ಉಕ್ರೇನ್: ಮಾನವ ಯಾತನೆಗಳ ನಡುವೆ ಪೂಜ್ಯ ಹೊನೆರೆತ್ ಸಭೆಯ ಸಹೋದರಿಯರ ಸಾಂತ್ವನ
ಕರೋಲ್ ಡಾರ್ಮೊರೋಸ್
ನಿಷ್ಕಂಳಕ ಹೃದಯದ ನಿರ್ಮಲ ಮೇರಿಮಾತೆಯ ಸಭೆಯ ಧಾರ್ಮಿಕ ಭಗಿನಿಯರು ಇಂದಿಗೂ ಸಕ್ರಿಯವಾಗಿರುವ ಪೂಜ್ಯ ಹೊನೊರತ್ (ಹೊನೊರಾಟಸ್) ಕೊಜ್ಮಿನ್ಸ್ಕಿರವರು ಸ್ಥಾಪಿಸಿದ 12 ಸಭೆಗಳಲ್ಲಿ ಒಂದಾಗಿದೆ. ಪೋಲೆಂಡ್ ವಿಭಜನೆಯ ಅವಧಿಯಲ್ಲಿ, ಧರ್ಮಸಭೆ ಮತ್ತು ಪೋಲೆಂಡ್ ಕಠಿಣ ಸಂದರ್ಭವನ್ನು ಎದುರಿಸುತ್ತಿದ್ದಾಗ ಈ ಸಭೆಯನ್ನು ಸ್ಥಾಪಿಸಲಾಯಿತು.
ಆಧ್ಯಾತ್ಮಿಕ ಮತ್ತು ಭೌತಿಕ ಬಿಕ್ಕಟ್ಟುಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ನಾವು ಬಿಕ್ಕಟ್ಟಿನ ಸಮಯದಲ್ಲಿ ಸ್ಥಾಪಿಸಲ್ಪಟ್ಟಿದ್ದೇವೆ. ನಾವು ಜನರಿಗೆ, ಅವರ ಸಮಸ್ಯೆಗಳಿಗೆ ಮತ್ತು ಅವರ ಸಂತೋಷಗಳಿಗೆ ಹತ್ತಿರವಾಗಿರುತ್ತೇವೆ ಎಂದು ಸಭೆಯ ಪ್ರಧಾನ ಶ್ರೇಷ್ಠಾಧಿಕಾರಿ ಮದರ್ ಜುಡಿಟಾ ಕೊವಾಲ್ಸ್ಕಾರವರು ಹೇಳಿದರು.
ಈ ಸಭೆಯು ಪೋಲೆಂಡ್, ಲಿಥುವೇನಿಯಾ, ಲಾಟ್ವಿಯಾ, ಜರ್ಮನಿ, ರೋಮ್ ಮತ್ತು ಉಕ್ರೇನ್‌ನಲ್ಲಿದೆ. ಉಕ್ರೇನ್‌ನಲ್ಲಿ, ಖಾರ್ಕಿವ್, ಕೈವ್, ಒಡೆಸ್ಸಾ, ಕ್ರೈಮಿಯಾ ಮತ್ತು ಟ್ರಾನ್ಸ್‌ನಿಸ್ಟ್ರಿಯಾದಂತಹ ಅಪಾಯಕಾರಿ ಪ್ರಾಂತ್ಯಗಳನ್ನು ಒಳಗೊಂಡಂತೆ 21 ಸಂಸ್ಥೆಗಳಲ್ಲಿ 80 ಧಾರ್ಮಿಕ ಸಹೋದರಿಯರು ಹರಡಿಕೊಂಡಿದ್ದಾರೆ.
ಯುದ್ಧಕ್ಕೆ ಮೊದಲ ಪ್ರತಿಕ್ರಿಯೆ
ಫೆಬ್ರವರಿ 24, 2022ರಂದು ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಯುದ್ಧವನ್ನು ಪ್ರಾರಂಭಿಸಿದಾಗ, ಮದರ್ ಕೊವಾಲ್ಸ್ಕಾರವರು ಉಕ್ರೇನ್‌ನಲ್ಲಿ ವಾಸಿಸುತ್ತಿದ್ದ ಸಹೋದರಿಯರಿಗೆ ಯಾವುದೇ ಸಮಯದಲ್ಲಿ ಪೋಲೆಂಡ್‌ನಲ್ಲಿ ಆಶ್ರಯ ಪಡೆಯಬಹುದು ಎಂದು ಹೇಳಿದರು.
ಅವರಲ್ಲಿ ಹೆಚ್ಚಿನವರು ಪೋಲೆಂಡ್‌ಗೆ ಹೋಗಲಿಲ್ಲ, ಹೆಚ್ಚಿನವರು ಅಲ್ಲಿಯೇ ಇದ್ದರು ಮತ್ತು ಬಂದವರು ಗಡಿಯಲ್ಲಿ ನಿರಾಶ್ರಿತರಿಗೆ ಸಹಾಯ ಮಾಡಲು ತಮ್ಮನ್ನು ತಾವು ಸೇವೆಯಲ್ಲಿ ಅರ್ಪಿಸಿಕೊಂಡರು. ಸಹೋದರಿಯರು ಇತರ ಭಾಷೆಗಳನ್ನು ಮಾತನಾಡಬಲ್ಲರು ಮತ್ತು ಅನುವಾದಿಸಬಲ್ಲರು, ಜೊತೆಗೆ ಜನರಿಗೆ ಸಹಾಯ ಮತ್ತು ಸಾಂತ್ವನ ಹೇಳಬಲ್ಲರು ಎಂದು ಅವರು ನೆನಪಿಸಿಕೊಂಡರು.
ಆರಂಭದಿಂದಲೂ, ಉಕ್ರೇನ್‌ನಲ್ಲಿರುವ ಸಹೋದರಿಯರು ಪ್ರಾರ್ಥನೆ ಮತ್ತು ಶಾಂತಿ ಜಾಗರಣೆಗಳನ್ನು ಆಯೋಜಿಸುತ್ತಿದ್ದರು. ಯಾವುದೇ ಆಧ್ಯಾತ್ಮಿಕ ಬೆಂಬಲವಿಲ್ಲದೆ ಜನರನ್ನು ಬಿಡಲು ಅವರು ಬಯಸುವುದಿಲ್ಲ. ಜನರೊಂದಿಗೆ ಅವರ ಸಂಕಷ್ಟದೊಂದಿಗೆ ಇರಬೇಕೆಂದು ಅವರಿಗೆ ತಿಳಿದಿತ್ತು, ಎಂದು ಯುದ್ಧ ಪೀಡಿತ ಸಮುದಾಯಗಳಿಗೆ ಹಲವು ಬಾರಿ ಭೇಟಿ ನೀಡಿರುವ ಸಭೆಯ ಪ್ರಧಾನ ಶ್ರೇಷ್ಠಾಧಿಕಾರಿ ಮದರ್ ಜುಡಿಟಾ ಕೊವಾಲ್ಸ್ಕಾರವರು ಹೇಳಿದರು.
ದೃಢವಾದ ನೆರವು
ಅವರ ಉಪಸ್ಥಿತಿ ಮತ್ತು ಆಧ್ಯಾತ್ಮಿಕ ಬೆಂಬಲದ ಜೊತೆಗೆ, ಸಹೋದರಿಯರು ಪ್ರಾಯೋಗಿಕ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಯುದ್ಧದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಮಹಿಳೆಯರಿಗಾಗಿ ಅವರು ಕೈವ್‌ನಲ್ಲಿ ಮಾಸಿಕ ಸಭೆಗಳನ್ನು ನಡೆಸುತ್ತಾರೆ.
ಒಡೆಸ್ಸಾದಲ್ಲಿ, ಶಸ್ತ್ರಚಿಕಿತ್ಸಕರಾಗಿರುವ ಸಹೋದರಿಯರಲ್ಲಿ ಒಬ್ಬರು ಗಾಯಗೊಂಡ ಸೈನಿಕರ ಜೀವಗಳನ್ನು ಉಳಿಸುತ್ತಾರೆ. ಅನೇಕ ಸ್ಥಳಗಳಿಗೆ ಆಹಾರ ಮತ್ತು ಶುಚಿಗೊಳಿಸುವ ಉತ್ಪನ್ನಗಳನ್ನು ಒದಗಿಸುವುದರ ಜೊತೆಗೆ, ಪೂಜ್ಯ ಹೊನೆರೆತ್ ಸಭೆಯ ಸಹೋದರಿಯರು, ರೋಗಿಗಳು ಮತ್ತು ಒಂಟಿತನದಲ್ಲಿರುವವರನ್ನು ಭೇಟಿ ಮಾಡುತ್ತಾರೆ.
ವಿದೇಶದಿಂದ ನೆರವು
ದೇಣಿಗೆಗಳ ಮೂಲಕ ಸಹೋದರಿಯರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಬಹುದು. ಉಕ್ರೇನ್‌ನಲ್ಲಿ ನೆರವಿನ ಅಗತ್ಯವಿರುವವರಿಗೆ ಸಹಾಯ ಮಾಡುವ ಮನಸ್ಸಿರುವವರು ನಿಮ್ಮ ಅನಿಸಿಕೆಗಳ ಟಿಪ್ಪಣಿಯೊಂದಿಗೆ ಬೆಂಬಲವನ್ನು ನೇರವಾಗಿ ನಿಷ್ಕಂಳಕ ಹೃದಯದ ನಿರ್ಮಲ ಮೇರಿಮಾತೆಯ ಸಭೆಯ ಧಾರ್ಮಿಕ ಭಗಿನಿಯರ, ಸಭೆಯ ಖಾತೆಗೆ ಕಳುಹಿಸಬಹುದು.