ಲಾಂಪೆದುಸಾದಲ್ಲಿ ಸೇವೆ ಸಲ್ಲಿಸುತ್ತಿರುವ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಸಿಬ್ಬಂದಿ. ಲಾಂಪೆದುಸಾದಲ್ಲಿ ಸೇವೆ ಸಲ್ಲಿಸುತ್ತಿರುವ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಸಿಬ್ಬಂದಿ.  (@IOM)

IOM: ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಲಾಂಪೆದುಸಾ ಭೇಟಿ ವಲಸೆಯ ಮಾನವೀಯ ಆಯಾಮವನ್ನು ಎತ್ತಿ ತೋರಿಸಲಿದೆ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಲಾಂಪೆದುಸಾ ಭೇಟಿಯು ವಲಸಿಗರ ಮಾನವ ಘನತೆ ಹಾಗೂ ಹಂಚಿಕೆಯ ಜವಾಬ್ದಾರಿಯ ಅಗತ್ಯವನ್ನು ಜಗತ್ತಿಗೆ ನೆನಪಿಸುವ ಪ್ರಬಲ ಸಂದೇಶವಾಗಿದೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಇಟಲಿ ಮತ್ತು ಮಾಲ್ಟಾದ ಮುಖ್ಯಸ್ಥರು ಹೇಳಿದ್ದಾರೆ.

ಲೇಖಕರು: ಲಿಂಡಾ ಬೋರ್ಡೊನಿ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಜುಲೈ 4ರಂದು ಲಾಂಪೆದುಸಾಗೆ ಭೇಟಿ ನೀಡಲಿರುವ ಸಂದರ್ಭದಲ್ಲಿ, ಈ ಭೇಟಿ ವಲಸಿಗರ ಮಾನವ ಘನತೆಯನ್ನು ಮತ್ತು ಹಂಚಿಕೆಯ ಜವಾಬ್ದಾರಿಯ ಅಗತ್ಯವನ್ನು ಜಗತ್ತಿಗೆ ನೆನಪಿಸುವ ಮಹತ್ವದ ಸಂದೇಶವಾಗಲಿದೆ ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ ಇಟಲಿ ಮತ್ತು ಮಾಲ್ಟಾ ಮುಖ್ಯಸ್ಥರು ತಿಳಿಸಿದ್ದಾರೆ.

ಜುಲೈ 4ರಂದು ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರು ಲಾಂಪೆದುಸಾಗೆ ಭೇಟಿ ನೀಡಲು ಸಜ್ಜಾಗಿರುವಾಗ, ದಕ್ಷಿಣ ಇಟಲಿಯ ಈ ದ್ವೀಪದಲ್ಲಿರುವ ವಲಸಿಗರ ಸ್ವಾಗತ ಕೇಂದ್ರವು ಹೆಚ್ಚುತ್ತಿರುವ ಆಗಮನದ ಒತ್ತಡವನ್ನು ಎದುರಿಸುತ್ತಿದೆ. ಇಟಲಿಯ ಮುಖ್ಯ ಭೂಭಾಗಕ್ಕಿಂತ ಉತ್ತರ ಆಫ್ರಿಕಾಕ್ಕೆ ಹೆಚ್ಚು ಸಮೀಪವಿರುವ ಲಾಂಪೆದುಸಾ, ಹಲವು ದಶಕಗಳಿಂದ ಮೆಡಿಟರೇನಿಯನ್ ಸಮುದ್ರವನ್ನು ದಾಟಿ ಬರುವ ವಲಸಿಗರು ಮತ್ತು ನಿರಾಶ್ರಿತರಿಗೆ ಯುರೋಪಿನ ಪ್ರವೇಶದ್ವಾರವಾಗಿದೆ. ಕಳೆದ ಮೂರು ವರ್ಷಗಳಲ್ಲಿ 1,82,000ಕ್ಕೂ ಹೆಚ್ಚು ಜನರು ಇಲ್ಲಿ ಆಗಮಿಸಿದ್ದಾರೆ.

ಈ ಭೇಟಿ, 2013ರ ಜುಲೈ 8ರಂದು ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ಲಾಂಪೆದುಸಾಗೆ ಕೈಗೊಂಡ ಐತಿಹಾಸಿಕ ಭೇಟಿಯ ಹೆಜ್ಜೆಗುರುತುಗಳನ್ನು ಅನುಸರಿಸುತ್ತದೆ. ಆ ಸಂದರ್ಭದಲ್ಲಿ ಅವರು, ಬಲವಂತವಾಗಿ ತಮ್ಮ ತಾಯ್ನಾಡು ತೊರೆಯಬೇಕಾದವರ ಬಗ್ಗೆ ಜಗತ್ತು ತೋರಿಸುತ್ತಿರುವ "ನಿರಾಸಕ್ತಿಯ ಜಾಗತೀಕರಣ"ವನ್ನು ಖಂಡಿಸಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ವಲಸೆಯು ಇಂದಿಗೂ ಜಾಗತಿಕ ಸವಾಲಾಗಿಯೇ ಉಳಿದಿದೆ. ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM)ಯ "ಮಿಸ್ಸಿಂಗ್ ಮೈಗ್ರೆಂಟ್ಸ್ ಪ್ರಾಜೆಕ್ಟ್" ಪ್ರಕಾರ, 2014ರಿಂದ ಮಧ್ಯ ಮೆಡಿಟರೇನಿಯನ್ ಸಮುದ್ರ ಮಾರ್ಗದಲ್ಲಿ 26,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ವ್ಯಾಟಿಕನ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ, ಮೆಡಿಟರೇನಿಯನ್ ಪ್ರದೇಶದ IOM ಸಮನ್ವಯ ಕಚೇರಿಯ ನಿರ್ದೇಶಕ, ಇಟಲಿ ಮತ್ತು ಮಾಲ್ಟಾದ ಮುಖ್ಯಸ್ಥ ಹಾಗೂ ಜಗದ್ಗುರುಗಳ ಅಧಿಕಾರ ಪೀಠದ IOM ಪ್ರತಿನಿಧಿ ಸಾಲ್ವತೊರೆ ಸೋರ್ತಿನೊ, ಪೂಜ್ಯ ಜಗದ್ಗುರುಗಳ ಈ ಭೇಟಿಯನ್ನು ಸ್ವಾಗತಿಸಿದರು. ವಲಸೆಯ ಕುರಿತು ಹೆಚ್ಚುತ್ತಿರುವ ವಿಭಜಿತ ಚರ್ಚೆಗಳ ನಡುವೆ, ಪೂಜ್ಯ ಜಗದ್ಗುರುಗಳ ಧ್ವನಿಯು ಅತ್ಯಂತ ಮಹತ್ವದ ನೈತಿಕ ಶಕ್ತಿಯಾಗಿದೆ ಎಂದು ಅವರು ಪುನರುಚ್ಚರಿಸಿದರು.

“ವಲಸೆಯ ಮಹತ್ವ, ವಲಸಿಗರ ಘನತೆ ಹಾಗೂ ರಕ್ಷಣೆಯನ್ನು ಕೋರುವವರು ಮತ್ತು ಉತ್ತಮ ಆರ್ಥಿಕ ಅವಕಾಶಗಳನ್ನು ಹುಡುಕುತ್ತಿರುವವರು ಸೇರಿದಂತೆ ವಲಸೆ ಹೋಗುತ್ತಿರುವ ಎಲ್ಲ ಮಾನವರ ಘನತೆಯನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಪೂಜ್ಯ ಜಗದ್ಗುರುಗಳು ಹಾಗೂ ಪವಿತ್ರ ಸಿಂಹಾಸನ ಕೈಗೊಳ್ಳುತ್ತಿರುವ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು, ಇಂದಿನ ಕಾಲಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದರು. ವಲಸೆ ನಿರ್ವಹಣೆಯ ಕೇಂದ್ರಬಿಂದುವಿನಲ್ಲಿ ಮಾನವ ಘನತೆಯನ್ನು ಇರಿಸುವ ಪ್ರಯತ್ನಗಳಿಗೆ ಪೂಜ್ಯ ಜಗದ್ಗುರುಗಳು "ಮಹತ್ತರ ಬೆಂಬಲ" ಮತ್ತು "ಪ್ರಬಲ ಧ್ವನಿವರ್ಧಕ"ರಾಗಿದ್ದಾರೆ ಎಂದು ಸೋರ್ತಿನೊ ವಿವರಿಸಿದರು.

“ವಲಸೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ, ಜಾಗತಿಕ ಅಸಮಾನತೆ, ರಕ್ಷಣೆಯ ಅಗತ್ಯತೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳಂತಹ ಕೆಲವು ದೊಡ್ಡ ಸವಾಲುಗಳಿಗೆ ಅದು ನಿಜವಾಗಿಯೂ ಒಂದು ಪರಿಹಾರವಾಗಿದೆ,” ಎಂದು ಅವರು ಹೇಳಿದರು. “ಈ ಭೇಟಿಯ ಮೂಲಕ ಮಹತ್ವದ ಸಂದೇಶವನ್ನು ನೀಡುತ್ತಿರುವ ಪವಿತ್ರ ಸಿಂಹಾಸನ ಮತ್ತು ಪೂಜ್ಯ ಜಗದ್ಗುರುಗಳ ಬದ್ಧತೆಯನ್ನು ನಾವು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇವೆ.”

“ವಲಸೆಯನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಜಾಗತಿಕ ಅಸಮಾನತೆ, ರಕ್ಷಣೆಯ ಅಗತ್ಯತೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳಂತಹ ಕೆಲವು ದೊಡ್ಡ ಸವಾಲುಗಳಿಗೆ ಅದು ನಿಜವಾಗಿಯೂ ಪರಿಹಾರವಾಗಿದೆ.”

ಈ ಸಂದೇಶವು ಅತ್ಯಂತ ನಿರ್ಣಾಯಕ ಸಮಯದಲ್ಲಿ ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲವು ವಲಸೆ ಮಾರ್ಗಗಳಲ್ಲಿ ಆಗಮನದ ಸಂಖ್ಯೆ ಕಡಿಮೆಯಾಗಿದ್ದರೂ, ಆ ಪ್ರಯಾಣಗಳು ಇನ್ನಷ್ಟು ಅಪಾಯಕಾರಿಯಾಗಿವೆ. ವಿಶೇಷವಾಗಿ ಸಮುದ್ರ ಮಾರ್ಗಗಳಲ್ಲಿ, ಒಟ್ಟಾರೆ ಸಂಖ್ಯೆಗಳು ಕಡಿಮೆಯಾಗಿದ್ದರೂ ವಲಸಿಗರ ಅಸುರಕ್ಷತೆ ಹೆಚ್ಚಾಗಿದೆ ಎಂದು ಸೋರ್ತಿನೊ ಗಮನ ಸೆಳೆದರು.

“ಒಟ್ಟಾರೆ ಸಂಖ್ಯೆಗಳು ಕಡಿಮೆಯಾಗಿದ್ದರೂ, ದುರದೃಷ್ಟವಶಾತ್ ಸಮುದ್ರದಲ್ಲಿ ಸಾವಿಗೀಡಾಗುವ ಅಥವಾ ಅಪಘಾತಗಳಿಗೆ ಬಲಿಯಾಗುವ ವಲಸಿಗರ ಸಂಖ್ಯೆ ಹೆಚ್ಚಿರುವುದನ್ನು ನಾವು ನೋಡಿದ್ದೇವೆ,” ಎಂದು ಅವರು ಹೇಳಿದರು.

“ಅಸುರಕ್ಷತೆ ಮತ್ತಷ್ಟು ಹೆಚ್ಚಾಗಿದೆ.”

ಆದ್ದರಿಂದ, ಪೂಜ್ಯ ಜಗದ್ಗುರುಗಳ ಈ ಉಪಸ್ಥಿತಿಯು ವಲಸೆಯನ್ನು ಕೇವಲ ಅಂಕಿಅಂಶಗಳಿಗೆ ಸೀಮಿತಗೊಳಿಸಲಾಗುವುದಿಲ್ಲ ಎಂಬುದನ್ನು ನೆನಪಿಸುತ್ತದೆ. “ವಲಸಿಗರನ್ನು ಮಾನವರಾಗಿ ಅವರ ಸಂಪೂರ್ಣ ಘನತೆಯೊಂದಿಗೆ ಸ್ವಾಗತಿಸುವ ಮಹತ್ವವನ್ನು ಶಾಸಕರು, ಸ್ಥಳೀಯ ಸಮುದಾಯಗಳು, ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ನೆನಪಿಸುವ ಪ್ರಮುಖ ಸಂದೇಶವನ್ನು ಪೂಜ್ಯ ಜಗದ್ಗುರುಗಳು ನೀಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಸೋರ್ತಿನೊ ಹೇಳಿದರು.

ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರ ನೆನಪು, ಇಂದಿನ ವಾಸ್ತವಗಳ ಎದುರಿಸುವಿಕೆ

ಲಾಂಪೆದುಸಾಗೆ ಪೂಜ್ಯ ಜಗದ್ಗುರು ಫ್ರಾನ್ಸಿಸ್ ಅವರು ನೀಡಿದ ಭೇಟಿಯ ನೆನಪು ಇಂದಿಗೂ ದ್ವೀಪದ ಗುರುತಿನ ಅವಿಭಾಜ್ಯ ಭಾಗವಾಗಿದೆ. ಆದರೆ 2013ರಲ್ಲಿ ಅವರು ಎತ್ತಿ ತೋರಿಸಿದ್ದ ಅನೇಕ ಮೂಲಭೂತ ಸವಾಲುಗಳು ಇಂದಿಗೂ ಬಗೆಹರಿದಿಲ್ಲ ಎಂದು ಸೋರ್ತಿನೊ ಹೇಳಿದ್ದಾರೆ.

“ಹಲವು ಸಂಗತಿಗಳು ಬದಲಾಗಿವೆ, ಆದರೆ ದುರದೃಷ್ಟವಶಾತ್ಎಲ್ಲವೂ ಉತ್ತಮ ಮಟ್ಟಕ್ಕೆ ಬಂದಿವೆ ಎಂದು ಹೇಳಲಾಗದು."

ಹಲವು ಸಂಗತಿಗಳು ಬದಲಾಗಿವೆ. ಆದರೆ ದುರದೃಷ್ಟವಶಾತ್ಎಲ್ಲವೂ ಉತ್ತಮ ಮಟ್ಟಕ್ಕೆ ಬಂದಿವೆ ಎಂದು ಹೇಳಲಾಗದು. ಇತ್ತೀಚಿನ ವರ್ಷಗಳಲ್ಲಿ ಆಗಮನದ ಸಂಖ್ಯೆ ಕಡಿಮೆಯಾಗಿದ್ದರೂ, ಅದನ್ನು ರಕ್ಷಣೆ ಅಥವಾ ಉತ್ತಮ ಅವಕಾಶಗಳ ಅಗತ್ಯವಿರುವ ಜನರ ಸಂಖ್ಯೆ ಕಡಿಮೆಯಾಗಿದೆ ಎಂಬುದಕ್ಕೆ ಸಾಕ್ಷಿಯೆಂದು ಪರಿಗಣಿಸಬಾರದು ಎಂದು ಅವರು ಎಚ್ಚರಿಸಿದರು.

“ವಲಸೆ ಕೈಗೊಳ್ಳುವ ಅಗತ್ಯವಿರುವ ಜನರ ಸಂಖ್ಯೆ ಕಡಿಮೆಯಾಗಿದೆ ಎಂಬುದಕ್ಕೆ ಅದು ಅರ್ಥವಲ್ಲ,ಆಗಮನದ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಹೋಲಿಸಿದರೆ, ಸಮುದ್ರದಲ್ಲಿ ಸಂಭವಿಸುವ ದುರಂತಗಳು ಮತ್ತು ಪ್ರಾಣ ಕಳೆದುಕೊಳ್ಳುವ ವಲಸಿಗರ ಸಂಖ್ಯೆ ಪ್ರಮಾಣಾನುಗುಣವಾಗಿ ಹೆಚ್ಚಾಗಿದೆ ಎಂಬುದನ್ನು ಅಂಕಿಅಂಶಗಳು ತೋರಿಸುತ್ತವೆ.”

IOMನ ಪ್ರಕಾರ, ಈ ವಾಸ್ತವಿಕತೆಯು ಸಮುದ್ರದಲ್ಲಿನ ಶೋಧ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಸಂಪೂರ್ಣ ವಲಸೆ ಮಾರ್ಗದಲ್ಲೇ ವಲಸೆ ನಿರ್ವಹಣೆಯನ್ನು ಸುಧಾರಿಸುವ ಅಗತ್ಯವನ್ನು ಒತ್ತಿಹೇಳುತ್ತದೆ. “ಸಂಪೂರ್ಣ ವಲಸೆ ಮಾರ್ಗವನ್ನು ಒಳಗೊಂಡಿರುವ ವಿಧಾನವನ್ನು ಇನ್ನಷ್ಟು ಬಲಪಡಿಸಿ ಸುಧಾರಿಸಬೇಕು,” ಎಂದು ಅವರು ಹೇಳಿದರು.

ಅದೇ ಸಮಯದಲ್ಲಿ, ಯುರೋಪಿನಲ್ಲಿ ಹೆಚ್ಚು ಸಮನ್ವಯಯುತ ವಲಸೆ ನೀತಿಗಳನ್ನು ರೂಪಿಸುವ ಪ್ರಯತ್ನಗಳನ್ನು ಸೋರ್ತಿನೊ ಸ್ವಾಗತಿಸಿದರು. ಆದರೆ ಅವುಗಳ ಅನುಷ್ಠಾನವು ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಕಾನೂನುಗಳ ಮೇಲೆ ದೃಢವಾಗಿ ಆಧಾರಿತವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. “ನಮಗೆ ಅತ್ಯಂತ ಮುಖ್ಯವಾದುದು, ಆಶ್ರಯದ ಅಗತ್ಯವಿರುವವರಿಗೆ ಆಶ್ರಯ ಪಡೆಯುವ ಹಕ್ಕಿನ ಭರವಸೆಯನ್ನು ಕಾಪಾಡಿಕೊಳ್ಳುವುದು ಮತ್ತು ಅಂತರರಾಷ್ಟ್ರೀಯ ಕಾನೂನು ಹಾಗೂ ಮಾನವ ಹಕ್ಕುಗಳಿಗೆ ಸಂಪೂರ್ಣ ಗೌರವ ನೀಡುವುದಾಗಿದೆ.”

ತುರ್ತು ಪ್ರತಿಕ್ರಿಯೆಗಳನ್ನು ಮೀರಿ

ಆದರೆ ಮಾನವೀಯ ಸಂಸ್ಥೆಗಳ ದೃಷ್ಟಿಯಲ್ಲಿ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮಾತ್ರ ಸಾಕಾಗುವುದಿಲ್ಲ. “ಮೆಡಿಟರೇನಿಯನ್ ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ರಕ್ಷಣೆಯ ಕೇಂದ್ರ ಅಂಶವಾಗಿಯೇ ಉಳಿದಿವೆ.ಆದರೆ ಕಾನೂನುಬದ್ಧ ವಲಸೆ ಮಾರ್ಗಗಳನ್ನು ತೆರೆಯುವುದೇ ಅಂತಿಮವಾಗಿ ನಿಜವಾದ ಉತ್ತರವಾಗಿದೆ.”

ಸಂಘರ್ಷಗಳು, ಬಡತನ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುವ ಒತ್ತಡಗಳಂತಹ ಮೂಲ ಕಾರಣಗಳನ್ನು ಪರಿಹರಿಸುವುದು ಅಗತ್ಯವಾಗಿದೆ. ಅದರ ಜೊತೆಗೆ, ಅಪಾಯಭರಿತ ಪ್ರಯಾಣಗಳಿಗೆ ಪರ್ಯಾಯವಾದ ಸುರಕ್ಷಿತ ಮಾರ್ಗಗಳನ್ನು ಸೃಷ್ಟಿಸುವುದೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಪಾರ ಪ್ರಯತ್ನಗಳು ನಡೆಯುತ್ತಿವೆ.

ಯುರೋಪ್ ಮತ್ತು ಇಟಲಿಗೆ ಪರಿಣಾಮಕಾರಿ ಕಾನೂನುಬದ್ಧ ವಲಸೆ ಮಾರ್ಗಗಳು ನಮಗೆ ಅಗತ್ಯ.”

ಅದರರ್ಥ, ವಲಸೆ ಪ್ರಕ್ರಿಯೆಗಳನ್ನು ಸರಳಗೊಳಿಸುವುದು, ಉದ್ಯೋಗದಾತರನ್ನು ಒಳಗೊಳ್ಳಿಸುವುದು ಹಾಗೂ ಕಾರ್ಮಿಕರ ಅಗತ್ಯತೆಗಳನ್ನು ವಲಸಿಗರ ಕೌಶಲ್ಯಗಳೊಂದಿಗೆ ಹೊಂದಾಣಿಕೆ ಮಾಡುವ ವ್ಯವಸ್ಥೆಗಳನ್ನು ರೂಪಿಸುವುದು. “ಉದ್ಯೋಗದಾತರು ಮತ್ತು ತಮ್ಮ ಕೌಶಲ್ಯಗಳನ್ನು ನೀಡಲು ಸಿದ್ಧರಾಗಿರುವವರು ಪರಿಣಾಮಕಾರಿಯಾಗಿ ಸಂಪರ್ಕ ಸಾಧಿಸುವಂತಹ ಹೊಂದಾಣಿಕೆಯ ವ್ಯವಸ್ಥೆಗಳನ್ನು ನಿರ್ಮಿಸುವ ಸಾಮರ್ಥ್ಯ ಅತ್ಯಂತ ಮಹತ್ವದ್ದಾಗಿದೆ” ಎಂದು ಅವರು ಹೇಳಿದರು.

ವಿಶ್ವಾಸ ಸಮುದಾಯಗಳ ಅನಿವಾರ್ಯ ಪಾತ್ರ

ವಲಸಿಗರಿಗೆ ಅವರ ಸಂಕೀರ್ಣ ಪ್ರಯಾಣದಲ್ಲಿ ನೆರವಾಗುವ ಸಂಸ್ಥೆಗಳಲ್ಲಿ ವಿಶ್ವಾಸಾಧಾರಿತ ಸಂಘಟನೆಗಳು ವಿಶಿಷ್ಟ ಸ್ಥಾನವನ್ನು ಹೊಂದಿವೆ. ಸೋರ್ತಿನೊ ಅವರ ಅಭಿಪ್ರಾಯದಲ್ಲಿ, ಅವುಗಳ ಕೊಡುಗೆ ತುರ್ತು ನೆರವಿಗೆ ಮಾತ್ರ ಸೀಮಿತವಾಗಿಲ್ಲ. “ಕೆಲವೊಮ್ಮೆ ನಾವು ವಲಸೆಯ ಬಗ್ಗೆ ಅತ್ಯಂತ ಅಮೂರ್ತವಾಗಿ, ವಿವಿಧ ವರ್ಗೀಕರಣಗಳ ಮೂಲಕ ಮಾತನಾಡುತ್ತೇವೆ,” ಎಂದು ಅವರು ಹೇಳಿದರು. “ಆದರೆ ಕೊನೆಯಲ್ಲಿ ನಾವು ಮಾತನಾಡುತ್ತಿರುವುದು ಸಮುದಾಯಗಳಲ್ಲಿ ಬದುಕಬೇಕಾದ ಮಾನವರ ಬಗ್ಗೆ.”

ಈ ವಾಸ್ತವಗಳಿಗೆ ಅತ್ಯಂತ ಸಮೀಪದಲ್ಲಿರುವವರು ವಿಶ್ವಾಸ ಸಮುದಾಯಗಳೇ ಎಂದು ಅವರು ಅಭಿಪ್ರಾಯಪಟ್ಟರು. “ಮೊದಲ ಹಂತದ ನೆರವು, ಸ್ವಾಗತ, ಸಮಾಜದೊಂದಿಗೆ ಹೊಂದಾಣಿಕೆ ಮತ್ತು ಸಾಮಾಜಿಕ ಸೇರ್ಪಡೆಯ ಕಾರ್ಯಗಳಲ್ಲಿ ನೇರವಾಗಿ ತೊಡಗಿಸಿಕೊಂಡಿರುವವರು ಬಹಳ ಬಾರಿ ವಿಶ್ವಾಸಾಧಾರಿತ ಸಂಘಟನೆಗಳು ಅಥವಾ ಧರ್ಮಸಭೆಯೇ ಆಗಿರುತ್ತವೆ.”. ವಿಶೇಷವಾಗಿ ಇಟಲಿಯಲ್ಲಿ ಸ್ಥಳೀಯ ಸಮುದಾಯಗಳು, ಧರ್ಮಕೇಂದ್ರಗಳು, ದಾನಧರ್ಮ ಸಂಸ್ಥೆಗಳು ಮತ್ತು ಸ್ವಯಂಸೇವಕರ ಜಾಲಗಳು ಹೊಸದಾಗಿ ಬರುವವರನ್ನು ಸಮಾಜದೊಂದಿಗೆ ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅವರು ಸ್ಥಳೀಯ ಸಮುದಾಯಗಳಿಗೆ ಜೀವ ತುಂಬುತ್ತಾರೆ ಮತ್ತು ಅವುಗಳನ್ನು ಸಕ್ರಿಯವಾಗಿರಿಸುತ್ತಾರೆ. ಇದರಿಂದ ನೆರವು ಅತ್ಯಂತ ಅಗತ್ಯವಿರುವ ಸ್ಥಳಗಳಿಗೆ ತಲುಪಲು ಸಾಧ್ಯವಾಗುತ್ತದೆ.

ವಿಷಕಾರಿ ಕಥನಗಳನ್ನು ಮೀರಿ ಸಾಗುವುದು

ವಲಸೆಯ ಕುರಿತ ಸಾರ್ವಜನಿಕ ಚರ್ಚೆಯ ಧಾಟಿಯ ಬಗ್ಗೆ ಸೋರ್ತಿನೊ ಕಳವಳ ವ್ಯಕ್ತಪಡಿಸಿದರು. “ವಲಸಿಗರ ಬಗ್ಗೆ ವಿಷಕಾರಿ ಕಥನಗಳನ್ನು ಕೆಲವರು ಅತ್ಯಂತ ಬೇಜವಾಬ್ದಾರಿಯಿಂದ ಬಳಸುತ್ತಿರುವುದನ್ನು ನೋಡುವುದು ವಿಷಾದಕರ. ಅವು ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ.”

ಅದರ ಬದಲು, ವಾಸ್ತವಾಂಶಗಳು ಮತ್ತು ಸಾಕ್ಷ್ಯಾಧಾರಗಳ ಮೇಲೆ ನಿಂತ ಚರ್ಚೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು. ಏಕೆಂದರೆ ಸಾರ್ವಜನಿಕರ ಗಮನ ಬಹುತೇಕ ಸಮುದ್ರ ಮಾರ್ಗದಿಂದ ಅಕ್ರಮವಾಗಿ ಬರುವವರ ಮೇಲೆಯೇ ಕೇಂದ್ರೀಕೃತವಾಗಿದೆ.

“ಇಟಲಿಯಲ್ಲಿ ವಲಸೆಯ ಬಗ್ಗೆ ಮಾತನಾಡಿದಾಗ, ಲಾಂಪೆದುಸಾಗೆ ಬರುವ ದೋಣಿಗಳನ್ನೇ ನಾವು ನೆನಪಿಸಿಕೊಳ್ಳುತ್ತೇವೆ. ಆದರೆ ಅದು ಇಡೀ ವಲಸೆ ವಿದ್ಯಮಾನದ ಒಂದು ಸಣ್ಣ ಭಾಗ ಮಾತ್ರ.” ಇಟಲಿ ಮತ್ತು ಯುರೋಪಿಗೆ ಆಗುವ ಬಹುತೇಕ ವಲಸೆ ಉದ್ಯೋಗ, ಶಿಕ್ಷಣ ಹಾಗೂ ಕುಟುಂಬ ಪುನರ್ಮಿಲನದಂತಹ ಕಾನೂನುಬದ್ಧ ಮಾರ್ಗಗಳ ಮೂಲಕವೇ ನಡೆಯುತ್ತದೆ ಎಂದು ಅವರು ತಿಳಿಸಿದರು. ಇಟಲಿಯ ಸಮಾಜಕ್ಕೆ ವಲಸಿಗರು ನೀಡುತ್ತಿರುವ ಮಹತ್ತರ ಕೊಡುಗೆಯನ್ನೂ ಅವರು ಉಲ್ಲೇಖಿಸಿದರು.

“ಇಟಲಿಯಲ್ಲಿ ಸುಮಾರು 55 ಲಕ್ಷ ಕಾನೂನುಬದ್ಧ ವಲಸಿಗರಿದ್ದಾರೆ. ಅವರು ದೇಶದ ಒಟ್ಟು ದೇಶೀಯ ಉತ್ಪನ್ನದ (GDP) ಸುಮಾರು 9 ಪ್ರತಿಶತದಷ್ಟು ಕೊಡುಗೆ ನೀಡುತ್ತಾರೆ. ಇದು ಅತ್ಯಂತ ಮಹತ್ವದ್ದಾಗಿದೆ. ಆದರೆ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿಲ್ಲ.” ಆದ್ದರಿಂದ, ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಈ ಭೇಟಿಯು ಭಯದ ಕಥನಗಳಿಂದ ಗಮನವನ್ನು ವಾಸ್ತವಾಂಶಗಳತ್ತ ತಿರುಗಿಸುವ ಅವಕಾಶವಾಗಿದೆ.

“ಸಾಕ್ಷ್ಯಗಳು ಮತ್ತು ವಾಸ್ತವಾಂಶಗಳ ಮೇಲೆ ಆಧಾರಿತ ಕಥನಗಳಿಗೆ ಬೆಳಕು ಮತ್ತು ಧ್ವನಿಯನ್ನು ನೀಡುವಲ್ಲಿ ಸಣ್ಣ ಮತ್ತು ದೊಡ್ಡ ಎಲ್ಲ ಸಂಸ್ಥೆಗಳ ಸಹಕಾರ ನಮಗೆ ಅಗತ್ಯವಾಗಿದೆ.”

ವಲಸೆಯ ಮಾನವೀಯ ಮುಖದ ಮೇಲೆ ಬೆಳಕು ಚೆಲ್ಲುವ ಭೇಟಿ

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರ ಭೇಟಿಯ ಸಂದರ್ಭದಲ್ಲಿ ತಾವೂ ಲಾಂಪೆದುಸಾದಲ್ಲಿರಲಿದ್ದೇನೆ ಎಂದು ಸೋರ್ತಿನೊ ತಿಳಿಸಿದರು. ಈ ಭೇಟಿ ದ್ವೀಪಕ್ಕೂ ಅಲ್ಲಿಗೆ ಆಗಮಿಸುವ ವಲಸಿಗರಿಗೂ ಎಷ್ಟು ಮಹತ್ವದ್ದಾಗಲಿದೆ ಎಂಬುದರ ಬಗ್ಗೆ ಅವರು ಅಪಾರ ಉತ್ಸಾಹ ವ್ಯಕ್ತಪಡಿಸಿದರು.

“ಇಂತಹ ಮಹತ್ತರ ಜಾಗತಿಕ ಗಮನ ಲಾಂಪೆದುಸಾದ ಮೇಲೆ ಕೇಂದ್ರೀಕರಿಸಲಿರುವುದಕ್ಕೆ ನನಗೆ ಅಪಾರ ಸಂತೋಷವಾಗಿದೆ,.” ಲಾಂಪೆದುಸಾವನ್ನು ಅವರು ಅಧಿಕಾರಿಗಳು, ಮಾನವೀಯ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ನಡುವಿನ ಮಾದರಿಯಾದ ಸಹಕಾರದ ಕೇಂದ್ರ ಎಂದು ಬಣ್ಣಿಸಿದರು. “ಇಲ್ಲಿನ ಸಹಕಾರ ಎಷ್ಟು ದೃಢವಾಗಿದೆ ಎಂಬುದು ನನಗೆ ಯಾವಾಗಲೂ ಆಶ್ಚರ್ಯವನ್ನುಂಟು ಮಾಡಿದೆ” ಎಂದರು.

ಎಲ್ಲಕ್ಕಿಂತ ಹೆಚ್ಚಾಗಿ, ಪೂಜ್ಯ ಜಗದ್ಗುರುಗಳ ಉಪಸ್ಥಿತಿಯು ಸುದ್ದಿಗಳ ಶೀರ್ಷಿಕೆಗಳ ಹಿಂದೆ ಅಡಗಿರುವ ಮಾನವ ಜೀವನದ ಕಥೆಗಳತ್ತ ಜಗತ್ತಿನ ಗಮನ ಸೆಳೆಯಲಿ ಎಂಬುದು ಅವರ ಆಶಯ. “ಆ ಸ್ಥಳದಲ್ಲಿ ಪೂಜ್ಯ ಜಗದ್ಗುರುಗಳ ಉಪಸ್ಥಿತಿಯು ವಲಸೆಯ ಮಾನವೀಯ ಆಯಾಮದತ್ತ ಇನ್ನಷ್ಟು ಹೆಚ್ಚಿನ ಗಮನವನ್ನು ಸೆಳೆಯಲಿದೆ ಎಂಬ ವಿಶ್ವಾಸ ನನಗಿದೆ,” ಎಂದು ಅವರು ಹೇಳಿದರು. “ಇಲ್ಲಿಗೆ ಆಗಮಿಸುವ ವಲಸಿಗರ ಆಶಯಗಳು, ಅವರು ಅನುಭವಿಸುವ ಯಾತನೆಗಳು ಹಾಗೂ ಅಂಕಿಅಂಶಗಳಿಗಿಂತ ಅವರ ಜೀವನದ ಈ ಆಯಾಮಕ್ಕೆ ನಾವೆಲ್ಲರೂ ಹೆಚ್ಚಿನ ಗಮನ ನೀಡುವುದು ಅತ್ಯಂತ ಮುಖ್ಯವಾಗಿದೆ.”

“ಪೂಜ್ಯ ಜಗದ್ಗುರುಗಳ ಉಪಸ್ಥಿತಿಯು, ವಲಸಿಗರ ಆಶಯಗಳು, ಅವರು ಅನುಭವಿಸುವ ನೋವು ಮತ್ತು ಯಾತನೆಗಳತ್ತ ಇನ್ನಷ್ಟು ಹೆಚ್ಚಿನ ಗಮನವನ್ನು ಸೆಳೆಯಲಿದೆ; ಕೇವಲ ಅಂಕಿಅಂಶಗಳತ್ತವಲ್ಲ.”

ಪೂಜ್ಯ ಜಗದ್ಗುರುಗಳಾದ 14ನೇ ಲಿಯೋ ಅವರನ್ನು ಸ್ವಾಗತಿಸಲು ಲಾಂಪೆದುಸಾ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ, ಈ ದ್ವೀಪವು ಮತ್ತೊಮ್ಮೆ ಕೇವಲ ವಲಸೆ ಮಾರ್ಗಗಳು ಅಥವಾ ಗಡಿ ನೀತಿಗಳ ಸಂಕೇತವಾಗಿ ಮಾತ್ರವಲ್ಲ, ತನ್ನ ತೀರವನ್ನು ತಲುಪುವ ಪ್ರತಿಯೊಬ್ಬರ ಜೀವನ, ಆಶಯ ಮತ್ತು ಮಾನವ ಘನತೆಯ ಸಂಕೇತವಾಗಿಯೂ ಪರಿಣಮಿಸುತ್ತಿದೆ. ಸೋರ್ತಿನೊ ಅವರಂತಹ ಮಾನವೀಯ ಸೇವೆಯಲ್ಲಿ ತೊಡಗಿರುವವರಿಗೆ, ಪೂಜ್ಯ ಜಗದ್ಗುರುಗಳು ನೀಡಬಹುದಾದ ಅತ್ಯಂತ ಮಹತ್ವದ ಸಂದೇಶವೆಂದರೆ, ಪ್ರತಿಯೊಂದು ಅಂಕಿಅಂಶದ ಹಿಂದೆ ರಕ್ಷಣೆ, ಅವಕಾಶ ಮತ್ತು ಗೌರವಕ್ಕೆ ಅರ್ಹನಾದ ಒಬ್ಬ ಮಾನವ ವ್ಯಕ್ತಿ ಇದ್ದಾನೆ ಎಂಬ ಸತ್ಯವನ್ನು ಜಗತ್ತಿಗೆ ನೆನಪಿಸುವುದಾಗಿದೆ.

ಲಾಂಪೆದುಸಾದಲ್ಲಿ IOMನ ಸೇವೆ

ಲಾಂಪೆದುಸಾದಲ್ಲಿ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM), ಇಟಲಿಯ ಅಧಿಕಾರಿಗಳು ಹಾಗೂ ಮಾನವೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ, ವಲಸಿಗರ ಸ್ವಾಗತ ಮತ್ತು ನೆರವಿನ ಪ್ರತಿಯೊಂದು ಹಂತದಲ್ಲೂ ಕಾರ್ಯನಿರ್ವಹಿಸುತ್ತಿದೆ. ಕರಾವಳಿ ರಕ್ಷಣಾ ಪಡೆ ನಡೆಸುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಕರಿಸಲು IOM ಸಾಂಸ್ಕೃತಿಕ ಮಧ್ಯವರ್ತಿಗಳನ್ನು ಒದಗಿಸುತ್ತದೆ ಎಂದು ಸೋರ್ತಿನೊ ವಿವರಿಸಿದರು. ಇಂತಹ ಸಂದರ್ಭಗಳಲ್ಲಿ ಪರಿಣಾಮಕಾರಿ ಸಂವಹನವು ಜೀವ ಮತ್ತು ಸಾವಿನ ನಡುವಿನ ವ್ಯತ್ಯಾಸವಾಗಬಹುದು. ಇದರ ಜೊತೆಗೆ, ಸಾರ್ವಜನಿಕ ಭದ್ರತಾ ಸಿಬ್ಬಂದಿಗೆ ನೋಂದಣಿ ಮತ್ತು ಗುರುತಿನ ಪರಿಶೀಲನೆ ಪ್ರಕ್ರಿಯೆಯಲ್ಲಿಯೂ IOM ಸಹಾಯ ಮಾಡುತ್ತದೆ.

ಮಾನವ ಕಳ್ಳಸಾಗಣೆಯ ಬಲಿಪಶುಗಳು ಹಾಗೂ ಇತರ ದುರ್ಬಲ ಪರಿಸ್ಥಿತಿಯಲ್ಲಿರುವವರನ್ನು ಗುರುತಿಸಿ, ಅವರನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಒಪ್ಪಿಸುವುದು ಮತ್ತು ಇಟಲಿಯ ಮುಖ್ಯ ಭೂಭಾಗದಲ್ಲಿರುವ ಸೂಕ್ತ ಕೇಂದ್ರಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿಯೂ IOM ಸಿಬ್ಬಂದಿ ನೆರವಾಗುತ್ತಾರೆ. ಈ ಎಲ್ಲ ಕಾರ್ಯಗಳನ್ನು ಇತರ ಸರ್ಕಾರಿ ಸಂಸ್ಥೆಗಳು, ಅಂತರರಾಷ್ಟ್ರೀಯ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಸಂಘಟನೆಗಳೊಂದಿಗೆ ನಿಕಟ ಸಹಕಾರದಲ್ಲಿ ನಡೆಸಲಾಗುತ್ತಿದೆ.

ನಮ್ಮ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೈನಂದಿನ ಸುದ್ದಿಪತ್ರಕ್ಕೆ ಚಂದಾದಾರರಾಗುವ ಮೂಲಕ ನೀವು ಸದಾ ಇತ್ತೀಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.(ಇಲ್ಲಿ ಕ್ಲಿಕ್ ಮಾಡಿ).

 

02 ಜುಲೈ 2026, 11:11