ಹುಡುಕಿ

Former Bangladesh Rifles members protest in Dhaka Former Bangladesh Rifles members protest in Dhaka  (ANSA)

ಬೆಲೆ ಏರಿಕೆ ವಿರುದ್ಧ ಸರ್ಕಾರ 'ಕ್ರಮ ಕೈಗೊಳ್ಳಬೇಕು' ಎಂದು ಬಾಂಗ್ಲಾದೇಶದ ಧರ್ಮಾಧ್ಯಕ್ಷರ ಹೇಳಿಕೆ

ಢಾಕಾದ ಸಹಾಯಕ ಧರ್ಮಾಧ್ಯಕ್ಷರಾದ ಸುಬ್ರೋಟೊ ಬೋನಿಫೇಸ್ ಗೋಮ್ಸ್ ರವರು, ಬಾಂಗ್ಲಾದೇಶದಲ್ಲಿ ಏರುತ್ತಿರುವ ಆಹಾರ ಬೆಲೆಗಳ ಬಗ್ಗೆ ಚರ್ಚಿಸುತ್ತಾರೆ. ಅವರು ದೇಶದ ಹೊಸ ಸರ್ಕಾರದ ಬಗ್ಗೆ ಮತ್ತು ಬಾಂಗ್ಲಾದೇಶದ ಕಥೊಲಿಕರು 2025ರ ಪವಿತ್ರ ವರ್ಷವನ್ನು ಹೇಗೆ ಜೀವಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ಮಾತನಾಡುತ್ತಾರೆ.

ಜೋಸೆಫ್ ಟುಲ್ಲೊಚ್

ಬಾಂಗ್ಲಾದೇಶದ ರಾಜಧಾನಿ ಢಾಕಾದ ಸಹಾಯಕ ಧರ್ಮಾಧ್ಯಕ್ಷರು, ದೇಶದ ಜೀವನಶೈಲಿಯ ವೆಚ್ಚದ ಬಿಕ್ಕಟ್ಟಿನ ಬಗ್ಗೆ ದೇಶದ ಸರ್ಕಾರ "ಕ್ರಮ ಕೈಗೊಳ್ಳಬೇಕು" ಎಂದು ಹೇಳಿದ್ದಾರೆ.

ವ್ಯಾಟಿಕನ್‌ನ ಫೈಡ್ಸ್ ಸುದ್ದಿಯ ಸಂಸ್ಥೆಯೊಂದಿಗೆ ಮಾತನಾಡಿದ ಧರ್ಮಾಧ್ಯಕ್ಷರಾದ ಸುಬ್ರೋಟೊ ಬೋನಿಫೇಸ್ ಗೋಮ್ಸ್ ರವರು, ಬಾಂಗ್ಲಾದೇಶದಲ್ಲಿ ಆಹಾರ ಮತ್ತು ಇತರ ಮೂಲಭೂತ ಅವಶ್ಯಕತೆಗಳ ಬೆಲೆಗಳಲ್ಲಿನ "ತೀವ್ರ ಏರಿಕೆ" "ಜನಸಂಖ್ಯೆಯ ಮೇಲೆ ಭಾರೀ ಒತ್ತಡವನ್ನುಂಟು ಮಾಡುತ್ತಿದೆ" ಎಂದು ಹೇಳಿದರು.

"ರಾಜಧಾನಿಯ ಮಾರುಕಟ್ಟೆಗಳಲ್ಲಿ ಮಾಂಸ, ಮೀನು, ಮೊಟ್ಟೆಗಳನ್ನು ಖರೀದಿಸುವುದು ಸಹ ಕಷ್ಟಕರವಾದ ಕೆಲಸವಾಗಿದೆ ಹಾಗೂ ಕುಟುಂಬಗಳು ತಮ್ಮನ್ನು ಹೇಗೆ ಪೋಷಿಸಿಕೊಳ್ಳಬಹುದು?" ಎಂದು ಭಕ್ತವಿಶ್ವಾಸಿಗಳು ದೂರುತ್ತಾರೆ ಎಂದು ಧರ್ಮಾಧ್ಯಕ್ಷರಾದ ಗೋಮ್ಸ್ ರವರು ಹೇಳಿದರು.

ಈ ಹೆಚ್ಚುತ್ತಿರುವ ಬೆಲೆಗಳು "ಹೊಸ ವರ್ಷವು ನಮಗೆ ಪ್ರಸ್ತುತಪಡಿಸುವ ಅತ್ಯಂತ ತುರ್ತು ಸಮಸ್ಯೆಗಳಲ್ಲಿ ಒಂದಾಗಿದೆ" ಎಂದು ಧರ್ಮಾಧ್ಯಕ್ಷರಾದ ಗೋಮ್ಸ್ ರವರು ಹೇಳಿದರು, ಬಾಂಗ್ಲಾದೇಶದ ಹೊಸ ಸರ್ಕಾರವು "ಪರಿಣಾಮಕಾರಿ ಕ್ರಮಗಳನ್ನು" ತೆಗೆದುಕೊಳ್ಳಬೇಕೆಂದು ಕರೆ ನೀಡಿದರು.

ಯೂನಸ್ ಸರ್ಕಾರದೊಂದಿಗಿನ ಸಂಬಂಧಗಳು
ಆಗಸ್ಟ್ 2024 ರಿಂದ, ಮಾಜಿ ಪ್ರಧಾನಿ ಶೇಖ್ ಹಸೀನಾರವರು ಭಾರತಕ್ಕೆ ಪಲಾಯನ ಮಾಡಿದ ನಂತರ, ಮುಹಮ್ಮದ್ ಯೂನಸ್ ದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.

ಹೊಸ ಯೂನಸ್ ಸರ್ಕಾರದೊಂದಿಗೆ ಕಥೋಲಿಕ ಧರ್ಮಸಭೆಯ ಸಂಬಂಧಗಳು "ಉತ್ತಮವಾಗಿವೆ" ಎಂದು ಧರ್ಮಾಧ್ಯಕ್ಷರಾದ ಗೋಮ್ಸ್ ರವರು ಹೇಳಿದರು.

ಅದೇನೇ ಇದ್ದರೂ, "ಯಾವುದೇ ಪಂಗಡದ ಕೆಲವು ಕ್ರೈಸ್ತರನ್ನು ಸರ್ಕಾರ ಮತ್ತು ಸುಧಾರಣಾ ಆಯೋಗಗಳಲ್ಲಿ ಸೇರಿಸಿಕೊಳ್ಳಬೇಕೆಂದು ನಾವು ಕೇಳಿಕೊಂಡಿದ್ದೇವೆ" ಎಂದು ಅವರು ಹೇಳಿದರು, ಚುನಾವಣಾ ವ್ಯವಸ್ಥೆ, ಪೊಲೀಸ್, ನ್ಯಾಯ, ಭ್ರಷ್ಟಾಚಾರ ನಿಗ್ರಹ ಆಯೋಗ, ಸಾರ್ವಜನಿಕ ಆಡಳಿತ ಮತ್ತು ಸಂವಿಧಾನದ ಸುಧಾರಣೆಗಳನ್ನು ಸಂಶೋಧಿಸಲು ಮಧ್ಯಂತರ ಸರ್ಕಾರವು ಸ್ಥಾಪಿಸಿದ ಆರು ಆಯೋಗಗಳನ್ನು ಉಲ್ಲೇಖಿಸುತ್ತಾ ಯಾವುದೇ ಪಂಗಡದ ಕೆಲವು ಕ್ರೈಸ್ತರನ್ನು ಸರ್ಕಾರ ಮತ್ತು ಸುಧಾರಣಾ ಆಯೋಗಗಳಲ್ಲಿ ಸೇರಿಸಿಕೊಳ್ಳಬೇಕೆಂದು ನಾವು ಕೇಳಿಕೊಂಡಿದ್ದೇವೆ ಎಂದು ಅವರು ಹೇಳಿದರು.

ದೇಶದ 2022 ರ ಜನಗಣತಿಯ ಪ್ರಕಾರ, ಬಾಂಗ್ಲಾದೇಶದಲ್ಲಿ ಸುಮಾರು 500,000 ಕ್ರೈಸ್ತರಿದ್ದಾರೆ.

"ದೇಶದ ಭವಿಷ್ಯದ ವಿವಿಧ ಅಂಶಗಳ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯ" ಎಂದು ಧರ್ಮಾಧ್ಯಕ್ಷರಾದ ಗೋಮ್ಸ್ ರವರು ಹೇಳಿದರು.

೨೦೨೫ರ ಜೂಬಿಲಿ ವರ್ಷ
ಅಂತಿಮವಾಗಿ, ಬಾಂಗ್ಲಾದೇಶದ ಧರ್ಮಸಭೆಯು ೨೦೨೫ರ ಪವಿತ್ರ ವರ್ಷವನ್ನು ಜನವರಿ ೮ ರಂದು ನಡೆದ ಸಮಾರಂಭದಲ್ಲಿ ಉದ್ಘಾಟಿಸಿದೆ ಎಂದು ಧರ್ಮಾಧ್ಯಕ್ಷರಾದ ಗೋಮ್ಸ್ ರವರು ವರದಿ ಮಾಡಿದರು.

"ಬಾಂಗ್ಲಾದೇಶದ ಭಕ್ತವಿಶ್ವಾಸಿಗಳು ರೋಮ್‌ಗೆ ತೀರ್ಥಯಾತ್ರೆ ಮಾಡುವ ಕನಸು ಕಾಣುತ್ತಾರೆ, ಆದರೆ ಇಟಲಿ ಮತ್ತು ಯುರೋಪಿನ ಒಕ್ಕೂಟಕ್ಕೆ ಪ್ರವೇಶ ವೀಸಾ ಪಡೆಯುವುದು ಅವರಿಗೆ ತುಂಬಾ ಕಷ್ಟ" ಎಂದು ಅವರು ಹೇಳಿದರು.

ಭಾರತದಲ್ಲಿ ಪ್ರಾರಂಭವಾದ ಅಂತರರಾಷ್ಟ್ರೀಯ ಕಥೋಲಿಕ ಚಳುವಳಿಯಾದ ʼಜೀಸಸ್ ಯೂತ್ʼ ಯುವಜನರಿಗಾಗಿ ಜೂಬಿಲಿ ತೀರ್ಥಯಾತ್ರೆಯನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ ಎಂದು ಧರ್ಮಾಧ್ಯಕ್ಷರಾದ ಗೋಮ್ಸ್ ರವರು ಗಮನಿಸಿದರು.

"ಇದು ಯಶಸ್ವಿಯಾಗುತ್ತದೆ ಎನ್ನುವ ಭರವಸೆಯ ಭಾವದಿಂದ" ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

14 ಜನವರಿ 2025, 17:00