ಪೂರ್ವ ಧರ್ಮಸಭೆಗಳಿಂದ ಸುದ್ದಿ ಸಮಾಚಾರ - ನವೆಂಬರ್ 13, 2025
ಈ ವಾರದ ಪೂರ್ವ ಧರ್ಮಸಭೆಗಳ ಸುದ್ದಿಗಳು
ರೊಮೇನಿಯದ ನೂತನ ಪ್ರಧಾನ ಮಹಾಧರ್ಮಾಧ್ಯಕ್ಷ
ಕ್ಲೌಡಿಯು-ಲೂಸಿಯನ್ ಪಾಪ್ ರವರು ರೊಮೇನಿಯದ ಗ್ರೀಕ್-ಕಥೋಲಿಕ ಧರ್ಮಸಭೆಗೆ ನೂತನ ಪ್ರಧಾನ ಮಹಾಧರ್ಮಾಧ್ಯಕ್ಷರಾಗಿದ್ದಾರೆ. ಕಾರ್ಡಿನಲ್ ಮುರೇಸನ್ ರವರ ನಿಧನದ ನಂತರ ನವೆಂಬರ್ 5 ರಂದು ಧರ್ಮಾಧ್ಯಕ್ಷರುಗಳ ಸಿನೊಡ್ ಅವರನ್ನು ಆಯ್ಕೆ ಮಾಡಿತು. 1972ರಲ್ಲಿ ಜನಿಸಿದ ಅವರು 1995ರಲ್ಲಿ ಒರಾಡಿಯಾ ಧರ್ಮಪ್ರಾಂತ್ಯದ ಒಬ್ಬ ಯಾಜಕನಾಗಿ ಯಾಜಕದೀಕ್ಷೆ ಸ್ವೀಕರಿಸಿದರು. ಬುಚಾರೆಸ್ಟ್‌ನಲ್ಲಿ ರಸಾಯನಶಾಸ್ತ್ರ ರೋಮ್‌ನಲ್ಲಿ ತತ್ವಶಾಸ್ತ್ರ ಮತ್ತು ದೈವಶಾಸ್ತ್ರವನ್ನು ಅಧ್ಯಯನ ಮಾಡಿದ ನಂತರ, ಅವರು ಪ್ಯಾರಿಸ್‌ನಲ್ಲಿ ರೊಮೇನಿಯದ ಗ್ರೀಕ್-ಕಥೋಲಿಕ ಧರ್ಮಪ್ರಚಾರಕರನ್ನು ಮುನ್ನಡೆಸಿದರು, ನಂತರ ವಿಶ್ವಗುರುಗಳ ರೊಮೇನಿಯನ್ ಕಾಲೇಜನ್ನು ಮುನ್ನಡೆಸಿದರು. 2011ರಲ್ಲಿ ವಿಶ್ವಗುರು XVIನೇ ಬೆನೆಡಿಕ್ಟ್ ರವರಿಂದ ಧರ್ಮಾಧ್ಯಕ್ಷರಾಗಿ ಅಭ್ಯಂಗಿತ ಜೀವನಕ್ಕೆ ನೇಮಕಗೊಂಡು 2021ರಿಂದ ರೊಮೇನಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಅರ್ಬೋ ತನ್ನ ಅರಾಮಿಕ್ ಹೆಸರನ್ನು ಮರಳಿ ಪಡೆದುಕೊಂಡಿದೆ
ಟರ್ಕಿಯೆಯಲ್ಲಿ, ಅಸ್ಸಿರಿಯನ್-ಸಿರಿಯಾದ ಗ್ರಾಮವಾದ ಅರ್ಬೋ ಅಧಿಕೃತವಾಗಿ ತನ್ನ ಮೂಲ ನಾಮವಾದ ಅರಾಮಿಕ್ ಹೆಸರನ್ನು ಮರಳಿ ಪಡೆದುಕೊಂಡಿದೆ. ಸುಮಾರು ಒಂದು ಶತಮಾನದವರೆಗೆ, ಇದು ಟಾಸ್ಕೊಯ್ ಎಂಬ ಟರ್ಕಿಶ್ ಹೆಸರಿನಿಂದ ಪ್ರಸಿದ್ಧವಾಗಿತ್ತು. ಆಗ್ನೇಯ ಟರ್ಕಿಯ ಇಜ್ಲೋ ಪರ್ವತದ ಮೇಲೆ ನೆಲೆಗೊಂಡಿರುವ ಅರ್ಬೊ, 1915ರಲ್ಲಿ ಅಸಿರಿಯದವರ ಜನಾಂಗೀಯ ಶುದ್ಧೀಕರಣದ ಮೊದಲು ಶ್ರೀಮಂತ ಹಳ್ಳಿಯಾಗಿತ್ತು. 2006 ರಿಂದ, ಯುರೋಪಿನಿಂದ ಹಿಂದಿರುಗಿದ ಕುಟುಂಬಗಳು ತಮ್ಮ ಮನೆಗಳನ್ನು ಪುನರ್ನಿರ್ಮಿಸಿದ್ದು, ಇಂದಿನ ಜನಸಂಖ್ಯೆಯು ಸುಮಾರು 80 ನಿವಾಸಿಗಳಿಗೆ ತಲುಪಿದೆ. ಇದು ಬೆತ್ ಕುಸ್ತಾನ್ ನಂತರ ಟರ್ಕಿಯೆಯಲ್ಲಿರುವ ಎರಡನೇ ಅರಾಮಿಕ್ ಗ್ರಾಮವಾಗಿದ್ದು, ಅದರ ಮೂಲ ಹೆಸರನ್ನು ಮರುಪಡೆಯಲಾಗಿದೆ. ಅರ್ಬೊಗೆ ಸ್ವಾಗತ, ಎಂಬ ಫಲಕವನ್ನು ಅರಾಮಿಕ್, ಟರ್ಕಿಶ್, ಕುರ್ದಿಶ್, ಅರೇಬಿಕ್ ಮತ್ತು ಇಂಗ್ಲಿಷ್ ಎಂಬ ಐದು ಭಾಷೆಗಳಲ್ಲಿ ಉದ್ಘಾಟಿಸಲಾಗಿದೆ.
ಸಿರಿಯಾದ ಅಲ್-ಘಸ್ಸಾನಿಯಾಗೆ ಕ್ರೈಸ್ತರ ಮರಳುವಿಕೆ
ಸಿರಿಯಾದ ಇದ್ಲಿಬ್ ಬಳಿಯ ಅಲ್-ಘಸ್ಸಾನಿಯಾ ಎಂಬ ಕ್ರೈಸ್ತ ಗ್ರಾಮದ ನಿವಾಸಿಗಳು, ದೇಶದ ಅಂತರ್ಯುದ್ಧದಿಂದಾಗಿ ಹದಿಮೂರು ವರ್ಷಗಳ ಬಲವಂತದ ಗಡಿಪಾರಿನ ನಂತರ ತಮ್ಮ ಮನೆಗಳಿಗೆ ಮರಳಿದ್ದಾರೆ. ಅವರು ತಮ್ಮ ನಾಶಗೊಂಡ ದೇವಾಲಯದ ಮುಂದೆ ಜಮಾಯಿಸುತ್ತಿದ್ದಂತೆ, ಲಟಾಕಿಯಾದ ಗ್ರೀಕ್ ಆರ್ಥೊಡಾಕ್ಸ್ ಧರ್ಮಾಧ್ಯಕ್ಷರಾದ ಅಥಾನಾಸೆ ಫಹದ್ ಘೋಷಿಸಿದರು: "ನಾವು ಹಿಂತಿರುಗುವ ಭರವಸೆಯನ್ನು ಉಳಿಸಿಕೊಂಡಿದ್ದೇವೆ. ಇಂದು, ನಾವು ನಮ್ಮ ಸ್ಥಳಕ್ಕೆ ಹಿಂತಿರುಗಿದ್ದೇವೆ ಮತ್ತು ನಾವು ಯಾವಾಗಲೂ ಈ ನಾಡಿನಲ್ಲಿ ದೃಢವಾಗಿ ಇಲ್ಲೇ ಉಳಿಯುತ್ತೇವೆ ಎಂದು ಹೇಳಿದರು.