ಹುಡುಕಿ

Pope Leo XIV leads a Mass to mark the World Day of Peace in St. Peter's Basilica at the Vatican Pope Leo XIV leads a Mass to mark the World Day of Peace in St. Peter's Basilica at the Vatican 

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಮಹಾಧರ್ಮಾಧ್ಯಕ್ಷರಿಂದ ಪೂಜ್ಯ ತಂದೆಯವರ ನಿಶಸ್ತ್ರ ಶಾಂತಿಯ ಸಂದೇಶಕ್ಕೆ ಸ್ವಾಗತ

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ದಶಕಗಳ ಕಾಲ ನಡೆದ ಸಂಘರ್ಷಗಳು ಮತ್ತು ಅಸ್ಥಿರತೆಯ ನಡುವೆಯೂ, ಪೂಜ್ಯ ತಂದೆ 14ನೇ ಲಿಯೋರವರ “ಶಸ್ತ್ರರಹಿತ ಹಾಗೂ ಶಸ್ತ್ರವಿರೋಧಿ ಶಾಂತಿ”ಗೆ ನೀಡಿದ ಕರೆಯು ದೇಶದಾದ್ಯಂತ ವಿಶೇಷ ಪ್ರತಿಧ್ವನಿಯನ್ನು ಕಂಡಿದೆ. ಲುಬುಂಬಾಶಿ ಮಹಾಧರ್ಮಾಧ್ಯಕ್ಷರೂ ಹಾಗೂ ಕಾಂಗೋ ರಾಷ್ಟ್ರೀಯ ಧರ್ಮಾಧ್ಯಕ್ಷರ ಸಭೆ (CENCO) ಅಧ್ಯಕ್ಷರೂ ಆಗಿರುವ ಫುಲ್ಜೆನ್ಸ್ ಮುಟೇಬಾ, ಜಗದ್ಗುರುಗಳ ಈ ಸಂದೇಶವನ್ನು “ಅತ್ಯಂತ ಆನಂದ ಮತ್ತು ಕೃತಜ್ಞತೆಯೊಂದಿಗೆ” ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದಾರ

ವ್ಯಾಟಿಕನ್ ಸುದ್ದಿಗೆ ಮಾತನಾಡಿದ ಮಹಾಧರ್ಮಾಧ್ಯಕ್ಷ ವಂ. ಮುಟೇಬಾ, “ಶಾಂತಿ ಎಂಬುದು ನಮ್ಮ ಪಾಲಿಗೆ ಕೇವಲ ಒಂದು ಕಲ್ಪನೆ ಅಲ್ಲ;  ನಾವು ಆಳವಾಗಿ ಹಾತೊರೆಯುವ ನೈಜ ಅಗತ್ಯ” ಎಂದು ಹೇಳಿದರು. ಜಗದ್ಗುರುಗಳ ಮಾತುಗಳು ಆಫ್ರಿಕಾದ ಗಡಿಗಳನ್ನು ಮೀರಿ ಜಗತ್ತಿನಾದ್ಯಂತ ಅನ್ವಯಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಶಾಂತಿಯ ಕುರಿತು ಪೂಜ್ಯ ತಂದೆಯವರು ನಿರಂತರವಾಗಿ ಮಾತನಾಡುತ್ತಿರುವುದು “ನಮ್ಮ ಖಂಡಕ್ಕೆ ಮಾತ್ರವಲ್ಲ, ಸಂಪೂರ್ಣ ಮಾನವಕುಲಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಅಂಶವನ್ನು ಸ್ಪರ್ಶಿಸುತ್ತದೆ” ಎಂದರು.

ಪೂಜ್ಯ ತಂದೆ ಲಿಯೋ ಅವರು ಡಿಸೆಂಬರ್ 21ರಂದು ಏಂಜೆಲಸ್ ಸಂದೇಶದಲ್ಲಿ ನೀಡಿದ ಶಾಂತಿಯ ಕುರಿತ ಕರೆಯನ್ನು ಉಲ್ಲೇಖಿಸಿದ ಮಹಾಧರ್ಮಾಧ್ಯಕ್ಷ ವಂ. ಮುಟೇಬಾ, ಧರ್ಮಸಭೆಯ ಸಾಮಾಜಿಕ ಬೋಧನೆಗೆ ಮತ್ತೆ ಒತ್ತು ನೀಡಿರುವುದರಿಂದ ತಮಗೆ ಹೆಚ್ಚಿನ ಧೈರ್ಯ ದೊರೆತಿದೆ ಎಂದರು. ಲೌಡಾತೋ ಸಿ ಎಂಬ ಪರಿಸರ ಸಂರಕ್ಷಣೆಯ ಕುರಿತ ಮಹತ್ವದ ದಸ್ತಾವೇಜಿಗೆ ನೀಡುತ್ತಿರುವ ನಿರಂತರ ಪ್ರೋತ್ಸಾಹ ಬಗ್ಗೆ ಮಾತನಾಡಿದ ಅವರು, “ಪರಿಸರವನ್ನು ರಕ್ಷಿಸುವುದು ಮತ್ತು ಸುತ್ತಮುತ್ತಲಿನ ನಾಶವನ್ನು ತಡೆಹಿಡಿಯುವುದು ಜಗತ್ತಿನ ಭವಿಷ್ಯಕ್ಕೆ ಅತ್ಯಾವಶ್ಯಕ” ಎಂದು ಎಚ್ಚರಿಸಿದರು.

ಲುಬುಂಬಾಶಿಯಲ್ಲಿ ಭರವಸೆಯ ಜುಬಿಲಿ ವರ್ಷ

ಭರವಸೆಯ ಜುಬಿಲಿ ವರ್ಷ ಮುಕ್ತಾಯದ ಹಂತಕ್ಕೆ ಬಂದಿರುವ ಸಂದರ್ಭದಲ್ಲಿ, ಲುಬುಂಬಾಶಿ ಧರ್ಮಕ್ಷೇತ್ರದಲ್ಲಿ ಈ ವರ್ಷವನ್ನು “ಆಳವಾದ ನಂಬಿಕೆಯಿಂದ” ಆಚರಿಸಲಾಯಿತು ಎಂದು ಮಹಾಧರ್ಮಾಧ್ಯಕ್ಷರು ವಿವರಿಸಿದರು. ಕ್ರೈಸ್ತರು, ಶಿಕ್ಷಕರು, ಕಥೋಲಿಕ್ ಚಳವಳಿಗಳು ಮತ್ತು ಅನೇಕ ಸಮುದಾಯಗಳು ಈ ಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡವು.

ಲುಬುಂಬಾಶಿಯ ಸಮುದಾಯಗಳು ಜುಬಿಲಿ ಯಾತ್ರೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದವು; ಇದರಿಂದ ವಿಶ್ವಾಸಿಗಳ ನಂಬಿಕೆ ಬಲವಾಗಿದೆ ಮತ್ತು ಧರ್ಮಪ್ರಚಾರದ ಉತ್ಸಾಹ ಪುನರುಜ್ಜೀವನಗೊಂಡಿದೆ ಎಂದು ಅವರು ಹೇಳಿದರು.

ಹೊಸ ವರ್ಷದ ನಿರೀಕ್ಷೆ

ಪೂಜ್ಯ ತಂದೆ ಲಿಯೋ ಅವರ ಕರೆಯನ್ನು ಆಧಾರವಾಗಿಸಿಕೊಂಡು, ಮುಂದಿನ ವರ್ಷ ವಾಸ್ತವಿಕತೆ ಮತ್ತು ಭರವಸೆಯೊಂದಿಗೆ ಸಾಗಬೇಕೆಂಬ ಆಶಯವನ್ನು ಮಹಾಧರ್ಮಾಧ್ಯಕ್ಷ ವಂ. ಮುಟೇಬಾ ವ್ಯಕ್ತಪಡಿಸಿದರು. “ದುರಂತಮಯ ಪರಿಸ್ಥಿತಿಗಳು ಮತ್ತು ನಿಜವಾದ ಶಾಂತಿಯ ಕೊರತೆಯ ನಡುವೆಯೂ ನಿರೀಕ್ಷೆ ಅತ್ಯಂತ ಅಗತ್ಯ ಭಕ್ತರ ನಂಬಿಕೆಯನ್ನು ಪುನಃ ಜ್ವಲಿಸುವಂತೆ ಮಾಡಲು ಈ ನಿರೀಕ್ಷೆ ನಮಗೆ ಬೇಕು” ಎಂದು ಹೇಳುತ್ತಾ, “ಹೆಚ್ಚಿನ ಶಾಂತಿ ಮತ್ತು ಹೆಚ್ಚಿನ ಭರವಸೆಗಾಗಿ” ಪ್ರಭುವಿನಲ್ಲಿ ಪ್ರಾರ್ಥಿಸಿದರು.

CENCO ಅಧ್ಯಕ್ಷರಾಗಿರುವ ವಂ. ಮುಟೇಬಾ, ಧಾರ್ಮಿಕ ಆಲೋಚನಾಶೀಲತೆ ಮಹತ್ವವನ್ನೂ ಒತ್ತಿ ಹೇಳಿದರು. ಭಾಷಾ, ತಾಂತ್ರಿಕ ಮತ್ತು ಇತರ ಅಡೆತಡೆಗಳನ್ನು ಮೀರಿ ಒಟ್ಟಾಗಿ ಬದುಕುವ ನಮ್ಮ ಜೀವನವನ್ನು ಬಲಪಡಿಸಲು ಆಲೋಚನಾಶೀಲತೆ ಸಹಾಯ ಮಾಡುತ್ತದೆ ಎಂದು ಅವರು ನೆನಪಿಸಿದರು.

ಕ್ರಿಸ್ತಜನನ, ಮಾನವ ಘನತೆ ಮತ್ತು ಶಾಂತಿಯ ತುರ್ತು ಕರೆ

ಕ್ರಿಸ್ತಜನನ ಹಬ್ಬದ ಪವಿತ್ರ ಬಲಿಪೂಜೆಯ ಪ್ರಬೋಧನೆ, ಪ್ರಭುಯೇಸುವಿನ ಜನನವನ್ನು ಕೇವಲ ಸ್ಮರಣೆ ಮಾಡುವುದಲ್ಲ, ಜೀವಂತ ನಂಬಿಕೆಯ ಅನುಭವವಾಗಿ ಆಚರಿಸಬೇಕು ಎಂದು ತಾವು ಒತ್ತಿ ಹೇಳಿದ್ದಾಗಿ ಮಹಾಧರ್ಮಾಧ್ಯಕ್ಷರು ವಿವರಿಸಿದರು. ಕ್ರಿಸ್ತನನ್ನು ಸ್ವಾಗತಿಸುವುದು, ಆರಾಧಿಸುವುದು ಮತ್ತು ನಮ್ಮ ಹೃದಯಗಳಲ್ಲಿ ಅವನಿಗೆ ಜನ್ಮ ನೀಡುವುದೇ ಕ್ರಿಸ್ತಜಯಂತಿಯ ಅರ್ಥ ಎಂದು ಅವರು ಹೇಳಿದರು.

ಪ್ರಭುವಿನ ಮಾನವತಾರದ ರಹಸ್ಯವು ದೇವರ ಅನಂತ ಪ್ರೀತಿಯನ್ನೂ ಪ್ರತಿಯೊಬ್ಬ ಮಾನವನ ಅಚಲ ಘನತೆಯನ್ನೂ ಪ್ರಕಟಿಸುತ್ತದೆ ಎಂದು ಹೇಳಿದ ಅವರು, ತಮ್ಮ ಸಂದೇಶವನ್ನು ಮೂರು ಪ್ರಮುಖ ಅಂಶಗಳಲ್ಲಿ ರೂಪಿಸಿದರು.

ಮೊದಲನೆಯದಾಗಿ, ಕ್ರಿಸ್ತಜನನವು ಮಾನವ ಘನತೆ(ಉಬುಂಟು) ಎಂಬ ತತ್ವವನ್ನು ಬೆಳಗಿಸುತ್ತದೆ. ಮಾನವನು ಯಾವುದೇ ಭೌತಿಕ ಸಂಪತ್ತಿಗಿಂತ ಅತ್ಯಮೂಲ್ಯನಾಗಿದ್ದಾನೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ, ಕಾಂಗೋ ದೇಶದ ಸಂಪನ್ಮೂಲಗಳ ಅನ್ಯಾಯದ ಶೋಷಣೆಯನ್ನು ಅವರು ಖಂಡಿಸಿದರು; ಇದನ್ನು ಹೊಸ ರೀತಿಯ ಆರ್ಥಿಕ ವಸಾಹತುಶಾಹಿಯೆಂದು ಅವರು ಹೋಲಿಸಿದರು. ಕಾಂಗೋ ಜನರ ಗೌರವ, ಶಾಂತಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಅವರು ಮನವಿ ಮಾಡಿದರು.

ಎರಡನೆಯದಾಗಿ, ಕೊಟ್ಟಿಗೆಯಲ್ಲಿ ಮಲಗಿರುವ ಕಂದ ಯೇಸು, ಮಕ್ಕಳ ಘನತೆಯನ್ನು ಗೌರವಿಸಿ ರಕ್ಷಿಸಬೇಕೆಂಬ ಕರೆಯಾಗಿದೆ ಎಂದು ಅವರು ಹೇಳಿದರು. ಬೀದಿಗಳಲ್ಲಿ ಬದುಕುತ್ತಿರುವ ಮಕ್ಕಳ ಮೇಲಿನ ಹಿಂಸೆ, ಅಪಹರಣ ಮತ್ತು ಬಲವಂತದ ಬಾಲಕಾರ್ಮಿಕ ನೇಮಕಾತಿಯನ್ನು ಲುಬುಂಬಾಶಿ ಮಹಾಧರ್ಮಾಧ್ಯಕ್ಷರು ತೀವ್ರವಾಗಿ ಖಂಡಿಸಿದರು.

ಮೂರನೆಯದಾಗಿ, ಪ್ರಭು ಯೇಸು ಶಾಂತಿಯ ರಾಜಕುಮಾರ. ದಶಕಗಳಿಂದ ಕಾಂಗೋವನ್ನು ಹಿಂಸಿಸಿರುವ ಯುದ್ಧದ ಹಿನ್ನೆಲೆಯಲ್ಲಿ, ತಕ್ಷಣ ಹಿಂಸಾಚಾರ ನಿಲ್ಲಿಸಿ, ಸಂವಾದ, ಸಮ್ಮಿಲನ ಮತ್ತು ಕ್ಷಮೆಯ ಮಾರ್ಗವನ್ನು ಆರಿಸಲು ವಿನಂತಿಸಿದರು. ಶಾಂತಿಯನ್ನು ತಿರಸ್ಕರಿಸುವುದು ದೇವರ ಯೋಜನೆಯನ್ನು ತಿರಸ್ಕರಿಸುವುದಕ್ಕೆ ಸಮಾನ ಎಂದು ಪೂಜ್ಯ ಧರ್ಮಾಧ್ಯಕ್ಷರು ಎಚ್ಚರಿಸಿದ್ದಾರೆ.

 

 

29 ಡಿಸೆಂಬರ್ 2025, 14:07