2025ರಲ್ಲಿ 17 ಕಥೋಲಿಕ ಧರ್ಮಪ್ರಚಾರಕರ ಹತ್ಯೆ: ಆಫ್ರಿಕಾ ಖಂಡದಲ್ಲಿ 10 ಸಾವುಗಳು
ವ್ಯಾಟಿಕನ್‌ಗೆ ಸೇರಿದ ಫೀಡೆಸ್ ಸುದ್ದಿ ಸಂಸ್ಥೆ (Fides News Agency) 2025ನೇ ವರ್ಷದ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಕಳೆದ ವರ್ಷದಲ್ಲಿ ಜಗತ್ತಿನಾದ್ಯಂತ ಒಟ್ಟು 17 ಕಥೋಲಿಕಾ ಮಿಷನರಿಗಳು ಮತ್ತು ಧಾರ್ಮಿಕ ಸೇವಾಕಾರರು ಹಿಂಸಾತ್ಮಕ ಪರಿಸ್ಥಿತಿಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದೆ. ಈ ಪೈಕಿ 10 ಮಂದಿ ಆಫ್ರಿಕಾ ಖಂಡದಲ್ಲಿಯೇ ಸಾವನ್ನಪ್ಪಿದ್ದು, ಅದರಲ್ಲೂ ನೈಜೀರಿಯಾ ದೇಶವೇ ಅತ್ಯಧಿಕವಾಗಿ ಪರಿಣಾಮಿತ ಪ್ರದೇಶವಾಗಿದೆ.
ವರ್ಷಾಂತ್ಯದೊಂದಿಗೆ ಭರವಸೆಯ ಜೂಬಿಲಿ (Jubilee of Hope) ಮುಕ್ತಾಯಗೊಳ್ಳುತ್ತಿರುವ ಸಂದರ್ಭದಲ್ಲಿ, ಡಿಸೆಂಬರ್ 30ರಂದು ಈ ವರದಿಯನ್ನು ಫೀಡೆಸ್ ಪ್ರಕಟಿಸಿದೆ. ಪ್ರತಿವರ್ಷವೂ ಫೀಡೆಸ್, ಕ್ರಿಸ್ತ ಮತ್ತು ಧರ್ಮಸಭೆಗೆ ಸೇವೆ ಸಲ್ಲಿಸುತ್ತಿರುವ ಗುರುಗಳು, ಧಾರ್ಮಿಕ ಸಹೋದರಿಯರು, ಸೆಮಿನರಿ ವಿದ್ಯಾರ್ಥಿಗಳು, ಉಪದೇಶಕರು ಹಾಗೂ ಸಾಮಾನ್ಯ ವಿಶ್ವಾಸಿಗಳನ್ನು ನೆನಪಿಸಿಕೊಳ್ಳುತ್ತದೆ. ಹಿಂಸೆ, ಬಡತನ ಮತ್ತು ಅನ್ಯಾಯದಿಂದ ಕೂಡಿದ ಪರಿಸ್ಥಿತಿಗಳಲ್ಲಿ ಅವರು ತಮ್ಮ ಜೀವವನ್ನೇ ಅರ್ಪಿಸಿರುವುದನ್ನು ಈ ವರದಿ ಬೆಳಕಿಗೆ ತರುತ್ತದೆ.
2025ರ ವರದಿಯ ಪ್ರಕಾರ, ಈ ವರ್ಷ ಸಾವನ್ನಪ್ಪಿದವರಲ್ಲಿ 10 ಗುರುಗಳು, 2 ಸೆಮಿನರಿ ವಿದ್ಯಾರ್ಥಿಗಳು, 2 ಧಾರ್ಮಿಕ ಉಪದೇಶಕರು (catechists), 2 ಧಾರ್ಮಿಕ ಸಹೋದರಿಯರು ಮತ್ತು 1 ಸಾಮಾನ್ಯ ವಿಶ್ವಾಸಿ ಸೇರಿದ್ದಾರೆ. 2024ರಲ್ಲಿ 14 ಮಂದಿ ಸಾವನ್ನಪ್ಪಿದ್ದರೆ, ಈ ವರ್ಷ ಆ ಸಂಖ್ಯೆ ಹೆಚ್ಚಾಗಿದೆ. 2000ರಿಂದ 2025ರವರೆಗೆ ಒಟ್ಟು 626 ಮಿಷನರಿಗಳು ಅಥವಾ ಧಾರ್ಮಿಕ ಸೇವಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಫೀಡೆಸ್ ದಾಖಲಿಸಿದೆ.
ಈ ವರದಿ ‘ಮಿಷನರಿ’ ಎಂಬ ಪದಕ್ಕೆ ವಿಶಾಲ ಅರ್ಥವನ್ನು ಬಳಸುತ್ತದೆ ಎಂದು ಸ್ಪಷ್ಟಪಡಿಸುತ್ತದೆ. ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲ ಕಥೋಲಿಕ ವಿಶ್ವಾಸಿಗಳು ಅವರು ರಕ್ತಸಾಕ್ಷಿಗಳೆಂದು ಅಧಿಕೃತವಾಗಿ ಘೋಷಿಸಲ್ಪಟ್ಟಿರಲಿ ಅಥವಾ ಇರದಿರಲಿ, ಹಿಂಸಾತ್ಮಕ ಸಂದರ್ಭಗಳಲ್ಲಿ ಸಾವನ್ನಪ್ಪಿದರೆ, ಅವರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ವರದಿ ಹೇಳುತ್ತದೆ.
ಆಫ್ರಿಕಾ ಮತ್ತು ನೈಜೀರಿಯಾದಲ್ಲಿ ಅನೇಕ ಕಥೋಲಿಕರ ಹತ್ಯೆ
ಆಫ್ರಿಕಾ ಖಂಡವು ಇನ್ನೂ ಮಿಷನರಿ ಸೇವೆಗೆ ಅತ್ಯಂತ ಅಪಾಯಕಾರಿ ಪ್ರದೇಶವಾಗಿಯೇ ಉಳಿದಿದೆ. 2025ರಲ್ಲಿ ಸಾವನ್ನಪ್ಪಿದ 10 ಮಂದಿಯಲ್ಲಿ 6 ಗುರುಗಳು, 2 ಸೆಮಿನರಿ ವಿದ್ಯಾರ್ಥಿಗಳು ಮತ್ತು 2 ಧಾರ್ಮಿಕ ಉಪದೇಶಕರು ಸೇರಿದ್ದಾರೆ. ಬುರ್ಕಿನಾ ಫಾಸೋ, ಕೆನ್ಯಾ, ಸಿಯೆರಾ ಲಿಯೋನ್, ಸುಡಾನ್ ಮತ್ತು ನೈಜೀರಿಯಾ ದೇಶಗಳು ಈ ದುರ್ಘಟನೆಗಳಿಗೆ ಸಾಕ್ಷಿಯಾಗಿವೆ. ಈ ಪೈಕಿ ನೈಜೀರಿಯಾದಲ್ಲಿಯೇ ಅರ್ಧಕ್ಕಿಂತ ಹೆಚ್ಚು ಸಾವಿನ ಪ್ರಕರಣಗಳು ಸಂಭವಿಸಿವೆ.
ಫೀಡೆಸ್ ಗೆ ನೀಡಿದ ಸಂದರ್ಶನದಲ್ಲಿ, ಸುವಾರ್ತಾ ಪ್ರಚಾರ ವಿಭಾಗದ (Dicastery for Evangelization) ಕಾರ್ಯದರ್ಶಿ ಮತ್ತು ನೈಜೀರಿಯಾ ಮೂಲದ ಧರ್ಮಾಧ್ಯಕ್ಷ ಫಾರ್ಟುನಾಟಸ್ ನ್ವಾಚುಕ್ವು, ಈ ಘಟನೆಗಳನ್ನು “ತೀವ್ರ ದುಃಖದ ಮೂಲ” ಹಾಗೂ “ಲಜ್ಜೆಯ ಕಾರಣ” ಎಂದು ವಿವರಿಸಿದರು. ನೈಜೀರಿಯಾ ಜಗತ್ತಿನ ಅತ್ಯಂತ ಧಾರ್ಮಿಕ ಜನಸಂಖ್ಯೆ ಹೊಂದಿದ ದೇಶಗಳಲ್ಲಿ ಒಂದಾಗಿದೆ, ಕ್ರೈಸ್ತರು ಮತ್ತು ಮುಸ್ಲಿಮರು ಸೇರಿ ಎಲ್ಲರೂ ತಮ್ಮನ್ನು ಶಾಂತಿಯ ಜನರೆಂದು ಹೇಳಿಕೊಳ್ಳುತ್ತಾರೆ. ಆದರೆ ಇಂತಹ ಹಿಂಸಾತ್ಮಕ ಘಟನೆಗಳು ಆ ಘೋಷಣೆಗೆ ವಿರುದ್ಧವಾಗಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯವೂ ತಮ್ಮ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಸ್ಪಷ್ಟವಾಗಿ ಖಂಡಿಸಬೇಕು ಎಂದು ಅವರು ಆಶಿಸಿದರು. ಧರ್ಮವನ್ನು ಹಿಂಸೆಗೆ ಕಾರಣವಾಗಿಸುವ ಯಾವುದೇ ತರ್ಕವನ್ನೂ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಅವರು ಹೇಳಿದರು. ಈ ಮಿಷನರಿಗಳು ಹೀರೋ ಆಗಲು ಹೊರಟವರಲ್ಲ; ಸೆಮಿನಾರಿಗಳು, ಶಾಲೆಗಳು ಮತ್ತು ದಿನನಿತ್ಯದ ಸೇವೆಯಲ್ಲಿ ತೊಡಗಿದ್ದಾಗಲೇ ಹಿಂಸೆಗೆ ಬಲಿಯಾದವರು ಎಂದು ಅವರು ಸ್ಪಷ್ಟಪಡಿಸಿದರು.
ನೈಜೀರಿಯಾ ಸರ್ಕಾರವು ನಿರಪರಾಧಿ ನಾಗರಿಕರ ರಕ್ಷಣೆಗಾಗಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ದೇಶದ ಭದ್ರತಾ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂದು ಧರ್ಮಾಧ್ಯಕ್ಷರು ಒತ್ತಾಯಿಸಿದರು.
ಬಾಧಿಸಲ್ಪಟ್ಟ ಇತರ ಖಂಡಗಳು
ಆಫ್ರಿಕಾದ ನಂತರ ಅಮೆರಿಕಾ ಖಂಡವೂ ಈ ವರ್ಷ ಹೆಚ್ಚು ಪರಿಣಾಮಿತ ಪ್ರದೇಶವಾಗಿದೆ ಎಂದು ವರದಿ ತಿಳಿಸುತ್ತದೆ. 2025ರಲ್ಲಿ ಅಲ್ಲಿ 4 ಮಿಷನರಿಗಳು ಸಾವನ್ನಪ್ಪಿದ್ದಾರೆ. ಮೆಕ್ಸಿಕೋ ಮತ್ತು ಅಮೇರಿಕಾದಲ್ಲಿ 2 ಗುರುಗಳು ಹಾಗೂ ಹೈಟಿಯಲ್ಲಿ 2 ಧಾರ್ಮಿಕ ಸಹೋದರಿಯರು ಹತ್ಯೆಗೀಡಾಗಿದ್ದಾರೆ.
ಏಷ್ಯಾದಲ್ಲಿ ಮ್ಯಾನ್ಮಾರ್‌ನಲ್ಲಿ ಒಬ್ಬ ಗುರು ಹಾಗೂ ಫಿಲಿಪ್ಪೀನ್ಸ್‌ನಲ್ಲಿ ವೃತ್ತಿಯಿಂದ ಶಿಕ್ಷಕರಾಗಿದ್ದ ಒಬ್ಬ ಸಾಮಾನ್ಯ ವಿಶ್ವಾಸಿ ಪ್ರಾಣ ಕಳೆದುಕೊಂಡಿದ್ದಾರೆ. ಯುರೋಪ್ ಖಂಡದ ಪೋಲಂಡ್ ದೇಶದಲ್ಲಿ ಒಬ್ಬ ಗುರು ಸಾವನ್ನಪ್ಪಿದ್ದಾರೆ.
ಧಾರ್ಮಿಕ ಸೇವೆಯಲ್ಲಿ ಹತ್ಯೆಯಾದವರು
ಫೀಡೆಸ್ ವಿಶೇಷವಾಗಿ ಕೆಲವು ಘಟನೆಗಳನ್ನು ಉಲ್ಲೇಖಿಸುತ್ತದೆ. ನೈಜೀರಿಯಾದ ಯುವ ಸೆಮಿನಾರಿ ವಿದ್ಯಾರ್ಥಿ ಎಮ್ಯಾನುಯೆಲ್ ಅಲಾಬಿ ಅವರನ್ನು ಅಪಹರಣಕಾರರು ಬಲವಂತವಾಗಿ ನಡೆಸಿದ ಪಾದಯಾತ್ರೆಯ ವೇಳೆ ಗಾಯಗೊಳಿಸಿ ಕೊಂದರು. ಇವಿಯಾನೊಕ್ಪೊಡಿ ಎಂಬ ಸ್ಥಳದಲ್ಲಿರುವ ಕಿರಿಯ ಸೆಮಿನರಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಹೈಟಿಯಲ್ಲಿ ಧಾರ್ಮಿಕ ಸಹೋದರಿಯರಾದ ಎವನ್ಯೆಟ್ ಒನೇಝೈರ್ ಮತ್ತು ಜೀನ್ ವೋಲ್ಟೈರ್ ಅವರನ್ನು ಸಶಸ್ತ್ರ ಗುಂಪುಗಳು ಮಾರ್ಚ್ ತಿಂಗಳಲ್ಲಿ ಹತ್ಯೆ ಮಾಡಿವೆ. ಅವರು ಬಾಲ ಯೇಸುವಿನ ಸಂತ ತೆರೇಸಾರ ಸಹೋದರಿಯರ ಸಭೆಗೆ ಸೇರಿದವರು.
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಮಧ್ಯೆ ಸಾವನ್ನಪ್ಪಿದ ಮೊದಲ ಕಥೋಲಿಕಾ ಗುರು ಎಂಬ ದುಃಖದ ಗುರುತು ವಂ.ಗುರು ಡೊನಾಲ್ಡ್ ಮಾರ್ಟಿನ್ ಅವರಿಗೆ ಸೇರಿದೆ. ಫೆಬ್ರವರಿಯಲ್ಲಿ ಅವರ ಶವವನ್ನು ಅವರದೇ ಧರ್ಮಕೇಂದ್ರದ ಆವರಣದಲ್ಲಿ, ಗಾಯಗಳಿಂದ ತುಂಬಿದ ಸ್ಥಿತಿಯಲ್ಲಿ ವಿಶ್ವಾಸಿಗಳು ಕಂಡುಹಿಡಿದರು.
ಈ ಎಲ್ಲ ಘಟನೆಗಳು ಕಥೋಲಿಕಾ ಧರ್ಮಸಭೆಯ ಸೇವೆ ಇನ್ನೂ ಎಷ್ಟು ಅಪಾಯಕಾರಿ ಪರಿಸ್ಥಿತಿಗಳಲ್ಲಿ ನಡೆಯುತ್ತಿದೆ ಎಂಬುದನ್ನು ತೀವ್ರವಾಗಿ ನೆನಪಿಸುತ್ತವೆ. ಧರ್ಮಸೇವೆ ಶಾಂತಿಯ ಸಂದೇಶವನ್ನು ಹೊತ್ತಿದ್ದರೂ, ಅದನ್ನು ಸಾಗಿಸುವವರು ಅನೇಕ ಬಾರಿ ಹಿಂಸೆಯ ಮೊದಲ ಬಲಿಗಳಾಗುತ್ತಿದ್ದಾರೆ ಎಂಬ ಸತ್ಯವನ್ನು ಈ ವರದಿ ಗಂಭೀರವಾಗಿ ದಾಖಲಿಸುತ್ತದೆ.