ಪೂಜ್ಯ ಜಗದ್ಗುರುಗಳಾದ 14ನೇ ಅವರೊಂದಿಗೆ ಜೊನಾಥನ್ ಸಫ್ರಾನ್ ಫೋಯರ್ ಅವರ ಭೇಟಿ. ಪೂಜ್ಯ ಜಗದ್ಗುರುಗಳಾದ 14ನೇ ಅವರೊಂದಿಗೆ ಜೊನಾಥನ್ ಸಫ್ರಾನ್ ಫೋಯರ್ ಅವರ ಭೇಟಿ. 

ಜೊನಾಥನ್ ಸಫ್ರಾನ್ ಫೋಯರ್: ಸಾಹಿತ್ಯದಿಂದ ಸಹಾನುಭೂತಿಯ ಜಾಗೃತಿ

ವ್ಯಾಟಿಕನ್ ಪ್ರಕಾಶನ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರನ್ನು ಭೇಟಿಯಾದ ಬಳಿಕ, ಅಮೆರಿಕದ ಕಾದಂಬರಿಕಾರ ಜೊನಾಥನ್ ಸಫ್ರಾನ್ ಫೋಯರ್ ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಾಹಿತ್ಯ, ಸತ್ಯ, ಹವಾಮಾನ ಬದಲಾವಣೆ, ಕೃತಕ ಬುದ್ಧಿಮತ್ತೆ ಮತ್ತು ಮಾನವಕುಲದ ಮಹತ್ತರ ಭರವಸೆಯಾಗಿ ಉಳಿದಿರುವ ಸಹಾನುಭೂತಿಯ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ.

ಲೇಖಕರು: ಫ್ರಾನ್ಸೆಸ್ಕಾ ಮೆರ್ಲೊ

 “ನಿಮ್ಮ ನೋವು, ನಿಮ್ಮ ಹೃದಯದ ಒಡೆತ—ಇಂತಹವುಗಳು ಜಗತ್ತಿನ ಇತಿಹಾಸದಲ್ಲೇ ಯಾರಿಗೂ ಸಂಭವಿಸಿಲ್ಲವೆಂದು ನೀವು ಭಾವಿಸುತ್ತೀರಿ. ಆದರೆ ಪುಸ್ತಕಗಳನ್ನು ಓದಲು ಆರಂಭಿಸಿದಾಗ ಸತ್ಯ ಅರಿವಾಗುತ್ತದೆ. ನನ್ನನ್ನು ಅತಿಯಾಗಿ ಯಾತನೆಗೊಳಿಸಿದ ಅನುಭವಗಳೇ, ಈ ಭೂಮಿಯ ಮೇಲೆ ಬದುಕಿರುವ ಎಲ್ಲರೊಂದಿಗೆ ಮತ್ತು ಹಿಂದೆ ಬದುಕಿಹೋದ ಎಲ್ಲರೊಂದಿಗೂ ನನ್ನನ್ನು ಬೆಸೆದ ಬಂಧಗಳಾಗಿವೆ ಎಂಬುದನ್ನು ದೋಸ್ತೋವ್ಸ್ಕಿ ಮತ್ತು ಡಿಕನ್ಸ್ ನನಗೆ ತಿಳಿಸಿಕೊಟ್ಟರು.”— ಜೇಮ್ಸ್ ಬಾಲ್ಡ್ವಿನ್, LIFE ಪತ್ರಿಕೆ, ಮೇ 1963

ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರನ್ನು ಭೇಟಿಯಾದ ಕೆಲವೇ ಕ್ಷಣಗಳ ನಂತರ, ಸಂತ ಪೇತ್ರರ ಮಹಾದೇವಾಲಯದಲ್ಲಿರುವ ಬೆರ್ನಿನಿಯ ಬಾಲ್ದಕ್ಕೀನೊದ ಕೆಳಗೆ ನಿಂತಿದ್ದ ಜೊನಾಥನ್ ಸಫ್ರಾನ್ ಫೋಯರ್, ಲೇಖಕ ಮತ್ತು ಓದುಗರ ನಡುವಿನ ಮೌನದ ಆತ್ಮೀಯ ಸಂಬಂಧದ ಕುರಿತು ಚಿಂತಿಸಿದರು.

“ಸಾಹಿತ್ಯ ಏನು ಮಾಡುತ್ತದೆ ಎಂದರೆ—ಜೇಮ್ಸ್ ಬಾಲ್ಡ್ವಿನ್ ಇದನ್ನು ಅತ್ಯಂತ ಸುಂದರವಾಗಿ ಬರೆದಿದ್ದಾರೆ—ನಾವು ಅತ್ಯಂತ ಆಳವಾಗಿ ಅನುಭವಿಸುವ ಸಂಗತಿಗಳು ನಮ್ಮನ್ನು ಇತರರಿಂದ ದೂರ ಮಾಡುವುದಿಲ್ಲ. ಬದಲಾಗಿ ಅವು ನಮ್ಮನ್ನು ಇತರರೊಂದಿಗೆ ಜೋಡಿಸುತ್ತವೆ,” ಎಂದು ಅವರು ವ್ಯಾಟಿಕನ್ ಸುದ್ದಿ ಸಂಸ್ಥೆಗೆ ಹೇಳಿದರು.

ಜೂನ್ 24ರಂದು ವ್ಯಾಟಿಕನ್ ಪ್ರಕಾಶನ ಸಂಸ್ಥೆಯ ಶತಮಾನೋತ್ಸವವನ್ನು ಆಚರಿಸಲು ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಹಲವಾರು ಲೇಖಕರೊಂದಿಗೆ ಅವರು ವ್ಯಾಟಿಕನ್‌ನಲ್ಲಿ ಸೇರಿದ್ದರು. ಅಲ್ಲಿ ಲೇಖಕರ ಕರೆಯ ಕುರಿತು ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರ ಸಂದೇಶವನ್ನು ಅವರು ಆಲಿಸಿದರು.

ತಮ್ಮ ಭಾಷಣದಲ್ಲಿ, ಜಗದ್ಗುರುಗಳು ಬರವಣಿಗೆಯನ್ನು ಸತ್ಯ ಮತ್ತು ಮಾನವೀಯತೆಯ ಕಾರ್ಯವೆಂದು ವಿವರಿಸಿದರು. ಸಹಾನುಭೂತಿ, ಸಂವಾದ ಮತ್ತು ಭರವಸೆ ಅರಳುವಂತಹ ಸ್ಥಳಗಳನ್ನು ನಿರ್ಮಿಸುವಂತೆ ಅವರು ಲೇಖಕರನ್ನು ಪ್ರೋತ್ಸಾಹಿಸಿದರು. “ಸತ್ಯವು ರಕ್ಷಿಸಬೇಕಾದ ಪ್ರದೇಶವಲ್ಲ; ಅದು ಎಲ್ಲರೊಂದಿಗೆ ಹಂಚಿಕೊಳ್ಳಬೇಕಾದ ಅಮೂಲ್ಯ ಸಂಪತ್ತು” (Magnifica Humanitas, 25) ಎಂದು ಅವರು ನೆನಪಿಸಿದರು.

ಕಲೆ ನಮ್ಮ ಆಳವಾದ ಭಾವನೆಗಳ ಸಂಪರ್ಕ ಸೇತು

“ನನ್ನ ಮೊದಲ ಪುಸ್ತಕವನ್ನು ಬರೆದಾಗ, ಇದನ್ನು ಯಾರು ಓದುತ್ತಾರೆ ಎಂದು ನಾನು ಯೋಚಿಸಿದ್ದೆ” ಎಂದು ಫೋಯರ್ ನೆನಪಿಸಿಕೊಳ್ಳುತ್ತಾರೆ. ತಮ್ಮ ಅಜ್ಜನನ್ನು ನಾಜಿಗಳಿಂದ ರಕ್ಷಿಸಿದ ಮಹಿಳೆಯನ್ನು ಹುಡುಕಲು ಉಕ್ರೇನ್‌ಗೆ ಪ್ರಯಾಣಿಸುವ ಯುವ ಯಹೂದಿ-ಅಮೆರಿಕನ್ ಲೇಖಕನ ಕಥೆಯನ್ನು ಅವರು ಬರೆದಿದ್ದರು. ತಮ್ಮಂತೆಯೇ ಅನುಭವ ಹೊಂದಿರುವ ಯುವ ಯಹೂದಿ ಓದುಗರೇ ಇದನ್ನು ಮೆಚ್ಚುತ್ತಾರೆ ಎಂದು ಅವರು ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ವಾಸ್ತವವಾಗಿ, ಅವರೊಂದಿಗೆ ಯಾವುದೇ ಸಾಮ್ಯತೆ ಇಲ್ಲದ ಅನೇಕ ಓದುಗರು ಆ ಕಾದಂಬರಿಯೊಂದಿಗೆ ಅತ್ಯಂತ ಆಳವಾಗಿ ತೊಡಗಿಸಿಕೊಂಡರು.

“ನನಗೆ ಬಂದ ಅತ್ಯಂತ ಮನಮುಟ್ಟುವ ಪ್ರತಿಕ್ರಿಯೆಗಳು ಜಗತ್ತಿನ ಇನ್ನೊಂದು ಭಾಗದಲ್ಲಿದ್ದ, ಅನುವಾದದ ಮೂಲಕ ನನ್ನ ಪುಸ್ತಕವನ್ನು ಓದಿದ ಜನರಿಂದ ಬಂದವು. ಅವರು ನನ್ನ ಧರ್ಮದವರಲ್ಲ, ನನ್ನ ಪೀಳಿಗೆಯವರಲ್ಲ, ನನ್ನ ಭಾಷೆಯನ್ನೂ ಮಾತನಾಡುವುದಿಲ್ಲ. ನಮ್ಮ ನಡುವೆ ನೇರ ಸಂವಹನಕ್ಕೆ ಬಹಳ ಕಡಿಮೆ ಅವಕಾಶವಿತ್ತು,ಆದರೆ ಕಲೆ ನಮಗೆ ಒಂದು ವಿಷಯವನ್ನು ನೆನಪಿಸುತ್ತದೆ—ನಾವು ಅತ್ಯಂತ ಆಳವಾಗಿ ಅನುಭವಿಸುವ ಭಾವನೆಗಳು ಇಂತಹ ಎಲ್ಲ ವ್ಯತ್ಯಾಸಗಳನ್ನು ಲೆಕ್ಕಿಸುವುದಿಲ್ಲ.”

ಸತ್ಯದೊಂದಿಗಿನ ನಮ್ಮ ಸಂಬಂಧ

ಸಾಂಸ್ಕೃತಿಕ, ಭಾಷಾ ಮತ್ತು ರಾಜಕೀಯ ಎಲ್ಲ ಗಡಿಗಳನ್ನು ದಾಟುವ ಸಾಮರ್ಥ್ಯವೇ ಸಾಹಿತ್ಯವನ್ನು ಸತ್ಯದೊಂದಿಗೆ ವಿಶಿಷ್ಟವಾಗಿ ಜೋಡಿಸುತ್ತದೆ. ಬರಹಗಾರರು ಹೊತ್ತಿರುವ ಈ ಜವಾಬ್ದಾರಿಯನ್ನು ಫೋಯರ್ ಒಪ್ಪಿಕೊಳ್ಳುತ್ತಾರೆ. ಇಂದು ಸಾರ್ವಜನಿಕ ಚರ್ಚೆಗಳು ಹೆಚ್ಚಾಗಿ ಸತ್ಯವನ್ನು ರಕ್ಷಿಸುವುದರ ಸುತ್ತ ಸುತ್ತುತ್ತವೆ. ಆದರೆ ಇಂದಿನ ಸವಾಲು ಕೇವಲ ಭಿನ್ನಾಭಿಪ್ರಾಯಗಳಲ್ಲ ಎಂದು ಫೋಯರ್ ಅಭಿಪ್ರಾಯಪಡುತ್ತಾರೆ.

ತಮ್ಮ ತಾಯ್ನಾಡಾದ ಅಮೆರಿಕವನ್ನು ಉಲ್ಲೇಖಿಸುತ್ತಾ, “ನಾವು ಇನ್ನೂ ಕೆಟ್ಟ ಪರಿಸ್ಥಿತಿಗೆ ತಲುಪಿದ್ದೇವೆ. ಈಗ ಸಮಸ್ಯೆ ಪರಸ್ಪರ ಸ್ಪರ್ಧಿಸುವ ಸತ್ಯಗಳಲ್ಲ; ಸತ್ಯವೆಂಬುದೇ ಇದೆ ಎಂಬುದನ್ನು ಒಪ್ಪಿಕೊಳ್ಳಲು ನಿರಾಕರಿಸುವ ಮನೋಭಾವವಾಗಿದೆ. ಈಗ ನಮ್ಮಲ್ಲಿ ಹಂಚಿಕೊಳ್ಳಬಹುದಾದ ವಾಸ್ತವಿಕತೆಯೇ ಉಳಿದಿಲ್ಲ,” ಎಂದು ಅವರು ಹೇಳಿದರು.

ಪ್ರತಿಯೊಬ್ಬರೂ ತಮ್ಮ ನಂಬಿಕೆಗಳನ್ನು ಹೊಂದಿರುವುದು ಸುಂದರವೇ ಸರಿ. ಆದರೆ ಈಗ ಜನರು ಯಾವುದೇ ಕಾರಣ ಅಥವಾ ಸಾಕ್ಷ್ಯವಿಲ್ಲದೆ, ಕೇವಲ ತಮ್ಮ ಭಾವನೆಗಳು ಮತ್ತು ಅಂತರಂಗದ ಊಹೆಗಳ ಆಧಾರದ ಮೇಲೆ ನಂಬಿಕೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದು ಅವರು ಎಚ್ಚರಿಸಿದರು.

ಸಾಮಾಜಿಕ ಜಾಲತಾಣಗಳು ವ್ಯಾಪಕವಾದಾಗಿನಿಂದ ಈ ಪರಿಸ್ಥಿತಿ ರೂಪುಗೊಂಡಿದೆ ಎಂದು ಅವರು ಹೇಳಿದರು. ಈ ವಾಸ್ತವಿಕತೆಯನ್ನು ಸೃಷ್ಟಿಸಿದವರು ರಾಜಕೀಯ ನಾಯಕರು ಅಲ್ಲದಿದ್ದರೂ, ಅದಕ್ಕೆ ಸಾರ್ವಜನಿಕ ಮಾನ್ಯತೆ ನೀಡಿದವರು ಅವರೇ ಎಂದು ಅವರು ಅಭಿಪ್ರಾಯಪಟ್ಟರು. ಅಮೆರಿಕದ ರಾಜಕೀಯ ನಾಯಕರು “ನಂಬಬಹುದಾದ ಯಾವುದೇ ಸತ್ಯವಿಲ್ಲ ಎಂಬ ಕಲ್ಪನೆಯನ್ನು ಆಯುಧವನ್ನಾಗಿ ಬಳಸಿಕೊಂಡಿದ್ದಾರೆ” ಎಂದು ಅವರು ಹೇಳಿದರು.

ಅತ್ಯಂತ ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡುವುದು

ಫೋಯರ್ ಅವರ ದೃಷ್ಟಿಯಲ್ಲಿ ಈ ಪ್ರಶ್ನೆಯು ರಾಜಕೀಯವನ್ನು ಮೀರಿದೆ. ಅವರು ತಮ್ಮ ಬರವಣಿಗೆಯ ಬಹುಭಾಗವನ್ನು ಮೀಸಲಿಟ್ಟಿರುವ ಜಾಗತಿಕ ಬಿಕ್ಕಟ್ಟುಗಳಲ್ಲಿ ಒಂದಾದ ಹವಾಮಾನ ಬದಲಾವಣೆಯ ಬಗ್ಗೆ ಮಾನವಕುಲ ನೀಡುತ್ತಿರುವ ಪ್ರತಿಕ್ರಿಯೆಯಲ್ಲಿಯೂ ಇದು ಸ್ಪಷ್ಟವಾಗಿ ಕಾಣಿಸುತ್ತದೆ.

“ನೀವು ಮತ್ತು ನಾನು ಇಲ್ಲಿ ನಿಂತು ಬೆವರಲ್ಲಿ ನೆನೆಯುತ್ತಿರುವುದಕ್ಕೆ ಒಂದು ಕಾರಣವಿದೆ,” ಎಂದು ಅವರು ನನಗೆ ಹೇಳಿದರು. “ಈ ಋತುವಿಗೆ ಅಸಹಜವಾದ ಬಿಸಿಲು ಇದೆ. ಮತ್ತು ಇದೇ ಪರಿಸ್ಥಿತಿ ಎಲ್ಲೆಡೆಯೂ ಇದೆ.”

ಈ ಅಸಹನೀಯ ಬಿಸಿಲು, ಏನು ನಡೆಯುತ್ತಿದೆ ಎಂಬುದನ್ನು ಮಾನವಕುಲ ಈಗಾಗಲೇ ಅರಿತಿದೆ ಎಂಬುದನ್ನು ನೆನಪಿಸುತ್ತದೆ. “ಇದಕ್ಕೆ ಕಾರಣವೇನು ಎಂಬುದು ರಹಸ್ಯವಲ್ಲ. ಅದರ ಕಾರಣ ನಮಗೆ ಸ್ಪಷ್ಟವಾಗಿ ತಿಳಿದಿದೆ. ವ್ಯಕ್ತಿಗಳಾಗಿ, ಸಮುದಾಯಗಳಾಗಿ ಮತ್ತು ರಾಷ್ಟ್ರಗಳಾಗಿ ನಾವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳೇ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿವೆ ಎಂಬುದನ್ನು ನಾವು ತಿಳಿದಿದ್ದೇವೆ,” ಎಂದು ಫೋಯರ್ ಹೇಳಿದರು.

ಆದಾಗ್ಯೂ, ಸತ್ಯವನ್ನು ತಿಳಿದುಕೊಳ್ಳುವುದಕ್ಕೂ ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿಗೂ ನಡುವೆ ದೊಡ್ಡ ಅಂತರವಿದೆ. ಕೇವಲ ಜ್ಞಾನವಿದ್ದರೆ ಸಾಕಾಗುವುದಿಲ್ಲ; ಅದು ನಮ್ಮ ನಡವಳಿಕೆಯನ್ನು ಬದಲಾಯಿಸಿ ಕಾರ್ಯಪ್ರವೃತ್ತರಾಗುವಂತೆ ಮಾಡುವುದಿಲ್ಲ ಎಂಬುದನ್ನು ನಾವು ಅರಿತಿದ್ದೇವೆ. “ಒಂದು ವಿಷಯವನ್ನು ತಿಳಿದಿದ್ದರೂ, ಅದು ತಮ್ಮ ಹೃದಯವನ್ನು ಸ್ಪರ್ಶಿಸಿ ಕಾರ್ಯಕ್ಕೆ ಪ್ರೇರೇಪಿಸುವ ಮಟ್ಟಿಗೆ ಅನುಭವಿಸದಿರುವ ಅದ್ಭುತ ಸಾಮರ್ಥ್ಯ ಮನುಷ್ಯರಿಗೆ ಇದೆ,” ಎಂದು ಅವರು ಹೇಳಿದರು.

ಆದ್ದರಿಂದ, ಕೇವಲ ಹೆಚ್ಚಿನ ಮಾಹಿತಿಯಲ್ಲ, ಇತರರ ನೋವನ್ನು ತಮ್ಮದೇ ನೋವೆಂದು ಅನುಭವಿಸುವಂತೆ ಮಾಡುವ ನೈತಿಕ ಕಲ್ಪನಾ ಶಕ್ತಿಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. “ಸಮಸ್ಯೆಯನ್ನು ನಾವು ಗುರುತಿಸಿದ್ದರೂ, ನಮ್ಮ ಅತಿ ದೊಡ್ಡ ಸಮಸ್ಯೆಗಳಿಗೆ ಪರಿಹಾರಗಳು ಸಹಜವಾಗಿ ಹುಟ್ಟುವುದಿಲ್ಲ ಎಂದು ನಾನು ನಂಬುತ್ತೇನೆ,” ಎಂದು ಫೋಯರ್ ಹೇಳಿದರು. “ನಾವು ಕಾರ್ಯಪ್ರವೃತ್ತರಾಗಲೇಬೇಕು ಎಂಬುದನ್ನು ಪರಸ್ಪರ ನೆನಪಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಂಡಾಗ ಮಾತ್ರ ಅವು ಉದ್ಭವಿಸುತ್ತವೆ.”

ಇದೇ ನಿಜವಾದ ನಾಯಕತ್ವದ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು. “ಇಂದು ನಮ್ಮ ಅತಿ ದೊಡ್ಡ ಸಮಸ್ಯೆಗಳ ಬಗ್ಗೆ ಜನರನ್ನು ಪ್ರೇರೇಪಿಸುವ ರೀತಿಯಲ್ಲಿ, ಸರಳವಾಗಿ ಮತ್ತು ಸಂವಾದಾತ್ಮಕವಾಗಿ ಮಾತನಾಡುವ ಉತ್ತಮ ನಾಯಕರು ಕಾಣುತ್ತಿಲ್ಲ,” ಎಂದ ಅವರು, ತಮ್ಮನ್ನು ವ್ಯಾಟಿಕನ್‌ಗೆ ಕರೆತಂದ ಸಂದರ್ಭವನ್ನು ಉಲ್ಲೇಖಿಸುತ್ತಾ, “ಈ ವಿಷಯದಲ್ಲೇ ಪೂಜ್ಯ ಜಗದ್ಗುರುಗಳಾದ ಲಿಯೋ ಅವರು ನಿಜವಾಗಿಯೂ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ,” ಎಂದು ಹೇಳಿದರು.

ಸಾಹಿತ್ಯ ಕಾರ್ಯಪ್ರವೃತ್ತಗೊಳಿಸಬಹುದೇ?

ಕೃತಕ ಬುದ್ಧಿಮತ್ತೆಯ ಕುರಿತು ಪೂಜ್ಯ ಜಗದ್ಗುರುಗಳಾದ ೧೪ನೆ ಲಿಯೋ ಅವರು ಪ್ರಕಟಿಸಿದ “ಭವ್ಯ ಮಾನವೀಯತೆ’ (Magnifica Humanitas) ವಿಶ್ವಪತ್ರವನ್ನು “ಅದ್ಭುತ ಮತ್ತು ಅತ್ಯಂತ ಮಹತ್ವದ ದಾಖಲೆ, ಆದರೆ ಅದೇ ಸಮಯದಲ್ಲಿ ಅಪರೂಪದ ಹಾಗೂ ಎಚ್ಚರಿಕೆಯ ಸಂದೇಶ” ಎಂದು ಫೋಯರ್ ಬಣ್ಣಿಸಿದರು.

ಕೃತಕ ಬುದ್ಧಿಮತ್ತೆಯು ಕೇವಲ ಜಾಗೃತಿಯಿಂದ ಪರಿಹರಿಸಲಾಗದ ಮತ್ತೊಂದು ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದರು. “AIಗೆ ಪ್ರತಿಕ್ರಿಯೆ ಕೇವಲ ವ್ಯಕ್ತಿಗತ ಕ್ರಮಗಳಾಗಿದ್ದರೆ, ಅದು ತನ್ನಷ್ಟಕ್ಕೆ ತಾನೇ ಸರಿಯಾಗುವ ಸಮಸ್ಯೆಯಲ್ಲ. ಅದು ಪರಿಹಾರವಾಗಬೇಕಾದರೆ, ಜ್ಞಾನವು ಕಾರ್ಯವಾಗಿ ರೂಪಾಂತರಗೊಳ್ಳಬೇಕು. ಮತ್ತು ಅದು ಜನರು ಪ್ರೇರೇಪಿತರಾದಾಗ ಮಾತ್ರ ಸಾಧ್ಯ,” ಎಂದು ಅವರು ಹೇಳಿದರು.

ಸಾಹಿತ್ಯವೇ ಆ ಪ್ರೇರಣೆಯನ್ನು ನೀಡಬಹುದೇ ಎಂಬ ಪ್ರಶ್ನೆಗೆ ಅವರು ನೇರ ಉತ್ತರ ನೀಡಲು ಹಿಂಜರಿದರಾದರೂ, “ಬಹುಶಃ ಸಾಧ್ಯವಿರಬಹುದು, ಬಹುಶಃ ಇಲ್ಲ. ಬರವಣಿಗೆಯ ಒಂದು ವಿಶೇಷತೆ ಎಂದರೆ ನೀವು ಕತ್ತಲೆಯೊಳಗೆ ಬರೆಯುತ್ತೀರಿ.” ಹವಾಮಾನ ಬದಲಾವಣೆ ಅಥವಾ ರಾಜಕೀಯದ ಬಗ್ಗೆ ಓದುಗರನ್ನು ಮನವೊಲಿಸುವ ಉದ್ದೇಶದಿಂದ ಅವರು ಬರೆಯುವುದಿಲ್ಲ. ಅವರಿಗೆ ಅತ್ಯಂತ ಮುಖ್ಯವಾದ ವಿಷಯಗಳ ಬಗ್ಗೆ ಮಾತ್ರ ಬರೆಯುತ್ತಾರೆ.

ಅಲ್ಲಿಯೇ, ಅನಿರೀಕ್ಷಿತವಾಗಿ, ಸಾಹಿತ್ಯದ ನಿಜವಾದ ಶಕ್ತಿ ಅನಾವರಣಗೊಳ್ಳುತ್ತದೆ.

 

ಜನರ ಹೃದಯವನ್ನು ತೆರೆಯುವ ಕಲೆ

ಮತ್ತೊಮ್ಮೆ ಜೇಮ್ಸ್ ಬಾಲ್ಡ್ವಿನ್ ಅವರ ಮಾತುಗಳನ್ನು ಉಲ್ಲೇಖಿಸುತ್ತಾ, ಭಾಷೆ, ರಾಷ್ಟ್ರೀಯತೆ ಅಥವಾ ಧಾರ್ಮಿಕ ನಂಬಿಕೆಗಳಿಗಿಂತಲೂ ಆಳವಾದ ಮಟ್ಟವನ್ನು ಸಾಹಿತ್ಯ ಸ್ಪರ್ಶಿಸುತ್ತದೆ ಎಂದು ಫೋಯರ್ ಹೇಳಿದರು.

“ಸಾಹಿತ್ಯವು ನಿಮ್ಮ ಜನಾಂಗ, ಧರ್ಮ, ಭಾಷೆ ಮತ್ತು ರಾಷ್ಟ್ರೀಯತೆಯ ಹಿಂದಿನ ಮೂಲಭೂತ ಮಾನವೀಯ ಅಂತರಂಗವನ್ನು ಸ್ಪರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ. ಜಗತ್ತಿನ ದುಃಖದ ಬಗ್ಗೆ ಜಾಗೃತರಾಗಲು ಸ್ಪರ್ಶಿಸಬೇಕಾದ ಸ್ಥಳವೂ ಅದೇ ಆಗಿದೆ.” ಇದು ಹವಾಮಾನ ಬದಲಾವಣೆ ಅಥವಾ ವಲಸೆಯ ಕುರಿತ ಕಾದಂಬರಿಗಳನ್ನು ಬರೆಯಬೇಕೆಂಬ ವಾದವಲ್ಲ ಎಂದು ಅವರು ಸ್ಪಷ್ಟಪಡಿಸಿದರು. “ಬದಲಾಗಿ, ಜನರಲ್ಲಿ ಸಹಾನುಭೂತಿಯನ್ನು ಮೂಡಿಸುವ ರೀತಿಯಲ್ಲಿ ಬರೆಯಬೇಕೆಂಬ ವಾದವಾಗಿದೆ,” ಎಂದರು. ಏಕೆಂದರೆ ಸಹಾನುಭೂತಿ ಎಂದಿಗೂ ಒಂದೇ ವಿಷಯಕ್ಕೆ ಸೀಮಿತವಾಗಿರುವುದಿಲ್ಲ.

“ಸಹಾನುಭೂತಿ ಹೊಂದಿರುವವರು, ಜಗತ್ತಿಗೆ ತಮ್ಮ ಮನಸ್ಸನ್ನು ತೆರೆದವರು, ಸಾಮಾನ್ಯವಾಗಿ ವಿಶಾಲವಾದ ಸಹಾನುಭೂತಿಯನ್ನು ಹೊಂದಿರುತ್ತಾರೆ,ನನ್ನ ಅನಿಸಿಕೆಯ ಪ್ರಕಾರ, ಕೆಲವರು ತೆರೆದ ಮನಸ್ಸಿನವರಾಗಿರುತ್ತಾರೆ, ಇನ್ನೂ ಕೆಲವರು ಮುಚ್ಚಿದ ಮನಸ್ಸಿನವರಾಗಿರುತ್ತಾರೆ. ಜನರ ಹೃದಯವನ್ನು ತೆರೆಯಲು ಕಲೆ ಒಂದು ಅದ್ಭುತ ಸಾಧನವಾಗಿದೆ’ ಎಂದು ಅವರು ಹೇಳಿದರು.

 “ಈ ಜಗತ್ತಿನಲ್ಲಿ ಪುಸ್ತಕಗಳೇ ಇಲ್ಲದಿದ್ದರೆ ನಾನು ಏನು ಮಾಡುತ್ತಿದ್ದೆನೋ ಎಂದು ನಾನು ಆಗಾಗ ಯೋಚಿಸುತ್ತೇನೆ.”

— ಜೇಮ್ಸ್ ಬಾಲ್ಡ್ವಿನ್, ಜಿಯೋವಾನಿಯ ಕೊಠಡಿ

 

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

25 ಜೂನ್ 2026, 19:21