ಇರುತ್ತದೆ. ಇದಲ್ಲದೆ, ವಿಶ್ವವಿದ್ಯಾಲಯದ ಧರ್ಮಗುರು ಸೇವೆಯ ಮೂಲಕ, ಅವರ ಸಾಮಾಜಿಕ ಒಗ್ಗೂಡಿಕೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಗೆ ಸಹ ಬೆಂಬಲ ನೀಡಲಾಗುತ್ತದೆ.
ಅದೇ ಸಮಯದಲ್ಲಿ, ಸಂತ್ ಎಜಿಡಿಯೋ ಸಮುದಾಯವು ಇಟಾಲಿಯನ್ ಭಾಷೆ ಮತ್ತು ಸಂಸ್ಕೃತಿ ಪಾಠಗಳನ್ನು ನೀಡಲಿದೆ. 2016ರಿಂದ ಸಂತ್ ಎಜಿಡಿಯೋ ಪ್ರೋತ್ಸಾಹಿಸುತ್ತಿರುವ ಮಾನವೀಯ ಮಾರ್ಗ ಯೋಜನೆಯ ಭಾಗವಾಗಿರುವ ಈ ಕಾರ್ಯಕ್ರಮವು, ಸಾವಿರಾರು ನಿರಾಶ್ರಿತರಿಗೆ ಸುರಕ್ಷಿತವಾಗಿ ಇಟಲಿಗೆ ಆಗಮಿಸಲು ಅವಕಾಶ ಕಲ್ಪಿಸಿದೆ.
ನಾದಾ ಅವರ ಕಥೆ
ವ್ಯಾಟಿಕನ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಹತ್ತೊಂಬತ್ತು ವರ್ಷದ ನಾದಾ ಜೌದಾ, ಯುದ್ಧವು ತಮ್ಮ ವಿದ್ಯಾಭ್ಯಾಸವನ್ನು ಹೇಗೆ ಏಕಾಏಕಿ ಅಡ್ಡಿಪಡಿಸಿತು ಎಂಬುದನ್ನು ನೆನಪಿಸಿಕೊಂಡರು. “ಯುದ್ಧ ಆರಂಭವಾದಾಗ ನನಗೆ 17 ವರ್ಷ. ನಾನು ಪ್ರೌಢಶಾಲೆಯ ಕೊನೆಯ ವರ್ಷದಲ್ಲಿದ್ದೆ, ಅಕ್ಟೋಬರ್ 7ರಂದು ನನಗೆ ಇತಿಹಾಸ ಪರೀಕ್ಷೆ ಇತ್ತು ಎಂಬುದು ಇನ್ನೂ ನೆನಪಿದೆ. ಅದರ ನಂತರ ನಾವು ಸುಮಾರು ಎರಡು ವರ್ಷಗಳ ಕಾಲ ಶಾಲೆಗೆ ಹೋಗಲೇ ಇಲ್ಲ.”
ರಫಾದ ಮೂಲದ ನಾದಾ, ಸಂಘರ್ಷದ ಅವಧಿಯಲ್ಲಿ ತಮ್ಮ ಕುಟುಂಬ ಅನುಭವಿಸಿದ ನಿರಂತರ ಸ್ಥಳಾಂತರಗಳ ಬಗ್ಗೆ ವಿವರಿಸಿದರು. 2023ರಲ್ಲಿ ತಮ್ಮ ತಂದೆಯ ಮರಣದ ಬಳಿಕ, ಅವರು, ಅವರ ತಾಯಿ ಮತ್ತು ಇಬ್ಬರು ಕಿರಿಯ ಸಹೋದರಿಯರು ಯುದ್ಧದ ಕಷ್ಟಗಳನ್ನು ಏಕಾಂಗಿಯಾಗಿ ಎದುರಿಸಬೇಕಾಯಿತು. “ನಾವು ತುಂಬಾ ಸಂಕಷ್ಟ ಅನುಭವಿಸುತ್ತಿದ್ದೆವು. ನಾವು ಸಣ್ಣ ಕುಟುಂಬವಾಗಿದ್ದೆವು ಮತ್ತು ಅವಲಂಬಿಸಲು ಯಾರೂ ಇರಲಿಲ್ಲ,” ಎಂದು ಅವರು ಹೇಳಿದರು. ಯುದ್ಧ ಆರಂಭಕ್ಕೂ ಮೊದಲು ಬಾಲಮಂದಿರದ ನಿರ್ದೇಶಕಿಯಾಗಿದ್ದ ಅವರ ತಾಯಿ, ಸಂಘರ್ಷ ಶುರುವಾದ ಬಳಿಕ ಕೆಲಸ ಕಳೆದುಕೊಂಡರು. ಪ್ರತಿ ಬಾರಿ ಸ್ಥಳಾಂತರಗೊಳ್ಳುವಾಗಲೂ ತಮ್ಮ ಪಾಠ ಪುಸ್ತಕಗಳನ್ನು ಜೊತೆಗೇ ಹೊತ್ತೊಯ್ಯುತ್ತಿದ್ದೆ ಎಂದು ನಾದಾ ಹೇಳಿದರು. ಸುತ್ತಮುತ್ತಲಿನ ಅಸ್ಥಿರ ಪರಿಸ್ಥಿತಿಯ ನಡುವೆಯೂ ಅವರು ಓದನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದರು.
ಇಸ್ರಾಯೇಲ್ ಸೇನೆ ರಫಾಗೆ ಪ್ರವೇಶಿಸಿದ ನಂತರ, ಅವರ ಕುಟುಂಬ ಮೊದಲಿಗೆ ತಾತ್ಕಾಲಿಕ ಗುಡಾರಗಳಲ್ಲಿ ಆಶ್ರಯ ಪಡೆದಿತ್ತು. “ಕುಡಿಯಲು ನೀರು ತುಂಬಾ ಕಡಿಮೆ ಇತ್ತು. ಆಹಾರದ ಬೆಲೆಗಳು ಅತಿಯಾಗಿ ಏರಿಕೆಯಾಗಿದ್ದವು,” ಎಂದು ಅವರು ನೆನಪಿಸಿಕೊಂಡರು. ನಂತರ ಅವರು ಖಾನ್ ಯೂನಿಸ್‌ಗೆ ಸ್ಥಳಾಂತರಗೊಂಡರು. ಅಲ್ಲಿ ಸಂಘರ್ಷದಲ್ಲಿ ಹಾನಿಗೊಳಗಾದ ಮನೆಯಲ್ಲಿ ವಾಸಿಸುತ್ತಿದ್ದರು. “ಅದು ಚಳಿಗಾಲ. ತುಂಬಾ ಚಳಿ ಇತ್ತು. ಮನೆಯ ಮೇಲ್ಚಾವಣಿ ಕುಸಿದಿತ್ತು ಮತ್ತು ಮಳೆ ಮನೆಯೊಳಗೆ ಬರುತ್ತಿತ್ತು,” ಎಂದು ಅವರು ಹೇಳಿದರು. ಆ ಕುಟುಂಬ ಮತ್ತೆ ಸ್ಥಳಾಂತರಗೊಳ್ಳಬೇಕಾಯಿತು. ಕೊನೆಗೆ, ಮರದ ಫಲಕಗಳಿಂದ ಮುಚ್ಚಿದ ದುರ್ಬಲ ಆಶ್ರಯದಲ್ಲಿ ಅವರು ತಂಗಿದರು. ಹಿರಿಯ ಸಹೋದರಿಯಾಗಿ, ನೆರವು ವಿತರಣೆ ಕೇಂದ್ರಗಳಿಂದ ನೀರನ್ನು ಹೊತ್ತು ಕುಟುಂಬದ ಆಶ್ರಯಕ್ಕೆ ತರುವ ಜವಾಬ್ದಾರಿಯನ್ನು ನಾದಾ ವಹಿಸಿಕೊಂಡರು.
ತಮ್ಮ ತಾಯಿಯ ಆರೋಗ್ಯದ ಕುರಿತೂ ಅವರು ಕಳವಳ ವ್ಯಕ್ತಪಡಿಸಿದರು. ಈ ಹಿಂದೆ ರಕ್ತ ಕ್ಯಾನ್ಸರ್‌ನಿಂದ ಬಳಲಿದ್ದ ಅವರ ತಾಯಿಗೆ, ಗಾಜಾದ ಬಹುತೇಕ ಆರೋಗ್ಯ ವ್ಯವಸ್ಥೆ ನಾಶವಾಗಿರುವುದರಿಂದ ಹಲವಾರು ವರ್ಷಗಳಿಂದ ವೈದ್ಯಕೀಯ ತಪಾಸಣೆ ಪಡೆಯಲು ಸಾಧ್ಯವಾಗಿಲ್ಲ. “ಅಲ್ಲಿ ಆಸ್ಪತ್ರೆಗಳೇ ಉಳಿದಿಲ್ಲ,” ಎಂದು ನಾದಾ ಮೃದುವಾಗಿ ಹೇಳಿದರು. “ಅವರ ಬಗ್ಗೆ ನನಗೆ ತುಂಬಾ ಚಿಂತೆಯಾಗಿದೆ.”
ಇಷ್ಟೆಲ್ಲ ನೋವಿನ ನಡುವೆಯೂ, ರೋಮ್‌ನಲ್ಲಿರುವ ಈ ಅವಕಾಶವು ತಮಗೆ ವಿದ್ಯಾಭ್ಯಾಸ ಮುಂದುವರಿಸಲು ಮಾತ್ರವಲ್ಲ, ಗಾಜಾದ ಪ್ಯಾಲೆಸ್ತೀನ್ ಜನರ ಅನುಭವಕ್ಕೆ ಸಾಕ್ಷಿಯಾಗಲು ಸಹ ಸಹಾಯ ಮಾಡಲಿ ಎಂದು ನಾದಾ ಆಶಿಸುತ್ತಾರೆ. “ನಾವು ಏನೆಲ್ಲ ಅನುಭವಿಸಿದ್ದೇವೆ ಎಂಬುದನ್ನು ಎಲ್ಲರೂ ತಿಳಿಯಬೇಕು ಎಂದು ನಾನು ಬಯಸುತ್ತೇನೆ,” ಎಂದು ಅವರು ಹೇಳಿದರು. “ನನ್ನ ತಾಯಿ ಮತ್ತು ಸಹೋದರಿಯರು ಹೆಮ್ಮೆಪಡುವಂತಹ ವ್ಯಕ್ತಿಯಾಗಬೇಕು ಎಂಬುದು ನನ್ನ ಆಸೆ.”
ಒಂದು ದಿನ ತಮ್ಮ ತಾಯಿಯೂ ರೋಮ್‌ಗೆ ಬರಲು ಸಾಧ್ಯವಾಗಲಿ ಎಂಬ ಆಶೆಯನ್ನೂ ಅವರು ವ್ಯಕ್ತಪಡಿಸಿದರು. “ರೋಮ್ ಎಷ್ಟು ಸುಂದರವಾಗಿದೆ ಎಂಬುದನ್ನು ಅವರು ನೋಡಲಿ ಎಂದು ನಾನು ಬಯಸುತ್ತೇನೆ,ಇಲ್ಲಿ ಅವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯಲಿ ಎಂಬುದೂ ನನ್ನ ಆಶೆ” ಎಂದು ನಾದಾ ಹೇಳಿದರು.
ಸಾಲೆಂ ಅವರ ಕಥೆ
ಖಾನ್ ಯೂನಿಸ್ ಮೂಲದ ಸಾಲೆಂ ಅಬುಮುಸ್ತಫಾ ಕೂಡ ಗಾಜಾದಲ್ಲಿ ಉಳಿದಿರುವ ವಿನಾಶದ ಬಗ್ಗೆ ಮಾತನಾಡಿದರು. 20 ವರ್ಷದ ಈ ವಿದ್ಯಾರ್ಥಿ, ತಮ್ಮ ಕುಟುಂಬವನ್ನು ವಿದ್ಯುತ್‌ವಿಲ್ಲದ ಗುಡಾರದಲ್ಲಿ ಬಿಟ್ಟು ಬಂದಿರುವುದಾಗಿ ಹೇಳಿದರು. ಪ್ರತಿದಿನ ನೀರು ಮತ್ತು ಇತರ ಮೂಲಭೂತ ಅಗತ್ಯಗಳನ್ನು ಹುಡುಕುವುದೇ ಅವರ ಬದುಕಿನ ಹೋರಾಟವಾಗಿದೆ.
“ನಮ್ಮ ನಾಲ್ಕು ಮಹಡಿಯ ಮನೆ ಯುದ್ಧದ ವೇಳೆ ಸಂಪೂರ್ಣ ನಾಶವಾಯಿತು,” ಎಂದು ಅವರು ಹೇಳಿದರು.
ರೋಮ್‌ನಲ್ಲಿ ವಿದ್ಯಾಭ್ಯಾಸ ಮಾಡುವ ಈ ಅವಕಾಶವು, ತಿಂಗಳಗಟ್ಟಲೆ ಸಂಕಷ್ಟ ಮತ್ತು ಅನಿಶ್ಚಿತತೆಯನ್ನು ಅನುಭವಿಸಿರುವ ತಮ್ಮ ಕುಟುಂಬಕ್ಕೆ ಮತ್ತೆ ಆಶೆಯನ್ನು ತರುವ ಒಂದು ಅವಕಾಶವಾಗಿದೆ ಎಂದು ಸಾಲೆಂ ವಿವರಿಸಿದರು. “ನಾನು ಇಲ್ಲಿ ಉತ್ತಮ ಭವಿಷ್ಯಕ್ಕಾಗಿ ಬಂದಿದ್ದೇನೆ. ನನ್ನ ಕುಟುಂಬ ನನ್ನ ಬಗ್ಗೆ ಹೆಮ್ಮೆಪಡುವಂತೆ ಮಾಡಬೇಕು ಎಂಬುದು ನನ್ನ ಆಶೆ,” ಎಂದು ಅವರು ಹೇಳಿದರು.
ಕೊನೆಯಲ್ಲಿ, ಕೃತಜ್ಞತೆ, ಆತ್ಮಗೌರವ ಮತ್ತು ಆಶೆಯ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಸಾಲೆಂ ಹೀಗೆ ಹೇಳಿದರು: “ಪ್ಯಾಲೆಸ್ತೀನ್ ಚಿರಾಯುವಾಗಲಿ. ಇಟಲಿ ಚಿರಾಯುವಾಗಲಿ.”
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).