ಹುಡುಕಿ

Mons-Earl-Fernandes-Diocesi-di-Columbus.jpg Mons-Earl-Fernandes-Diocesi-di-Columbus.jpg 

ವಲಸೆ ಬಂಧನ ಭೀತಿಯ ಹಿನ್ನೆಲೆ: ಭಕ್ತರಿಗೆ ಪವಿತ್ರ ಬಲಿಪೂಜೆಯಿಂದ ವಿನಾಯಿತಿ ನೀಡಿದ ಧರ್ಮಾಧ್ಯಕ್ಷರು

ಅಮೇರಿಕದ ಓಹಿಯೋ ರಾಜ್ಯದ ಕೊಲಂಬಸ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು, ತಮ್ಮ ಪ್ರದೇಶದಲ್ಲಿ ಹೆಚ್ಚುತ್ತಿರುವ ವಲಸಿಗ ನಿಯಂತ್ರಣ ಕ್ರಮಗಳ ಹಿನ್ನೆಲೆಯಲ್ಲಿಯೇ, “ಬಂಧನಕ್ಕೊಳಗಾಗುವ ಸಮಂಜಸವಾದ ಭಯ ಹೊಂದಿರುವ” ಭಕ್ತರಿಗೆ ಪವಿತ್ರ ಬಲಿಪೂಜೆಯಲ್ಲಿ ಹಾಜರಾಗುವ ಕಡ್ಡಾಯದಿಂದ ವಿನಾಯಿತಿ ನೀಡಿದ್ದಾರೆ.

ವಲಸಿಗ ಬಂಧನ ಭಯದ ಹಿನ್ನೆಲೆ

ಅಮೆರಿಕದ ಓಹಿಯೋ ರಾಜ್ಯದಲ್ಲಿರುವ ಕೊಲಂಬಸ್ ಧರ್ಮಕ್ಷೇತ್ರದಲ್ಲಿ ಇತ್ತೀಚೆಗೆ ವಲಸಿಗ ನಿಯಂತ್ರಣ ಕ್ರಮಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ವಲಸಿಗ ಸಮುದಾಯಗಳಲ್ಲಿ ಭಯ ಹಾಗೂ ತೀವ್ರ ಆತಂಕ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಈ ಪರಿಸ್ಥಿತಿಯನ್ನು ಮನಗಂಡು, ಕೊಲಂಬಸ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಎರಲ್ ಫರ್ನಾಂಡಿಸ್ ಅವರು, “ಬಂಧನಕ್ಕೊಳಗಾಗುವ ಸಮಂಜಸವಾದ ಭಯ ಹೊಂದಿರುವ ಭಕ್ತರಿಗೆ ಪವಿತ್ರ ಬಲಿಪೂಜೆಗೆ ಹಾಜರಾಗುವ ಕಡ್ಡಾಯದಿಂದ ವಿನಾಯಿತಿ ನೀಡಲಾಗುತ್ತದೆ” ಎಂದು ಘೋಷಿಸಿದ್ದಾರೆ.

ಈ ವಿನಾಯಿತಿ 2026 ಜನವರಿ 11ರವರೆಗೆ, ಅಂದರೆ ಕ್ರಿಸ್ತ ಜಯಂತಿ ಕಾಲಾವಧಿಯ ಅಂತ್ಯವಾದ ಪ್ರಭುವಿನ ದೀಕ್ಷಾಸ್ನಾನದ ಹಬ್ಬದವರೆಗೆ ಜಾರಿಯಲ್ಲಿರುತ್ತದೆ. “ಭಯದ ನಡುವೆಯೂ ಅನೇಕ ಭಕ್ತರು ಪವಿತ್ರ ಬಲಿಪೂಜೆಗೆ ಹಾಜರಾದರು,” ಎಂದು ಧರ್ಮಾಧ್ಯಕ್ಷರು ತಿಳಿಸಿದ್ದಾರೆ.

ಕ್ರಿಸ್ತ ಜಯಂತಿ ಸಮಯದಲ್ಲಿ ಹೆಚ್ಚಿದ ವಲಸಿಗ ನಿಯಂತ್ರಣ ಕ್ರಮಗಳು

“ಇತ್ತೀಚಿನ ದಿನಗಳಲ್ಲಿ ಕೊಲಂಬಸ್ ಧರ್ಮಕ್ಷೇತ್ರದಲ್ಲಿ ವಲಸಿಗ ನಿಯಂತ್ರಣ ಕ್ರಮಗಳು ಹೆಚ್ಚಾಗಿವೆ. ಇದರ ಪರಿಣಾಮವಾಗಿ ನಮ್ಮ ವಲಸಿಗ ಸಮುದಾಯಗಳಲ್ಲಿ ಭಯ ಮತ್ತು ಆತಂಕ ಹೆಚ್ಚಾಗಿದೆ” ಎಂದು ತಮ್ಮ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿರುವ ಧರ್ಮಾಧ್ಯಕ್ಷ ಎರಲ್ ಫರ್ನಾಂಡಿಸ್, ಹೆಚ್ಚು ಪರಿಣಾಮಗೊಂಡಿರುವ ಧರ್ಮಕೇಂದ್ರಗಳ ಗುರುಗಳೊಂದಿಗೆ ತಾನು ಸಮಾಲೋಚನೆ ನಡೆಸಿದ್ದೇನೆ ಎಂದು  ಹೇಳಿದ್ದಾರೆ.

ಕ್ರೈಸ್ತ ಭಕ್ತರಿಗೆ ಭಾನುವಾರಗಳು ಹಾಗೂ ಕಡ್ಡಾಯ ಹಬ್ಬದ ದಿನಗಳಲ್ಲಿ — ಅದರಲ್ಲೂ ಪ್ರಭುವಿನ ಜನನೋತ್ಸವವಾದ ಕ್ರಿಸ್ತ ಜಯಂತಿ — ಪವಿತ್ರ ಬಲಿಪೂಜೆಗೆ ಹಾಜರಾಗುವುದು ಧರ್ಮಸಭೆಯ ಶಿಸ್ತು ನಿಯಮವಾಗಿದೆ. ಆದರೆ, ಇತ್ತೀಚಿನ ವಲಸಿಗ ನಿಯಂತ್ರಣ ಕ್ರಮಗಳಿಂದ ಉಂಟಾಗಿರುವ ಭಯದಿಂದ ಕೆಲವು ಭಕ್ತರು ಬಲಿಪೂಜೆಗೆ ಹಾಜರಾಗಲು ಹಿಂಜರಿಯುವ ಸಾಧ್ಯತೆ ಇದೆ. ಇದು ಅವರ ಆಧ್ಯಾತ್ಮಿಕ ಕ್ಷೇಮಕ್ಕೆ ಹಾನಿಕಾರಕವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಧರ್ಮಾಧ್ಯಕ್ಷರು ತಮ್ಮ ಆದೇಶದಲ್ಲಿ, ಧರ್ಮಸಭೆಯ ನಿಯಮಾನುಸಾರ, ಭಕ್ತರ ಆಧ್ಯಾತ್ಮಿಕ ಕ್ಷೇಮಕ್ಕಾಗಿ ಧರ್ಮಾಧ್ಯಕ್ಷರು ಶಿಸ್ತು ನಿಯಮಗಳಿಂದ ವಿನಾಯಿತಿ ನೀಡುವ ಅಧಿಕಾರ ಹೊಂದಿದ್ದಾರೆ ಎಂದು (ಕ್ಯಾನನ್ 87-1) ಉಲ್ಲೇಖಿಸಿದ್ದಾರೆ.

ಯಾರಿಗೆ ಈ ವಿನಾಯಿತಿ ಅನ್ವಯಿಸುತ್ತದೆ?

ಈ ಹಿನ್ನೆಲೆಯಲ್ಲಿ ಧರ್ಮಾಧ್ಯಕ್ಷ ಎರಲ್ ಫರ್ನಾಂಡಿಸ್ “ಕಾನೂನು ಮತ್ತು ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ, ಬಂಧನಕ್ಕೊಳಗಾಗುವ ಸಮಂಜಸವಾದ ಭಯ ಹೊಂದಿರುವ ಎಲ್ಲಾ ಭಕ್ತರನ್ನು — ಸರಿಯಾದ ಕಾನೂನು ದಾಖಲೆಗಳಿದ್ದರೂ ಕುಟುಂಬದಿಂದ ಬೇರ್ಪಡುವ ಭಯ ಹೊಂದಿರುವವರು, ತಮ್ಮ ಸ್ಥಿತಿ ಅಥವಾ ಜಾತಿ ಹಿನ್ನೆಲೆಯಿಂದ ಭೀತಿಗೊಳಗಾಗಿರುವವರು, ಅಥವಾ ವಲಸಿಗ ನಿಯಂತ್ರಣ ಕ್ರಮಗಳಿಂದ ಆತಂಕ ಅನುಭವಿಸುವವರು — ಪವಿತ್ರ ಬಲಿಪೂಜೆಗೆ ಹಾಜರಾಗುವ ಕಡ್ಡಾಯದಿಂದ ವಿನಾಯಿತಿ ನೀಡಲಾಗುತ್ತದೆ” ಎಂದು ಪ್ರಕಟಿಸಿದ್ದಾರೆ. ಈ ವಿನಾಯಿತಿ ಕ್ರಿಸ್ತ ಜಯಂತಿ ಕಾಲಾವಧಿಯ ಪೂರ್ಣಾವಧಿಗೆ, ಅಂದರೆ 2026 ಜನವರಿ 11ರವರೆಗೆ ಜಾರಿಯಲ್ಲಿರುತ್ತದೆ.

ಬಲಿಪೂಜೆಗೆ ಹಾಜರಾಗಲಾಗದವರಿಗೆ ಆಧ್ಯಾತ್ಮಿಕ ಮಾರ್ಗದರ್ಶನ

ಈ ವಿನಾಯಿತಿಯನ್ನು ಬಳಸಿಕೊಳ್ಳುವ ಭಕ್ತರು, ಈ ಅವಧಿಯಲ್ಲಿ ಆಧ್ಯಾತ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಧರ್ಮಾಧ್ಯಕ್ಷರು ಮನವಿ ಮಾಡಿದ್ದಾರೆ. ಅವುಗಳಲ್ಲಿ:

●      ನೇರ ಪ್ರಸಾರದ ಪವಿತ್ರ ಬಲಿಪೂಜೆಗಳಲ್ಲಿ ಪಾಲ್ಗೊಳ್ಳುವುದು

●      ಆಧ್ಯಾತ್ಮಿಕ ಪರಮ ಪ್ರಸಾದ ಸ್ವೀಕರಿಸಿವುದು

●      ಪವಿತ್ರ ಜಪಸರ ಪ್ರಾರ್ಥನೆಯಲ್ಲಿ ತೊಡಗಿಸಿಕೊಳ್ಳುವುದು

●      ಪವಿತ್ರ ಕ್ರಿಸ್ತ ಜನನದ ಧ್ಯಾನ

●      ಇನ್ನಿತರ ಭಕ್ತಿ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವುದು

ಇವುಗಳ ಜೊತೆಗೆ, ಕೊಲಂಬಸ್ ಧರ್ಮಕ್ಷೇತ್ರದ ಎಲ್ಲಾ ಗುರುಗಳು, ಬಲಿಪೂಜೆಗೆ ಹಾಜರಾಗಲು ಅಸಮರ್ಥರಾಗಿರುವ ಭಕ್ತರಿಗೆ ಧರ್ಮೋಪಚಾರ ಮತ್ತು ಪರಮ ಪ್ರಸಾದ, ಪಶ್ಚಾತ್ತಾಪ, ರೋಗಿಗಳಿಗೆ ಅಭಿಷೇಕ, ಮುಂತಾದ ಪವಿತ್ರ ಸಂಸ್ಕಾರಗಳನ್ನು ಉದಾರವಾಗಿ ಒದಗಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

“ಈ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ, ಆದರೆ ಜನರು ತುಂಬಾ ಆತಂಕದಲ್ಲಿದ್ದರು”

ವ್ಯಾಟಿಕನ್ ನ್ಯೂಸ್‌ಗೆ ಮಾತನಾಡಿದ ಧರ್ಮಾಧ್ಯಕ್ಷ ಎರಲ್ ಫರ್ನಾಂಡಿಸ್ ಅವರು ತಮ್ಮ ನಿರ್ಧಾರದ ಹಿನ್ನೆಲೆಯನ್ನು ವಿವರಿಸುತ್ತಾ ಹೀಗೆ ಹೇಳಿದರು: “ನಿಜವಾಗಿ ಹೇಳಬೇಕಾದರೆ, ಈ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ಮನಸ್ಸಿರಲಿಲ್ಲ. ಆದರೆ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಜನರು ತುಂಬಾ ಆತಂಕದಲ್ಲಿದ್ದರು. ವಿಶೇಷವಾಗಿ ನಮ್ಮ ಸ್ಪಾನಿಷ್ ಭಾಷೆಯ ಧರ್ಮಕೇಂದ್ರಗಳ ಗುರುಗಳೊಂದಿಗೆ ಮಾತನಾಡಿದ ಬಳಿಕ, ಈ ನಿರ್ಧಾರ ಅನಿವಾರ್ಯವೆನಿಸಿತು.” ಒಂದು ಧರ್ಮಕೇಂದ್ರದಲ್ಲಿ ತಾವು ಸ್ಪಾನಿಷ್ ಭಾಷೆಯಲ್ಲಿ ಪವಿತ್ರ ಬಲಿಪೂಜೆ ಸಲ್ಲಿಸಿದ್ದಾಗಿ ಅವರು ಹೇಳಿದರು. ಅದರ ನಂತರ ಪೋಸಾಡಾ ಆಚರಣೆಯೂ ನಡೆಯಿತು. ಆದರೆ, ಸಾಮಾನ್ಯ ದಿನಗಳಂತೆ ಜನಸಂದಣಿ ಕಾಣಿಸಲಿಲ್ಲ. “ಭಕ್ತರು ಮೆರವಣಿಗೆ ಮತ್ತು ಭಕ್ತಿಗಾನವನ್ನು ಕಟ್ಟಡದ ಒಳಗೇ ನಡೆಸುವುದು ಸುರಕ್ಷಿತವೆಂದು ಭಾವಿಸಿದರು,” ಎಂದು ಅವರು ಹೇಳಿದರು. ಈ ಮಾತುಗಳಲ್ಲಿ, ಭಕ್ತರಲ್ಲಿ ವ್ಯಾಪಿಸಿರುವ ಭಯ ಮತ್ತು ಅನಿಶ್ಚಿತತೆಯ ವಾತಾವರಣ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ.

ವಲಸಿಗ ಸಮುದಾಯದ ಭಕ್ತರು ಧರ್ಮಸಭೆಯ ಸಮೀಪತೆಯನ್ನು ಅನುಭವಿಸಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅನೇಕ ಇತರ ಭಕ್ತರು ವಲಸಿಗ ಸಮುದಾಯದೊಂದಿಗೆ ಏಕಾತ್ಮತೆ ವ್ಯಕ್ತಪಡಿಸಿ, ಧರ್ಮಸಭೆ ಈ ವಿಷಯದಲ್ಲಿ ಧ್ವನಿ ಎತ್ತಿದುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

“ಕಾನೂನು ಜಾರಿಗೆ ವಿರೋಧವಿಲ್ಲ, ಆದರೆ ಮಾನವೀಯತೆ ಅಗತ್ಯ”

ಧರ್ಮಾಧ್ಯಕ್ಷರು ದೇಶದ ರಾಜಕೀಯ ಧ್ರುವೀಕರಣ ಧರ್ಮಸಭೆಯಲ್ಲಿಯೂ ಪ್ರತಿಫಲಿಸುತ್ತಿದೆ ಎಂದು ಹೇಳಿದ್ದಾರೆ. ಕೆಲವರು ಈ ನಿರ್ಧಾರವನ್ನು ಕಾನೂನು ಉಲ್ಲಂಘನೆಗೆ ಉತ್ತೇಜನವೆಂದು ಟೀಕಿಸಿದ್ದಾರೆ. ಆದರೆ ಅವರು ಸ್ಪಷ್ಟವಾಗಿ ಹೇಳಿದ್ದಾರೆ: “ನಾವು ಕಾನೂನು ಉಲ್ಲಂಘನೆಗೆ ಉತ್ತೇಜನ ನೀಡುತ್ತಿಲ್ಲ. ಕ್ರಿಸ್ಮಸ್ ಸಮಯದಲ್ಲಿ ಧರ್ಮಕೇಂದ್ರಗಳು ಮತ್ತು ಶಾಲೆಗಳು ಗುರಿಯಾಗಬಾರದು, ಕುಟುಂಬಗಳು ಬೇರ್ಪಡಬಾರದು ಎಂಬುದೇ ನಮ್ಮ ಮನವಿ.”

“ದೇಶಗಳಿಗೆ ಭದ್ರತೆ ಮತ್ತು ಗಡಿಗಳ ನಿಯಂತ್ರಣ ಹಕ್ಕು ಇದೆ ಎಂದು ಒಪ್ಪಿಕೊಂಡು, ಆದರೂ ಸಹ, ಜುಬಿಲಿಯ ಆತ್ಮದಲ್ಲಿ, ಅಂತಃಕರಣಕ್ಕೆ ಮನವಿ ಮಾಡುವ ಅಗತ್ಯವಿದೆ ಎಂದು ನಾನು ಭಾವಿಸಿದೆ. ಕುಟುಂಬಗಳು ಒಟ್ಟಾಗಿ ಕ್ರಿಸ್ತಜಯಂತಿಯ ಶಾಂತಿಯನ್ನು ಅನುಭವಿಸಲು ಅವಕಾಶ ದೊರಕಬೇಕು ಎಂಬುದೇ ನನ್ನ ಉದ್ದೇಶ,” ಎಂದು ಧರ್ಮಾಧ್ಯಕ್ಷ ಎರಲ್ ಫರ್ನಾಂಡಿಸ್ ಹೇಳಿದರು.

ಅನೇಕ ಟೀಕಾಕಾರರು ನೆಲಮಟ್ಟದ ವಾಸ್ತವವನ್ನು ಅರಿತಿಲ್ಲ; ಜಾತಿ ಅಥವಾ ಜನಾಂಗದ ಆಧಾರದ ಮೇಲೆ ಜನರನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

“ಭಯದ ನಡುವೆಯೂ ಬಲಿಪೂಜೆಗೆ ಬಂದ ಭಕ್ತರು”

ಕ್ರಿಸ್ತ ಜಯಂತಿ ಸಮಯದಲ್ಲಿ ದಾನಶೀಲರಾಗಿರಬೇಕೆಂದು ಧರ್ಮಾಧ್ಯಕ್ಷರು ಭಕ್ತರಿಗೆ ಮನವಿ ಮಾಡಿದ್ದಾರೆ. ಬಲಿಪೂಜೆಗೆ ಹೋಗಲು ಭಯಪಡುವವರು ಕೆಲಸಕ್ಕೂ ಹೋಗಲು ಭಯಪಡುವ ಸ್ಥಿತಿಯಲ್ಲಿದ್ದಾರೆ; ಇದರಿಂದ ಆದಾಯ ಕುಸಿದು ಆಹಾರ ಸೇರಿದಂತೆ ಮೂಲಭೂತ ಅಗತ್ಯಗಳ ಕೊರತೆ ಎದುರಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಕ್ರಿಸ್ತ ಜಯಂತಿ ದಿನವೇ ಅವರು ಅನೇಕ ಗುರುಗಳಿಗೆ ಕರೆ ಮಾಡಿ, ಭಯದ ನಡುವೆಯೂ ಅನೇಕ ಭಕ್ತರು ಪವಿತ್ರ ಬಲಿಪೂಜೆಗೆ ಹಾಜರಾಗಿದ್ದಾರೆ ಎಂಬುದನ್ನು ತಿಳಿದು ಸಂತೋಷ ವ್ಯಕ್ತಪಡಿಸಿದ್ದಾರೆ.

“ಜನರ ವಿಶ್ವಾಸವೇ ನನಗೆ ಪ್ರೇರಣೆ,” ಎಂದು ಹೇಳಿದ ಧರ್ಮಾಧ್ಯಕ್ಷರು, “ಧರ್ಮಾಧ್ಯಕ್ಷರಾಗುವುದು ಸುಲಭವಲ್ಲ. ಆದರೆ ನಿರ್ಧಾರ ತೆಗೆದುಕೊಳ್ಳುವುದರಿಂದ ಹಿಂದೆ ಸರಿಯಬಾರದು. ನಾವು ಸದಾ ಜನಪ್ರಿಯರಾಗಿರದಿರಬಹುದು, ಆದರೆ ಪ್ರವಾದನಾ ಸಂದೇಶವನ್ನು, ಜೀವ ವಾಕ್ಯವನ್ನು ಘೋಷಿಸಲೇಬೇಕು,” ಎಂದು ಧರ್ಮಾಧ್ಯಕ್ಷ ಎರಲ್ ಫರ್ನಾಂಡಿಸ್ ಹೇಳಿದ್ದಾ

28 ಡಿಸೆಂಬರ್ 2025, 13:28