ಉಕ್ರೇನಿನೋರ್ವ ತಾಯಿ: ‘ಯುದ್ಧ ನನ್ನ ಮಗನನ್ನು ಕಿತ್ತುಕೊಂಡಿತು. ಈಗ ನಾನು ಎಲ್ಲರ ತಾಯಿ’
ಲೇಖಕರು: ಸ್ವೀತ್ಲಾನಾ ದುಖೋವ್ಯ್ಚ್
ನಾವು ಸಾಮಾನ್ಯವಾಗಿ ಭರವಸೆಯನ್ನು ಒಂದು ಹಗುರವಾದ ಆಲೋಚನೆ, ಉತ್ತಮ ಭವಿಷ್ಯದ ಕನಸು ಎಂದು ಕಲ್ಪಿಸಿಕೊಳ್ಳುತ್ತೇವೆ. ಆದರೆ ಆಳವಾದ ನೋವಿನ ಸಂದರ್ಭಗಳಲ್ಲಿ, ಭರವಸೆ ಇನ್ನಷ್ಟು ಗಾಢವಾದ ಅರ್ಥವನ್ನು ಪಡೆಯುತ್ತದೆ: ಅದು ಜೀವನವಾಗುತ್ತದೆ—ಎಲ್ಲದರ ನಡುವೆಯೂ ಬದುಕುವುದನ್ನು ಮುಂದುವರಿಸುವ ಜಾಗೃತ ನಿರ್ಧಾರವಾಗುತ್ತದೆ. ಮತ್ತು ನೋವನ್ನು ಮತ್ತೊಬ್ಬ ಮಾನವನೊಂದಿಗೆ ಹಂಚಿಕೊಂಡಾಗ ಅದು ನಿರಾಶೆಯಾಗಿ ಮಾರ್ಪಡುವುದಿಲ್ಲ.
ಯುದ್ಧರಂಗದಲ್ಲಿ ಮೃತಪಟ್ಟ ಉಕ್ರೇನಿನ ಸೈನಿಕನ ತಾಯಿ ಲ್ಯೂಬೋವ್ ಅವರಿಗಾಗಿ, ಪುನರ್ವಸತಿ ಯೋಜನೆಯಲ್ಲಿ ಭಾಗವಹಿಸುವ ನಿರ್ಧಾರಕ್ಕಿಂತಲೂ ಮೊದಲು ಭರವಸೆ ಹುಟ್ಟಿಕೊಂಡಿತ್ತು. ಅದರ ಬೇರುಗಳು ಅವರ ಮಗನ ಹೃದಯದಲ್ಲಿವೆ.
ಯುದ್ಧರಂಗದಿಂದ ಹಿಂದಿರುಗಿದ ಸೈನಿಕನಿಗೆ ನೀಡುವ ಪ್ರತಿಯೊಂದು ಅಪ್ಪುಗೆ, ಪ್ರೀತಿಯಿಂದ ಸಿದ್ಧಪಡಿಸಲಾದ ಪ್ರತಿಯೊಂದು ಆಹಾರದ ಪೊಟ್ಟಣ, ಯುದ್ಧದಿಂದ ನೋವು ಅನುಭವಿಸಿದ ಕುಟುಂಬಕ್ಕೆ ಹೇಳುವ ಪ್ರತಿಯೊಂದು ಸಾಂತ್ವನದ ಮಾತು—ಇವೆಲ್ಲವೂ ಅರಳುವ ಭರವಸೆಯ ಬೀಜಗಳಾಗಿವೆ.
ಈ ದೈನಂದಿನ ಕಾರ್ಯಗಳಲ್ಲಿ ನೆನಪು ಮತ್ತು ಪ್ರೀತಿ ಒಂದಾಗುತ್ತವೆ. ಅವು ನೋವನ್ನು ಹಂಚಿಕೊಂಡ ಜೀವನವಾಗಿ ಪರಿವರ್ತಿಸುತ್ತವೆ ಮತ್ತು ಉಳಿದಿರುವವರನ್ನೂ ಹೋರಾಡಿದವರನ್ನೂ ಸಂಪರ್ಕಿಸುವ ಅದೃಶ್ಯ ಬಂಧವಾಗುತ್ತವೆ.
ತನ್ನ “ಸಾಶುನಿಯಾ”ನ ನೆನಪು
“ಸಾಶುನಿಯಾ”—ಈ ಮಮತೆಯ ಅಡ್ಡಹೆಸರಿನಿಂದಲೇ ಲ್ಯೂಬೋವ್ ಅವರು ತಮ್ಮ ಮಗ ಒಲೆಕ್ಸಾಂಡರ್ ಟಿಮ್ಚೆಂಕೋ ಅವರನ್ನು ಇನ್ನೂ ಕರೆಯುತ್ತಾರೆ. 2024ರ ಫೆಬ್ರವರಿ 28ರಂದು ದೇಶವನ್ನು ರಕ್ಷಿಸುವ ವೇಳೆ ಅವರು ಯುದ್ಧರಂಗದಲ್ಲಿ ಮೃತಪಟ್ಟರು. ಅವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು.
“ಇದು ತುಂಬಾ ಕಷ್ಟ,” ಎಂದು ಆ ಮಹಿಳೆ ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಹೇಳಿದರು. “ಆದರೆ ನಾನು ನನ್ನೊಳಗೆ ಮುಚ್ಚಿಕೊಳ್ಳದಿರಲು ಪ್ರಯತ್ನಿಸುತ್ತೇನೆ. ಇತರರಿಗೆ ಉಪಯುಕ್ತವಾಗಿರಲು ಪ್ರಯತ್ನಿಸುತ್ತೇನೆ. ನಾವು ಶಾಶ್ವತವಲ್ಲ. ನಾವು ಇಲ್ಲದಾದ ಮೇಲೂ ಅವನ ನೆನಪು ಪ್ರಕಾಶಮಾನವಾಗಿ, ಗೌರವಯುತವಾಗಿ ಮತ್ತು ಮಾನ್ಯತೆಯಿಂದ ಉಳಿಯಲಿ ಎಂದು ನಾನು ಬಯಸುತ್ತೇನೆ.”
ಯುದ್ಧಕ್ಕೂ ಮೊದಲು, ಒಲೆಕ್ಸಾಂಡರ್ ಅವರು ಉಕ್ರೇನಿನಲ್ಲಿ ಕಡ್ಡಾಯ ಸೈನಿಕ ಸೇವೆ ಸಲ್ಲಿಸಿರಲಿಲ್ಲ. ಏಕೆಂದರೆ ಅವರ ಅಣ್ಣ 27ನೇ ವಯಸ್ಸಿನಲ್ಲಿ ದುರ್ಘಟನೆಯಲ್ಲಿ ಮೃತಪಟ್ಟ ನಂತರ ಅವರಿಗೆ ಏಳು ವರ್ಷಗಳ ವಿನಾಯಿತಿ ದೊರೆತಿತ್ತು.
ಅವರು ವಿನಿಟ್ಸಿಯಾ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅಲ್ಲಿ ಪದವಿ ಪಡೆದಿದ್ದರು. ಮುಂದುವರೆದು ಓದಲು ಬಯಸಿದ್ದರೂ, ತಮ್ಮ ಅಣ್ಣನ ಸಾವಿನ ನಂತರ ಸ್ವಲ್ಪ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿ, ತಂದೆಯೊಂದಿಗೆ ಕಾಂಬೈನ್ ಹಾರ್ವೆಸ್ಟರ್‌ನಲ್ಲಿ ಕೆಲಸ ಮಾಡಲು ಆರಂಭಿಸಿದರು.
“ಅವನಿಗೆ ಹೊಲಗಳು ತುಂಬಾ ಇಷ್ಟ,” ಎಂದು ತಾಯಿ ನೆನಪಿಸಿಕೊಳ್ಳುತ್ತಾರೆ. “ಗೋಧಿ ಮತ್ತು ಜೋಳ ಕೊಯ್ಲು ಮಾಡುವುದು ಅವನಿಗೆ ತುಂಬಾ ಪ್ರಿಯವಾಗಿತ್ತು. ಕೊಯ್ಲಿನ ವೇಳೆ ಚಿಕ್ಕ ಮೊಲಗಳಿಗೆ ಗಾಯವಾಗದಂತೆ ಅವುಗಳನ್ನು ಕಾಪಾಡುತ್ತಿದ್ದ. ಪ್ರಕೃತಿ, ಮೀನುಗಾರಿಕೆ—ಇವೆಲ್ಲವೂ ಅವನಿಗೆ ಬಹಳ ಇಷ್ಟ. ಅವನು ತುಂಬಾ ದಯಾಳು ಹುಡುಗನಾಗಿದ್ದ.”
ದೂರವಾಣಿಯಲ್ಲಿನ ಕೊನೆಯ ಮಾತುಗಳು
ರಷ್ಯಾದ ದೊಡ್ಡ ಮಟ್ಟದ ಆಕ್ರಮಣ ಆರಂಭವಾದಾಗ, ಒಲೆಕ್ಸಾಂಡರ್ ತಮ್ಮ ತಂದೆಯೊಂದಿಗೆ ಸ್ವಯಂಪ್ರೇರಿತರಾಗಿ ಸಶಸ್ತ್ರ ಪಡೆಗಳಿಗೆ ಸೇರಲು ನಿರ್ಧರಿಸಿದರು. ಅವರು ಕೆಲವು ತಿಂಗಳು ಪ್ರಾದೇಶಿಕ ರಕ್ಷಣಾ ದಳದಲ್ಲಿ ಸೇವೆ ಸಲ್ಲಿಸಿ, ನಂತರ ಬೆಲಾರಸ್ ಗಡಿಭಾಗಕ್ಕೆ ಕಳುಹಿಸಲ್ಪಟ್ಟರು. ಬಳಿಕ ಡೊನೆಟ್ಸ್ಕ್ ಪ್ರದೇಶದ ಕ್ರಾಸ್ನೋಹೊರಿವ್ಕಾಗೆ ವರ್ಗಾಯಿಸಲ್ಪಟ್ಟರು.
ಅವರಿಗೆ ಮೊಣಕಾಲಿನ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ಚಿಕಿತ್ಸೆ ಪಡೆದರು. ಚಿಕಿತ್ಸೆ ಅವಧಿಯಲ್ಲಿ ಮನೆಗೆ ಮರಳಲು ಸಾಧ್ಯವಾಗಿದ್ದರೂ, ನಿಗದಿತ ವಿಶ್ರಾಂತಿ ಅವಧಿ ಮುಗಿಯುವ ಮುನ್ನವೇ ಮತ್ತೆ ಯುದ್ಧರಂಗಕ್ಕೆ ಹಿಂತಿರುಗಲು ಅವರು ನಿರ್ಧರಿಸಿದರು. “ಸಾಕಷ್ಟು ಯೋಧರು ಇಲ್ಲದ ಕಾರಣ ಒಲೆಕ್ಸಾಂಡರ್ ಬರಲೇಬೇಕೆಂದು ಕಮಾಂಡರ್ ಅವನಿಗೆ ಕರೆ ಮಾಡಿದ್ದರು ಎಂದು ಲ್ಯೂಬೋವ್ ನೆನಪಿಸಿಕೊಳ್ಳುತ್ತಾರೆ.
ಒಲೆಕ್ಸಾಂಡರ್ ಮತ್ತೆ ಡೊನೆಟ್ಸ್ಕ್ ಪ್ರದೇಶದ ಕ್ರಾಸ್ನೋಹೊರಿವ್ಕಾಗೆ ತೆರಳಿದರು. ಹೊಸ ಸ್ಥಾನಕ್ಕೆ ತಲುಪಿದ ಮೂರನೇ ದಿನವೇ ಎಲ್ಲರಿಗೂ ಮುಂಚೂಣಿಗೆ ತೆರಳುವ ಆದೇಶ ಬಂತು. ಅಲ್ಲಿಯೇ ಒಲೆಕ್ಸಾಂಡರ್ ತಮ್ಮ ಪ್ರಾಣ ಕಳೆದುಕೊಂಡರು. “ನಾವು ಕೊನೆಯ ಬಾರಿ ಫೆಬ್ರವರಿ 28ರಂದು ರಾತ್ರಿ ಸುಮಾರು 9 ಗಂಟೆಗೆ ಮಾತನಾಡಿದೆವು. ಅವನು ನನ್ನ ಗಂಡನಿಗೆ, ‘ಇಲ್ಲಿ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ… ಅಮ್ಮನ ಜೊತೆ ಮಾತನಾಡಲು ಬಿಡಿ’ ಎಂದು ಹೇಳಿದ. ನಾನು ಅವನಿಗೆ, ‘ಮಗನೇ, ನೀನು ನಮ್ಮ ಜೊತೆ ಇರುವವರೆಗೆ ನಮ್ಮಲ್ಲಿ ಜೀವನ, ಭರವಸೆ ಮತ್ತು ಸಂತೋಷ ಇರುತ್ತದೆ’ ಎಂದು ಹೇಳಿದೆ. ಆದರೆ ಅವನಿಗೆ ಮಾತನಾಡಲು ತುಂಬಾ ಕಷ್ಟವಾಗುತ್ತಿತ್ತು. ಎಲ್ಲೆಡೆ ಗದ್ದಲ, ಗುಂಡಿನ ಸದ್ದು ಮತ್ತು ಸ್ಫೋಟಗಳ ಶಬ್ದ.”
“ಅಮ್ಮಾ, ಶುಭವಾಗಲಿ… ನನ್ನ ಪಾಲಿಗೆ ಏನೇ ಆಗಬೇಕೋ ಆಗಲಿ,” ಎಂದು ಒಲೆಕ್ಸಾಂಡರ್ ತಮ್ಮ ತಾಯಿಗೆ ಎಂದಿಗೂ ತೋರಿಸದ ತಣ್ಣನೆಯ ಧ್ವನಿಯಲ್ಲಿ ಹೇಳಿದರು. “ಅವು ನಮ್ಮ ನಡುವೆ ವಿನಿಮಯವಾದ ಕೊನೆಯ ಮಾತುಗಳು. ಆ ರಾತ್ರಿ ನಾನು ಇಡೀ ರಾತ್ರಿ ಎಚ್ಚರವಾಗಿಯೇ ಇದ್ದೆ. ಯಾವ ತಾಯಿಯು ನಾವು ಅನುಭವಿಸಿದ ನೋವನ್ನು ಅನುಭವಿಸಬಾರದು ಎಂದು ನಾನು ನಂಬುತ್ತೇನೆ. ರಾತ್ರಿ 2:15ಕ್ಕೆ ನನ್ನೊಳಗೆ ಏನೋ ಭೀಕರವಾದ ಅಶಾಂತಿ ಉಂಟಾಯಿತು. ಯಾರೋ ಕತ್ತಿಯಿಂದ ನನ್ನನ್ನು ಎರಡು ಭಾಗ ಮಾಡುತ್ತಿರುವಂತೆ ಅನುಭವವಾಯಿತು. ಅದೇ ಕ್ಷಣದಲ್ಲಿ ನನ್ನ ಮಗ ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ನನಗೆ ತಿಳಿಸಿದರು. ಒಲೆಕ್ಸಾಂಡರ್ ಅವರ ಮೃತದೇಹವನ್ನು ಮನೆಗೆ ತರಲಾಯಿತು ಮತ್ತು ಪೋಷಕರು ಅಂತ್ಯಕ್ರಿಯೆಗಳನ್ನು ನಡೆಸಿದರು. ಅಲ್ಲಿ ಅಷ್ಟೊಂದು ಜನ ಸೇರಿದ್ದರು, ಸಾಲು ಬೆಳಗ್ಗೆ 4 ಗಂಟೆಯವರೆಗೂ ಕಡಿಮೆಯಾಗಲಿಲ್ಲ.
“ನನ್ನ ಮಗನೊಂದಿಗೆ ಸ್ವಲ್ಪ ಹೊತ್ತು ಒಬ್ಬಳೇ ಇರಬೇಕೆಂದು ನಾನು ತುಂಬಾ ಬಯಸಿದ್ದೆ, ಏಕೆಂದರೆ ನನಗೆ ಯಾವುದೇ ಶಾಂತಿ ಸಿಗುತ್ತಿರಲಿಲ್ಲ. ಇದು ನಿಜವಾಗಿಯೂ ನಡೆದಿದೆಯೆಂದು ನಂಬಲು ಸಾಧ್ಯವಾಗುತ್ತಿರಲಿಲ್ಲ,” ಎಂದು ಲ್ಯೂಬೋವ್ ನೆನಪಿಸಿಕೊಳ್ಳುತ್ತಾರೆ. ಒಬ್ಬ ತಾಯಿಯಾಗಿ, ತನ್ನ ಮಗನ ಗಾಯಗಳನ್ನು ನೋಡಬೇಕು ಮತ್ತು ಸ್ಪರ್ಶಿಸಬೇಕು ಎಂಬ ಅಗತ್ಯ ಅವರಿಗೆ ಇತ್ತು. “ಅದಾದ ನಂತರವೇ, ಅವನಲ್ಲಿ ಮತ್ತೆ ಜೀವ ಉಳಿದಿಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡೆ.”
“ಪ್ರತಿಯೊಬ್ಬ ತಾಯಿಯೂ ಕಾಯುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ”
ಲ್ಯೂಬೋವ್ ಹೇಳುವಂತೆ, ರಸ್ತೆಯಲ್ಲಿ ಸೈನಿಕರನ್ನು ನೋಡಿದಾಗ ಅವರು ಹತ್ತಿರ ಹೋಗಿ, “ನಾನು ನಿಮಗೆ ಒಂದು ಅಪ್ಪುಗೆ ಕೊಡಬಹುದೇ?” ಎಂದು ಕೇಳುತ್ತಾರೆ. ಆ ಕ್ಷಣದಲ್ಲಿ ತಮ್ಮ ಮಗನನ್ನೇ ಅಪ್ಪಿಕೊಳ್ಳುತ್ತಿರುವಂತೆ ಅವರಿಗೆ ಅನಿಸುತ್ತದೆ. ಒಮ್ಮೆ ಅವರು ಯುದ್ಧರಂಗದಿಂದ ಹಿಂದಿರುಗುತ್ತಿದ್ದಂತೆ ಕಾಣುತ್ತಿದ್ದ ಒಬ್ಬ ಸೈನಿಕನನ್ನು ಭೇಟಿಯಾದರು. ಅವನನ್ನು ಅಪ್ಪಿಕೊಂಡಾಗ ಅವರಿಗೆ ಯುದ್ಧದ ವಾಸನೆ, ಹೊಗೆಯ ವಾಸನೆ ಅನುಭವವಾಯಿತು.
“ಸಾಶುನಿಯಾ ಮನೆಗೆ ಬಂದಾಗ, ತನ್ನ ಬಟ್ಟೆಗಳನ್ನು ನನಗೆ ಎಂದಿಗೂ ಕೊಡುತ್ತಿರಲಿಲ್ಲ. ನಾನು ಆ ವಾಸನೆಯನ್ನು ಸಹ ಅನುಭವಿಸಬಾರದೆಂದು ಅವನ್ನು ತಾನೇ ತೊಳೆದುಕೊಳ್ಳುತ್ತಿದ್ದ. ಅವನ ಸಾವಿನ ನಂತರ ಅವನ ವಸ್ತುಗಳನ್ನು ಮನೆಗೆ ತಂದಾಗ ಮಾತ್ರ ನಾನು ಆ ವಾಸನೆಯನ್ನು ಮತ್ತೆ ಅನುಭವಿಸಿದೆ. ಅವನ ಎಲ್ಲಾ ವಸ್ತುಗಳನ್ನು ನಾನು ಒಂದು ಮ್ಯೂಸಿಯಂನಂತೆ ಅಲಮಾರಿಯ ಮೇಲೆ ಇಟ್ಟಿದ್ದೇನೆ. ನಾನು ಅಲ್ಲಿ ಹೋಗಿ ಆ ಬಟ್ಟೆಗಳ ಜೊತೆ ಮಾತನಾಡುತ್ತೇನೆ. ಇನ್ನೂ ಕಪಾಟಿನಲ್ಲಿಯೂ ಅವನ ವಸ್ತುಗಳಿವೆ. ನಾನು ಅವನ್ನು ತೊಳೆದು ಮತ್ತೆ ಜಾಗದಲ್ಲಿ ಇಡುತ್ತೇನೆ, ಏಕೆಂದರೆ ಸಾಶುನಿಯಾ ಮರಳಿ ಬರುತ್ತಾನೆ. ತನ್ನ ಮಗನನ್ನು ಶವಪೆಟ್ಟಿಗೆಯಲ್ಲಿ ಕಂಡಿದ್ದರೂ ಸಹ ಪ್ರತಿಯೊಬ್ಬ ತಾಯಿಯೂ ಕಾಯುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ಏಕೆಂದರೆ, ತನ್ನ ಸ್ವಂತ ಮಗುವನ್ನು ಸಮಾಧಿ ಮಾಡುವುದಕ್ಕಿಂತ ದೊಡ್ಡ ನೋವು ಜಗತ್ತಿನಲ್ಲಿ ಇಲ್ಲ.”
ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಕಳೆದಿದ್ದರೂ, ಒಲೆಕ್ಸಾಂಡರ್ ಅವರ ಪೋಷಕರು ಇನ್ನೂ ತಮ್ಮ ಮನೆಯ ಮುಂದೆ ಒಂದು ಕಾರು ಹಾದುಹೋದರೂ ನಡುಗುತ್ತಾರೆ. ಏಕೆಂದರೆ ಅವರ ಸಾಶುನಿಯಾ ಯಾವಾಗಲೂ ಅಚ್ಚರಿಯಾಗಿ ಮನೆಗೆ ಬರುತ್ತಿದ್ದ.
“ನನಗೆ ಯಾವುದಾದರೂ ಚಿಂತೆ ಅಥವಾ ಸಮಸ್ಯೆ ಇದ್ದಾಗ ಅವನು ಅಚ್ಚರಿಯಾಗಿ ಬಂದು, ಸೂರ್ಯಕಿರಣದಂತೆ ನನ್ನ ಮುಂದೆ ನಿಂತುಕೊಳ್ಳುತ್ತಿದ್ದ. ಇಂದಿಗೂ ನಾವು ಅವನನ್ನು ಅದೇ ಸೂರ್ಯಕಿರಣದಂತೆ ಕಾಯುತ್ತಿದ್ದೇವೆ,” ಎಂದು ತಾಯಿ ನಿಟ್ಟುಸಿರು ಬಿಡುತ್ತಾರೆ.
“ಒಂದು ಕಾರು ಅಥವಾ ಬೈಕ್ ಶಬ್ದ ಕೇಳಿದರೂ ಅದು ಅವನೇ ಇರಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ನಿಮಗೆ ಗೊತ್ತೇ, ನನ್ನ ಆತ್ಮ ತುಂಬಾ ದಣಿದಿದೆ, ಆದರೂ ನಾನು ಕಾಯುತ್ತಲೇ ಇದ್ದೇನೆ… ಬಹುಶಃ ನಾನು ನನ್ನನ್ನೇ ಮೋಸಗೊಳಿಸಿಕೊಳ್ಳುವುದನ್ನು ಕಲಿತಿರಬಹುದೇ? ಆದರೆ ಅದನ್ನು ಮೋಸ ಎಂದು ಕರೆಯಲು ಸಾಧ್ಯವಿಲ್ಲ. ಅದು ನನ್ನ ಆತ್ಮ, ನನ್ನ ಹೃದಯ ಪ್ರೀತಿಗಾಗಿ ಹಾತೊರೆಯುವ ವಿಧಾನ ಮಾತ್ರ. ನೋಡಿ, ನನ್ನ ಹೃದಯ ಮತ್ತು ಮನಸ್ಸು ಒಂದೇ ಮಾತು ಹೇಳುವುದಿಲ್ಲ: ಮನಸ್ಸು ಒಂದು ಮಾತು ಹೇಳಿದರೆ, ಹೃದಯ ‘ಅವನು ಬರುತ್ತಾನೆ’ ಎಂದು ಹೇಳುತ್ತದೆ. ಆದರೆ ಈಗ ಅವನು ಮರಳಿ ಬರಲು ಸಾಧ್ಯವಿಲ್ಲ…”
ಇತರ ತಾಯಂದಿರೊಂದಿಗೆ ಕಾರ್ಯಯೋಜನೆ
2024ರ ಆಗಸ್ಟ್‌ನಲ್ಲಿ, ಲ್ಯೂಬೋವ್ ಅವರನ್ನು “ದಿ ಮದರ್ಸ್ ಆಫ್ ಪಾದ್ರೆ ಪಿಯೋಸ್ ಹೌಸ್” ಎಂಬ ಪುನರ್ವಸತಿ ಯೋಜನೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಯಿತು. ಆರಂಭದಲ್ಲಿ ಅವರು ಹಿಂಜರಿದರು: “ಎಲ್ಲವೂ ಕತ್ತಲೆಯೇ ಆಗಿತ್ತು, ಎಲ್ಲೆಡೆ ಕತ್ತಲೆ.” ತಮ್ಮ ಮಗನ ಅಂತ್ಯಕ್ರಿಯೆಯ ನೆನಪುಗಳನ್ನೂ, ಅವನನ್ನು ಮತ್ತೆ ನೋಡುವ ಭರವಸೆಯನ್ನೂ ಅವರು ಒಂದಾಗಿ ಹೊಂದಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕೊನೆಯಲ್ಲಿ, ಅವರು ಹೋಗಲು ನಿರ್ಧರಿಸಿ ಕೀವ್‌ನಲ್ಲಿರುವ ಕ್ಯಾಪುಚಿನ್ ಫ್ರಿಯರ್ಸ್ ಮೈನರ್ ಧರ್ಮಕೇಂದ್ರಕ್ಕೆ ತೆರಳಿದರು. ಈ ಯೋಜನೆಯನ್ನು ಅದೇ ಧಾರ್ಮಿಕ ಸಭೆ ನಡೆಸುತ್ತಿದೆ. “ಇಂದು ನಾನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ—ನಾನು ಅಲ್ಲಿ ಹೋಗಿರದಿದ್ದರೆ ಈಗಾಗಲೇ ಹುಚ್ಚಾಗುತ್ತಿದ್ದೆ,” ಎಂದು ಅವರು ಹೇಳುತ್ತಾರೆ. ಯೋಜನೆಯ ಸಿಬ್ಬಂದಿ ಮತ್ತು ಸಂಯೋಜಕರ ಸಹಾಯದಿಂದ, ಲ್ಯೂಬೋವ್ ಮತ್ತೆ ಬದುಕುವುದನ್ನು ,ಮಗನ ಪ್ರಕಾಶಮಾನ ನೆನಪನ್ನು ಮುಂದುವರಿಸಿಕೊಂಡು ಹೋಗುವುದನ್ನು ಕಲಿತರು.
ಮನೋವೈಜ್ಞಾನಿಕ ಸಲಹಾ ಸಭೆಗಳಲ್ಲಿ ಭಾಗವಹಿಸುವುದರ ಮೂಲಕ ಮತ್ತು ಇದೇ ರೀತಿಯ ದುಃಖ ಅನುಭವಿಸಿದ್ದ ಇನ್ನೂ 16 ತಾಯಂದಿರೊಂದಿಗೆ ತಮ್ಮ ನೋವನ್ನು ಹಂಚಿಕೊಳ್ಳುವ ಮೂಲಕ, ಲ್ಯೂಬೋವ್ ಮುಂದೆ ಸಾಗುವ ಶಕ್ತಿಯನ್ನು ಕಂಡುಕೊಂಡರು. ಮನೆಗೆ ಮರಳಿದ ನಂತರ ಅವರು ಮತ್ತೆ ತೋಟದಲ್ಲಿನ ಹೂವುಗಳನ್ನು ಗಮನಿಸಿದರು ಮತ್ತು ತಮ್ಮ ಕಪ್ಪು ದುಃಖದ ಶಾಲನ್ನು ತೆಗೆದುಹಾಕಿದರು. ಪ್ರತಿಯೊಬ್ಬ ತಾಯಿಗೂ ಮತ್ತೆ ಬದುಕುವ ದಾರಿಯನ್ನು ಹುಡುಕಿಕೊಡಲು ಸಮರ್ಪಣೆಯಿಂದ ಸಹಾಯ ಮಾಡಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು. “ದಿ ಮದರ್ಸ್ ಆಫ್ ಪಾದ್ರೆ ಪಿಯೋಸ್ ಹೌಸ್” ಯೋಜನೆಯಲ್ಲಿ ಭಾಗವಹಿಸಿದ ನಂತರ, ಲ್ಯೂಬೋವ್ ಇತರ ತಾಯಂದಿರ ಗುಂಪಿನೊಂದಿಗೆ ವ್ಯಾಟಿಕನ್‌ಗೆ ಭೇಟಿ ನೀಡಿ ಜಗದ್ಗುರುಗಳನ್ನು ಭೇಟಿಯಾದರು. ನಂತರ ಮತ್ತೊಂದು ಯೋಜನೆಯಲ್ಲಿ ಭಾಗವಹಿಸಿದರು.
“ನಾನು ಒಮ್ಮೆ ಹೋದೆ, ನಂತರ ಎರಡನೇ ಬಾರಿ, ಮೂರನೇ ಬಾರಿ… ಮತ್ತೆ ಹಿಂದಿರುಗಬೇಕೆಂಬ ಅಗತ್ಯವೇ ನನಗೆ ಉಂಟಾಯಿತು,” ಎಂದು ಅವರು ಹೇಳುತ್ತಾರೆ. ಆ ಭೇಟಿಗಳಲ್ಲಿ, ತಮ್ಮದೇ ನೋವನ್ನು ಹಂಚಿಕೊಂಡಿರುವ ತಾಯಂದಿರ ಕುಟುಂಬವನ್ನು ಅವರು ಕಂಡುಕೊಂಡರು. “ನಮ್ಮ ಗಾಯಗಳು ಒಂದೇ ರೀತಿಯಲ್ಲಿ ರಕ್ತಸ್ರಾವವಾಗುತ್ತವೆ.” ಅವರಿಗೆ ಸಹಾಯ ಮಾಡಿದ ತಜ್ಞರು ಯಾವಾಗಲೂ ದಯೆ, ಗೌರವ ಮತ್ತು ಸಮರ್ಪಣೆಯೊಂದಿಗೆ ಬೆಂಬಲಿಸಿದರು.
“ನಮಗೆ ಇದು ದೊಡ್ಡ ಶಕ್ತಿ, ದೊಡ್ಡ ಸಹಾಯ—ಆತ್ಮಕ್ಕೆ ಸಿಗುವ ಮೃದುವಾದ ಸ್ಪರ್ಶ,” ಎಂದು ಲ್ಯೂಬೋವ್ ಹೇಳುತ್ತಾರೆ.
ಸಹಾಯ ಅಥವಾ ಕೆಲವೊಮ್ಮೆ ಕೇವಲ ಒಂದು ಅಪ್ಪುಗೆ
ಒಲೆಕ್ಸಾಂಡರ್ ಅವರ ಅನೇಕ ಸಹಯೋಧರು ಮತ್ತು ಸ್ನೇಹಿತರು ಇನ್ನೂ ಅವರ ಪೋಷಕರನ್ನು ಸಂಪರ್ಕಿಸುತ್ತಾರೆ ಮತ್ತು ಭೇಟಿ ನೀಡುತ್ತಾರೆ. ಲ್ಯೂಬೋವ್ ಮತ್ತು ಅವರ ಗ್ರಾಮವಾದ ಜಬೊಲೊಟ್ನೆಯಲ್ಲಿ ಅವರು ಮುನ್ನಡೆಸುತ್ತಿರುವ ಗುಂಪು—ಇದರಲ್ಲಿ 80 ವರ್ಷ ಮೇಲ್ಪಟ್ಟ ವೃದ್ಧ ಮಹಿಳೆಯರೂ ಸೇರಿದ್ದಾರೆ—ಅವರಿಗೆ ಸಹಾಯ ಮಾಡುವ ಆಹಾರ ಸಿದ್ಧಪಡಿಸುವ, ಉಪಯುಕ್ತ ವಸ್ತುಗಳನ್ನು ಜೋಡಿಸುವ ಮತ್ತು ಸಾಧ್ಯವಾದ ಎಲ್ಲ ವ್ಯವಸ್ಥೆಗಳನ್ನು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ ಒಂದು ಚಳಿಗಾಲದಲ್ಲಿ, ತೀವ್ರ ಚಳಿಯ ಸಂದರ್ಭದಲ್ಲಿ, ಯುದ್ಧರಂಗದಲ್ಲಿರುವ ಸೈನಿಕರಿಗೆ ಉಷ್ಣ ನೀಡಲು ಮೇಣದ ಬತ್ತಿಗಳನ್ನು ಕೇಳುತ್ತಿದ್ದ ಮಹಿಳೆಯೊಬ್ಬರ ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ಲ್ಯೂಬೋವ್ ನೋಡಿದರು.
“ನಾವು ಅವನ್ನು ತಯಾರಿಸುತ್ತೇವೆ,” ಎಂದು ಅವರು ಪ್ರತಿಕ್ರಿಯಿಸಿ, ಕಳುಹಿಸಲು ವಿಳಾಸ ಕೇಳಿದರು. ಸ್ವಲ್ಪ ಸಮಯದ ನಂತರ ಅವರಿಗೆ ಒಂದು ದೂರವಾಣಿ ಕರೆ ಬಂತು. ಅದು ಸೈನಿಕ ವಾದಿಮ್ ಅವರದ್ದು. “ಅಮ್ಮ ಲ್ಯೂಬಾ,” [ಉಕ್ರೇನಿನ ಸೈನಿಕರು ತಮ್ಮ ಸಹಚರರ ಅಥವಾ ಯುದ್ಧದಲ್ಲಿ ಮೃತಪಟ್ಟ ಸೈನಿಕರ ತಾಯಂದಿರನ್ನು ‘ಅಮ್ಮ’ ಎಂದು ಕರೆಯುತ್ತಾರೆ] “ನಾವು ಈಗ ಈ ಮೇಣದ ಬತ್ತಿಗಳ ಸುತ್ತ ಕುಳಿತಿದ್ದೇವೆ. ಎರಡು ವಾರಗಳ ಬಳಿಕ ಮೊದಲ ಬಾರಿಗೆ ನಮಗೆ ಉಷ್ಣ ಮತ್ತು ಬಿಸಿ ನೀರು ದೊರಕಿದೆ.”
“ಅದು ನನ್ನ ಹೃದಯವನ್ನು ಸಂತೋಷದಿಂದ ತುಂಬಿಸಿತು,” ಎಂದು ಲ್ಯೂಬೋವ್ ನೆನಪಿಸಿಕೊಳ್ಳುತ್ತಾರೆ. “ತಿಂಗಳುಗಳ ಕಾಲ, ನಾನು ಬೆಂಕಿಯನ್ನು ನೋಡಿದಾಗಲೆಲ್ಲ ಅವರು ನನ್ನ ಕಣ್ಣೆದುರೇ ಕಾಣುತ್ತಿದ್ದರು. ಆ ಉಷ್ಣವನ್ನು ನಾನು ಅವರಿಗೆ ತಲುಪಿಸುತ್ತಿದ್ದೇನೆ ಎನ್ನುವ ಭಾವನೆ ನನಗೆ ಉಂಟಾಗುತ್ತಿತ್ತು.”
ಆ ಸೈನಿಕರು, ಲ್ಯೂಬೋವ್ ಅಥವಾ ಅವರ ಮಗನನ್ನು ವೈಯಕ್ತಿಕವಾಗಿ ತಿಳಿದಿರದಿದ್ದರೂ ಸಹ, ಅವರನ್ನು ಭೇಟಿ ಮಾಡಲು ಬರುತ್ತಾರೆ. ಅವರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಜೊತೆಯಾಗಿ ಅಳುತ್ತಾರೆ. “ಪ್ರತಿಯೊಬ್ಬ ಯುವಕನಲ್ಲೂ ನಾನು ನನ್ನ ಮಕ್ಕಳನ್ನು ಕಾಣುತ್ತೇನೆ, ಮತ್ತು ನಾನು ಅವರನ್ನು ಎಲ್ಲರನ್ನೂ ಪ್ರೀತಿಸುತ್ತೇನೆ.” ದುಃಖ ಅನುಭವಿಸುತ್ತಿರುವವರಿಗೆ, ಈ ಧೈರ್ಯಶಾಲಿ ತಾಯಿ ಒಂದು ಸಂದೇಶ ನೀಡುತ್ತಾರೆ: ತಮ್ಮೊಳಗೆ ಮುಚ್ಚಿಕೊಳ್ಳಬೇಡಿ, ಕೋಪದಿಂದ ಬದುಕಬೇಡಿ, ಜೀವನವನ್ನು ಸಂಪೂರ್ಣವಾಗಿ ಬದುಕಿ. ಏಕೆಂದರೆ “ನಾವು ಎಲ್ಲರೂ ಈ ಭೂಮಿಯಲ್ಲಿ ತಾತ್ಕಾಲಿಕ ಅತಿಥಿಗಳು. ಎಷ್ಟೇ ಕಷ್ಟವಾದರೂ, ಈ ಪಯಣವನ್ನು ಗೌರವದಿಂದ ಸಾಗಿಸಬೇಕು.”
ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).