ಪೂರ್ವ ಧರ್ಮಸಭೆಗಳಿಂದ ಸುದ್ದಿ ಸಮಾಚಾರ - ಅಕ್ಟೋಬರ್ 30, 2025
ಈ ವಾರದ ಸುದ್ದಿ ಸಮಾಚಾರ
ಚೈನಾದಲ್ಲಿ ಮೂರನೇ ಮಾರ್ ಅವ್ವಾರವರು
ಅಕ್ಟೋಬರ್ 16 ರಿಂದ 20 ರವರೆಗೆ, ಪೂರ್ವದ ಅಸ್ಸಿರಿಯ ಧರ್ಮಸಭೆಯ ಕಥೊಲಿಕ ಪಿತೃಪ್ರಧಾನರಾದ ಮೂರನೇ ಮಾರ್ ಅವ್ವಾರವರು ಹಾಂಗ್ ಕಾಂಗ್‌ಗೆ ಐತಿಹಾಸಿಕ ಭೇಟಿ ನೀಡಿದರು. ಕ್ಸಿಯಾನ್‌ನಲ್ಲಿ ಜಿಂಗ್ಜಿಯಾವೊ ಶಿಲಾ-ಸ್ತಂಭದ ಆವಿಷ್ಕಾರದ 400ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಾಂಗ್ ಕಾಂಗ್ ಮತ್ತು ಮಕಾವೊದ ಆಂಗ್ಲಿಕನ್ ಧರ್ಮಸಭೆಯು ಅವರನ್ನು ಆಹ್ವಾನಿಸಿತ್ತು, ಇದು 7ನೇ ಶತಮಾನದಷ್ಟು ಹಿಂದೆಯೇ ಚೈನಾದಲ್ಲಿ ಪೂರ್ವ ಧರ್ಮಸಭೆಯ ಉಪಸ್ಥಿತಿಗೆ ಸಾಕ್ಷಿಯಾಗಿದೆ. ಧರ್ಮಾಧ್ಯಕ್ಷರುಗಳ ನಿಯೋಗದೊಂದಿಗೆ, ಮಾರ್ ಅವ್ವಾರವರು ಚೈನಾದಲ್ಲಿ ಪೂರ್ವ ಕ್ರೈಸ್ತ ಧರ್ಮದ ಇತಿಹಾಸಕ್ಕೆ ಮೀಸಲಾದ ವೇದಿಕೆಯಲ್ಲಿ ಭಾಗವಹಿಸಿದರು, ಇದು ವಿದ್ವಾಂಸರು ಮತ್ತು ಧಾರ್ಮಿಕ ನಾಯಕರನ್ನು ಒಟ್ಟುಗೂಡಿಸಿತು.
ಗಾಜಾದಲ್ಲಿ ದೀಕ್ಷಾಸ್ನಾನ
ಅಕ್ಟೋಬರ್ 26 ರಂದು, ಬೇಬಿ ಮಾರ್ಕೊ ನಾದೆರ್ ಹಬ್ಶಿ ಗಾಜಾದಲ್ಲಿರುವ ಪವಿತ್ರ ಕುಟುಂಬದ ದೇವಾಲಯದಲ್ಲಿ ದೀಕ್ಷಾಸ್ನಾನ ಸ್ವೀಕರಿಸಿದರು. ಧರ್ಮಗುರು ಗೇಬ್ರಿಯಲ್ ರೊಮೆನೆಲ್ಲಿರವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಈ ಪ್ರಾಂತ್ಯದಲ್ಲಿ ಕದನ ವಿರಾಮ ಘೋಷಣೆಯ ನಂತರ ಧರ್ಮಕೇಂದ್ರದಲ್ಲಿ ಆಚರಿಸಲಾದ ಪ್ರಪ್ರಥಮ ದೀಕ್ಷಾಸ್ನಾನ ಇದಾಗಿದೆ - ಕಳೆದ ಎರಡು ವರ್ಷಗಳಿಂದ ಸಂಘರ್ಷದ ಕೇಂದ್ರಬಿಂದುವಾಗಿರುವ ಗಾಜಾದ ಪುಟ್ಟ ಕ್ರೈಸ್ತ ಸಮುದಾಯಕ್ಕೆ ಇದು ಭರವಸೆಯ ಸಂಕೇತವಾಗಿದೆ.
ಗ್ಯುಮ್ರಿಯಲ್ಲಿ ಯುವತಿಯರಿಗಾಗಿ ಹೊಸ ನಿವಾಸ
ಈ ವಾರ ಅರ್ಮೇನಿಯಾದ ಗ್ಯುಮ್ರಿಯಲ್ಲಿ ಯುವತಿಯರಿಗಾಗಿ ಕಥೋಲಿಕ ಧಾರ್ಮಿಕ ಭಗಿನಿಯರು ನಿರ್ಮಲ ಮಾತೆಯ ನೂತನ ನಿವಾಸವನ್ನು ಉದ್ಘಾಟಿಸಿತು. ಈ ಕಟ್ಟಡವು ಶೀಘ್ರದಲ್ಲೇ ದೇಶದ ವಿವಿಧ ಪ್ರದೇಶಗಳ ವಿದ್ಯಾರ್ಥಿಗಳನ್ನು ಸ್ವಾಗತಿಸಲಿದೆ. ಯೆರೆವಾನ್‌ನಲ್ಲಿ ತೆರೆದ ನಂತರ, ಇದು ಈ ಸಭೆಯಿಂದ ತೆರೆಯಲ್ಪಟ್ಟ ಎರಡನೇ ನೆಲೆಯಾಗಿದೆ. ಅರ್ಮೇನಿಯದ ಏಕೈಕ ಕಥೋಲಿಕ ಸಭೆಯಾಗಿ, ಧಾರ್ಮಿಕ ಭಗಿನಿಯರು ಯುವಜನತೆಗೆ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಬೆಂಬಲ ನೀಡುವ ತಮ್ಮ ಧ್ಯೇಯವನ್ನು ಮುಂದುವರಿಸುತ್ತಿದ್ದಾರೆ.