ಬೊಂಡೈ ದಾಳಿಯ ಬಲಿದಾನಿಗಳಿಗೆ ಸಿಡ್ನಿ ಮಹಾಧರ್ಮಕ್ಷೇತ್ರದಿಂದ ಕ್ರಿಸ್ತಜಯಂತಿ ಹೊನಲು-ಬೆಳಕಿನ ಶ್ರದ್ದಾಂಜಲಿ
ಬೊಂಡೈ ಬೀಚ್‌ನಲ್ಲಿ ನಡೆದ ದಾರುಣ ಸಾಮೂಹಿಕ ಗುಂಡಿನ ದಾಳಿಯ ಮೂರನೇ ದಿನದಂದು, ಸ್ಥಳೀಯ ಸಮುದಾಯವು ತನ್ನ ವಾರ್ಷಿಕ ಕ್ರಿಸ್ತಜಯಂತಿ ಸಂಪ್ರದಾಯವನ್ನು ದುಃಖಭರಿತ ಸ್ಮರಣಾ ಸಮಾರಂಭವನ್ನಾಗಿ ಪರಿವರ್ತಿಸಿತು.
ಪ್ರತಿ ವರ್ಷವೂ ಸಿಡ್ನಿಯ ಸಂತ ಮರಿಯಾ ಕಥೋಲಿಕ ಮಹಾಧರ್ಮಕ್ಷೇತ್ರದ ಮುಂಭಾಗವು ಧಾರ್ಮಿಕ ಚಿತ್ರಗಳು ಮತ್ತು ಪವಿತ್ರ ಗ್ರಂಥದ ಕಥನಗಳ ಹೊನಲು-ಬೆಳಕಿನ ಪ್ರದರ್ಶನದಿಂದ ಕಂಗೊಳಿಸುತ್ತದೆ. ಸಾವಿರಾರು ಕುಟುಂಬಗಳು ಮತ್ತು ಯುವಜನರು ಇದರಲ್ಲಿ ಭಾಗವಹಿಸುತ್ತಾರೆ. ಇದು ಸಾಮಾನ್ಯವಾಗಿ ಆನಂದಭರಿತ ಕ್ರಿಸ್ತಜಯಂತಿ ಆಚರಣೆಯಾಗಿರುತ್ತಿತ್ತು. ಆದರೆ ಈ ವರ್ಷ ಎಲ್ಲವೂ ಬದಲಾಗಿದೆ. ವಾಟಿಕನ್ ಸುದ್ದಿ ಸಂಸ್ಥೆಗೆ ಮಾತನಾಡಿದ ಮಹಾಧರ್ಮಾಧ್ಯಕ್ಷರಾದ ಪೂಜ್ಯ ಆಂಥನಿ ಫಿಶರ್ ಅವರು, ಈ ಬಾರಿ ಹೊನಲು-ಬೆಳಕಿನ ಪ್ರದರ್ಶನವನ್ನು ಬಲಿದಾನಿಗಳ ಸ್ಮರಣೆಗೆ ಸಮರ್ಪಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.
“ಅವರ ಸ್ಮರಣೆ ಆಶೀರ್ವಾದವಾಗಿರಲಿ”
ಈ ಸಮಾರಂಭಕ್ಕೆ ಯೆಹೂದ್ಯ ಧರ್ಮಗುರುಗಳು, ವಿವಿಧ ಧರ್ಮಗಳ ನಾಯಕರು, ಪ್ರಧಾನಮಂತ್ರಿ, ನ್ಯೂ ಸೌತ್ ವೇಲ್ಸ್ ರಾಜ್ಯದ ಮುಖ್ಯಮಂತ್ರಿ ಹಾಗೂ ಸಮಾಜದ ಎಲ್ಲ ವರ್ಗಗಳ ಜನರು ಮಹಾಧರ್ಮಕ್ಷೇತ್ರದ ಮುಂದೆ ಸೇರಿದ್ದರು. ಪ್ರಾರ್ಥನೆಗೆ ಸಮಯ ಮೀಸಲಿಡಲಾಯಿತು. ಅಲ್ಲದೆ, “ಎಲ್ಲರೂ ಗೌರವಿಸಲ್ಪಡುವ ಮತ್ತು ಪ್ರೀತಿಸಲ್ಪಡುವ ಶಾಂತಿಯುತ ಸಮಾಜವನ್ನು ನಿರ್ಮಿಸಲು” ಎಲ್ಲರೂ ಮರುಸಂಕಲ್ಪ ಮಾಡಿಕೊಂಡರು ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ದಾಳಿಯಲ್ಲಿ ಮೃತಪಟ್ಟ ಪ್ರತಿಯೊಬ್ಬರ ಸ್ಮರಣಾರ್ಥವಾಗಿ ಒಟ್ಟು 15 ಮೆಣಬತ್ತಿಗಳನ್ನು ಬೆಳಗಿಸಲಾಯಿತು. ಹಿಂದೂ, ಯೆಹೂದ್ಯ ಮತ್ತು ಮುಸ್ಲಿಂ ಸಮುದಾಯಗಳ ಪ್ರತಿನಿಧಿಗಳಿಗೆ ಮೇಣದ ಬತ್ತಿಗಳನ್ನು ಬೆಳಗಿಸುವ ಅವಕಾಶ ನೀಡಲಾಯಿತು.
ದಾಳಿ ನಡೆದ ಸ್ಥಳದಲ್ಲಿ ಶಾಶ್ವತ ಸ್ಮಾರಕ ನಿರ್ಮಿಸುವ ಸಾಧ್ಯತೆಯಿದ್ದರೂ, ಈಗಾಗಲೇ ಆ ಸ್ಥಳವು ಲಕ್ಷಾಂತರ ಹೂಗುಚ್ಛಗಳಿಂದ ತುಂಬಿ ಹೋಗಿದೆ ಎಂದು ಮಹಾಧರ್ಮಾಧ್ಯಕ್ಷರು ವಿವರಿಸಿದರು. ಬಲಿದಾನಿಗಳ ಕುಟುಂಬಗಳು ನೋವನ್ನು ಮರೆತಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. “ಹೂವುಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತಿವೆ,” ಎಂದು ಅವರು ಹೇಳಿದರು, “ಹೊಸ ಹೂಗುಚ್ಛಗಳಿಗೆ ಜಾಗ ಕಲ್ಪಿಸಲು ಹಳೆಯದನ್ನು ತೆರವುಗೊಳಿಸಬೇಕಾದ ಸ್ಥಿತಿ ಬಂದಿದೆ.” ಆ ಸ್ಥಳವೇ ಈಗ ಜನರು ಪ್ರಾರ್ಥನೆಗೆ ಮತ್ತು ಸ್ಮರಣೆಗೆ ಸೇರುವ ಸ್ಮಾರಕವಾಗಿಬಿಟ್ಟಿದೆ.
ಈ ವರ್ಷದ ಹೊನಲು-ಬೆಳಕಿನ ಪ್ರದರ್ಶನದ ಶಿಖರ ಕ್ಷಣದಲ್ಲಿ, ಯೆಹೂದ್ಯರ ಮೆನೋರಾ ದೀಪಸ್ತಂಭದ ಚಿತ್ರ ಪ್ರದರ್ಶಿಸಲಾಯಿತು. ಅದರ ಜೊತೆಗೆ ಯೆಹೂದ್ಯರ ವಾಕ್ಯವಾದ — “ಅವರ ಸ್ಮರಣೆ ಆಶೀರ್ವಾದವಾಗಿರಲಿ” — ಎಂಬ ಸಂದೇಶವೂ ಪ್ರಕಾಶಮಾನವಾಯಿತು.
ಎರಡು ವರ್ಷಗಳಿಂದ ಕುದಿಯುತ್ತಿರುವ ಒತ್ತಡ
ಈ ದಾಳಿ ಸಿಡ್ನಿಯಲ್ಲಿ ಕಳೆದ ಎರಡು ವರ್ಷಗಳಿಂದ ಬೆಳೆದಿರುವ ಒತ್ತಡದ ಹಿನ್ನೆಲೆಯಲ್ಲಿಯೇ ನಡೆದಿದೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ಇಸ್ರಾಯೇಲ್ –ಗಾಜಾ ಯುದ್ಧದ ಕುರಿತು ಇರುವ ಭಿನ್ನಾಭಿಪ್ರಾಯಗಳು ಹಾಗೂ ರಾಜಕೀಯ ವಿಚಾರಗಳು ಸ್ಥಳೀಯವಾಗಿ ಕಳವಳಕಾರಿ ಪ್ರತಿಭಟನೆಗಳಾಗಿ ಹೊರಹೊಮ್ಮಿವೆ ಎಂದು ಅವರು ವಿವರಿಸಿದರು.
ಅಭಿಪ್ರಾಯಗಳನ್ನು ಹೊಂದುವ ಮತ್ತು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಈ ವಿಚಾರವಾದಗಳು ಮತ್ತು ಪ್ರತಿಭಟನೆಗಳು ಕೆಲವರೊಳಗಿನ ಮರೆಮಾಚಿದ ಯೆಹೂದ್ಯ ವಿರೋಧವನ್ನು ಹೊರಗೆ ತಂದು, ದ್ವೇಷ ಮತ್ತು ಹಿಂಸೆಯಾಗಿ ಪರಿವರ್ತಿಸಿವೆ ಎಂದು ಅವರು ಎಚ್ಚರಿಸಿದರು.
ಕಳೆದ ಎರಡು ವರ್ಷಗಳಿಂದ ಹಿಂಸಾತ್ಮಕ ಭಾಷೆ ಮತ್ತು ನಕಾರಾತ್ಮಕ ಚಿಂತನೆಗಳು ಹೆಚ್ಚುತ್ತಿವೆ. “ಕಡೆಯ ಇಸ್ರೇಲಿ ಜೀವಂತವಾಗಿರುವವರೆಗೆ ಯುದ್ಧ ಮುಗಿಯದು” ಎಂಬಂತಹ ಮಾತುಗಳು ಹಿಂಸೆಯನ್ನು ಪ್ರಚೋದಿಸುತ್ತವೆ ಮತ್ತು ಯುವಜನರನ್ನು ತೀವ್ರವಾದಿಕರಣದತ್ತ ತಳ್ಳುತ್ತವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ನಿರಂತರ ಕಾರ್ಯಪ್ರವೃತ್ತಿ
ಈ ದಾಳಿ, ಯೆಹೂದ್ಯರ ವಿರುದ್ಧದ ಎಲ್ಲ ರೀತಿಯ ವಿರೋಧವನ್ನು ತಿರಸ್ಕರಿಸಬೇಕೆಂದು ಕರೆ ನೀಡಿದ ದ್ವಿತೀಯ ವಾಟಿಕನ್ ಮಹಾಸಭೆಯ ನೋಸ್ತ್ರಾ ಏತಾತೆ ದಸ್ತಾವೇಜಿನ 50ನೇ ವರ್ಷಾಚರಣೆಯ ಸಮಯದಲ್ಲೇ ನಡೆದಿದೆ. ಐದು ದಶಕಗಳಾದರೂ, ಈ ವಿಷಯವನ್ನು ಪ್ರತೀ ತಲೆಮಾರಿಗೆ ಬೋಧಿಸಬೇಕಾಗಿದೆ ಎಂದು ಮಹಾಧರ್ಮಾಧ್ಯಕ್ಷ ಪೂಜ್ಯ ಫಿಶರ್ ಹೇಳಿದರು. “ಯೆಹೂದ್ಯರನ್ನು ಪ್ರೀತಿಸಲು ಜನರನ್ನು ಮತ್ತೆಮತ್ತೆ ಕರೆಯಬೇಕಾಗಿದೆ. ಕ್ರೈಸ್ತರು ಯೆಹೂದ್ಯರ ಸಂತತಿಯವರೇ” ಎಂದು ಅವರು ಒತ್ತಿ ಹೇಳಿದರು.
ಜಗದ್ಗುರುಗಳಾದ ಇಪ್ಪತ್ಮೂರನೆಯ ಜಾನ್, ಜಗದ್ಗುರುಗಳಾದ ಎರಡನೆಯ ಪಾಲ್ ಮತ್ತು ಜಗದ್ಗುರುಗಳಾದ ಎರಡನೆಯ ಜಾನ್ ಪಾಲ್ ಕೂಡ ಕ್ರೈಸ್ತರು ಯೆಹೂದ್ಯರ ಮಕ್ಕಳೆಂದು ಪುನಃಪುನಃ ನೆನಪಿಸಿದ್ದಾರೆ. ಆದ್ದರಿಂದ, “ತಾಯ್ತಂದೆಗಳಂತೆ ಯೆಹೂದ್ಯರಿಗೂ ವಿಶೇಷ ಗೌರವ ಇರಬೇಕು” ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ಯೆಹೂದ್ಯ ವಿರೋಧಿ ಭಾಷೆ ಮತ್ತು ವರ್ತನೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಶಿಕ್ಷಣ ಮತ್ತು ಉಪದೇಶಗಳ ಮೂಲಕ ಪ್ರೀತಿ, ಗೌರವ ಮತ್ತು ನಾಗರಿಕ ಸಂವಾದವನ್ನು ಬೆಳೆಸಬೇಕೆಂದು ಅವರು ಕೋರಿದರು.
ಏಕತೆಯ ಮತ್ತು ಪ್ರೀತಿಯ ಸಮಾಜದತ್ತ
ಈ ದಾಳಿ ಯೆಹೂದ್ಯ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದರೂ, ಸಂಪೂರ್ಣ ಸಮಾಜವೇ ಇದರಿಂದ ಆಘಾತಕ್ಕೊಳಗಾಗಿದೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ಆಸ್ಟ್ರೇಲಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪ. ಹೀಗಾಗಿ ಜನರು ಸುರಕ್ಷಿತವೆಂದು ಭಾವಿಸಿದ್ದರು.
ಈ ಘಟನೆಯ ನಂತರ ಅನೇಕರು ಭಯ ಮತ್ತು ಆಘಾತದಲ್ಲಿದ್ದಾರೆ. ಅವರನ್ನು ಸಾಂತ್ವನಗೊಳಿಸಲು ಧರ್ಮಸಭೆಯು ಪ್ರಾರ್ಥನೆ, ದುಃಖಸಹಾಯ ಮತ್ತು ಮಾನಸಿಕ ಸಮಾಲೋಚನೆಗೆ ಆದ್ಯತೆ ನೀಡುತ್ತಿದೆ. ಅದೇ ವೇಳೆ, ಯೆಹೂದ್ಯ ಸಮುದಾಯದ ಮೇಲೆ ಹೆಚ್ಚಿದ ಒತ್ತಡವನ್ನು ಗಮನಿಸಿ, ಧರ್ಮಕ್ಷೇತ್ರವು ತನ್ನ ಶಾಲೆಗಳು, ಸಾಮಾಜಿಕ ಸೇವೆಗಳು ಮತ್ತು ಸಮಾಲೋಚನಾ ಕೇಂದ್ರಗಳನ್ನು ಸಹಕಾರಕ್ಕಾಗಿ ತೆರೆದಿದೆ. ಕ್ರಿಸ್ತಜಯಂತಿಯ ಹೊನಲು-ಬೆಳಕಿನ ಪ್ರದರ್ಶನ ಮತ್ತು ಸ್ಮರಣಾ ಸಮಾರಂಭವು ಏಕತೆ ಮತ್ತು ಭರವಸೆಯ ಸಂಕೇತವಾಗಿದೆ ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ಅರ್ಧ ಮಿಲಿಯನ್ ಜನರು ವಿವಿಧ ಧರ್ಮಗಳಿಂದ ಈ ಕಾರ್ಯಕ್ರಮದಲ್ಲಿ ಸೇರಿದ್ದರು.
“ಎಲ್ಲಾ ಧರ್ಮಗಳ ಜನರನ್ನು ಒಂದೆಡೆ ಸೇರಿಸುವ ಇತಿಹಾಸ ಇರುವ ಸ್ಥಳವಾದ್ದರಿಂದಲೇ ಈ ಸ್ಮರಣಾ ಸಮಾರಂಭವನ್ನು ಸಂತ ಮರಿಯಾ ಕಥೋಲಿಕ ಮಹಾಧರ್ಮಕ್ಷೇತ್ರದಲ್ಲಿ ನಡೆಸಲು ಎಲ್ಲ ಧಾರ್ಮಿಕ ನಾಯಕರು ಒಪ್ಪಿಕೊಂಡರು” ಎಂದು ಅವರು ಹೇಳಿದರು.