ಚೀನಾ - ಪವಿತ್ರ ಪೀಠಾಧಿಕಾರದ ಒಪ್ಪಂದದ ಪ್ರಕಾರ, ಲುಲಿಯಾಂಗ್‌ನ ಪ್ರಪ್ರಥಮ ಧರ್ಮಾಧ್ಯಕ್ಷರನ್ನು ಪವಿತ್ರೀಕರಿಸಲಾಯಿತು.
ವ್ಯಾಟಿಕನ್ ಸುದ್ಧಿ
"ಪ್ರಭುವಿನ ಹಿಂಡಿನ ಪಾಲನಾ ಆರೈಕೆಯನ್ನು ಉತ್ತೇಜಿಸಲು ಮತ್ತು ಅದರ ಆಧ್ಯಾತ್ಮಿಕ ಒಳಿತನ್ನು ಹೆಚ್ಚು ಪರಿಣಾಮಕಾರಿಯಾಗಿ ನೋಡಿಕೊಳ್ಳಲು" ಬಯಸಿ, ವಿಶ್ವಗುರು ಫ್ರಾನ್ಸಿಸ್ ರವರು ಏಪ್ರಿಲ್ 11, 1946 ರಂದು ವಿಶ್ವಗುರು ಪಯಸ್ XII ರವರಿಂದ ಸ್ಥಾಪಿಸಲ್ಪಟ್ಟ ಚೀನಾದ ಮುಖ್ಯ ಭೂಭಾಗದಲ್ಲಿರುವ ಫೆನ್ಯಾಂಗ್‌ನ ಧರ್ಮಕ್ಷೇತ್ರವನ್ನು ನಿಗ್ರಹಿಸಲು ನಿರ್ಧರಿಸಿದ್ದಾರೆ.
ಅದೇ ಸಮಯದಲ್ಲಿ, ಅವರು ಲುಲಿಯಾಂಗ್‌ನ ಹೊಸ ಧರ್ಮಕ್ಷೇತ್ರವನ್ನು ರಚಿಸಿದ್ದಾರೆ, ಇದು ಶಾಂಕ್ಸಿ ಪ್ರಾಂತ್ಯದ ತೈಯುವಾನ್ ಮಹಾಧರ್ಮಕ್ಷೇತ್ರದ, ಸಹಾಯಕ ಧರ್ಮಕ್ಷೇತ್ರವಾಗಿರುತ್ತದೆ.
ಧರ್ಮಾಧ್ಯಕ್ಷರ ಅಧಿಕಾರವು ಲುಲಿಯಾಂಗ್‌ನೊಳಗಿನ ನಗರವಾದ ಫೆನ್ಯಾಂಗ್‌ನಲ್ಲಿರುವ, ಯೇಸುವಿನ ಪವಿತ್ರ ಹೃದಯದ ಪ್ರಧಾನಾಲಯದಲ್ಲಿರುತ್ತದೆ(ಕ್ಯಾಥೆಡ್ರಲ್ ಆಫ್ ದಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್).
ಹೊಸ ಧರ್ಮಕ್ಷೇತ್ರದ ವಿವರಗಳು
ಪವಿತ್ರ ಪೀಠಾಧಿಕಾರದ ಪತ್ರಿಕಾ ಕಚೇರಿಯ ಒಂದು ಹೇಳಿಕೆಯಲ್ಲಿ, ಈ ಸುದ್ದಿಯನ್ನು ಪ್ರಕಟಿಸಿದ್ದು, ಲುಲಿಯಾಂಗ್‌ನ ಹೊಸ ಧರ್ಮಕ್ಷೇತ್ರದ ಧರ್ಮಸಭೆಯ ಗಡಿಗಳು "ಕೆಳಗಿನ ಪ್ರದೇಶಗಳನ್ನು ಒಳಗೊಂಡಿರುತ್ತವೆ: ಲಿಶಿ ಜಿಲ್ಲೆ, ವೆನ್‌ಶುಯಿ, ಜಿಯಾಚೆಂಗ್, ಕ್ಸಿಂಗ್‌ಸಿಯಾನ್, ಲಿಂಕ್ಸಿಯಾನ್, ಲಿಯುಲಿನ್, ಶಿಲೌ, ಲ್ಯಾಂಕ್ಸಿಯಾನ್, ಫಾಂಗ್‌ಶಾನ್, ಝೊಂಗ್‌ಯಾಂಗ್, ಜಿಯಾಕೊವು ಹಾಗೂ ಕ್ಸಿಯಾವೊಯಿ ಮತ್ತು ಫೆನ್ಯಾಂಗ್ ನಗರಗಳು" ಎಂದು ವಿವರಿಸಿದೆ.
"ಕೇಲನ್ ಮತ್ತು ಜಿಂಗಲ್ ಕೌಂಟಿಗಳು ತೈಯುವಾನ್ ಮಹಾಧರ್ಮಕ್ಷೇತ್ರಕ್ಕೆ ಸೇರ್ಪಡೆಗೊಂಡರೆ, ಪಿಂಗ್ಯಾವೊ ಮತ್ತು ಜಿಯೆಕ್ಸಿಯು ಕೌಂಟಿಗಳು ಯುಸಿ ಧರ್ಮಕ್ಷೇತ್ರಕ್ಕೆ ಸೇರ್ಪಡೆಗೊಂಡಿವೆ" ಎಂದು ಹೇಳಿಕೆಯು ಸ್ಪಷ್ಟಪಡಿಸಿದೆ.
ಈ ವ್ಯವಸ್ಥೆಯು ಲುಲಿಯಾಂಗ್ ಧರ್ಮಕ್ಷೇತ್ರದ ಪ್ರದೇಶವು ಲುಲಿಯಾಂಗ್ ನಗರದೊಂದಿಗೆ ಹೊಂದಿಕೆಯಾಗುವಂತೆ ಖಚಿತಪಡಿಸುತ್ತದೆ, ಇದು ಒಟ್ಟು 21,000 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಒಳಗೊಂಡಿದೆ. ಇಲ್ಲಿನ ಜನಸಂಖ್ಯೆಯು ಸುಮಾರು 3.35 ಮಿಲಿಯನ್ ಆಗಿದ್ದು, "ಸುಮಾರು 20,000 ಕಥೋಲಿಕರು, 51 ಧರ್ಮಗುರುಗಳನ್ನು ಮತ್ತು 26 ಸನ್ಯಾಸಿನಿಯರು ಸೇವೆ ಸಲ್ಲಿಸುತ್ತಿದ್ದಾರೆ."
ಮೊದಲ ಧರ್ಮಾಧ್ಯಕ್ಷರಾಗಿ ನೇಮಕಗೊಂಡರು
ಜನವರಿ 20, ಸೋಮವಾರ, ಲುಲಿಯಾಂಗ್‌ನ ಮೊದಲ ಧರ್ಮಾಧ್ಯಕ್ಷರಾಗಿ ಧರ್ಮಾಧ್ಯಕ್ಷರಾದ ಆಂಟೋನಿಯೊ ಜಿ ವೈಜಾಂಗ್ ರವರು ಧರ್ಮಾಧ್ಯಕ್ಷೀಯ ದೀಕ್ಷೆಯನ್ನು ಪಡೆದರು ಎಂದು ವ್ಯಾಟಿಕನ್ ಘೋಷಿಸಿತು.
ಅಕ್ಟೋಬರ್ 28, 2024 ರಂದು ವಿಶ್ವಗುರು ಫ್ರಾನ್ಸಿಸ್ ರವರು "ಪವಿತ್ರ ಪೀಠಾಧಿಕಾರವು ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ನಡುವಿನ ತಾತ್ಕಾಲಿಕ ಒಪ್ಪಂದದ ಚೌಕಟ್ಟಿನೊಳಗೆ ಅವರ ಉಮೇದುವಾರಿಕೆಯನ್ನು ಅನುಮೋದಿಸಿದ ನಂತರ" ಅವರ ನೇಮಕಾತಿಯನ್ನು ಮಾಡಲಾಯಿತು.
ಶಾಂಕ್ಸಿಯ ವೆನ್‌ಶುಯಿ ಮೂಲದ ಧರ್ಮಾಧ್ಯಕ್ಷ ಜಿ ವೈಜಾಂಗ್ ರವರು ಆಗಸ್ಟ್ 3, 1973 ರಂದು ಜನಿಸಿದರು. ಅವರು ಬೀಜಿಂಗ್‌ನಲ್ಲಿರುವ ರಾಷ್ಟ್ರೀಯ ಗುರುವಿದ್ಯಾಮಂದಿರದಲ್ಲಿ ದೈವಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಅಕ್ಟೋಬರ್ 14, 2001 ರಂದು ಫೆನ್ಯಾಂಗ್ ನ ಧರ್ಮಕ್ಷೇತ್ರದ ಧರ್ಮಗುರುವಾಗಿ ನೇಮಕಗೊಂಡರು.
ನಂತರ ಅವರು ಕ್ಸಿಯಾನ್ ವಿಶ್ವವಿದ್ಯಾಲಯದಲ್ಲಿ ಭಾಷಾ ಅಧ್ಯಯನವನ್ನು ಮುಂದುವರಿಸಿದರು ಮತ್ತು ಜರ್ಮನಿಯ ಸಂತ ಆಗಸ್ತೀನರ ವಿಶ್ವವಿದ್ಯಾಲಯದಿಂದ ದೈವಶಾಸ್ತ್ರದಲ್ಲಿ ಪರವಾನಗಿ ಪಡೆದರು. ಫೆನ್ಯಾಂಗ್‌ನಲ್ಲಿ, ಅವರು "ಉಪ-ಧರ್ಮಕೇಂದ್ರದ ಧರ್ಮಗುರುವಾದರು, ಧರ್ಮಕ್ಷೇತ್ರದ ಪಾಲನಾ ಕೇಂದ್ರದ ನಿರ್ದೇಶಕ ಮತ್ತು ಶ್ರೇಷ್ಠಗುರುಗಳಾಗಿ" ಸೇವೆ ಸಲ್ಲಿಸಿದರು.